Sunday, September 8, 2024

ಕನ್ನಡಿಗರು ಭಾಷಾ ನಿರಭಿಮಾನಿಗಳು | ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರೊಂದಿಗಿನ ಮಾತುಕತೆ

ಕನ್ನಡ ಸಾರಸ್ವತ ಲೋಕದ ಧೀಮಂತ ಸಂಸ್ಥೆ ಹಾಗೂ ಕೋಟ್ಯಾಂತರ ಕನ್ನಡಿಗರ  ಆಶಾಕಿರಣವಾದ  ಕನ್ನಡ ಸಾಹಿತ್ಯ ಪರಿಷತ್‌ ನ ಬ್ರಹ್ಮಾವರ ತಾಲೂಕು ಘಟಕದ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನ ʼಸಮನ್ಯುʼ ಸ್ಮೃತಿ ತರಂಗದ ಸೌರಭ ಇದೇ ಬರುವ ಜೂನ್ 11ರ ಮಂಗಳವಾರ ಪಾರಂಪಳ್ಳಿಯ ಶ್ರೀ ಮಹಾವಿಷ್ಣು ಸಭಾಂಗಣದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಹಿರಿಯ ಸಾಹಿತಿ ಪಾರಂಪಳ್ಳಿ ನರಸಿಂಹ ಐತಾಳ್‌ ಜನಪ್ರತಿನಿಧಿ ಪತ್ರಿಕೆಯೊಂದಿಗೆ ಮಾತನಾಡಿದ್ದಾರೆ. ಅವರೊಂದಿಗೆ ನಡೆಸಿದ ಸಂದರ್ಶನದ ಸಾರ ಇಲ್ಲಿದೆ.

ಪ್ರ. ಕನ್ನಡ ಸಾಹಿತ್ಯ ಸಮ್ಮೇಳನ ಮಾಡುವ ಅಗತ್ಯ ಏನು ಅಂತ ಅನ್ನಿಸುತ್ತದೆ ನಿಮಗೆ ?
ಉ. ಕನ್ನಡ ಭಾಷೆಯ ಉದ್ಧಾರಕ್ಕಾಗಿ, ಕನ್ನಡ ಭಾಷೆಯ ಏಳ್ಗೆಗಾಗಿ ಕನ್ನಡ ಸಾಹಿತ್ಯ ಸಮ್ಮೇಳನ ಅಗತ್ಯವಿದೆ. ಏನೇ ಮಾಡಿದರೂ ನಮ್ಮ ಕನ್ನಡಿಗರು ಎಚ್ಚರಗೊಳ್ಳುವುದಿಲ್ಲ, ನೀರು, ಮಣ್ಣು, ಭಾಷೆಯನ್ನು ಉದಾರವಾಗಿ ಬೇರೆಯವರಿಗೆ ಬಿಟ್ಟುಕೊಟ್ಟೆವು. ಕನ್ನಡ ಭಾಷೆಯನ್ನು ಕಟ್ಟಿ, ಬೆಳೆಸಿ ಉಳಿಸುವುದಕ್ಕಾಗಿ ಬೇರೆ ಯಾವ ಭಾಷೆಗೂ ಇಲ್ಲದಿರುವಷ್ಟು ಸಂಸ್ಥೆಗಳು ನಮ್ಮಲ್ಲಿವೆ. ತೆಲುಗಿನವರು ಭಾಷಾಭಿಮಾನಿಗಳು, ತಮಿಳರು ಭಾಷಾ ದುರಭಿಮಾನಿಗಳು, ಕನ್ನಡಿಗರು ಭಾಷಾ ನಿರಭಿಮಾನಿಗಳು. ಕನ್ನಡ ಭಾಷೆಯನ್ನು ಬಳಸುವವರೇ ಇಲ್ಲ. ನಮ್ಮ ಜೀವನಶೈಲಿಯಲ್ಲಿ ಕನ್ನಡ ಮರೆಯಾಗಿ ಆಂಗ್ಲಭಾಷೆ ಆವರಿಸಿಕೊಂಡಿದೆ. ಭಾಷೆಯ ಬಗ್ಗೆ ಜಾಗೃತಿಗೊಳಿಸುವ ಬಗ್ಗೆ ಸಮ್ಮೇಳನಗಳು ಒಂದು ಕಿರು ಪ್ರಯತ್ನ. ಇದರಿಂದಲೇ ಕನ್ನಡ ಏಳ್ಗೆ ಆಗುತ್ತದೆ ಎನ್ನುವುದು ಮಾತ್ರ ಅನುಮಾನ.

ಪ್ರ. ಮಾತೃಭಾಷೆ ಶಿಕ್ಷಣದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಉ. ಮಾತ್ರಭಾಷಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಅಗತ್ಯ ಖಂಡಿತವಿದೆ. ಇಂದು ಕನ್ನಡ ಶಾಲೆಗಳೆಲ್ಲಾ ಸಾಯುತ್ತಿವೆ. ಏಳನೇ ತರಗತಿಯವರೆಗಾದರೂ ಮಾತ್ರಭಾಷೆಯಲ್ಲೆ ಕಲಿತರೇ ವಿದ್ಯಾರ್ಥಿ ಕಲಿಕೆಯಲ್ಲಿ ಯಶಸ್ವಿಯಾಗಿ ಮುಂದುವರಿಯುವುದಕ್ಕೆ ಸಾಧ್ಯ. ಮಗುವಿನ ಬೌದ್ಧಿಕ ವಿಕಾಸಕ್ಕೆ ಮಾತ್ರಭಾಷೆಯ ಕಲಿಕೆ ಅತ್ಯಗತ್ಯ. ನಮ್ಮ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳ ಫಲಿತಾಂಶದಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿತ ಮಕ್ಕಳೆ ಹೆಚ್ಚಾಗಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡು ಪ್ರಥಮ, ದ್ವಿತಿಯ ಸ್ಥಾನದಲ್ಲಿ ಗುರಿತಿಸಿಕೊಳ್ಳುತ್ತಾರೆ. ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿರುವುದಕ್ಕೆ ನೇರ ಸರ್ಕಾರವೇ ಕಾರಣ.

ಪ್ರ. ಶಿಕ್ಷಣದ ಮಾಧ್ಯಮ ಕನ್ನಡವನ್ನಾಗಿ ಕಡ್ಡಾಯಗೊಳಿಸಲು ಸರ್ಕಾರ ಹಿಂದೇಟು ಹಾಕುತ್ತಿದೆಯೇ?
ಉ . ಖಂಡಿತ ಹೌದು. ಸರ್ಕಾರದ ಧೋರಣೆಯೇ ಶಿಕ್ಷಣದ ಮಾಧ್ಯಮ ಕನ್ನಡವನ್ನಾಗಿ ಕಡ್ಡಯಾಗೊಳಿಸಲು ಹಿಂದೇಟು ಹಾಕುವಂತೆಯೇ ಇದೆ. ಶಾಲೆಗಳಿಗೆ ಅಗತ್ಯ ಮಟ್ಟದಲ್ಲಿ ಅಧ್ಯಾಪಕರನ್ನು ನೇಮಕಗೊಳಿಕೊಳ್ಳದೇ ಇದ್ದರೇ ಏನಾಗುತ್ತದೆ ? ಇವೆಲ್ಲಾ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಮತ್ತು ಶಿಕ್ಷಣದ ಮಾಧ್ಯಮವನ್ನು ಕನ್ನಡವನ್ನಾಗಿ ಕಡ್ಡಾಯಗೊಳಿಸಲು ಸರ್ಕಾರ ತೋರುವ ನಿರಾಕರಣೆಯೇ ಆಗಿದೆ.

ಪ್ರ. ತಾಲೂಕಿನ ಹೊಸ ತಲೆಮಾರಿನ ಸಾಹಿತ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು ?
ಉ. ಅಷ್ಟಾಗಿ ಈ ಬಗ್ಗೆ ನಾನು ಕೂಲಂಕಶವಾಗಿ ಗಮನಿಸಿಲ್ಲ. ಯುವಕರಲ್ಲಿ ಅಧ್ಯಯನಶೀಲತೆ ಕಡಿಮೆ ಆಗಿದೆ ಎನ್ನುವುದನ್ನು ಮಾತ್ರ ಹೇಳಬಲ್ಲೆ. ಬರೆಯುವವರಿಗೆ ಅಧ್ಯಯನ ಮುಖ್ಯ. ಓದುವುದು ಮುಖ್ಯ. ಹೊಸ ತಲೆಮಾರು ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಇದಕ್ಕೆ ಈ ಆಧುನಿಕತೆಯೇ ಕಾರಣವಿರಬಹುದು.

ಪ್ರ. ಎಡಪಂಥ-ಬಲಪಂಥಗಳ ನಡುವೆ ತಮ್ಮದೇ ಸರಿಯೆಂಬ ಪೂರ್ವಗ್ರಹವು ದ್ವೇಷದ ಮಟ್ಟಕ್ಕೆ ಹೋಗಿ ಸತ್ಯ ಎಲ್ಲವೂ ಮರೆಯಾಗಿ ಸಾಂಸ್ಕೃತಿಕ ಬದುಕು ಛಿದ್ರವಾಗುವ ಆತಂಕಮಯ ವಾತಾವರಣಕ್ಕೆ ಸಾಹಿತ್ಯ ವಲಯ ಹೊರತಾಗಿಲ್ಲವಲ್ಲಾ !?
ಉ. ಈ ಪ್ರಶ್ನೆಯನ್ನು ಮಾತ್ರ ನನ್ನನ್ನು ಕೇಳಬೇಡಿ. ಖಂಡಿತ ಸಾಹಿತ್ಯ ಕ್ಷೇತ್ರ ಈ ಎರಡೂ ವಾದಗಳಿಂದೇನೂ ಹೊರತಾಗಿಲ್ಲ. ಸಾಹಿತ್ಯ ಈ ವಾದಗಳೆಲ್ಲದರ ಹೊರತಾಗಿ ಇರಬೇಕು. ಬೆಳೆಯಬೇಕು. ಇದಕ್ಕಿಂತ ಹೆಚ್ಚಿದ್ದನ್ನು ನಾನು ಹೇಳಲಾರೆ. ದಯವಿಟ್ಟು ಒತ್ತಾಯಿಸಬೇಡಿ.

ಪ್ರ. ಸಾಹಿತ್ಯ ವಲಯ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿ ಬಿಟ್ಟಿದೆ ಎಂಬ ವಾತಾವರಣವಿದೆಯಲ್ಲಾ ?ಉ. ಹಾಗೇನೂ ಇಲ್ಲ. ಇದು ದುರುದ್ದೇಶದಿಂದ ಸೃಷ್ಟಿಸಿದ ಅಭಿಪ್ರಾಯ. ಸಾಹಿತ್ಯ ಪರಿಷತ್ತು ಯಾರೊಬ್ಬರದ್ದಲ್ಲ. ಎಲ್ಲರೂ ಒಳಗೊಳ್ಳಬೇಕು. ತನ್ನನ್ನು ಕರೆದರೇ ಮಾತ್ರ ಪರಿಷತ್ತು ಬೇಕು, ಇಲ್ಲದಿದ್ದರೆ ಬೇಡ ಎನ್ನುವ ಮನಸ್ಥಿತಿಯಿಂದ ಹೊರಬಂದು ಪರಿಷತ್ತಿನ ಚಟುವಟಿಕೆಗಳಲ್ಲಿ, ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತರು ತೊಡಗಿಕೊಳ್ಳಬೇಕು. ಒಳಗೊಳ್ಳುವ ಮನಸ್ಸು ಬೇಕು. ಎಲ್ಲರೂ ಸೇರುವ ವೇದಿಕೆ ಸಾಹಿತ್ಯ ವಲಯ.

ಪ್ರ. ಸಾಹಿತ್ಯ ಪರಿಷತ್ ಯುವಕರನ್ನು ಸೆಳೆಯುವಲ್ಲಿ ಸೋತಿದೆ ಎಂಬ ವಾತಾವರಣವಿದೆ ?
ಉ. ಖಂಡಿತ ಹೌದು. ಯಾಕೆ ಕೇಳಿದರೇ ಯುವಕರಿಗೆ ಕನ್ನಡ ಬೇಡ. ಕನ್ನಡಿಗರಲ್ಲಿ ಆಂಗ್ಲಭಾಷೆಯಲ್ಲಿ ಮಾತನಾಡಿದರೇ ಮಾತ್ರ ಸುಶಿಕ್ಷಣವಂತರು ಎನ್ನುವ ಮನೋಧೋರಣೆ ಇದೆ. ಯುವಕರಲ್ಲಿ ಸಾಹಿತ್ಯ ಆಸಕ್ತಿ ಇಲ್ಲ. ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ಮುಖವಾಗಿ ಸಾಹಿತ್ಯ ಪರಿಷತ್‌ ಕೆಲಸ ಮಾಡಬೇಕಿದೆ.

ಪ್ರ. ಸಾಹಿತ್ಯ ಸಮ್ಮೇಳನಗಳು ನಾಮಕಾವಾಸ್ತೆಗೆ ನಡೆಯುತ್ತಿವೆಯೇ ?
ಉ. ಇದನ್ನು ನಾನು ಒಪ್ಪುವುದೂ ಇಲ್ಲ, ಬಿಡುವುದೂ ಇಲ್ಲ.

ಪ್ರ. ಇತ್ತೀಚೆಗೆ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಗಳಲ್ಲಿ ಗೋಷ್ಠಿಗಳು ಪೇಲವ ಅನ್ನಿಸುತ್ತಿದೆ ಎಂಬ ಮಾತಿದೆ !?
ಉ. ಗೋಷ್ಠಿಗಳನ್ನು ಕೇಳುವವರೇ ಇಲ್ಲ. ಮಂಡಿಸುವವರು ವಿಷಯ ಮಂಡಿಸಿ ಹೋಗುತ್ತಾರೆ. ಅಲ್ಲಿಗೆ ಗೋಷ್ಠಿಗಳ ಕಥೆ ಮುಗಿಯಿತು. ಗೋಷ್ಠಿಗಳು ಪೇಲವ ಅನ್ನಿಸುತ್ತಿದೆಯೇ ಎನ್ನುವುದಕ್ಕೆ ನಾನು ಪ್ರತಿಕ್ರಿಸುವುದಕ್ಕೆ ಮುಂದಾಗುವುದಿಲ್ಲ. ಇದರಲ್ಲೇ ನಿಮಗೆ ಉತ್ತರ ಸಿಕ್ಕಿದೆ ಎಂದು ಭಾವಿಸುವೆ.

ಪ್ರ. ಸಾಹಿತ್ಯ ವಲಯ ಸಾಮಾಜಿಕ ಭಾಗವೂ ಹೌದು, ಬ್ರಹ್ಮಾವರ ತಾಲೂಕಿನ ವ್ಯಾಪ್ತಿಯಲ್ಲಿರುವ ಸಮಸ್ಯೆಗಳನ್ನು  ಧ್ವನಿಸುವಲ್ಲಿ ಸಮ್ಮೇಳನದ ಪಾತ್ರ ?
ಉ. ಸಮಸ್ಯೆಗಳನ್ನು ಧ್ವನಿಸುವಲ್ಲಿ ಸಮ್ಮೇಳನದ ಪಾತ್ರ ಮಹತ್ತರವಾದದ್ದು. ತಾಲೂಕಿನಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿರುವುದರ ಬಗ್ಗೆ ಅತೀವ ಬೇಸರವಿದೆ. ಕಳೆದ ಒಂದೆರಡು ವರ್ಷಗಳಲ್ಲಿ ಎರಡು ಅನುದಾನಿತ ಶಾಲೆಗಳು ಮುಚ್ಚಿವೆ. ಈಗಾಗಲೇ ತಾಲೂಕಿನಲ್ಲಿ ಅನೇಕ ಕನ್ನಡ ಶಾಲೇಗಳು ಮುಚ್ಚಿವೆ. ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಸರ್ಕಾರ ನಡೆಸುತ್ತಲೇ ಇಲ್ಲ. ಕನ್ನಡ ಶಾಲೆಗಳ ಉಳಿವಿಗೆ ಸರ್ಕಾರ ಜವಾಬ್ದಾರಿ ವಹಿಸಿಕೊಳ್ಳಬೇಕು. ತಾಲೂಕಿನ ಸಾಮಾಜಿಕ ಸಮಸ್ಯೆಗಳ ಬಗ್ಗೆ ಪರಿಷತ್ತು ಧ್ವನಿ ಎತ್ತುತ್ತಲೇ ಬಂದಿದೆ. ಈ ಸಮ್ಮೇಳನವೂ ತಾಲೂಕಿನ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತದೆ. ಆಯೋಜನ ಸಮಿತಿ ಈ ಬಗ್ಗೆ ರೂಪರೇಷೆ ತಯಾರು ಮಾಡಿಕೊಂಡಿದೆ. 

ಪ್ರ. ಬ್ರಹ್ಮಾವರ ತಾಲೂಕು ಸಾಹಿತ್ಯ ಸಮ್ಮೆಳನದ ಅಧ್ಯಕ್ಷರಾಗಿ ಆಯ್ಕೆ ಆಗಿರುವುದರ ಬಗ್ಗೆ ಏನು ಅನ್ನಿಸುತ್ತದೆ ?
ಉ. ಸಂತೋಷವಿದೆ. ಸಂಭ್ರಮ ಪಡುವಷ್ಟು ಖುಷಿ ಇದೆ.

 ಸಂದರ್ಶನ : ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!