Friday, November 8, 2024

ನಕಲಿ ಪರಶುರಾಮ | ಪ್ರಕರಣವನ್ನು ಕೊನೆಗೂ ಸಿಐಡಿಗೆ ಒಪ್ಪಿಸಿ ಶೀಘ್ರ ತನಿಖೆಗೆ ಆದೇಶ !

ಜನಪ್ರತಿನಿಧಿ (ಉಡುಪಿ) :ಕಾರ್ಕಳ ತಾಲ್ಲೂಕಿನ ಬೈಲೂರಿನ ಎರ್ಲಪಾಡಿ ಗ್ರಾಮದ ಪರಶುರಾಮ ಥೀಂ ಪಾರ್ಕ್‌ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಿಐಡಿ ವಿಚಾರಣೆಗೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟಿರುವ ಸೂಚನೆಯ ಅನ್ವಯ ಪ್ರಕರಣವನ್ನು ನಿನ್ನೆ(ಶುಕ್ರವಾರ) ಸಿಐಡಿಗೆ ಅಧಿಕೃತವಾಗಿ ವಹಿಸಿ ತನಿಖೆಗೆ ಆದೇಶಿಸಲಾಗಿದೆ.

ಈ ಬಗ್ಗೆ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್. ಅಂಬಿಕಾ, ಸಂಬಂಧ ಪಟ್ಟ ಇಲಾಖೆಗಳು ದಾಖಲೆ ಸಹಿತ ಸಂಪೂರ್ಣ ಅವಶ್ಯ ಮಾಹಿತಿಗಳನ್ನು ಒದಗಿಸಬೇಕು, ಕಾರ್ಕಳದ ಎರ್ಲಪಾಡಿಯ ಉಮಿಕಲ್ ಬೆಟ್ಟದಲ್ಲಿ ನಿರ್ಮಾಣ ಮಾಡಿದ ಪರಶುರಾಮ ಥೀಂ ಪಾರ್ಕ್ ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಹಾಗೂ ಕಳಪೆ ಕಾಮಗಾರಿ ಬಗ್ಗೆ ಶೀಘ್ರವಾಗಿ ವಿಚಾರಣೆ ನಡೆಸಿ ವರದಿಯನ್ನು ಸಿಐಡಿ ಸರ್ಕಾರಕ್ಕೆ ಒಪ್ಪಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಶಾಸಕರು ಸೇರಿ ಐವರ ಮೇಲೆ ಲೋಕಾಯುಕ್ತ ಕಂಪ್ಲೆಂಟ್ :
ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ಕುಮಾರ್, ಉಡುಪಿ ಜಿಲ್ಲೆಯ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾ‌ರ್, ಉಡುಪಿ ಜಿಲ್ಲಾಧಿಕಾರಿ (ಹೆಸರು ಉಲ್ಲೇಖಿಸದೆ), ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ಪೂರ್ಣಿಮಾ ಹಾಗೂ ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರ ಒಟ್ಟು (ಹೆಸರು ಉಲ್ಲೇಖಿಸದೆ) ಮೇಲೆ ಕರ್ತವ್ಯ ಲೋಪ ಹಾಗೂ ರಾಜಕೀಯ ಅಧಿಕಾರದ ದುರ್ಬಳಕೆ ಮಾಡಿದ್ದಾರೆಂದು ಲೋಕಾಯುಕ್ತಕ್ಕೆ ದಿನಾಂಕ ಜುಲೈ 28, 2023ರಂದು ದೂರು ದಾಖಲಾಗಿದೆ. ಅಷ್ಟೇ ಅಲ್ಲದೇ, ಮುಖ್ಯಮಂತ್ರಿಗಳ ಕಚೇರಿಗೆ, ಉಪ ಮುಖ್ಯಮಂತ್ರಿಗಳ ಕಚೇರಿಗೆ, ಪ್ರಧಾನ ಮಂತ್ರಿ ಕಚೇರಿಗೆ, ಜಿಲ್ಲಾಧಿಕಾರಿಗಳಿಗೆ, ಪ್ರಾದೇಶಿಕ ಆಯುಕ್ತರ ಕಾರ್ಯಾಲಯ ಮೈಸೂರು ಹಾಗೂ ಕಾರ್ಕಳ ತಾಲೂಕಿನ ತಹಶೀಲ್ದಾರರಿಗೆ ಈ ಐವರ ವಿರುದ್ಧ ಕಂಪ್ಲೇಂಟ್ ಆಗಿದೆ. ಲೋಕಾಯುಕ್ತದಲ್ಲಿ ಕಂಪ್ಲೆಂಟ್ ದಾಖಲು ಮಾಡಿದ್ದರೂ ಈ ಬಗ್ಗೆ ತನಿಖೆ ಮಾಡುವುದಕ್ಕೆ ಲೋಕಾಯುಕ್ತ ಮುಂದಾಗುತ್ತಿಲ್ಲ. ಇಲ್ಲಿ ಶಾಸಕರ ಹೆಸರೇ ಮೊದಲು ಕಂಪ್ಲೆಂಟ್ ಪ್ರತಿಯಲ್ಲಿ ಇರುವುದರಿಂದ ಖಂಡಿತ ಇಲ್ಲಿ ತನಿಖೆ ನಡೆಸದಿರುವಂತೆ ರಾಜಕೀಯ ಒತ್ತಡ ಹೇರಿರುವುದಕ್ಕೆ ಸಾಧ್ಯವಿದೆ ಎಂಬ ಆರೋಪವೂ ಕೇಳಿಬಂದಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕಿನ ಮೂಲಕ ಪಡೆದ ಮಾಹಿತಿ ಪ್ರಕಾರ ಪರಶುರಾಮ ಥೀಂ ಪಾರ್ಕ್ ನಲ್ಲಿ ಅವ್ಯವಹಾರ ನಡೆದಿದೆ ಎಂದು ತಿಳಿದು ದಿವ್ಯ ನಾಯಕ್ ಮತ್ತವರ ಸಮಾನ ಮನಸ್ಕರ ತಂಡ ಪ್ರತಿಭಟನೆ, ಉಪವಾಸ ಸತ್ಯಾಗ್ರಹವನ್ನು ಮಾಡಿ ಸರ್ಕಾರದ ಗಮನ ಸೆಳೆದಿದ್ದರು. ಆದರೂ ಪ್ರಕರಣವನ್ನು ತನಿಖೆಗೆ ಒಪ್ಪಿಸಲು ಸರ್ಕಾರ ಮೀನಮೇಷ ಎಣಿಸಿತ್ತು. ರಾಜಕೀಯ ಒಳ ಒಪ್ಪಂದದ ಗಂಭೀರ ಆರೋಪವೂ ಕೇಳಿಬಂದಿತ್ತು.

ಅನುಮತಿ ಇಲ್ಲದೇ ಪರಶುರಾಮ ಪ್ರತಿಮೆ ಸ್ಥಳಾಂತರ!?:
ಪರಶುರಾಮ ಥೀಂ ಪಾರ್ಕ್‌ನಲ್ಲಿ ಸ್ಥಾಪನೆ ಮಾಡಿರುವ ಪರಶುರಾಮನ ಮೂರ್ತಿಯನ್ನು ಅನುಮತಿಯಿಲ್ಲದೇ ಕತ್ತರಿಸಿ ಸ್ಥಳಾಂತರ ಮಾಡಲಾಗಿದೆಯೇ ಎಂಬ ಆಘಾತಕಾರಿ ಪ್ರಶ್ನೆಯೊಂದು ಕೂಡ ಮುನ್ನೆಲೆಗೆ ಬಂದಿದೆ. 13.10.2023ರಲ್ಲಿ ಪರಶುರಾಮ ಥೀಂ ಪಾರ್ಕ್‌ನಲ್ಲಿರುವ ಪರಶುರಾಮ ಪ್ರತಿಮೆ ಕಾಣೆಯಾಗುತ್ತದೆ. ಅದೇ ದಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗುತ್ತದೆ. ನಿರ್ಮಿತಿ ಕೇಂದ್ರ ಅದಕ್ಕೆ ಮರು ವಿನ್ಯಾಸದ ಕಾರಣ ನೀಡುತ್ತದೆ. ಆದರೇ, ಪ್ರತಿಮೆ ಸಾಗಿಸಿದ ವಿವರ, ಎಲ್ಲಿ ಹೋಗಿ ತಲುಪಿದೆ, ಈ ವೇ ಬಿಲ್ ಆಗಲಿ, ಪ್ರತಿಮೆ ಕತ್ತರಿಸಿ ತೆಗೆಯುವಾಗ ಮಾಡಿದ ವೀಡಿಯೋ ಚಿತ್ರೀಕರಣವಾಗಲಿ ಯಾವುದೇ ರೀತಿಯ ಮಾಹಿತಿ ಲಭ್ಯವಿಲ್ಲ ಎನ್ನುವುದನ್ನು ಸ್ವತಃ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿಗಳೇ ಪತ್ರದ ಮೂಲಕ ಕೊಟ್ಟಿರುವ ಮಾಹಿತಿಯಲ್ಲಿದೆ. ಜಿಲ್ಲಾಧಿಕಾರಿಗಳು ಕಡತದಲ್ಲಿ ಅನುಮತಿಸಿದ್ದರು ಎನ್ನುವ ಮಾಹಿತಿಯನ್ನು ಒದಗಿಸುವ ನಿರ್ಮಿತಿ ಕೇಂದ್ರ, ಸರ್ಕಾರಕ್ಕಾಗಲಿ ಅಥವಾ ಸರ್ಕಾರದ ಕಾರ್ಯದರ್ಶಿಗಳಿಗಾಗಲಿ ಜಿಲ್ಲಾಧಿಕಾರಿಗಳು ಸಲ್ಲಿಸಿದ ಯಾವುದೇ ಪತ್ರಗಳ ದಾಖಲೆಗಳ ಮಾಹಿತಿಯ ಬಗ್ಗೆ ಕೇಳಿದ್ದರೂ ಈ ಬಗ್ಗೆ ಮಾಹಿತಿ ನೀಡದಿರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿತ್ತು.

ಸರ್ಕಾರಿ ಇಲಾಖೆಗೆ ಸಂಬಂಧಿಸಿದ ಯಾವುದೇ ಸ್ಥಳದ ಕಾಮಗಾರಿಯಾಗಲಿ ಅಥವಾ ಏನೇ ನವೀಕರಣ ಮಾಡುವ ಮುಂಚಿತವಾಗಿ ಸರ್ಕಾರಕ್ಕಾಗಲಿ ಅಥವಾ ಸರ್ಕಾರದ ಕಾರ್ಯದರ್ಶಿಗಳಿಗಾಗಿ ಪತ್ರದ ಮೂಲಕ ಮಾಹಿತಿ ನೀಡಬೇಕು. ಆದರೇ, ಜಿಲ್ಲಾಧಿಕಾರಿಗಳು ಯಾವುದೇ ರೀತಿಯಲ್ಲಿ ಪತ್ರ ಬರೆದಿರುವುದರ ಬಗ್ಗೆ ದಾಖಲೆ ಇಲ್ಲ. ಕೇಳಿದ ದಾಖಲೆಗೆ ನಿರ್ಮಿತಿ ಕೇಂದ್ರ 28.11 2023ರಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಡಾ. ವಿದ್ಯಾಕುಮಾರಿ ಅವರು ಪರಶುರಾಮ ಥೀಂ ಪಾರ್ಕ್‌ ಕಾಮಗಾರಿಯ ಕುರಿತಾಗಿ ಮಾನ್ಯ ನಿರ್ದೇಶಕರು ಪ್ರವಾಸೋದ್ಯಮ ಇಲಾಖೆ ಬೆಂಗಳೂರು ಅವರಿಗೆ ಸಲ್ಲಿಸಿದ ಪತ್ರವೊಂದನ್ನು ದಾಖಲೆ ನೀಡುತ್ತದೆ. ಅದು ಕೂಡ ಪ್ರತಿಮೆ ಕತ್ತರಿಸಿ ತೆಗೆದು ಸುಮಾರು 45 ದಿನಗಳ ನಂತರ ಸಲ್ಲಿಸಿರುವ ಪತ್ರ ಎನ್ನುವುದು ನಿರ್ಮಿತಿ ಕೇಂದ್ರವೇ ನೀಡಿರುವ ಮಾಹಿತಿಯಲ್ಲಿ ಈಗ ಬೆಳಕಿಗೆ ಬಂದಿತ್ತು.

ಇನ್ನು, ನಾಗಮೋಹನ್ ದಾಸ್ ಆಯೋಗ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮಾಡುತ್ತಿರುವ ಸಂದರ್ಭದಲ್ಲಿ ಮೂರ್ತಿಯನ್ನು ತೆರವುಗೊಳಿಸುವ ಮೂಲಕ ಉಳಿದ ಸಾಕ್ಷಿಯನ್ನು ಕೂಡ ನಾಶಪಡಿಸುವ ಹುನ್ನಾರವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ ಎಂದು ನಿನ್ನೆ (ಶುಕ್ರವಾರ) ಕಾರ್ಕಳ ಕಾಂಗ್ರೆಸ್ ನಾಯಕ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಗಂಭೀರ ಆರೋಪ ಮಾಡಿದ್ದರು. ಮಾತ್ರವಲ್ಲದೆ, ಹೋರಾಟಗಾರಾದ ದಿವ್ಯ ನಾಯಕ್ ಕೂಡ ಖುದ್ದಾಗಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರನ್ನು ಭೇಟಿ ನೀಡಿ ತನಿಖೆಯ ಹಂತದಲ್ಲಿ ಕಾಮಗಾರಿ ನಡೆಸುತ್ತಿರುವುದನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಲ್ಲದೇ, ಇದರ ಹಿಂದೆ ಪ್ರಕರಣದ ಸಾಕ್ಷ್ಯನಾಶದ ಉದ್ದೇಶವಿದೆ ಎಂದು ಆರೋಪಿಸಿದ್ದರು.

ಇನ್ನು, ಜನಪ್ರತಿನಿಧಿ ಪತ್ರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ವರದಿಗಳನ್ನು ಮಾಡಿದೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!