Sunday, September 8, 2024

ಪೋಕ್ಸೊ ಪ್ರಕರಣ : ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಿಎಂ ಬಿಎಸ್‌ವೈಗೆ ಸಿಐಡಿ ನೋಟೀಸ್‌ !

ಜನಪ್ರತಿನಿಧಿ (ಬೆಂಗಳೂರು) : ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ತನಿಖಾ ತಂಡದ ಮುಂದೆ ಹಾಜರಾಗುವಂತೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಅಪರಾಧ ತನಿಖಾ ಇಲಾಖೆ (ಸಿಐಡಿ) ನೋಟಿಸ್ ಜಾರಿ ಮಾಡಿದೆ.

ಪೊಲೀಸರ ಪ್ರಕಾರ, ಯಡಿಯೂರಪ್ಪ ವಿರುದ್ಧ 17 ವರ್ಷದ ಅಪ್ರಾಪ್ತೆಯ ತಾಯಿ ನೀಡಿರುವ ದೂರಿನ ಆಧಾರದ ಮೇಲೆ ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 ಎ (ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ವರ್ಷದ ಫೆಬ್ರುವರಿ 2ರಂದು ಯಡಿಯೂರಪ್ಪ ನಿವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಅವರು ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು.

ಮಾರ್ಚ್ 14 ರಂದು ಬೆಂಗಳೂರಿನ ಸದಾಶಿವನಗರ ಪೊಲೀಸರು ಪ್ರಕರಣವನ್ನು ದಾಖಲಿಸಿದ ಗಂಟೆಗಳ ನಂತರ, ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರು ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವರ್ಗಾಯಿಸಿ ಆದೇಶ ಹೊರಡಿಸಿದರು.

ಯಡಿಯೂರಪ್ಪ ವಿರುದ್ಧ ಆರೋಪ ಮಾಡಿದ್ದ 54 ವರ್ಷದ ಮಹಿಳೆ ಶ್ವಾಸಕೋಶದ ಕ್ಯಾನ್ಸರ್‌ನಿಂದ ಕಳೆದ ತಿಂಗಳು ಬನ್ನೇರುಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಮೇ 27ರಂದು ಮೃತಪಟ್ಟಿದ್ದರು.

81 ವರ್ಷದ ಯಡಿಯೂರಪ್ಪ ಅವರು ಈ ಆರೋಪವನ್ನು ನಿರಾಕರಿಸಿದ್ದು, ಪ್ರಕರಣದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ.

‘ಇಂದು ವಿಚಾರಣೆಗೆ ಹಾಜರಾಗುವಂತೆ ನಿನ್ನೆ ಸಿಐಡಿ ನೋಟಿಸ್ ಕಳುಹಿಸಿತ್ತು. ಆದರೆ, ಸದ್ಯ ದೆಹಲಿಯಲ್ಲಿರುವ ಕಾರಣ ಯಡಿಯೂರಪ್ಪ ಅವರು ಸಮಯಾವಕಾಶ ಕೋರಿದ್ದಾರೆ. ಮೂರು ದಿನಗಳ ನಂತರ ಅವರು ಪೊಲೀಸರ ಮುಂದೆ ಹಾಜರಾಗಲಿದ್ದಾರೆ’ ಎಂದು ಯಡಿಯೂರಪ್ಪ ಅವರ ಆಪ್ತ ಮೂಲಗಳು ತಿಳಿಸಿವೆ.

ಸಿಐಡಿ ಈಗಾಗಲೇ ಸಂತ್ರಸ್ತೆ ಮತ್ತು ಆಕೆಯ ತಾಯಿಯ ಹೇಳಿಕೆಯನ್ನು ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 164ರ ಅಡಿಯಲ್ಲಿ ದಾಖಲಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!