Wednesday, September 11, 2024

ದೇಶ ಕಟ್ಟಲು ಮೋದಿಯೇ ನಮಗೆ ಗ್ಯಾರಂಟಿ-ಅಣ್ಣಾಮಲೈ

ಬೈಂದೂರು: ರಾಷ್ಟ್ರೀಯತೆ ನಮ್ಮ ರಕ್ತದಲ್ಲಿಯೇ ಇದೆ. ದೇಶ ಕಟ್ಟವ ಮಹತ್ತರವಾದ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ. ನಾವೆಲ್ಲರೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಅವರಿಗೆ ಬೆಂಬಲವಾಗಿ ನಿಲ್ಲಬೇಕು. ದೇಶದ ಅಭಿವೃದ್ಧಿ, ರಕ್ಷಣೆಗೆ ನರೇಂದ್ರ ಮೋದಿಯವರೇ ಗ್ಯಾರಂಟಿ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದರು.

ಉಪ್ಪುಂದಲ್ಲಿ ನಡೆದ ರೋಡ್ ಶೋ ವೇಳೆ ಮಾತನಾಡಿದ ಅವರು, ಕೊಲ್ಲೂರು ದೇವಸ್ಥಾನದ ಅಭಿವೃದ್ಧಿಗೆ ಮೂಕಾಂಬಿಕಾ ಕಾರೀಡಾರ್ ಆಗಲಿದೆ ಮತ್ತು ನರೇಂದ್ರ ಮೋದಿಯವರು ಕೊಲ್ಲೂರಿಗೆ ಬಂದು ದೇವಿಯ ದರ್ಶನ ಮಾಡಿಯೇ ಮಾಡುತ್ತಾರೆ. ಪ್ರವಾಸೋದ್ಯಮ ದೃಷ್ಟಿಯಿಂದಲೂ ಬೈಂದೂರು ಕ್ಷೇತ್ರ ಅಭಿವೃದ್ಧಿ ಹೊಂದಲಿದೆ ಎಂದು ಹೇಳಿದ ಅವರು ದೇಶದ ಕರಾವಳಿಯನ್ನು ಕಾಯುವ ಮೀನುಗಾರರು ಮೊದಲ ಸೈನಿಕರು ಎಂದು ಅಭಿಪ್ರಾಯಪಟ್ಟರು.

ಪ್ರಧಾನಿ ನರೇಂದ್ರ ಮೋದಿಯವರು ಮೀನುಗಾರರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಿದ್ದಾರೆ. ಕಿಸನ್ ಕಾರ್ಡ್ ವ್ಯವಸ್ಥೆಯನ್ನು ಮೀನುಗಾರರಿಗೂ ವಿಸ್ತರಿಸಿದ್ದಾರೆ. ಸಮುದ್ರದ ತಟದಲ್ಲಿ ಮೀನುಗಾರರೇ ದೇಶದ ಮೊದಲ ರಕ್ಷಕರು. ನಂತರ ಸೇನೆ ಮತ್ತು ಕೋಸ್ಟ್ ಗಾರ್ಡ್ ಬರುತ್ತದೆ. ಹೀಗಾಗಿ ಮೀನುಗಾರಿಗೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ನೀಡಿದೆ ಮತ್ತು ಅನುದಾನದ ಪ್ರಮಾಣವನ್ನು ಶೇ.೩೦೦ರಷ್ಟು ಹೆಚ್ಚಿಸಿದೆ ಎಂದು ವಿವರಿಸಿದರು.

ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಬಗ್ಗೆ ಎಲ್ಲರಿಗೂ ತಿಳಿದಿದೆ. ದೇಶದಲ್ಲಿ ನರೇಂದ್ರ ಮೋದಿಯವರು ಹೇಗೆ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೋ, ಬಿ.ವೈ. ರಾಘವೇಂದ್ರ ಅವರು ಶಿವಮೊಗ್ಗ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಅಭಿವೃದ್ಧಿಯ ಮೂಲಕ ಮನೆ ಮಾತಾಗಿದ್ದಾರೆ. ಅವರನ್ನು ಗರಿಷ್ಠ ಅಂತರದಲ್ಲಿ ಗೆಲ್ಲಿಸಲು ಬೈಂದೂರಿನಿಂದಲೇ ೧ ಲಕ್ಷ ಲೀಡ್ ನೀಡಬೇಕು ಎಂದು ಮನವಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಬೈಂದೂರಿನಿಂದಲೇ ಒಂದು ಲಕ್ಷ ಲೀಡ್ ನೀಡಿದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ನಾನೇ ಖುದ್ದಾಗಿ ಕೊಲ್ಲೂರಿಗೆ ಕರೆದುಕೊಂಡು ಬರುತ್ತೇನೆ. ದೇವಿಯ ದರ್ಶನ ಮಾಡಿಸುತ್ತೇನೆ ಹಾಗೂ ಮೂಕಾಂಬಿಕಾ ಕಾರೀಡಾರ್ ಕೂಡ ಅನುಷ್ಠಾನವಾಗಲಿದೆ. ಬೈಂದೂರಿನಿಂದ ಒಂದು ಲಕ್ಷ ಲೀಡ್ ನೀಡಿದರೆ, ಉಳಿದ ಭಾಗದಲ್ಲಿ ೨ ಲಕ್ಷಕ್ಕೂ ಅಧಿಕ ಲೀಡ್ ಸಿಗಲಿದೆ. ಒಟ್ಟಾರೆಯಾಗಿ ಮೂರು ಲಕ್ಷಕ್ಕೂ ಅಧಿಕ ಲೀಡ್‌ನಲ್ಲಿ ರಾಘವೇಂದ್ರ ಅವರು ಜಯ ಸಾಧಿಸಲಿದ್ದಾರೆ ಎಂದು ಹೇಳಿದರು.

ನಟಿ ತಾರಾ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಶಾಸಕರಾದ ಗುರುರಾಜ ಗಂಟಿಹೊಳೆ, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಪ್ರಮುಖರಾದ ಬ್ರಜೇಶ್ ಚೌಟ, ಲಾಲಾಜಿ ಆರ್. ಮೆಂಡನ್ ಸಹಿತ ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!