Tuesday, October 8, 2024

ವರ್ಷದೊಳಗೆ ಹದಗೆಟ್ಟ ಕಾಂಕ್ರೀಟ್‌ ರಸ್ತೆ | ಮಣೂರು – ಕೊಯ್ಕೂರು ಸಂಪರ್ಕ ರಸ್ತೆ : ಕಳಪೆ ಕಾಮಗಾರಿಗೆ ಸ್ಥಳೀಯರ ಆಕ್ರೋಶ

ಜನಪ್ರತಿನಿಧಿ (ಕೋಟ) : ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿಯಲ್ಲಿ 2022-23ನೇ ಸಾಲಿನಲ್ಲಿ ಜಿಲ್ಲಾ ಪಂಚಾಯತ್‌ ಕಾರ್ಯಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಿದ ಕಾಂಕ್ರೀಟ್ ರಸ್ತೆ ಅದಾಗಲೇ ಕಿತ್ತುಹೋಗಿದೆ. ಪರಿಣಾಮವಾಗಿ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ.

ಬ್ರಹ್ಮಾವರ ತಾಲೂಕಿನ ಕೋಟ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಣೂರು ಗ್ರಾಮದ ರಾಜಲಕ್ಷ್ಮೀ ಹಾಲ್‌ನಿಂದ ಕೊಯ್ಕೂರ್‌ ಗೆ ಸಂಪರ್ಕಿಸುವ ರಸ್ತೆಯ ಸ್ಥಿತಿ ಇದಾಗಿದೆ.

ಒಂದು ಕಡೆ ನೀರು ಹೋಗುವ ಚರಂಡಿ, ಮತ್ತೊಂದು ಕಡೆ ರೈತರ ಕೃಷಿ ಭೂಮಿ. ಅಲ್ಲಲ್ಲಿ ಈ ರೀತಿ ರಸ್ತೆ ಕಿತ್ತು ಹೋಗಿ ಗುಂಡಿಯಾಗಿರುವುದರಿಂದ ವಾಹನಗಳಲ್ಲಿ ತಿರುಗಾಡಲು ತೊಂದರೆಯಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಕೋಟದ ಮೂಡುಗಿಳಿಯಾರು ಸರ್ವಕ್ಷೇಮ ಆಸ್ಪತ್ರೆಗೆ ಮತ್ತು ಸಂಶೋಧನಾ ಪ್ರತಿಷ್ಠಾನ ಯೋಗಬನಕ್ಕೆ ತೆರಳುವ ಹತ್ತಿರದ ಮಾರ್ಗವಾಗಿದ್ದು, ಸರ್ವಕ್ಷೇಮ ಆಸ್ಪತ್ರೆಗೆ ತೆರಳುವವರು ಇದೇ ರಸ್ತೆಯನ್ನು ಹೆಚ್ಚಾಗಿ ಆಶ್ರಯಿಸಿಕೊಂಡಿದ್ದಾರೆ. ಕಳಪೆ ಕಾಮಗಾರಿಯಿಂದ ರಸ್ತೆ ಕಿತ್ತು ಬಂದಿದೆ. ಹಾಳಾಗಿರುವ ರಸ್ತೆಯಿಂದ ದ್ವಿಚಕ್ರ ವಾಹನ ಸವಾರರು ತ್ರಾಸಪಡುವಂತಾಗಿದೆ. ಸ್ವಲ್ಪ ಆಯ ತಪ್ಪಿದರೂ ನೆಲಕ್ಕುರುಳುವ ಸ್ಥಿತಿ ಇದ್ದು, ಕೂಡಲೇ ಈ ರಸ್ತೆಯನ್ನು ಸಂಬಂಧಪಟ್ಟ ಇಲಾಖೆ ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.

ಅತಿ ಕಡಿಮೆ ಅವಧಿಯಲ್ಲಿ ರಸ್ತೆ ಹಾಳಾಗಲು ಕಳಪೆ ಕಾಮಗಾರಿಯೇ ಕಾರಣವಾಗಿದೆ. ಆದರೆ ಭಾರೀ ವಾಹನಗಳು ಓಡಾಡುವ ರಸ್ತೆಗಳನ್ನು, ಒಂದೂರಿನಿಂದ ಇನ್ನೊಂದು ಊರಿಗೆ ಸಂಪರ್ಕ ವ್ಯವಸ್ಥೆ ಕಲ್ಪಿಸುವ ಗ್ರಾಮೀಣ ಭಾಗದ ರಸ್ತೆಗಳನ್ನು ಇನ್ನಷ್ಟು ಗುಣಮಟ್ಟದಿಂದ ನಿರ್ಮಾಣ ಮಾಡುವುದಕ್ಕೆ ಯಾಕೆ ಮುಂದಾಗುವುದಿಲ್ಲವೆಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.

ಇನ್ನು, ಕಳೆದ ಒಂದುವರೆ ವರ್ಷದ ಹಿಂದೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಅನುದಾನದ 25 ಲಕ್ಷ ಮೌಲ್ಯದ ಸಿಮೆಂಟ್ ರಸ್ತೆ ಮಾಡಿಸಿದ್ದು ಬಹಳ ಬೇಗನೆ ಕಿತ್ತುಹೋಗಿದೆ. ಈ ರೀತಿಯಾದರೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಅನುಮಾನ ಹೆಚ್ಚಾಗುತ್ತದೆ. ಸಾರ್ವಜನಿಕರ ಹಣವನ್ನು ಈರೀತಿ ಪೋಲು ಮಾಡಲು ಬಳಸದೆ ಗುಣಮಟ್ಟದ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು” ಎನ್ನುತ್ತಾರೆ ಹೆಸರು ಹೇಳಲು ಬಯಸದ ಸ್ಥಳೀಯ ಗ್ರಾಮಸ್ಥರು.

ಈ ರಸ್ತೆ ಜಿಲ್ಲಾ ಪಂಚಾಯತ್‌ ರಸ್ತೆ. ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಬರುವುದಿಲ್ಲ. ರಸ್ತೆ ಹಾಳಾಗಿರುವುದರ ಬಗ್ಗೆ ಗಮನಕ್ಕಿದೆ. ಈ ಬಗ್ಗೆ ಶೀಘ್ರವೇ ಜಿಲ್ಲಾ ಪಂಚಾಯತ್‌ಗೆ ತಿಳಿಸಿ ಸರಿಪಡಿಸುವ ಕೆಲಸ ಮಾಡುತ್ತೇನೆ. ಶೀಘ್ರವೇ ಈ ಗ್ರಾಮೀಣ ಸಂಪರ್ಕ ರಸ್ತೆ ಸರಿಯಾಗಬೇಕಿದೆ. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರಿಗೆ ಸೂಕ್ತ ಕ್ರಮವಾಗಲಿ.
-ಜ್ಯೋತಿ ಭರತ್‌ ಕುಮಾರ್‌ ಶೆಟ್ಟಿ
ಅಧ್ಯಕ್ಷರು, ಕೋಟ ಗ್ರಾಮ ಪಂಚಾಯತ್‌

ಗುತ್ತಿಗೆದಾರರು ಕಾಟಾಚಾರಕ್ಕೆ ಎಂಬಂತೆ ರಸ್ತೆ ಕಾಮಗಾರಿ ಮಾಡಿದ್ದಾರೆ. ವರ್ಷ ಕಳೆಯುವ ಮುನ್ನವೇ ರಸ್ತೆ ಹದಗೆಟ್ಟಿದೆ. ರಸ್ತೆ ಹದಗೆಟ್ಟಿರುವ ಬಗ್ಗೆ ಈಗಾಗಲೇ ನಾವು ತಿಳಿಸಿದ್ದೇವೆ. ಇಂಜಿನಿಯರ್‌ ಖುದ್ದಾಗಿ ಪರಿಶೀಲಿಸಿಕೊಂಡು ಹೋಗಿದ್ದಾರೆ. ಸರಿಪಡಿಸುತ್ತೇವೆಂದು ಭರವಸೆ ನೀಡಿದ್ದು ಬಾಯ್ಮಾತಿಗಷ್ಟೇ ಆಗಿ ಉಳಿದಿದೆ. ಮಳೆಯಿಂದಾಗಿ ಮತ್ತಷ್ಟು ರಸ್ತೆ ಹದಗೆಟ್ಟಿದೆ. ಸಂಬಂಧಪಟ್ಟವರು ರಸ್ತೆ ಆದಷ್ಟು ಬೇಗ ರಸ್ತೆ ದುರಸ್ತಿ ಮಾಡಿಕೊಡಲಿ.  
-ನೀಲಾವರ ಸುರೇಂದ್ರ ಅಡಿಗ
ಸ್ಥಳೀಯರು

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!