spot_img
Saturday, December 7, 2024
spot_img

ಕಾರಾಗೃಹದಲ್ಲಿರುವ ಖೈದಿಗೆ ಸಂತಾನ ಹೊಂದಲು ಅವಕಾಶ, ಪರೋಲ್‌ ಮಂಜೂರು ಮಾಡಿ ಆದೇಶಿಸಿದ ಹೈಕೋರ್ಟ್‌ !

ಜನಪ್ರತಿನಿಧಿ (ಬೆಂಗಳೂರು) : ಜೈಲುವಾಸ ಅನುಭವಿಸುತ್ತಿರುವ ಸಂದರ್ಭದಲ್ಲೇ ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆಯಾಗಲು ಸಜಾಬಂಧಿಗೆ ಅವಕಾಶ ಮಾಡಿಕೊಟ್ಟಿದ್ದ ಹೈಕೋರ್ಟ್, ಇದೀಗ ದಂಪತಿಗಳಿಗೆ ಸಂತಾನ ಪಡೆಯುವುದಕ್ಕೆ ಅವಕಾಶ ಆಗುವಂತೆ ಪರೋಲ್ ಮಂಜೂರು ಮಾಡಿ ಆದೇಶ ನೀಡಿದೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೊಲೆ ಪ್ರಕರಣ ಸಂಬಂಧ ಜೈಲು ಶಿಕ್ಷೆ ಅನುಭವಿಸುತ್ತಿರುವ, ಕೋಲಾರದ ಆನಂದ್ ಎಂಬಾತನನ್ನು ಪತ್ನಿಯೊಂದಿಗೆ ಸಾಂಸಾರಿಕ ಜೀವನ ನಡೆಸಿ ಸಂತಾನ ಪಡೆಯುವುದಕ್ಕಾಗಿ ಇದೇ ಜೂ. 5ರಿಂದ 30 ದಿನಗಳ ಕಾಲ ಪೆರೋಲ್ ಮಂಜೂರು ಮಾಡುವಂತೆ ಜೈಲು ಅಧೀಕ್ಷಕರಿಗೆ ಹೈಕೋರ್ಟ್ ನಿರ್ದೇಶನ ಕೊಟ್ಟಿದೆ.

ಸಂತಾನ ಪಡೆಯುವುದಕ್ಕಾಗಿ ಸಜಾ ಬಂಧಿಯಾದ ತನ್ನ ಪತಿ ಆನಂದ್ ಅವರನ್ನು​ 90 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡಲು ಜೈಲು ಅಧೀಕ್ಷಕರಿಗೆ ನಿರ್ದೇಶಿಸುವಂತೆ ಕೋರಿ ಆತನ ಪತ್ನಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರಿದ್ದ ನ್ಯಾಯಪೀಠ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರು, ಅರ್ಜಿದಾರೆಯ ಪತಿಯನ್ನು ಜೂ. 5ರಿಂದ 30 ದಿನಗಳ ಕಾಲ ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆ ಮಾಡಬೇಕು. ಈ ಅವಧಿಯಲ್ಲಿ ಆನಂದ್ ವಾರಕ್ಕೊಮ್ಮೆ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಮಾಡಬೇಕು. 30 ದಿನಗಳ ನಂತರ ಪೆರೋಲ್ ಷರತ್ತುಗಳನ್ನು ಪಾಲಿಸಿದ್ದಲ್ಲಿ, ಅದರ ಆಧಾರದ ಮೇಲೆ ಮತ್ತೆ 60 ದಿನಗಳ ಕಾಲ ಪೆರೋಲ್ ವಿಸ್ತರಣೆಗೆ ಆನಂದ್ ಹಾಗೂ ಅರ್ಜಿದಾರೆ ಕೋರಬಹುದು ಎಂದು ನಿರ್ದೇಶನವನ್ನೂ ಕೊಟ್ಟಿದೆ. ಆ ಮೂಲಕ ದಂಪತಿಗೆ ಸಂತಾನ ಭಾಗ್ಯ ಪಡೆಯಲು ಹೈಕೋರ್ಟ್ ಅವಕಾಶ ಮಾಡಿಕೊಟ್ಟಿದೆ.

ವಿಚಾರಣೆ ವೇಳೆ ಅರ್ಜಿದಾರೆಯ ಪರ ವಕೀಲ ಡಿ.ಮೋಹನ್‌ಕುಮಾರ್ ವಾದ ಮಂಡಿಸಿ, ಆನಂದ್ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಜಾಬಂಧಿಯಾಗಿದ್ದಾರೆ. ಅರ್ಜಿದಾರೆಯನ್ನು ಮದುವೆಯಾಗಲು ಆನಂದ್‌ನನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲು ಈ ಹಿಂದೆ ಹೈಕೋರ್ಟ್ ಆದೇಶಿಸಿತ್ತು. ಸದ್ಯ ದಂಪತಿ ಸಂತಾನ ಪಡೆಯಲು ಇಚ್ಛಿಸಿದ್ದಾರೆ. ಅದಕ್ಕಾಗಿ ಆನಂದ್‌ಗೆ 90 ದಿನ ಪೆರೊಲ್ ಮೇಲೆ ಮಂಜೂರು ಮಾಡಬೇಕು. ಈ ಕುರಿತ ಅರ್ಜಿದಾರೆ ಸಲ್ಲಿಸಿರುವ ಮನವಿಪತ್ರವನ್ನು ಜೈಲು ಅಧಿಕಾರಿಗಳು ಪರಿಗಣಿಸಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು. ಸರ್ಕಾರಿ ವಕೀಲರು, ಅರ್ಜಿದಾರೆಯ ಮನವಿ ಪುರಸ್ಕರಿಸಬಹುದಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಕೋಲಾರ ಮೂಲದ ಆನಂದ್‌ಗೆ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ 2019ರಲ್ಲಿ ಕೋಲಾರದ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆದೇಶ ನೀಡಿತ್ತು. ಜೀವಾವಧಿ ಶಿಕ್ಷೆಯನ್ನು 10 ವರ್ಷಕ್ಕೆ ಇಳಿಸಿ 2023 ರಲ್ಲಿ ಹೈಕೋರ್ಟ್ ತೀರ್ಪು ನೀಡಿತ್ತು. ಜೈಲಿಗೆ ಹೋಗುವ ಮುನ್ನವೇ ಆನಂದ್ ಮತ್ತು ಅರ್ಜಿದಾರೆ ಪರಸ್ಪರ ಪ್ರೀತಿಸುತ್ತಿದ್ದರು. ಜೈಲಿಗೆ ಹೋದ ನಂತರ ಅವರ ಪ್ರೀತಿ ಮುಂದುವರಿದಿತ್ತು. ಮದುವೆಯಾಗಲು ಅವರು ನಿಶ್ಚಯಿಸಿದ್ದರು. ಈಗ ಸಂತಾನ ಹೊಂದಲು ಹೈಕೋರ್ಟ್‌ ಅವಕಾಶ ಮಾಡಿಕೊಟ್ಟಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!