Saturday, October 12, 2024

ನಾಯ್ಡು, ನಿತೀಶ್‌ ಗೆ ʼಇಂಡಿಯಾʼ ಮೈತ್ರಿಕೂಟದಿಂದ ಬಿಗ್‌ ಆಫರ್‌ ! | ಉಭಯ ನಾಯಕರು ಸೇರ್ಪಡೆಗೊಂಡರೇ, ಕೇಂದ್ರದಲ್ಲಿ ʼಇಂಡಿಯಾʼ ಸರ್ಕಾರ ರಚನೆ ನಿಶ್ಚಿತ !?

ಜನಪ್ರತಿನಿಧಿ (ನವ ದೆಹಲಿ) : ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರಕದ ಹಿನ್ನಲೆಯಲ್ಲಿ ಅಧಿಕಾರ ಹಿಡಿಯುವುದಕ್ಕೆ ಉಭಯ ಮೈತ್ರಿ ಪಕ್ಷಗಳು ಹೋರಾಡುತ್ತಿವೆ.

ಕಾಂಗ್ರೆಸ್‌ ನೇತೃತ್ವದ INDIA ಮೈತ್ರಿಕೂಟದ ನಾಯಕರು NDA ಮೈತ್ರಿಕೂಟದ ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ದುಗೆ ಈಗಾಗಲೇ ಗಾಳ ಹಾಕಿದ್ದಾರೆ. ಚಂದ್ರಬಾಬು ನಾಯ್ಡು ಹಾಗೂ ನಿತೀಶ್‌ ಕುಮಾರ್‌ ಅವರನ್ನು ಮೈತ್ರಿಕೂಟಕ್ಕೆ ಸೇರಿಸಿಕೊಂಡರೇ, ಇಂಡಿಯಾ ಮೈತ್ರಿಕೂಟ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಬಹುದು ಎನ್ನುವುದು ಈ ಹಿಂದಿನ ರಾಜಕೀಯ ಲೆಕ್ಕಚಾರ.

ಹೌದು.. 2024ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾಗುತ್ತಿದ್ದು, ಬಿಜೆಪಿ ಸ್ವತಂತ್ರವಾಗಿ ಕೇಂದ್ರದಲ್ಲಿ ಸರ್ಕಾರ ರಚಿಸುವ ಕನಸು ಮಂಕಾಗಿದೆ. ನರೇಂದ್ರ ಮೋದಿ ಅವರ ಅಬ್‌ ಕಿ ಬಾರ್‌ ಚಾರ್‌ ಸೌ ಪಾರ್‌ ಕೂಡ ಹುಸಿಯಾಗಿದೆ. ಈಗ ಬಿಜೆಪಿ ತನ್ನ ಮಿತ್ರಪಕ್ಷಗಳನ್ನೇ ನೆಚ್ಚಿಕೊಳ್ಳಬೇಕಿದ್ದು, ಎನ್‌ಡಿಎ ಮಿತ್ರಪಕ್ಷಗಳು ಯಾರು ತಮಗೆ ಹೆಚ್ಚು ಪ್ರಾಸಸ್ತ್ಯ ನೀಡುತ್ತಾರೋ ಅವರೆಡೆಗೆ ಮುಖಮಾಡುವ ಹಾಗೆ ಕಾಣಿಸುತ್ತಿದೆ.

ಮುಖ್ಯವಾಗಿ ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಪಾರ್ಟಿ ಹಾಗೂ ಬಿಹಾರದ ನಿತೀಶ ಕುಮಾರ್‌ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಕಿಂಗ್‌ ಮೇಕರ್‌ಗಳಾಗಲಿದ್ದಾರೆ. ಫಲಿತಾಂಶ ಗಮನಿಸಿ ಇಂಡಿಯಾ ಮೈತ್ರಿಕೂಟ ಕೂಡ ಚುರುಕಾಗಿದ್ದು, ಇವರಿಬ್ಬರನ್ನು ಸೆಳೆದು ಸರ್ಕಾರ ರಚಿಸಲು ಯೋಜನೆ ರೂಪಿಸುತ್ತಿದೆ. ಈಗಾಗಲೇ ಉಭಯ ನಾಯಕರಿಗೆ ಕಾಂಗ್ರೆಸ್‌  ಹಾಗೂ ಇಂಡಿಯಾ ಮೈತ್ರಿಕೂಟದ ಪ್ರಭಾವಿ ನಾಯಕರು ದೊಡ್ಡ ಆಫರ್‌ಗಳನ್ನೇ ನೀಡಿದ್ದಾರೆ ಎನ್ನಲಾಗುತ್ತಿದೆ.

ಸದ್ಯ, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಹಾಗೂ ಇಂಡಿಯಾ ಮೈತ್ರಿಕೂಟಗಳ ಕ್ಷೇತ್ರಗಳ ಮುನ್ನಡೆಯ ಲೆಕ್ಕಚಾರ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದೆ. ಈ ಬಾರಿ ಹೊಸ ಸರ್ಕಾರ ರಚನೆಯಾಗಲಿದೆಯೇ ? ಯಾರು ಪ್ರಧಾನಿಯಾಗಲಿದ್ದಾರೆ ? ಯಾರು ಗೃಹ ಮಂತ್ರಿಯಾಗಲಿದ್ದಾರೆ ? ಇಂಡಿಯಾ ಮೈತ್ರಿಕೂಟ ಸರ್ಕಾರ ರಚನೆ ಮಾಡಿದರೇ, ಯಾರೆಲ್ಲಾ ಪ್ರಮುಖ ಮಂತ್ರಿಗಿರಿ ಹುದ್ದೆ ಪಡೆಯುತ್ತಾರೆ ಎಂಬೆಲ್ಲದರ ಬಗ್ಗೆ ಬಾರಿ ದೊಡ್ಡ ಮಟ್ಟದ ಚರ್ಚೆ ಈಗಾಗಲೇ ಚುನಾವಣಾ ವಲಯದಲ್ಲಿ ಆರಂಭವಾಗಿದೆ.

ಫಲಿತಾಂಶದ ಟ್ರೆಂಡ್‌ಗಳ ಆಧಾರದ ಮೇಲೆ ಎನ್‌ಡಿಎ 300 ಸೀಟುಗಳಿಗಿಂತ ಕೆಳಗಿಳಿಯಬಹುದು. ಬಿಜೆಪಿ ಒಂದು ಕ್ಷೇತ್ರದಲ್ಲಿ (ಸೂರತ್) ಈಗಾಗಲೇ ಗೆಲುವು ಸಾಧಿಸಿದೆ, ಉಳಿದಂತೆ ಎಷ್ಟು ಕ್ಷೇತ್ರಗಳಲ್ಲಿ ಗೆಲ್ಲುತ್ತದೆ ಹಾಗೂ ಅದರ ನೇತೃತ್ವದ ಮೈತ್ರಿಕೂಟ ಎಷ್ಟು ಕ್ಷೇತ್ರಗಳಲ್ಲಿ ಗೆಲ್ಲುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಆದರೆ 543 ಸದಸ್ಯರ ಲೋಕಸಭೆಯಲ್ಲಿ ಬಹುಮತ ಗಳಿಸಲು 272 ಸೀಟು ಬೇಕು.

ನಿತೀಶ್ ಕುಮಾರ್, ಚಂದ್ರಬಾಬು ನಾಯ್ದು ಸಂಪರ್ಕಿಸಿದ INDIA ಮೈತ್ರಿಕೂಟ

ಈ ನಿಟ್ಟಿನಲ್ಲಿ ಇದೀಗ INDIA ಒಕ್ಕೂಟದ ನಾಯಕರು ಇದೀಗ ಬಿಹಾರ ಸಿಎಂ ನಿತೀಶ್ ಕುಮಾರ್ ಹಾಗೂ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ದು ಅವರನ್ನು ಸಂಪರ್ಕಿಸಿ ಮೈತ್ರಿಕೂಟಕ್ಕೆ ಮರಳಿ ಸೆಳೆಯಲು ಯತ್ನ ನಡೆಸಿವೆ.

ಎರಡೂ ಪಕ್ಷಗಳು ಪ್ರಸ್ತುತ NDAಯಲ್ಲಿವೆ. ಹೀಗಾಗಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಈ ಇಬ್ಬರು ನಾಯಕರ ಕೃಪೆಯಿಂದ ನಡೆಯಬೇಕಿದ್ದು, ನಿತೀಶ್‌ ಹಾಗೂ ನಾಯ್ಡು ಕಿಂಗ್‌ಮೇಕರ್‌ ಆಗಲಿದ್ದಾರೆ. ಏಕೆಂದರೆ ಅವರಿಬ್ಬರೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಯಾವಾಗ ಬೇಕಾದರೂ ಮೈತ್ರಿ ಬದಲಾಯಿಸುವ ಇತಿಹಾಸವನ್ನು ಉಭಯ ನಾಯಕರೂ ಹೊಂದಿದ್ದಾರೆ.

ನಾಯ್ಡು ಹಾಗೂ ನಿತೀಶ್‌ ಕುಮಾರ್‌ ರಾಜಕೀಯ ಬದಲಾವಣೆ ಇತಿಹಾಸ

ಚಂದ್ರಬಾಬು ನಾಯ್ಡು ಅವರು 2014 ಮತ್ತು 2019ರ ನಡುವೆ ಎನ್‌ಡಿಎ ಸರ್ಕಾರದ ಭಾಗವಾಗಿದ್ದರು. 2019ರ ಲೋಕಸಭೆ ಚುನಾವಣೆಗೆ ಮೊದಲು ಎನ್‌ಡಿಎ ತೊರೆದರು. ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟಕ್ಕೆ ಸೇರಿದರು. ರಾಷ್ಟ್ರೀಯ ಚುನಾವಣೆಗಳು ಘೋಷಣೆಯಾಗುವ ಕೆಲವೇ ದಿನಗಳ ಮೊದಲು, ಮಾರ್ಚ್ 2024ರಲ್ಲಿ ಮತ್ತೆ NDAಯ ಭಾಗವಾದರು. ಇನ್ನು, 371 ಕೋಟಿ ರೂ. ಮೊತ್ತದ ಹಗರಣ ಆರೋಪದಡಿ ಜೈಲು ಪಾಲಾಗಿರುವ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜೈಲುಪಾಲಾಗಿದ್ದರು. ಜೈಲಿನಿಂದ ಮರಳಿ ಬಂದು ರಾಜಕೀಯದಲ್ಲಿ ಫಿನಿಕ್ಸ್‌ ಹಕ್ಕಿಯಂತೆ ಪುಟಿದೆದ್ದ ಚಂದ್ರಬಾಬು ನಾಯ್ಡು ನೇತೃತ್ವದ ಪಕ್ಷ ಆಂದ್ರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದೆ.

ಇನ್ನು, ಪದೇ ಪದೇ ಪಕ್ಷ ಬದಲಾಯಿಸುವುದಕ್ಕೆ ಖ್ಯಾತಿ ಪಡೆದಿರುವ ನಿತೀಶ್‌ ಕುಮಾರ್‌ 2022 ರಲ್ಲಿ ಎನ್‌ಡಿಎ ಜೊತೆ ಮೈತ್ರಿ ಮುರಿದುಕೊಂಡು ಆರ್‌ಜೆಡಿ ಜೊತೆ ಕೈಜೋಡಿಸಿ ಮಹಾಘಟ ಬಂಧನ್‌ ಸರ್ಕಾರ ರಚನೆ ಮಾಡಿದ್ದರು. ಈ ಮೂಲಕ ತಮ್ಮ ಸಿಎಂ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು. 2024 ರಲ್ಲಿ , ಅಂದರೇ ಇತ್ತೀಚಗಷ್ಟೇ ಲೋಕಸಭಾ ಚುನಾವಣೆಗೂ ಮುನ್ನವೇ ಮತ್ತೆ ಮಹಾಘಟ ಬಂಧನ್‌ ತೊರೆದು ಎನ್‌ಡಿಎ ಒಕ್ಕೂಟಕ್ಕೆ ಸೇರಿ ಮತ್ತೆ ಸಿಎಂ ಆದರು. ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟದಲ್ಲಿ ಪ್ರಧಾನ ಸ್ಥಾನದಲ್ಲಿ ಗುರುತಿಸಿಕೊಂಡಿದ್ದ ನಿತೀಶ್‌ ಕುಮಾರ್‌ ಏಕಾಏಕಿ ಬಿಜೆಪಿ ನೇತೃತ್ವದ ಎನ್‌ಡಿಎ ಸೇರ್ಪಡೆಗೊಂಡಿದ್ದರು. ಇದು ಇಂಡಿಯಾ ಮೈತ್ರಿಕೂಟಕ್ಕೆ ಶಾಕ್‌ ನೀಡಿತ್ತು.

ಸದ್ಯ, ಚಂದ್ರಬಾಬು ನಾಯ್ಡು ಹಾಗೂ ನಿತೀಶ್‌ ಕುಮಾರ್‌ ಗೆ ಇಂಡಿಯಾ ಮೈತ್ರಿಕೂಟ ಗಾಳ ಹಾಕಿದ್ದು, ಇಬ್ಬರಿಗೂ ದೊಡ್ಡ ಆಫರ್‌ಗಳನ್ನೇ ನೀಡಿದೆ ಎಂದು ಹೇಳಲಾಗುತ್ತಿದೆ. ಇಬ್ಬರೂ ಇಂಡಿಯಾ ಮೈತ್ರಿಕೂಟಕ್ಕೆ ಮರಳಿದರೇ, ʼಇಂಡಿಯಾʼ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರ ರಚಿಸುವುದು ನಿಶ್ಚಿತ ಎಂದು ವಿಶ್ಲೇಷಿಸಲಾಗುತ್ತಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!