spot_img
Wednesday, January 22, 2025
spot_img

ಬೈಂದೂರು ಕ್ಷೇತ್ರ ಜಿದ್ದಾಜಿದ್ದಿ ಕಾದಾಟಕ್ಕೆ ಸಿದ್ಧವಾದ ಅಖಾಡ | ಕಾಂಗ್ರೆಸ್‌ ಬಿಜೆಪಿ ನಡುವೆ ಈಶ್ವರಪ್ಪ

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗೆ ಕಾವು ಎರತೊಡಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಸಾಂಪ್ರದಾಯಿಕ ಸ್ಪರ್ಧೆಗೆ ಅಖಾಡ ಸಿದ್ಧವಾಗಿದೆ. ಇತ್ತ ಈಶ್ವರಪ್ಪ ಕೂಡಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಕೆ.ಎಸ್.ಈಶ್ವರಪ್ಪ  ಈಗಾಗಲೇ ಬಿಜೆಪಿ ಮತಗಳನ್ನು ಕಬಳಿಸುವ ನಿಟ್ಟಿನಲ್ಲಿ ಒಂದಿಷ್ಟು ತಂತ್ರಗಾರಿಕೆಯನ್ನು ಬಳಸುತ್ತಿದ್ದಾರೆ. ಇದು ಎಷ್ಟರಮಟ್ಟಿಗೆ  ವರ್ಕೌಟ್ ಆಗುತ್ತಿದೆ ಎನ್ನುವುದು ಕಾದು ನೋಡಬೇಕಾಗಿದೆ.

ಈಶ್ವರಪ್ಪ ನೇರ ಹಿಂದು ನಾಯಕರನ್ನು ತನ್ನತ್ತ ಸೆಳೆಯುತ್ತಿದ್ದಾರೆ.  ಮೂರನೇ ಬಾರಿಗೆ ಈಶ್ವರಪ್ಪ ಬೈಂದೂರು ಕ್ಷೇತ್ರದಲ್ಲಿ ತಿರುಗಾಟ ಮಾಡಿದ್ದಾರೆ. ಬಿಜೆಪಿ ಮತದಾರರನ್ನು ತನ್ನತ್ತ ಸೆಳೆಯುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈಶ್ವರಪ್ಪ ಮತ್ತು ಯಡಿಯೂರಪ್ಪನವರ ನಡುವಿನ ಅಸಮಾಧಾನ ಈಗ ಜಗಜ್ಜಾಹೀರಾಗಿದೆ.

ಇತ್ತ ಹಾಲಿ ಸಂಸದ ಬಿ.ವೈ ರಾಘವೇಂದ್ರ ಅಭಿವೃದ್ಧಿ, ರಾಷ್ಟ್ರೀಯತೆ ವಿಚಾರಗಳನ್ನು ಇಟ್ಟುಕೊಂಡು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ರಾಘವೇಂದ್ರ ಅವರು ಈ ಕ್ಷೇತ್ರದಲ್ಲಿ ನಾಲ್ಕನೇ ಬಾರಿ ಸ್ಪರ್ಧೆ ಮಾಡುತ್ತಿದ್ದಾರೆ. ನಿರಂತರವಾಗಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೂ ಸಾಕಷ್ಟು ಜ್ವಲಂತ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿವೆ ಎನ್ನುವ ಆರೋಪಗಳು ಇವೆ. ಸಂಸದರು ಶಿವಮೊಗ್ಗ ಜಿಲ್ಲೆಗೆ ತೋರಿಸುವ ಪ್ರೀತಿ ಕಾಳಜಿ ಬೈಂದೂರು ಕ್ಷೇತ್ರಕ್ಕೆ ತೋರಿಸುವುದಿಲ್ಲ ಎನ್ನುವ ಟೀಕೆ ಕೂಡಾ ಇದೆ. ಕಾಂಗ್ರೆಸ್ ಕೂಡಾ ಇದನ್ನು ಬಲವಾಗಿ ಆರೋಪಿಸುತ್ತಿದೆ.  ಆದರೆ ರಾಘವೇಂದ್ರ ಅವರು ಗೆಲುವಿನ ಬಗ್ಗೆ ಬಲವಾದ ಆತ್ಮವಿಶ್ವಾಸ ಇಟ್ಟುಕೊಂಡಿದ್ದಾರೆ.

ಇಲ್ಲಿ ಬಿಜೆಪಿ ಎಲ್ಲಾ ಬೂತ್ ಮಟ್ಟಕ್ಕೆ ಶಾಸಕರ ನೇತೃತ್ವದಲ್ಲಿ ತಲುಪುವ ಪ್ರಯತ್ನ ಮಾಡಿದೆ. ‘ಬೂತ್ ಕಡೆಗೆ  ಸಮೃದ್ಧ ನಡಿಗೆ’ ಕಾರ್ಯಕ್ರಮ ಒಂದಿಷ್ಟು ಪರಿಣಾಮಕಾರಿಯಾಗಿದೆ. ಇದು ರಾಜ್ಯ ಮಟ್ಟದಲ್ಲೂ ಕೂಡಾ ಸುದ್ಧಿಯಾಗಿದೆ. ನೇರ ಜನರನ್ನು ತಲುಪುತ್ತಿದ್ದೇವೆ ಎನ್ನುವ ವಿಶ್ವಾಸವೂ ಬಿಜೆಪಿಯಲ್ಲಿದೆ.

ಕಾಂಗ್ರೆಸ್‌ನಿಂದ ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ ಮಾಡುತ್ತಿದ್ದಾರೆ. ಅವರೂ ಕೂಡಾ ಬಿರುಸಿನ ಪ್ರಚಾರದಲ್ಲಿ ನಿರತರಾಗಿದ್ದಾರೆ. ಅಲ್ಲಲ್ಲಿ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆಗಳನ್ನು ನಡೆಸುತ್ತಿದ್ದಾರೆ.  ಚಿತ್ರನಟ ಶಿವರಾಜ್ ಕುಮಾರ್ ಪತ್ನಿಗೆ ಸಾಥ್ ನೀಡಿದ್ದಾರೆ. ನನ್ನ ಪತ್ನಿಗೆ ನಾನೇ ಗ್ಯಾರಂಟಿ ಎಂದು ಪ್ರಚಾರ ಮಾಡಿದಲೆಲ್ಲಾ ಹೇಳುತ್ತಿದ್ದಾರೆ. ಮಾತ್ರವಲ್ಲ ಬೈಂದೂರಿನಲ್ಲಿ ಇಬ್ಬರು ಮಾಜಿ ಶಾಸಕರುಗಳು ಇಲ್ಲಿ ಒಂದಾಗಿದ್ದಾರೆ. ಕಾಂಗ್ರೆಸ್ ಮೊದಲಿಗಿಂತ ಇಲ್ಲಿ ಬಲಿಷ್ಠವಾಗಿದೆ, ಎಲ್ಲ ಅಸಮಾಧಾನಗಳು ಶಮನವಾಗಿದೆ, ಎಲ್ಲ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಈ ಬಾರಿ ಕಾಂಗ್ರೆಸ್ ಚಿಹ್ನೆಯಡಿ ಸ್ಪರ್ಧೆ ಮಾಡುತ್ತಿರುವುದರಿಂದ ಕಳೆದ ಬಾರಿಯ ಫಲಿತಾಂಶವನ್ನು ಗಣನೆಗೆ ತಗೆದುಕೊಳ್ಳದೆ ಗೆಲುವಿನ ವಿಶ್ವಾಸದಲ್ಲಿದ್ದಾರೆ.

ಈಶ್ವರಪ್ಪನವರ ಸ್ಪರ್ಧೆಯ ಲಾಭವನ್ನು ತನ್ನತ್ತ ಪಡೆಯುವಲ್ಲಿ ಕಾಂಗ್ರೆಸ್ ಚಿಂತನೆ ನಡೆಸಿದೆ. ಹಿಂದು ಮತಗಳು ಹಂಚಿ ಹೋದರೆ ತಮ್ಮ ಗೆಲುವಿಗೆ ಸಹಕಾರಿಯಾಗಬಹುದು ಎಂದು ಅವರು ವಿಶ್ವಾಸ ಇರಿಸಿಕೊಂಡಿದ್ದಾರೆ. ಬೂತ್ ಮಟ್ಟಕ್ಕೆ ಇಳಿದು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ ನಿರಂತರವಾಗಿ ಬೈಂದೂರು ಕ್ಷೇತ್ರದಲ್ಲಿ ಕಳಪೆ ಸಾಧನೆ ಮಾಡುತ್ತಿದೆ. ಬಂಗಾರಪ್ಪನವರೇ ಹಿಂದೆ ಸೋಲು ಕಂಡಿದ್ದಾರೆ. ಲೋಕಸಭಾ ಕ್ಷೇತ್ರವನ್ನು ತನ್ನದಾಗಿ ಮಾಡಿಕೊಳ್ಳಲು ಕಾಂಗ್ರೆಸಿಗೆ ಒತ್ತಡವಿದೆ. ಯಡಿಯೂರಪ್ಪ ಕುಟುಂಬ ಬಂಗಾರಪ್ಪ ಕುಟುಂಬಕ್ಕೆ ನಿರಂತರ ಸೋಲು ನೀಡುತ್ತಿದೆ ಎನ್ನುವ ಮಾತುಗಳು ಈ ಭಾಗದಲ್ಲಿದೆ. ಹಾಗಾಗಿ ಇಲ್ಲಿ ಗೆಲುವು ಸಾಧಿಸುವ ಅನಿವಾರ್ಯತೆ ಕೂಡಾ ಕಾಂಗ್ರೆಸಿಗೆ ಇದೆ. ಈ ಬಾರಿ ಕ್ಷೇತ್ರವನ್ನು ತನ್ನತ್ತ ಸೆಳೆಯಲು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಜನರ ಬಳಿಗೆ ತಗೆದುಕೊಂಡು ಹೋಗುವ ಕಾರ್ಯಕ್ರಮ ಮಾಡುತ್ತಿದೆ.

ಬೈಂದೂರಿನಲ್ಲಿ ಮಾಜಿಗಳಿಬ್ಬರ ಹೋರಾಟ :

ಬೈಂದೂರು ವಿಧಾನಸಭಾ ಕ್ಷೇತ್ರ ಇತ್ತೀಚೆಗಿನ ವರ್ಷಗಳಲ್ಲಿ ಬಿಜೆಪಿಯ ಭದ್ರಕೋಟೆಯಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿಯ ಭದ್ರ ಕೋಟೆಯನ್ನು ಛಿದ್ರಗೊಳಿಸಲು ಕಾಂಗ್ರೆಸ್ ಸನ್ನದ್ಧವಾಗಿದೆ. ಮಾಜಿ ಶಾಸಕರುಗಳಾದ ಕೆ.ಗೋಪಾಲ ಪೂಜಾರಿ ಹಾಗೂ ಬಿಎಂ ಸುಕುಮಾರ್ ಶೆಟ್ಟಿ ತಮ್ಮ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಗೆಲ್ಲಿಸಲು ಶತಾಯ ಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಲೀಡ್ ತಂದುಕೊಡುವ ನಿಟ್ಟಿನಲ್ಲಿ ಇಬ್ಬರು ಮಾಜಿಗಳು ಬಿರುಸಿನ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಗೋಪಾಲ ಪೂಜಾರಿಯವರು ಸತತ ಎರಡು ಬಾರಿ ಬಿಜೆಪಿಯಿಂದ ಪರಾಭವಗೊಂಡವರು. ಬಿಎಂ. ಸುಕುಮಾರ ಶೆಟ್ಟಿ ಕಳೆದ ಬಾರಿ ಬಿಜೆಪಿಯಿಂದ ಟಿಕೆಟ್ ಸಿಗದೇ ತಟಸ್ಥರಾಗಿ ಉಳಿದು ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಗೊಂಡವರು. ತನಗೆ ಟಿಕೆಟ್ ಕೊಡದೆ ವಂಚಿಸಿರುವ ಸೇಡನ್ನು ತೀರಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಪ್ರತಿಯೊಂದು ಕಾಂಗ್ರೆಸ್ ಪ್ರಚಾರ ಸಭೆಯ ವೇದಿಕೆಗಳಲ್ಲಿ ಮಾಜಿಗಳಿಬ್ಬರ ಅಬ್ಬರವೇ ಎದ್ದು ಕಾಣುತ್ತಿದೆ. ಬೈಂದೂರು ಕ್ಷೇತ್ರದಲ್ಲಿ ಮತ್ತೆ ಕೈ ಬಲಗೊಳಿಸುವ ಹೋರಾಟ ನಡೆಯುತ್ತಿದೆ. ಇದಕ್ಕೆ ಮತದಾರ ಪ್ರಭು ಯಾವ ರೀತಿ ತೀರ್ಪು ನೀಡುತ್ತಾನೆ ಕಾದು ನೋಡಬೇಕಾಗಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!