Sunday, September 8, 2024

ಹಿರಿಯ ಸಾಹಿತಿ ಇಂದಿರಾ ಹಾಲಂಬಿ ಅವರಿಗೆ ಅಕಲಂಕ ಪ್ರಶಸ್ತಿ

ಕುಂದಾಪುರ:ಹಿರಿಯ ಸಾಹಿತಿಗಳಾದ ಇಂದಿರಾ ಹಾಲಂಬಿ ಅವರಿಗೆ 2023ನೇ ಸಾಲಿನ ಅಕಲಂಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇಂದಿರ ಹಾಲಂಬಿಯವರು ‘ಗಿರಿವಾಸಿನಿ’ ಕಾವ್ಯನಾಮದಿಂದ ಪ್ರಸಿದ್ಧರಾದ ಇವರು 40ವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾದ ಇವರು ಪ್ರಕಾಶನ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದವರಾದ ಇವರು ಈಗ ಆತ್ರಾಡಿಯಲ್ಲಿ ವಾಸವಾಗಿದ್ದು, ಬಾಲ್ಯದಿಂದಲೂ ಬೆಳೆದು ಬಂದ ಓದುವ ಆಸಕ್ತಿ ಮತ್ತು ಸಾಹಿತ್ಯ ಪ್ರೀತಿಯಿಂದ ಹಾಡು, ಕತೆ, ಲೇಖನ, ಮಕ್ಕಳ ಸಾಹಿತ್ಯ, ಚಿಂತನ, ನಾಟಕ ರಚನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
1980ರಲ್ಲಿ ‘ಸಂದೀಪ ಸಾಹಿತ್ಯ’ ಹೆಸರಿನಲ್ಲಿ ಪುಸ್ತಕಗಳ ಪ್ರಕಟಣೆ ಪ್ರಾರಂಭಿಸಿದ್ದು; ಈ ತನಕ 138 ವೈವಿದ್ಯಮಯ, ಪೂರ್ಣ ಉಪಯುಕ್ತ ಸಾಹಿತ್ಯ ಕೃತಿಗಳ ಪ್ರಕಟಿಸಿರುತ್ತಾರೆ. ಇದರಲ್ಲಿ ಇವರ ಸ್ವಂತ ಕೃತಿಗಳು 100ಕ್ಕಿಂತ ಹೆಚ್ಚು. ಇವರ ಅನೇಕ ಕೃತಿಗಳು ಮರುಮುದ್ರಣಗೊಂಡಿದೆ. 1999 ಜನವರಿಯಲ್ಲಿ ಕುಂದಾಪುರ ತಾಲೂಕು 8ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿದ್ದರು. 2010ರಲ್ಲಿ ಗದಗಿನಲ್ಲಿ ನಡೆದ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರ ಸಾಧನೆಯನ್ನು ಗಮನಿಸಿ, ಸಾಹಿತ್ಯ ಪರಿಷತ್ತು ಇವರನ್ನು ಗೌರವಿಸಿದೆ. ‘ಜೊತೆಯಲ್ಲಿ ಇರುವವರು’ ಮಕ್ಕಳ ಕಥಾಸಂಕಲನದ/ಕತೆ ಕರ್ನಾಟಕ ಸರಕಾರದ 5ನೇ ತರಗತಿಯ ಪಠ್ಯಪುಸ್ತಕದಲ್ಲಿ 3 ವರ್ಷ ಅವಧಿಗೆ ಸೇರ್ಪಡೆಗೊಂಡಿತ್ತು. ‘ನೀರಿನ ಋಣ’ ಎಂಬ ಮಕ್ಕಳ ಕಥೆ, ಕಾಸರಗೋಡಿನ ಕನ್ನಡ ಶಾಲೆಯ 6ನೇ ತರಗತಿ ಪಠ್ಯದಲ್ಲಿ ಪ್ರಕಟವಾಗಿತ್ತು. ಕನ್ನಡ ಸಂಘ ಕಾಂತಾವರ (ರಿ.), ಕಾಂತಾವರ ಇವರು ನಾಡಿಗೆ ನಮಸ್ಕಾರ, ಸಾಹಿತ್ಯ ಸಂಸ್ಕøತಿ ಚಿಂತನ ಗ್ರಂಥಮಾಲೆ ಕುಸುಮ: 195ನೆಯ ಕೃತಿಯಾಗಿ ವಿದ್ಯಾಗಣೇಶ್ ಅವರು ಬರೆದ `ಲೇಖಕಿ, ಪ್ರಕಾಶಕಿ ಇಂದಿರಾ ಹಾಲಂಬಿ’ ಎಂಬ ಪುಸ್ತಕ ಪ್ರಕಟಿಸಿದೆ.

ಆಕಾಶವಾಣಿ, ದೂರದರ್ಶನಗಳಲ್ಲಿ ಇವರ ಚಿಂತನ, ಸಂದರ್ಶನಗಳು ಪ್ರಸಾರವಾಗಿವೆ. ಪುಸ್ತಕಗಳ ಓದುವಿಕೆ ಮತ್ತು ನಾಟಕ, ಸಾಹಿತ್ಯ ರಚನೆ, ದೇಶಭಕ್ತಿ ಗೀತೆ, ಭಾವಗೀತೆ ರಚನೆ ಹಾಗೂ ಹಾಡುವಿಕೆ ಇವರ ನೆಚ್ಚಿನ ಹವ್ಯಾಸವಾಗಿದೆ. ಇವರ ಇಬ್ಬರು ಮಕ್ಕಳು (ಮುರುಳೀಧರ ಹಾಲಂಬಿ, ಶ್ರೀಮತಿ ವಿದ್ಯಾ ಗಣೇಶ) ಲೇಖಕರಾಗಿದ್ದಾರೆ. ಹಲವಾರು ಪ್ರಶಸ್ತಿ-ಪುರಸ್ಕಾರ, ಸನ್ಮಾನ, ಗೌರವಗಳಿಗೆ ಪಾತ್ರರಾದ ಇವರು; ಕನ್ನಡ ಭಾಷೆ ಮತ್ತು ಸಾಹಿತ್ಯ ಬೆಳವಣಿಗೆ, ಭೇದ ಭಾವ ರಹಿತ ಸಾಮಾಜಿಕ ಉತ್ತಮ ಜೀವನಮಟ್ಟ ಬೆಳೆದು ಬರಬೇಕೆಂಬ ಆಶಯವನ್ನು ಹೊಂದಿದ್ದು, ಕಿರಿಯರಿಗೆ ಪ್ರೇರಣಾ ಶಕ್ತಿಯಾಗಿದ್ದಾರೆ.

ಡಾ. ಉಪ್ಪಂಗಳ ರಾಮ ಭಟ್‍ರು ಸ್ಥಾಪಿಸಿದ “ಅಕಲಂಕ” ಪ್ರಕಾಶನ ಮತ್ತು ಪ್ರತಿಷ್ಠಾನದ ಮೂಲಕ ಹಲವು ಕೃತಿ ಪ್ರಕಟಿಸಿದ್ದಾರೆ. ಅಕಲಂಕ ಪ್ರತಿಷ್ಠಾನದ ಮೂಲಕ 2006ರಿಂದ “ಅಕಲಂಕ ಪ್ರಶಸ್ತ್ತಿ”ಯನ್ನು ನೀಡುತ್ತಾ ಬಂದಿದ್ದಾರೆ. 2015ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿ ನೀಡಿರುವ ಇವರು ಈ ಪ್ರಶಸ್ತಿಯನ್ನು ಪರಿಷತ್ತಿನ ಮೂಲಕ ಕೊಡಮಾಡುವ ವ್ಯವಸ್ಥೆ ಮಾಡಿದ್ದಾರೆ. ಅವರ ನಿಧನದ ನಂತರ ಪತ್ನಿ ಶಂಕರಿ ಆರ್ ಭಟ್ ಅವರು ಈ ಪ್ರಶಸ್ತಿ ಕಾರ್ಯಕ್ರಮಕ್ಕೆ ತುಂಬು ಹೃದಯದ ಸಹಕಾರ ನೀಡುತ್ತಿದ್ದಾರೆ. ರೂ. 15,000/- ನಗದು ಪುರಸ್ಕಾರ ಹೊಂದಿರುವ ಈ ಪ್ರಶಸ್ತಿಗೆ ಈ ಬಾರಿ ಹಿರಿಯ ಲೇಖಕಿ, ಪ್ರಕಾಶಕಿಯಾದ ಇಂದಿರಾ ಹಾಲಂಬಿ ಅವರು ಆಯ್ಕೆಯಾಗಿದ್ದಾರೆ.

ಜೂ.23-2024 ಭಾನುವಾರ ಸಂಜೆ 4ಕ್ಕೆ ಗೀತಾಂಜಲಿ ಸಭಾಂಗಣ, ಎಂ.ಜಿ.ಎಂ. ಕಾಲೇಜು ಉಡುಪಿ ಇಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!