Sunday, September 8, 2024

ರಾಜ್ಯದ ಉಳಿದ 14 ಲೋಕಸಭಾ ಕ್ಷೇತ್ರಗಳಿಗೆ ನಾಳೆ ಮತದಾನ : ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಬಂದೋಬಸ್ತ್‌ | 227 ಅಭ್ಯರ್ಥಿಗಳ ಭವಿಷ್ಯ ಬರೆಯುವ ಮತದಾರ

ಜನಪ್ರತಿನಿಧಿ (ಬೆಂಗಳೂರು) : ರಾಜ್ಯದ ಉಳಿದ 14 ಲೋಕಸಭಾ ಕ್ಷೇತ್ರಗಳಿಗೆ ನಾಳೆ (ಮಂಗಳವಾರ) ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ನಡೆಯುವ 2ನೇ ಹಂತದ ಚುನಾವಣೆ ಇದಾಗಲಿದೆ. ಚುನಾವಣಾ ಬಹಿರಂಗ ಪ್ರಚಾರಕ್ಕೆ ನಿನ್ನೆ(ಭಾನುವಾರ) ಸಂಜೆ ತೆರೆಬಿದ್ದಿದ್ದು, ಇಂದು (ಸೋಮವಾರ) ಅಭ್ಯರ್ಥಿಗಳು ಮನೆ-ಮನೆ ಪ್ರಚಾರ ನಡೆಸಿ ಮತಯಾಚನೆ ಮಾಡಲಿದ್ದಾರೆ.

ನಾಳೆ (ಮಂಗಳವಾರ) ಬೆಳಿಗ್ಗೆ 7 ಗಂಟೆಯಿಂದ ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಮತದಾನ ಆರಂಭವಾಗಲಿದೆ.

ರಾಜ್ಯದಲ್ಲಿ ಗಮನ ಸೆಳೆದಿರುವ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ(ಎಸ್ಸಿ ಮೀಸಲು), ಕಲಬುರಗಿ(ಎಸ್ಸಿ), ರಾಯಚೂರು(ಎಸ್ಟಿ ಮೀಸಲು), ಬೀದರ್, ಕೊಪ್ಪಳ, ಬಳ್ಳಾರಿ(ಎಸ್ಟಿ), ಹಾವೇರಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದೆ.

ಶೋರಾಪುರ ವಿಧಾನಸಭಾ ಕ್ಷೇತ್ರಕ್ಕೂ ನಾಳೆಯೇ ಚುನಾವಣೆ ನಡೆಯಲಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ತಲಾ ಒಬ್ಬರು, ನಾಲ್ವರು ಸ್ವತಂತ್ರರು ಕಣಕ್ಕಿಳಿದಿದ್ದಾರೆ. ಒಟ್ಟಾರೆ ಸ್ಪರ್ಧಾಕಣದಲ್ಲಿ 206 ಪುರುಷರು ಹಾಗೂ 21 ಮಹಿಳೆಯರು ಸೇರಿದಂತೆ ಒಟ್ಟು 227 ಮಂದಿ ಇದ್ದಾರೆ.

ಈ  14 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 2,59,52,958 ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. ಇದರಲ್ಲಿ 1,29,48,978 ಪುರುಷ, 1,29,66,570 ಮಹಿಳೆಯರಿದ್ದು, 1935 ಇತರೆ, 35,465 ಸೇವಾ ಮತದಾರರಿದ್ದಾರೆ. ಯುವ ಮತದಾರರು 6,90,929 ಇದ್ದು, 85 ವರ್ಷ ಮೇಲ್ಪಟ್ಟ 2,29,563 ಮತದಾರರಿದ್ದರೆ, 3,43,966 ವಿಕಲಚೇತನ ಮತದಾರರಿದ್ದಾರೆ.

ಕಲಬುರಗಿ ಕ್ಷೇತ್ರದಲ್ಲಿ ಅತೀ ಹೆಚ್ಚು 20,98,202 ಮತದಾರರಿದ್ದರೆ, ಉತ್ತರ ಕನ್ನಡದಲ್ಲಿ 16,41,156 ಮತದಾರರಿದ್ದಾರೆ. 14 ಕ್ಷೇತ್ರಗಳಲ್ಲಿ 28,269 ಮತಗಟ್ಟೆಗಳನ್ನು ತೆರೆಯಲಾಗಿದೆ.

ಈ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನು ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ, ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಶಿವಾನಂದ್ ಪಾಟೀಲ್, ಈಶ್ವರ್ ಖಂಡ್ರೆ ಅವರ ಮಕ್ಕಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

ಅಭ್ಯರ್ಥಿಗಳನ್ನು ಹೊರತುಪಡಿಸಿ ಕ್ಷೇತ್ರಕ್ಕೆ ಸಂಬಂಧಪಡದ ವ್ಯಕ್ತಿಗಳು ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವಂತಿಲ್ಲ. ಮತದಾನಕ್ಕೂ 48 ಗಂಟೆ ಮೊದಲು ಶೂನ್ಯ ಅವಧಿ ಪ್ರಾರಂಭವಾಗಿರುವ ಕಾರಣ ಯಾವುದೇ ರೀತಿಯ ಬಹಿರಂಗ ಪ್ರಚಾರ ಕೈಗೊಳ್ಳುವುದಕ್ಕೆ ಅವಕಾಶ ಇರುವುದಿಲ್ಲ.

ಮನೆ-ಮನೆ ಮತಯಾಚನೆ ವೇಳೆ ಐದು ಜನಕಕ್ಕಿಂತ ಹೆಚ್ಚು ಜನರು ಇರುವಂತಿಲ್ಲ. ಧ್ವನಿವರ್ಧಕ ಬಳಸದೆ ಮತಯಾಚನೆ ಮಾಡಬಹುದಾಗಿದೆ. ಯಾವುದೇ ರೀತಿಯ ಸಾರ್ವಜನಿಕ ಸಭೆ, ರ್ಯಾಲಿಗಳನ್ನು ನಿರ್ಬಂಧಿಸಲಾಗಿದೆ. ಭಾನುವಾರ ಸಂಜೆ 6 ಗಂಟೆಯಿಂದಲೇ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಮತದಾರರಲ್ಲದ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರು, ನಾಯಕರು ಕ್ಷೇತ್ರ ಬಿಟ್ಟು ತೆರಳಿದ್ದಾರೆ.

ಅಕ್ರಮವಾಗಿ ತಂಗುವ ಸಾಧ್ಯತೆ ಇರುವ ಕಾರಣ ಚುನಾವಣಾ ಸಿಬ್ಬಂದಿ ಕಲ್ಯಾಣ ಮಂಟಪ, ಹೋಟೆಲ್, ಅತಿಥಿಗೃಹ, ವಸತಿ ಗೃಹ ಸೇರಿದಂತೆ ಇತರೆ ಪ್ರದೇಶಗಳ ಪರಿಶೀಲನೆ ಮಾಡಿದ್ದಾರೆ ಎಂದು ತಿಳದು ಬಂದಿದೆ.

ಎಲ್ಲಾ 14 ಲೋಕಸಭಾ ಕ್ಷೇತ್ರಗಳ ಗಡಿಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ ಕ್ಷೇತ್ರದ ಹೊರಗಿನಿಂದ ಬರುವ ವಾಹನಗಳ ಚಲನವಲನದ ಮೇಲೆ ನಿಗಾವಹಿಸಬೇಕು. ಅಕ್ರಮವಾಗಿ ಕ್ಷೇತ್ರದಲ್ಲಿ ಓಡಾಡುತ್ತಿರುವುದು ಅನುಮಾನ ಬಂದರೆ ಅವರು ಆಯಾ ಕ್ಷೇತ್ರದ ಮತದಾರರೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಹಚ್ಚಲು ಗುರುತಿ ಚೀಟಿಗಳನ್ನು ಪರಿಶೀಲನೆ ನಡೆಸಲಾಗುತ್ತದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!