Friday, October 18, 2024

ನೀಟ್‌ ಅಕ್ರಮ ಬಯಲಿಗೆಳೆದ ʼಪರೀಕ್ಷಾ ಮಾಫಿಯಾʼ ! | ದೇಶದಲ್ಲಿ ಹಳಿತಪ್ಪಿದ ಪರೀಕ್ಷಾ ವ್ಯವಸ್ಥೆ

ಸ್ಪರ್ಧಾತ್ಮಕ/ಅರ್ಹತಾ ಪರೀಕ್ಷೆಗಳ ಅಸಲಿತನ ಈಗ ಬಯಲಾಗಿದೆ. ರಾಜಾರೋಷವಾಗಿ ಇಂತಹ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆಯುವುದು ತೀರಾ ಸಾಮಾನ್ಯ ಎಂಬಂತಾಗಿದೆ. ನೀಟ್‌ ಪರೀಕ್ಷೆಯಲ್ಲಿ ನಡೆದ ಅಕ್ರಮಗಳಿಂದ ಹಾಗೂ 2024ರ ನೆಟ್-ಜೆಆರ್‌ಎಫ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಶಂಕೆಯಲ್ಲಿ ರದ್ದು ಆಗಿರುವ ಕಾರಣಕ್ಕೆ ಮತ್ತೆ ಈ ವಿಚಾರ ಮೇಲೆ ಬಂದಿದೆ. ಕಳೆದ ಎಂಟು ವರ್ಷಗಳಲ್ಲಿ ಹೀಗೆ ದೇಶದಾದ್ಯಂತ 45ಕ್ಕೂ ಹೆಚ್ಚು ಪರೀಕ್ಷೆಗಳು ರದ್ದಾಗಿವೆ ಎಂಬ ವರದಿ ಕೂಡ ಇದೆ. ಈ ಸ್ಪರ್ಧಾತ್ಮಕ/ಅರ್ಹತಾ ಹಾಗೂ ನೇಮಕಾತಿ ಪರೀಕ್ಷೆಗಳು ಅಂತಂದರೆ ಸಾಕು, ʼಅಲ್ಲೆಲ್ಲಾ ಪ್ರಭಾವ ನಡೆಯುತ್ತದೆ, ರಾಜಕೀಯ ನಡೆಯುತ್ತದೆʼ ಎಂದು ಸಾಮಾನ್ಯರ ಬಾಯಿಯಲ್ಲಿ ಬರುವ ಮಾತುಗಳೇನು ಹುಸಿಯಾಗಿ ಉಳಿದಿಲ್ಲ. ಅದು ಆ ಮಾತಿನಷ್ಟೇ ಸತ್ಯವೂ ಕೂಡ.

ಇಂತಹ ಪರೀಕ್ಷೆಗಳಲ್ಲಿ ರಾಜಾರೋಷವಾಗಿ ನಡೆಯುವ ಭ್ರಷ್ಟಾಚಾರ, ಹಾಗೂ ಅಕ್ರಮಗಳಿಗೆ ಕಡಿವಾಣ ಹಾಕುವುದಕ್ಕೆ ಸಂಬಂಧಪಟ್ಟ ಪರೀಕ್ಷಾ ಪ್ರಾಧಿಕಾರವಾಗಲಿ, ಇಲಾಖೆಗಳಾಗಲಿ, ಆಯೋಗವಾಗಲಿ ಮುತುವರ್ಜಿ ವಹಿಸದೇ ಇರುವುದು ದುರಂತವೇ ಸರಿ. ಇದೊಂಥರ ʼಬೇಲಿಯೇ ಎದ್ದು ಹೊಲ ಮೇಯ್ದಂತೆʼ. ಪರೀಕ್ಷೆಗಳನ್ನು ನಡೆಸುವ ಪ್ರಾಧಿಕಾರ, ಇಲಾಖೆಗಳು, ಆಯೋಗದಲ್ಲೇ ಈ ಅಕ್ರಮಗಳನ್ನು ನಡೆಸುವವರ ದಂಡೇ ಇದೆ ಎಂದರೆ ತಪ್ಪಿಲ್ಲವೇನೋ. ಹೀಗೆ ಈ ಥರದ ಪರೀಕ್ಷೆಗಳಲ್ಲಿನ ಅಕ್ರಮಗಳು ಹಾಗೂ ಅದನ್ನು ತಡೆಗಟ್ಟುವ ಸಲುವಾಗಿ ರೂಪಿಸುವ ನಿಯಮಾವಳಿಗಳು ಎರಡರಿಂದಲೂ ಆಗುವ ಸಮಸ್ಯೆಗಳನ್ನು ಅನುಭವಿಸುವವರು ಮಾತ್ರ ಅಭ್ಯರ್ಥಿಗಳು.

ನಾನು ಮಂಗಳೂರಿನ ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ರಿಸರ್ಚ್‌ ಪ್ರೊಸೆಸರ್‌ ಒಬ್ಬರು ʼನೆಟ್‌ ಎಕ್ಸಾಂ ಪಾಸ್‌ ಮಾಡಿಕೊಳ್ಳುವುದಕ್ಕೆ ಒಂದಿಷ್ಟು ಲಕ್ಷ ಕೊಟ್ಟು, ಎಕ್ಸಾಂಗೆ ಅಟೆಂಡ್ ಮಾಡಿದರಷ್ಟೇ ಸಾಕುʼ ಅಂತಂದ್ರು. ʼಏನ್‌ ತಮಾಷೆ ಮಾಡ್ತಿದ್ದೀರಾ ಸರ್‌ ?ʼ ಎಂದು ಪ್ರಶ್ನೆ ಹಾಕಿದ್ದೆ. ʼಏನ್‌ ರೀ ಮಾತಾಡ್ತೀರಾ? ಇಂತವೆಲ್ಲಾ ಭಯಭೀತಿ ಇಲ್ಲದೆ ನೆಡಿತವೆ… ನೀವೂ ಅವರು ಕೇಳುವಷ್ಟು ಹಣ ರೆಡಿ ಮಾಡ್ಕೊಂಡ್ರೆ ಆಯ್ತುʼ ಅಂತಂದ್ರು. ಆ ಸಂದರ್ಭದಲ್ಲಿ ನನಗೆ ಆಶ್ಚರ್ಯ ಆಗಿತ್ತು. ಅದಾಗಲೇ ಎರಡು ಬಾರಿ ನೆಟ್‌ ಎಕ್ಸಾಂ ಬರೆದು ವಿಫಲನಾಗಿದ್ದೆ. ಮೂರನೇ ಬಾರಿಗೆ ನೆಟ್‌ ಎಕ್ಸಾಂ ಗೆ ತಯಾರಿಯಲ್ಲಿದ್ದೆ. ಎರಡನೇ ನೆಟ್‌ ಎಕ್ಸಾಂ ನಲ್ಲಿ ಮೂರ್ನಾಲ್ಕು ಅಂಕಗಳಿಂದ ಅನುತ್ತೀರ್ಣಗೊಂಡಿದ್ದೆ. ಇನ್ನು, ಮೀಸಲಾತಿ ಹಾಗೂ ಅವರಿಗಿದ್ದ ಕನಿಷ್ಠ ಅರ್ಹತಾ ಅಂಕಗಳ ಬಗ್ಗೆ ಸಹಜವಾಗಿ ಅಸಮಾಧಾನವಿದ್ದಿತ್ತು. ಹಿಂದುಳಿದ ವರ್ಗದವರಿಗೆ ಉತ್ತೇಜನ ನೀಡುವ ದೃಷ್ಟಿಯಲ್ಲಿ ಈ ನಿಯಮ ಜಾರಿಗೆ ತರಲಾಗಿತ್ತಾದರೂ, ಎಲ್ಲಾ ವರ್ಗದವರಿಗೆ ಸಮಾನ ಅರ್ಹತಾ ಅಂಕಗಳ ನಿರ್ದಿಷ್ಟತೆಯಲ್ಲಿ ಉತ್ತೀರ್ಣಗೊಳಿಸುವ ಹಾಗೆ ಇಲ್ಲದಿರುವುದರ ಬಗ್ಗೆ ಒಂದಿಷ್ಟು ಕೊಪ, ಸಿಟ್ಟು ಎಲ್ಲರಿಗೂ ಇದ್ದ ಹಾಗೆ ನನ್ನಲ್ಲೂ ಇದ್ದಿತ್ತು. ಅರ್ಹತೆಯ ಮಾನದಂಡವೇನೆನ್ನುವ ಪ್ರಶ್ನೆ ಬಹಳ ಕಾಡಿತ್ತು. ಈ ನಡುವೆ ಇಂತಹದ್ದೊಂದು ವಿಚಾರ ಇದೆ ಎನ್ನುವುದು ಮತ್ತಷ್ಟು ಇಂತಹ ಪರೀಕ್ಷೆಗಳ ಬಗ್ಗೆ ಅಪನಂಬಿಕೆ ಮೂಡಿಸಿತ್ತು ಎಂದರೇ ತಪ್ಪಿಲ್ಲ. ಅಷ್ಟಾಗಿಯೂ ಪ್ರಯತ್ನದ ಹಾದಿಯಲ್ಲೇ ಇದ್ದೇವೆ ಎನ್ನುವುದೇ ಸಮಾಧಾನ.

ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡಲು ನೀಡುವ ಅವಕಾಶ, ಉತ್ತರ ಪತ್ರಿಕೆ ತಿದ್ದುವುದು ಸೇರಿದಂತೆ ಈ ಪರೀಕ್ಷೆಗಳ ಪೂರ್ಣ ಪ್ರಕ್ರಿಯೆಯಲ್ಲಿ ನಡೆಯುವ ತರಹೇವಾರಿ ಅಕ್ರಮಗಳಿಗೆ ಮೂಲ ಕಾರಣ ಆಯಾ ಪರೀಕ್ಷೆಗಳನ್ನು ನಡೆಸುವ ಪ್ರಕ್ರಿಯೆಯಲ್ಲಿ ಭಾಗಿಯಾಗುವ ವ್ಯಕ್ತಿಗಳೇ ವಿನಃ ಅಭ್ಯರ್ಥಿಗಳಲ್ಲ. ಇದನ್ನು ನಡೆಸುವುದಕ್ಕೆ ಒಬ್ಬರು ಇಬ್ಬರಿಂದ ಸಾಧ್ಯವೇ ? ಇದಕ್ಕೆ ಒಂದು ದೊಡ್ಡ ವ್ಯವಸ್ಥಿತ ಜಾಲವೇ ಇರಬಹುದು.

ಇಂತಹ ಸ್ಪರ್ಧಾತ್ಮಕ/ಅರ್ಹತಾ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ತಡೆಯುವ ಇಚ್ಚಾಶಕ್ತಿ ಸರ್ಕಾರಕ್ಕೆ ಅಸಲಿಗೂ ಇರುವುದು ಹೌದಾದರೇ, ಅಭ್ಯರ್ಥಿಗಳಿಗೆ ಸಮಸ್ಯೆಯಾಗದೇ ಇರುವ ರೀತಿಯಲ್ಲಿ ನಿಯಮಾವಳಿಗಳನ್ನು ಅನುಷ್ಠಾನಗೊಳಿಸಲಿ. ಕೇಂದ್ರ ಮಟ್ಟದಲ್ಲಿ ಇಷ್ಟರ ಮಟ್ಟಿಗೆ ಅಕ್ರಮಗಳು, ಪ್ರಶ್ನೆ ಪತ್ರಿಕೆಗಳ ಸೋರಿಕೆಗಳೆಲ್ಲಾ ಆಗುತ್ತವೆ ಎಂದರೇ ಪರೀಕ್ಷಾ ಪ್ರಾಧಿಕಾರ, ಇಲಾಖೆಗಳ ನೇರ ಪಾಲುದಾರಿಕೆ ಇಲ್ಲದೇ ಇರುವುದಕ್ಕೆ ಸಾಧ್ಯವೆ ? ಅಷ್ಟಕ್ಕೂ  ಇಂತಹ ಪರೀಕ್ಷಾ ಅಕ್ರಮಗಳ ಹಾದಿ ಮತ್ಯಾರಿಗೆ ತಿಳಿದಿರುತ್ತದೆ ? ಪಟ್ಟಭದ್ರ ಹಿತಾಸಕ್ತರಿಗೆ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವ ದೃಷ್ಟಿಯಲ್ಲಿ ಕಡಿವಾಣ ಹಾಕುವುದಕ್ಕೆ ಸೂಕ್ತ ಕ್ರಮ ತೆಗೆದುಕೊಂಡಿದ್ದೇವೆ, ತನಿಖೆಗೆ ಒಪ್ಪಿಸಿದ್ದೇವೆ ಎನ್ನುವುದರಲ್ಲೇ ಅಧಿಕ ಲಾಭ ಇದೆ. ಪರೀಕ್ಷಾ ಪತ್ರಿಕೆ ಸೋರಿಕೆ, ಅಕ್ರಮಗಳಲ್ಲದೇ ಅವನ್ನು ತಡೆಯುವ ಉದ್ದೇಶದಿಂದ ಪಾಲಿಸುವ ಕ್ರಮಗಳಿಂದಲೂ ಬಲಿಪಶುಗಳಾಗುವುದು ಪರೀಕ್ಷಾರ್ಥಿಗಳೆ.

ಪರೀಕ್ಷೆಗಳಲ್ಲಿ ನಡೆದಿದೆ ಎಂದು ಹೇಳುವ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯ ಶಂಕೆಯ ಹಿನ್ನೆಲೆಯಲ್ಲಿ ಅನುಸರಿಸುವ ರದ್ದು ಕ್ರಮ ಹಾಗೂ ಕೆಲವು ದಿನಗಳ ಬಳಿಕ ನಡೆಯುವ ಮರು ಪರೀಕ್ಷೆಗಳಿಂದ ಅಭ್ಯರ್ಥಿಗಳನ್ನು ಇನ್ನಷ್ಟು ಹತಾಶರನ್ನಾಗಿಸುತ್ತದೆ ಅಷ್ಟೇ ಹೊರತಾಗಿ ಪರೀಕ್ಷೆಗಳನ್ನು ನಡೆಸುವ ಸಂಸ್ಥೆ, ಪ್ರಾಧಿಕಾರ ಅಥವಾ ಇಲಾಖೆಯ ಮೇಲೆ ವಿಶ್ವಾಸಾರ್ಹತೆಯನ್ನು ಯಾವುದೇ ಕಾರಣಕ್ಕೂ ಹೆಚ್ಚಿಸಲಾರವು.

ಈಗ ಏಕಾಏಕಿ ಇಂತಹ ಪರೀಕ್ಷೆಗಳ ಅಕ್ರಮಗಳ ಸರಣಿಗಳೆ ಬಯಲಾಗತೊಡಗಿವೆ. ನೀಟ್‌, ನೆಟ್‌ ಅಥವಾ ಇನ್ಯಾವುದೋ ಸ್ಮರ್ಧಾತ್ಮಕವೋ, ಅರ್ಹತಾ ಪರೀಕ್ಷೆಯೋ ಅಥವಾ ನೇಮಕಾತಿ ಪರೀಕ್ಷೆಯೋ ಅರ್ಹ ಹಾಗೂ ಪ್ರತಿಭಾವಂತರಿಗೆ ಅವಕಾಶ ದಕ್ಕಬೇಕು ಎಂಬ ಕಾರಣದಿಂದ ಪಾರದರ್ಶಕವಾಗಿ ನಡೆಯುತ್ತಾ ಬಂದಿವೆ. ಆದರೂ ಇಂತಹ ಪರೀಕ್ಷೆಗಳಲ್ಲಿ ನಿರಂತರವಾಗಿ ಅಕ್ರಮಗಳು ರಾಜಾರೋಷವಾಗಿ ನಡೆಯುತ್ತಿವೆ. ಇಂತಹ ಪರೀಕ್ಷೆಗಳ ಮೂಲ ಉದ್ದೇಶಗಳನ್ನೇ ಮೂಲೆಗೆ ಸರಿಸುವಂತೆ ʼಅಕ್ರಮಗಳುʼ ಮಾಡಿವೆ. ಪರೀಕ್ಷೆ ನಡೆಸುವ ಸಂಸ್ಥೆಗಳ ಅಧಿಕಾರಿಗಳು, ರಾಜಕೀಯ ನಾಯಕರು, ಪ್ರಭಾವಿಗಳು ಇಂತಹ ಅಡ್ಡ ದಾರಿಯಲ್ಲಿ ಲಾಭಕ್ಕಾಗಿ ಕಾಯುವುದು ವಿಪರ್ಯಾಸ.

ಹೌದು, ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಕೃಪಾಂಕ ಪಡೆದ 1,563 ವಿದ್ಯಾರ್ಥಿಗಳ ಪರೀಕ್ಷೆಗಳನ್ನು ಕೇಂದ್ರ ಶಿಕ್ಷಣ ಇಲಾಖೆ ರದ್ದು ಮಾಡಿತ್ತು. 2024ರ ನೆಟ್-ಜೆಆರ್‌ಎಫ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಶಂಕೆಯಲ್ಲಿ ರದ್ದು ಮಾಡಲಾಯಿತು. 2024ರ ಸಿಎಸ್‌ಐಆರ್-ನೆಟ್-ಜೆಆರ್‌ಎಫ್‌ ಪರೀಕ್ಷೆಯನ್ನೂ ಪ್ರಶ್ನೆ ಪತ್ರಿಕೆ ಸೋರಿಕೆ ಶಂಕೆಯಲ್ಲಿ ರದ್ದು ಮಾಡಲಾಯಿತು. ಹೀಗೆ ಸಾಲು ಸಾಲು ಪರೀಕ್ಷೆಗಳ ಅಕ್ರಮಗಳು ಬೆಳಕಿಗೆ ಬರುತ್ತಿದ್ದಂತೆ ಈ ಪರೀಕ್ಷೆಗಳ ಸಾಚಾತನ ಬಯಲಾಗತೊಡಗಿತು. ಇದು ರಾಜಕೀಯ ಟೀಕೆಗೂ, ಚರ್ಚೆಗೂ ಕಾರಣವಾಯಿತು.

ಮಹತ್ವಕಾಂಕ್ಷೆಯಿಂದಲೇ ಇಂತಹ ಪರೀಕ್ಷೆಗಳನ್ನು ಎಷ್ಟೋ ಅಭ್ಯರ್ಥಿಗಳು ಎದುರಿಸುತ್ತಾರೆ. ಹಾಗಿರುವಾಗ ಇಂತಹದ್ದೊಂದು ಪರೀಕ್ಷೆ ನಡೆಸುವಲ್ಲಿ ದೊಡ್ಡ ಮಟ್ಟದ ಸಾಂಸ್ಥಿಕ ವೈಫಲ್ಯವಾದರೇ ಹೇಗೆ ? ದೇಶದಲ್ಲಿ ಇಂತಹ ಪರೀಕ್ಷೆಗಳ ಪತ್ರಿಕಾ ಸೋರಿಕೆಯ ಮಾಫೀಯಾದ ಜಾಲ ಎಷ್ಟು ದೊಡ್ಡ ಮಟ್ಟದಲ್ಲಿದೆ ಎನ್ನುವುದನ್ನು ಈ ನೀಟ್‌ ಪರೀಕ್ಷೆಯಲ್ಲಿ ನಡೆದ ಅಕ್ರಮಗಳು ಬಯಲಿಗೆಳೆದಿವೆ. ಹಾಗಾದರೇ ದೇಶದಲ್ಲಿನ ಪರೀಕ್ಷಾ ವ್ಯವಸ್ಥೆ ಹಳಿ ತಪ್ಪುವುದಕ್ಕೆ ರಾಜಕೀಯ ನಾಯಕರು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯ ಮಾಫೀಯಾದ ನಡುವೆ ಇರುವ ನಿಗೂಢ ವ್ಯವಹಾರ ಕಾರಣವೆ ಎಂಬ ಪ್ರಶ್ನೆಯನ್ನು ಮುಂದಿರಿಸಿದೆ.

ಪರೀಕ್ಷಾ ಪತ್ರಿಕಾ ಸೋರಿಕೆ ಹಾಗೂ ಪರೀಕ್ಷಾ ಅಕ್ರಮ ಮಾಫೀಯಾವನ್ನು ನಿಯಂತ್ರಿಸಲು ಸಂಸತ್ತು ಕಠೀಣ ಕಾನೂನು ಜಾರಿಗೆ ತಂದಿತ್ತು. ಕಾನೂನಿನ ಪ್ರಕಾರ ಇಂತಹ ಅಕ್ರಮಗಳಲ್ಲಿ ಪಾಲು ಪಡೆದವರಿಗೆ ಗರಿಷ್ಠ ಹತ್ತು ವರ್ಷಗಳ ಜೈಲು ಹಾಗೂ ಒಂದು ಕೋಟಿ ದಂಡ ವಿಧಿಸಲಾಗುತ್ತದೆ. ಇನ್ನು, ಪರೀಕ್ಷೆಯ ವಿಚಾರದಲ್ಲಿ ಸಮರ್ಪಕ ಭದ್ರತಾ ವ್ಯವಸ್ಥೆ ಇದೆ  ಎಂದು ಸಮರ್ಥಿಸಿಕೊಳ್ಳುವ ಸರ್ಕಾರ ಪರೀಕ್ಷಾ ಅಕ್ರಮಗಳನ್ನು ತಡೆಯುವಲ್ಲಿ ವಿಫಲವಾಗಿರುವುದು ವಿಪರ್ಯಾಸವೇ ಸರಿ.

-ಶ್ರೀರಾಜ್‌ ವಕ್ವಾಡಿ   

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!