spot_img
Saturday, February 14, 2026
spot_img

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಉಡುಪಿ ಜಿಲ್ಲೆಯ 350 ಶಾಲೆಯ 41ಸಾವಿರ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ

ಬೈಂದೂರು, ಜು.6: ಭಾರತ ವಿಶ್ವದ ಬಲಿಷ್ಠ ದೇಶವಾಗಬೇಕು ಎನ್ನುವುದು ಎಲ್ಲರ ಕನಸು. ಅದು ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳಿಂದ ಸಾಧ್ಯವಿಲ್ಲ. ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿಗಳಿಂದ ಮಾತ್ರ ಶಕ್ತಿಶಾಲಿ ದೇಶವೊಂದರ ನಿರ್ಮಾಣ ಸಾಧ್ಯ. ಅದಕ್ಕೆ ಪೂರಕವಾಗಿ ಸ್ಪಂದಿಸುವ ಸೇವಾ ಮನೋಭಾವವುಳ್ಳ ಎಚ್.ಎಸ್ ಶೆಟ್ಟಿಯವರಂತಹವರು ನಿಜವಾದ ದೇಶಪ್ರೇಮಿಗಳು ಎಂದು ಗುರುತಿಸಬಹುದು ಎಂದು ರಾಜ್ಯ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಬೆಂಗಳೂರಿನ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಬೈಂದೂರಿನ ಸಮೃದ್ಧ ಜನಸೇವಾ ಚಾರಿಟೆಬಲ್ ಟ್ರಸ್ಟ್ ಮತ್ತು ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಕಾರದೊಂದಿಗೆ ಜುಲೈ 6ರ ಬೈಂದೂರು ಯಡ್ತರೆಯ ಜೆ.ಎನ್.ಆರ್.ಸಭಾಂಗಣದಲ್ಲ್ಲಿ ಉಡುಪಿ ಜಿಲ್ಲೆಯ 350 ಸರ್ಕಾರಿ/ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ 41,000 ಜತೆ ಉಚಿತ ಶಾಲಾ ಸಮವಸ್ತ್ರಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಡನಾಗಿ ಹುಟ್ಟಬಹುದು ಆದರೆ ಸಾಯುವ ತನಕ ಬಡವನಾಗಿಯೇ ಇರಬೇಕಾಗಿಲ್ಲ. ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯ. ಶಿಕ್ಷಣ ಕ್ಷೇತ್ರವೊಂದೇ ವ್ಯಕ್ತಿಗಳನ್ನು ಅತ್ಯಂತ ಶಕ್ತಿಶಾಲಿಗಳನ್ನಾಗಿ ರೂಪಿಸಲು ಸಾಧ್ಯ. ಜೀವನದಲ್ಲಿ ಛಲ, ಹಠ, ಗುರಿ ಇದ್ದರೆ ಯಶಸ್ಸು ಗಳಿಸಲು ಸಾಧ್ಯ. ಎಚ್.ಎಸ್ ಶೆಟ್ಟಿಯವರಂತಹ ವ್ಯಕ್ತಿಗಳು ಸಹಕಾರ ನೀಡುತ್ತಾರೆ. ನಮ್ಮ ದೇಶ ಮಾನವೀಯತೆ, ಮೌಲ್ಯಾಧಾರಿತ ಜೀವನ ಕ್ರಮಕ್ಕೆ ಹೆಸರಾಗಿದೆ. ಭಾರತದಲ್ಲಿನ ಸಂಸ್ಕೃತಿ, ಆಚಾರ ವಿಚಾರಗಳು ವಿಶ್ವದ ಬೇರೆ ಯಾವುದೇ ದೇಶದಲ್ಲಿ ಸಿಗಲು ಸಾಧ್ಯವಿಲ್ಲ ಎಂದರು.

ಕಷ್ಟವೆಂದು ಮಕ್ಕಳ ಶಿಕ್ಷಣವನ್ನು ವಂಚಿತರನ್ನಾಗಿ ಮಾಡಬೇಡಿ. ಪ್ರತೀ ಮಗುವಿಗೂ ಕೂಡಾ ಉನ್ನತ ಶಿಕ್ಷಣ ನೀಡಿ ಎಂದು ಪೋಷಕರಿಗೆ ಕರೆ ನೀಡಿದ ಅವರು, ಹಣ ಇದ್ದವರು ತುಂಬಾ ಮಂದಿ ಇದ್ದಾರೆ. ಅದನ್ನು ಅರ್ಪಣಾ ಮನೋಭಾವದಿಂದ ನೀಡುವವ ಸಂಖ್ಯೆ ಕಡಿಮೆ. ವಿದ್ಯಾರ್ಥಿಗಳೆಲ್ಲರೂ ಕೂಡಾ ಹೆಚ್.ಎಸ್ ಶೆಟ್ಟಿಯವರಂಥ ಸ್ಥಾನಕ್ಕೆರುವ ಗುರಿ ಹಾಕಿಕೊಳ್ಳಬೇಕು. ಜೀವನದಲ್ಲಿ ಗುರಿ ಎನ್ನುವುದು ಅತೀ ಮುಖ್ಯ. ಉತ್ತಮ ಗುರಿಯಿಂದ ಯಶಸ್ಸು ಜೀವನದಲ್ಲಿ ಸಾಧ್ಯ ಎಂದರು.

ಹೆಗ್ಗುಂಜೆ ರಾಜೀವ್ ಶೆಟ್ಟಿ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ಎಚ್.ಎಸ್.ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡುತ್ತಾ ಟ್ರಸ್ಟ್ ಶಿಕ್ಷಣ ಕ್ಷೇತ್ರದಲ್ಲಿ ಹಾಕಿಕೊಂಡ ಯೋಜನೆಗಳನ್ನು ವಿವರಿಸುತ್ತಾ, ಸಾಕಾಗುವಷ್ಟು ಮತ್ತು ಬೇಕಾಗುವಷ್ಟು ನಡುವೆ ಗೋಡೆ ಕಟ್ಟುವುದು ಕಷ್ಟ. ಸಮಾಜಕ್ಕೂ ದುಡಿಮೆಯ ಒಂದು ಭಾಗವನ್ನು ವಿನಿಯೋಗಿಸುವುದರಿಂದ ಜೀವನ ಕೃತಕೃತತೆಯತ್ತ ಹೋಗುತ್ತದೆ. 2008ರಲ್ಲಿ ಟ್ರಸ್ಟ್ ರಚನೆ ಮಾಡಲಾಯಿತು. ಆಗ 1500 ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಲಾಯಿತು. ಈಗ ೪೧ ಸಾವಿರ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡುತ್ತಿದ್ದೇವೆ. ಕಳೆದ ವರ್ಷ ೭ ಕೋಟಿ ರೂಪಾಯಿಯನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿದ್ದೇವೆ. ಆರ್ಥಿಕವಾಗಿ ತೀರಾ ಕಷ್ಟದಲ್ಲಿರುವ ಕೊರಗ ಕುಟುಂಬಗಳಿಗೆ 100 ಮನೆಗಳನ್ನು ಕಟ್ಟಕೊಡುವ ಯೋಜನೆ ಇದೆ. ಈಗಾಗಲೆ 14 ಮನೆಗಳ ನಿರ್ಮಾಣವಾಗುತ್ತಿದೆ. ೫ ವರ್ಷದಲ್ಲಿ ಉಳಿದ 86 ಮನೆಗಳ ನಿರ್ಮಾಣ ಮಾಡಲಾಗುವುದು. 150 ಶಾಲೆ, ಪಿಯು ಕಾಲೇಜುಗಳಲ್ಲಿ ಐ‌ಐಟಿ ಕೋಚಿಂಗ್ ಕೌನ್ಸಲಿಂಗ್ ನೀಡುವ ಕೆಲಸ ಆಗಸ್ಟ್‌ನಿಂದ ಆರಂಭವಾಗುತ್ತದೆ. ಬ್ರಹ್ಮಾವರದಲ್ಲಿ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡು ಪಬ್ಲಿಕ್ ಸ್ಕೂಲ್‌ನ್ನು ಅಭಿವೃದ್ದಿ ಮಾಡಲಾಗಿದೆ. ಅಲ್ಲಿ ಈಗ ಕಿಂಡರ್ ಗಾರ್ಟನ್ ಕೂಡಾ ಆರಂಭವಾಗಿದೆ ಎಂದರು.

ಇದೇ ವೇಳೆ ಹೆಗ್ಗುಂಜೆ ರಾಜೀವ್ ಶೆಟ್ಟಿ ವಿದ್ಯಾ ಪೋಷಕ್ ಪ್ರಶಸ್ತಿಯನ್ನು ಹಿರಿಯ ಶಿಕ್ಷಕರು ಹಾಗೂ ಯಕ್ಷಗಾನ ಪ್ರಸಂಗಕರ್ತರಾದ ಕಂದಾವರ ರಘುರಾಮ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು. ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು. ಈ ಪ್ರಶಸ್ತಿ 1ಲಕ್ಷದ 1 ಸಾವಿರ ನಗದು ಮೊತ್ತವನ್ನು ಒಳಗೊಂಡಿದೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಶುಭಶಂಸನೆಗೈದು ಪ್ರಾಪಂಚಿಕ ವ್ಯವಸ್ಥೆಯಲ್ಲಿ ಶಿಕ್ಷಣ ಹೇಗಿರಬೇಕು ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಹೆಚ್.ಎಸ್ ಶೆಟ್ಟಿ ಅವರ ಶೈಕ್ಷಣಿಕ ಕಾಳಜಿ ಗುರುತಿಸುವಂತಹದ್ದು. ಸ್ವಾತಂತ್ರ್ಯ ಪೂರ್ವದಲ್ಲಿ ೯%ದಷ್ಟು ಸಾಕ್ಷರತೆ ಪ್ರಮಾಣ ಇದ್ದರೆ ಈಗ ೮೫%ಕ್ಕಿಂತ ಹೆಚ್ಚು ಸಾಕ್ಷರತ ಪ್ರಮಾಣ ಇದ್ದರೂ ಕೂಡಾ ಅಪರಾಧ ಪ್ರಮಾಣ ಸ್ವಾತಂತ್ರ್ಯಪೂರ್ವಕ್ಕಿಂತ ಎಷ್ಟೋ ಪಟ್ಟು ಹೆಚ್ಚಾಗಿದೆ. ನಮಗೆ ಇವತ್ತು ಗುಣಮಟ್ಟದ ಶಿಕ್ಷಣ, ಜೀವನಮೌಲ್ಯಯುತ ಶಿಕ್ಷಣ ಸಿಗುವಂತಾಗಬೇಕು ಎಂದರು.

ಶಾಸಕರಾದ ಗುರುರಾಜ್ ಗಂಟಿಹೊಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುಂದಾಪುರ, ಬೈಂದೂರು ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಹಾಗಾಗಿ ಬೇರೆ ಬೇರೆ ಜಿಲ್ಲೆಯಿಂದ ವಿದ್ಯಾರ್ಥಿಗಳು ಈ ಕಡೆ ಬರುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ವಿದ್ಯಾರ್ಥಿನಿಲಯಗಳಿಲ್ಲ. ಹಾಗಾಗಿ ಇನ್ನಷ್ಟು ವಿದ್ಯಾರ್ಥಿನಿಲಯಗಳ ಆವಶ್ಯಕತೆ ಇದೆ. ಸರಕಾರ ಈ ಬಗ್ಗೆ ಗಮನ ಹರಿಸಬೇಕು ಎಂದರು.

 

ಶಾಸಕರಾದ ಯಶ್‌ಪಾಲ್ ಸುವರ್ಣ, ಎ. ಕಿರಣ್ ಕುಮಾರ್ ಕೊಡ್ಗಿ, ಉದ್ಯಮಿ ಮೊಳಹಳ್ಳಿ ದಿನೇಶ ಹೆಗ್ಡೆ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಗಣಪತಿ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಟ್ರಸ್ಟ್ ಉಪಾಧ್ಯಕ್ಷ ಹಾಲಾಡಿ ನಾಗರಾಜ ಶೆಟ್ಟಿ, ಕಾರ್ಯದರ್ಶಿ ಡಾ.ಸುಮನಾ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಯು.ಟಿ ಖಾದರ್ ಅವರನ್ನು ಅಭಿನಂದಿಸಲಾಯಿತು. ಸಮೃದ್ಧ ಜನಸೇವಾ ಚಾರಿಟೆಬಲ್ ಟ್ರಸ್ಟ್ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ, ಪತ್ರಕರ್ತ ಜಯಶೇಖರ ಮಡಪ್ಪಾಡಿ ಸನ್ಮಾನ ಪತ್ರ ವಾಚಿಸಿದರು.

ರಮಣಿ ಪ್ರಾರ್ಥನೆ ಮಾಡಿದರು. ಸಮೃದ್ಧ ಜನಸೇವಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಸುರೇಶ್ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ರಾಜೀವ ಶೆಟ್ಟಿ ವಂದಿಸಿದರು. ಉಪನ್ಯಾಸಕ ಅಕ್ಷಯ ಶೆಟ್ಟಿ ಮೊಳಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

 

https://fb.watch/t8_M3Q4Avt/

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!