Saturday, September 14, 2024

ರಾಷ್ಟ್ರೀಕೃತ ಬ್ಯಾಂಕುಗಳು ಸಂಕುಚಿತ, ಸಹಕಾರ ಸಂಘಗಳು ವಿಕಸನ-ಡಾ.ಎಂ.ಎನ್.ರಾಜೇಂದ್ರ ಕುಮಾರ್

ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘದ ನವೀಕೃತ ಸುವರ್ಣ ಸೌಧ ಕಟ್ಟಡ ಉದ್ಘಾಟನೆ

ಕುಂದಾಪುರ, ಜೂ.14: (ಜನಪ್ರತಿನಿಧಿ ವಾರ್ತೆ) ದೇಶದಲ್ಲಿಯೇ ಅತೀ ಹೆಚ್ಚು ರಾಷ್ಟ್ರೀಕೃತ ಬ್ಯಾಂಕುಗಳು ಹುಟ್ಟಿದ ಅವಿಭಜಿತ ದ.ಕ ಜಿಲ್ಲೆಯಲ್ಲಿ ಇಂದು ಆ ಬ್ಯಾಂಕುಗಳು ಸಂಕುಚಿತಗೊಂಡು ವಿಲೀನಗೊಳ್ಳುತ್ತಿದ್ದರೆ ಸಹಕಾರಿ ಸಂಘಗಳು ಜನಸಮಾನ್ಯರಿಗೆ ಉತ್ತಮ ಸೇವೆ ನೀಡುತ್ತಾ ವಿಕಸನಗೊಳ್ಳುತ್ತವೆ. ಗ್ರಾಮಾಂತರ ಪ್ರದೇಶಗಳಲ್ಲಿ ಶಾಖೆ ತೆರೆದು ಸೇವೆ ನೀಡುತ್ತಿವೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮಂಗಳೂರು ಇದರ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿ, ಬೆಂಗಳೂರು ಇದರ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ಜೂ 14ರಂದು ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘದ ನವೀಕೃತ ಸುವರ್ಣ ಸೌಧ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಅಮಾಸೆಬೈಲು ಮತ್ತು ರಟ್ಟಾಡಿ ಗ್ರಾಮಗಳ ಕಾರ್ಯವ್ಯಾಪ್ತಿ ಹೊಂದಿರುವ ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘ ಹವಾನಿಯಂತ್ರಿತ ವ್ಯವಸ್ಥೆಯುಳ್ಳ ಸುಸಜ್ಜಿತ ಕಟ್ಟಿಡ ನಿರ್ಮಿಸಿರುವ ಶ್ಲಾಘನಾರ್ಹ. ನಮ್ಮ ಸಂಸ್ಥೆಯ ವತಿಯಿಂದ ರೂ.೧೦ ಲಕ್ಷ ದೇಣಿಗೆ ನೀಡಲಾಗುವುದು ಎಂದು ಅವರು ಹೇಳಿದರು.

ಅವಿಭಜಿತ ದ.ಕ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಮಾತ್ರವಲ್ಲ ಮಹಿಳಾ ಸಶಕ್ತೀಕರಣವೂ ಆಗಿದೆ. ನವೋದಯ ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರು ಆರ್ಥಿಕವಾಗಿ ಸುಧಾರಣೆ ಕಂಡುಕೊಂಡಿದ್ದಾರೆ. ಜಾಗೃತಿ ಬೆಳೆದಿದೆ. ಇವತ್ತು ರಾಜ್ಯದ ಏಳು ಜಿಲ್ಲೆಗಳಲ್ಲಿ ನವೋದಯ ಚಾರಿಟೇಬಲ್ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ ಎಂದರು.

ಎಜಿ ಕೊಡ್ಗಿಯವರು ಅಮಾಸೆಬೈಲು ಗ್ರಾಮದ ಉದ್ಧಾರಕ್ಕೆ ಶ್ರಮಿಸಿದವರು. ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ್ ಮೂಲಕ ಗ್ರಾಮದ ಎಲ್ಲ ಮನೆಗಳು ಹೆಂಚಿನ ಮನೆಗಳಾಗಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡಿದವರು ಎಂದು ಎ.ಜಿ ಕೊಡ್ಗಿಯವರನ್ನು ಸ್ಮರಿಸಿಕೊಂಡ ಅವರು ಸಹಕಾರ ಸಂಘಗಳು ಸೇವೆಯ ಮೂಲಕವೇ ವಿಕಸನಗೊಳ್ಳುತ್ತಿವೆ ಎಂದರು.

ಆಡಳಿತ ಸಭಾ ಭವನವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸಹಕಾರಿ ಕ್ಷೇತ್ರ ನಂಬಿಕೆ, ವಿಶ್ವಾಸದ ಮೇಲೆ ಬೆಳೆದು ಬಂದಿದೆ. ದೇಶದ ಅಭಿವೃದ್ಧಿಯಲ್ಲಿ ಸಹಕಾರ ಕ್ಷೇತ್ರವೂ ಒಂದು ತುದಿ ಎನ್ನುವುದು ನಿರ್ವಿವಾದ. ಮೊಳಹಳ್ಳಿ ಶಿವರಾವ್, ಕಾರ್ನಾಡ್ ಸದಾಶಿವ ರಾವ್ ಮುಂತಾದವರು ಸಹಕಾರಕ್ಕೆ ಬದುಕನ್ನು ಅರ್ಪಿಸಿಕೊಂಡವರು. ಸ್ವಾತಂತ್ರ್ಯ ಚಳವಳಿಯ ಬಳಿಕ ಸಹಕಾರ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದನ್ನು ಸ್ಮರಿಸಿಕೊಳ್ಳಬಹುದು. ಅದೇ ರೀತಿ ಎ.ಜಿ ಕೊಡ್ಗಿಯವರು ಸಮಾಜ ಬಹಳ ವೇಗವಾಗಿ ನಡೆಯಬೇಕು ಎನ್ನುವ ಕನಸು ಕಂಡು ಅಮಾಸೆಬೈಲು ಗ್ರಾಮದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡವರು. ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘ ಇನ್ನೂ ಹೊಸ ಯೋಜನೆಗಳು, ಕನಸುಗಳೊಂದಿಗೆ ಜನರ ಹತ್ತಿರಕ್ಕೆ ಹೋಗಬೇಕು ಎಂದರು.

ನವೀಕೃತ ಸಭಾಭವನ ಉದ್ಘಾಟಿಸಿದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣಕುಮಾರ ಕೊಡ್ಗಿ, ಸಹಕಾರ ಸಂಘಗಳಲ್ಲಿ ಸಿಬ್ಬಂದಿಗಳು ಸ್ಥಳೀಯರೇ ಆಗಿರುವುದರಿಂದ ಜನಸಾಮಾನ್ಯರಿಗೆ ಉತ್ತಮ ಸೇವೆ ದೊರೆಯುತ್ತದೆ. ಹಾಗಾಗಿ ಸಹಕಾರಿ ಸಂಘಗಳು ಜನರಿಗೆ ಆಪ್ತವಾಗಿ ಬೆಳೆಯುತ್ತಿವೆ. ಸರಕಾರವೂ ಕೂಡಾ ವ್ಯವಸಾಯ ಸೇವಾ ಸಹಕಾರಿ ಸಂಘಗಳಿಗೆ ಉತ್ತೇಜನ ನೀಡಬೇಕು. ಸರಕಾರ ನುಡಿದಂತೆ ರೈತರಿಗೆ ೫ ಲಕ್ಷದ ತನಕ ನಿಬಡ್ಡಿಯಲ್ಲಿ ಸಾಲ, ೧೫ ಲಕ್ಷದ ತನಕ ಶೇ.೩ ಬಡ್ಡಿಯಲ್ಲಿ ಸಾಲ ನೀಡಲೇಬೇಕು. ವ್ಯವಸಾಯ ಸೇವಾ ಸಹಕಾರಿ ಸಂಘಗಳಿಗೆ ಬರಬೇಕಾಗಿದ್ದ ಮೊತ್ತ ಪಾವತಿಯಾಗಿಲ್ಲ ಎನ್ನುವ ದೂರು ಸಹ ಇದೆ. ಈ ಬಗ್ಗೆ ಸರಕಾರ ಕೂಡಲೇ ಕ್ರಮ ವಹಿಸಬೇಕು. ಶಾಸಕರುಗಳು ಕೂಡಾ ಈ ಬಗ್ಗೆ ಸರಕಾರದ ಮೇಲೆ ಒತ್ತಡ ತರುತ್ತೇವೆ ಎಂದರು.

ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸದಾನಂದ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ನವೋದಯ ಕೊಠಡಿ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ಶ್ರೀಮತಿ ಲಾವಣ್ಯ ಕೆ.ಆರ್ ಪಡಿತರ ವಿಭಾಗ ಉದ್ಘಾಟಿಸಿದರು. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಂ.ಮಹೇಶ್ ಹೆಗ್ಡೆ, ಎಸ್.ರಾಜು ಪೂಜಾರಿ, ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್.ವಿ., ಅಮಾಸೆಬೈಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ಕುಲಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಡಾ.ಎಂ.ಎನ್.ರಾಜೇಂದ್ರ ಕುಮಾರ್, ನೂತನ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಕಟ್ಟಡ ನಿರ್ಮಾಣ ಸಮಿತಿಯ ಸೂರ್ಯನಾರಾಯಣ ಐತಾಳ್, ಶಂಕರನಾರಾಯಣ ಉಳ್ಳೂರ, ವೈ.ಕುಶಲ್ ತೋಳಾರ್, ಆರ್.ನವೀನ್ಚಂದ್ರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಶಬ್ದದ್ ಆಹಮದ್ ಅವರನ್ನು ಸನ್ಮಾನಿಸಲಾಯಿತು. ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳನ್ನು ಗೌರವಿಸಲಾಯಿತು.

ಸಂಘದ ಉಪಾಧ್ಯಕ್ಷರಾದ ಶೇಖರ ನಾಯ್ಕ, ಸಂಘದ ನಿರ್ದೇಶಕರಾದ ನಾರಾಯಣ ರಾವ್, ಕೆ.ಮಂಜಯ್ಯ ಶೆಟ್ಟಿ, ನರಸಿಂಹ ಶೆಟ್ಟಿ, ಸತೀಶ್ ಹೆಗ್ಡೆ, ಗೋಪಾಲ ಪೂಜಾರಿ, ತಿಮ್ಮಪ್ಪ ಪೂಜಾರಿ, ದಿನೇಶ್ ಶೆಟ್ಟಿಗಾರ, ಶ್ರೀಮತಿ ಸುಜಯಾ ಹೆಗ್ಡೆ, ಶ್ರೀಮತಿ ರಾಧಿಕಾ, ಅಕ್ಷತ್ ಕುಮಾರ್, ಬಿ.ಪ್ರವೀಣ್ ಕುಮಾರ್, ಬಿ.ಪ್ರವೀಣ್ ಕುಮಾರ್, ರಘುಪತಿ ರಾವ್, ನಾಗರಾಜ ಪೂಜಾರಿ, ವಲಯ ಮೇಲ್ವಿಚಾರಕ ಎ.ಉದಯ ಶೆಟ್ಟಿ ಉಪಸ್ಥಿತರಿದ್ದರು.

ಸಂಘದ ನಿರ್ದೇಶಕ ಸತೀಶ ಹೆಗಡೆ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಕೃಷ್ಣ ಕುಮಾರ್ ಭಾಗವತ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಾಯಕ ಅಶೋಕ ಸಾರಂಗ ಪ್ರಾರ್ಥನೆ ಮಾಡಿ, ರೈತಗೀತೆ ಹಾಡಿದರು. ನಿರ್ದೇಶಕ ತಿಮ್ಮಪ್ಪ ಪೂಜಾರಿ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!