spot_img
Wednesday, January 22, 2025
spot_img

ಎಳೆಯರಲ್ಲಿ  ನವಚೈತನ್ಯ ಮೂಡಿಸಿದ ‘ಎಳೆಬಿಸಿಲು’

ಕೋಟ: ಎಳೆಯರೆಂದರೆ ಸಹಜವಾಗಿಯೇ ಉತ್ಸಾಹದ ಚಿಲುಮೆಗಳು, ಚೈತನ್ಯದ ಬುಗ್ಗೆಗಳು. ತರಗತಿ ಕೋಣೆಯ ಏಕತಾನತೆಯಿಂದ ಗರಿ ಮುದುಡಿದ ಈ ಹಾರುಹಕ್ಕಿಗಳಿಗೆ ಬೇಸಿಗೆ ರಜೆ ಬಂತೆಂದರೆ ಗರಿ ಬಿಚ್ಚಿ ಹಾರಾಡುವ ಸಂಭ್ರಮ. ಇದೇ ಸಂದರ್ಭದಲ್ಲಿ ಊರಿನ ಸಂಘಸಂಸ್ಥೆಗಳು ಕೈಗೊಳ್ಳುವ ಬೇಸಿಗೆ ಶಿಬಿರಗಳು ಅವರ ನಲಿವಿಗೆ ಗರಿ ಹಚ್ಚುವ ಜೊತೆಗೇ ವ್ಯಕ್ತಿತ್ವ ವಿಕಸನಕ್ಕೂ ಅವಕಾಶ ಒದಗಿಸುತ್ತವೆ.
ಮಣೂರು ಪಡುಕರೆಯ ಗೀತಾನಂದ ಫೌಂಡೇಶನ್ ಸ್ಥಳೀಯ ಸಂಘಸಂಸ್ಥೆಗಳ ಸಹಯೋಗದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ‌ ಇತ್ತೀಚೆಗೆ ಹಮ್ಮಿಕೊಂಡಿದ್ದ ‘ಎಳೆಬಿಸಿಲು’ ಎಂಬ ಏಳು ದಿನಗಳ ಬೇಸಿಗೆ ಶಿಬಿರವು ವಿದ್ಯಾರ್ಥಿಗಳಲ್ಲಿ ಉತ್ಸಾಹ, ಚೈತನ್ಯಗಳ ‘ವಿಟಮಿನ್ ಡಿ’ ತುಂಬುವ ನಿಜಾರ್ಥದ ‘ಎಳೆಬಿಸಿಲಾಯಿತು’.
ವೈವಿಧ್ಯಮಯ ಚಟುವಟಿಕೆಗಳು:
ಪೆನ್ನು , ಪುಸ್ತಕ, ಪರೀಕ್ಷೆಗಳ ಏಕತಾನತೆಯ ಕ್ಲಾಸ್‌ರೂಮ್ ಕಲಿಕೆಗೆ ಮಕ್ಕಳನ್ನು ಮತ್ತೊಮ್ಮೆ  ದೂಡದೇ ಎಲ್ಲರೂ ಒಗ್ಗೂಡಿ ಖುಷಿಯಿಂದ ಕಲಿಯುವ ಅನುಭವ ನೀಡುವುದು ಶಿಬಿರದ ಧ್ಯೇಯವಾಗಿತ್ತು. ಆ ನಿಟ್ಟಿನಲ್ಲಿ ಸೃಜನಶೀಲ ಚಟುವಟಿಕೆಗಳಾದ ಚಿತ್ರ ರಚನೆ, ಆವೆ ಮಣ್ಣಿನ ಆಕೃತಿಗಳ ರಚನೆ, ಮುಖವಾಡ ತಯಾರಿ, ಪೇಪರ್ ಕ್ರಾಫ್ಟ್, ಬಾಟಲ್ ಪೇಯಿಂಟಿಂಗ್, ಗಾಳಿಪಟ ತಯಾರಿ ಮುಂತಾದವುಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಲಾಯಿತು. ವಿದ್ಯಾರ್ಥಿಗಳನ್ನು ಕ್ರೀಯಾಶೀಲವಾಗಿ ತೊಡಗಿಸುವ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳಾದ ಮಲ್ಲಪ್ಪ ಕಂಬಾರ, ರಘುನಾಥ ಕುಂಬಾರ, ಅಶೋಕ್ ತೆಕ್ಕಟ್ಟೆ, ರವಿ ಕಟ್ಕೆರೆ, ಮೇಧಾ ಮೆಂಡನ್ ಹಾಗೂ ದಿನೇಶ್ ಹೊಳ್ಳ ಮಾರ್ಗದರ್ಶನ ನೀಡಿ ಅವರಿಂದ ಆಕೃತಿ ರಚಿಸಿ ಪ್ರದರ್ಶನ ಏರ್ಪಡಿಸಿದರು. ಕುಂಬಾರಿಕೆಯ ಚಕ್ರದಲ್ಲಿ ಹೂಜಿ, ಹಣತೆಗಳು ತಮ್ಮ ಕೈಯಿಂದಲೇ ರೂಪುಗೊಂಡಾಗ, ಬಣ್ಣದ ಕಾಗದವೊಂದು ಸಿಂಹದ ಮುಖವಾಡವಾಗಿ ತಮ್ಮ ಕೈಯಲ್ಲೇ ಅರಳಿದಾಗ ಅವರ ಕಣ್ಣಿನ ಹೊಳಪು, ಅವರಿಗಾದ ಸೋಜಿಗ ಹೇಳತೀರದು.
ಮಾತಾಡಿಸುವ, ಒಗ್ಗೂಡಿಸುವ ಆಟಗಳು:
ಆಟದ ಮೂಲಕ ಪರಸ್ಪರ ಸಂವಹನ, ಒಗ್ಗಟ್ಟು ಬೆಸೆಯಲು ಸಾಧ್ಯ ಮನೋರಂಜನೆಯ ಜೊತೆಗೆ ಸವಾಲೊಡ್ಡುವ ಗುಂಪು ಆಟಗಳನ್ನು ದಿನವೂ ಆಡಿಸಿ, ವಿದ್ಯಾರ್ಥಿಗಳು ಭಾವನೆಗಳನ್ನು ವ್ಯಕ್ತಪಡಿಸಲು ಹಾಗೂ ಸೌಹಾರ್ದಯುತವಾಗಿ ಬೆರೆಯಲು ವಾತಾವರಣ ಕಲ್ಪಿಸಲಾಯಿತು. ಕತೆಗಳನ್ನು ಹೇಳುವ, ಕಟ್ಟುವ ಚಟುವಟಿಕೆಗಳ ಉದ್ದೇಶವೂ ಇದೇ ಆಗಿತ್ತು.
ಸ್ವಯಂ ರಕ್ಷಣೆ, ದೈಹಿಕ ದೃಢತೆಗಾಗಿ:
ಇವಲ್ಯೂಶನ್ ಅಕಾಡೆಮಿಯ ಗ್ರಶಮೇಶ್ ಕುಂದರ್ ಮತ್ತು ತಂಡದವರು ವಿದ್ಯಾರ್ಥಿಗಳನ್ನು ತೊಡಗಿಸಿ, ಸ್ವಯಂ ರಕ್ಷಣೆ ಹಾಗೂ ದೈಹಿಕ ದೃಢತೆ ಕಾಪಾಡುವ ವಿಭಿನ್ನ ಚಟುವಟಿಕೆಗಳ ಪ್ರಾತ್ಯಕ್ಷಿಕೆ ವಿದ್ಯಾರ್ಥಿಗಳ ಮನೆ ಗೆದ್ದಿತು. ಯೋಗ ಹಾಗೂ ಪ್ರಾಣಾಯಾಮವನ್ನು ಶಿಬಿರದ ದೈನಂದಿನ ಚಟುವಟಿಕೆಯ ಭಾಗವಾಗಿ ಯೋಗ ಶಿಕ್ಷಕ ದಿನೇಶ್ ಅಭ್ಯಾಸ ಮಾಡಿಸಿದರು.
ಮರಳು ಶಿಲ್ಪ, ಗಾಳಿಪಟ ಹಾರಾಟ:
 ವಿಶ್ವಮಟ್ಟದ ಗಾಳಿಪಟ ಸ್ಪರ್ಧೆಯ ವಿಜೇತ ತಂಡ ಟೀಂ ಮಂಗಳೂರಿನ ಗಾಳಿಪಟ ವಿನ್ಯಾಸಕಾರ ದಿನೇಶ್ ಹೊಳ್ಳರು ಗಾಳಿಪಟ ರಚಿಸುವ ಹಾಗೂ ಸೂತ್ರ ಕಟ್ಟುವ ತಂತ್ರಗಳನ್ನು ತಿಳಿಸಿ, ಪ್ರತಿಯೊಬ್ಬರೂ ಗಾಳಿಪಟ ತಯಾರಿಸಿದರು. ಶಿಬಿರದ ಕೊನೆ ದಿನದ ಆಕರ್ಷಣೆಯಾಗಿ ಪಡುಕರೆಯ ಸಮುದ್ರತೀರದಲ್ಲಿ  ಎಲ್ಲಾ ಶಿಬಿರಾರ್ಥಿಗಳು ಪೋಷಕರೊಂದಿಗೆ ಗಾಳಿಪಟ ಹಾರಿಸಿ ನಲಿದರು. ಇದೇ ಸಂದರ್ಭದಲ್ಲಿ ವಿನಯ್ ಆಚಾರ್ಯರು ಮರಳಿನಲ್ಲಿ ಶಿಲ್ಪ ರಚಿಸುವ ಪ್ರಾತ್ಯಕ್ಷಿಕೆ ನೀಡಿದರು.
ವಿದ್ಯಾರ್ಥಿಗಳು ರಜಾ ಸಮಯದ ಸದುಪಯೋಗಪಡಿಸಿಕೊಳ್ಳಲು ವೇದಿಕೆಯಾದ ಈ ಶಿಬಿರವು, ಪೋಷಕರಿಗೆ ಮೊಬೈಲ್, ಟಿ.ವಿ. ಮುಂತಾದ ಮಾಧ್ಯಮಗಳಿಗೆ ಪರ್ಯಾಯವಾಗಿ ತಮ್ಮ ಮಕ್ಕಳಿಗೆ ಏನನ್ನು ನೀಡಬಹುದು ಎಂಬ ಪ್ರಶ್ನೆಗೆ ಉತ್ತರ ಒದಗಿಸಿತು.
ಗೀತಾನಂದ ಫೌಂಡೇಶನ್‌ನ ಪ್ರವರ್ತಕರಾದ ಆನಂದ ಕುಂದರ್‌ರ ಮಾರ್ಗದರ್ಶನದಲ್ಲಿ ಮೂಡಿಬಂದ ಈ ಬೇಸಿಗೆ ಶಿಬಿರದ ರೂಪುರೇಷೆಗಳನ್ನು ಫೌಂಡೇಶನ್‌ನ ಟ್ರಸ್ಟಿಗಳಾದ ರಮೇಶ್ ಕುಂದರ್ ಹಾಗೂ ವೈಷ್ಣವಿ ಕುಂದರ್ ಸಿದ್ಧಪಡಿಸಿದ್ದರು. ರವಿಕಿರಣ್ ಕೋಟ ಶಿಬಿರದ ಸಮನ್ವಯಾಧಿಕಾರಿಯಾಗಿದ್ದು, ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಜಯರಾಮ ಶೆಟ್ಟಿ, ಜನತಾ ಗ್ರೂಪ್‌ನ ಅಶ್ವಿನಿ, ವಾಣಿಶ್ರೀ, ರಾಘವೇಂದ್ರ ಹಾಗೂ ಶಾಲಾ ಅಧ್ಯಾಪಕರು ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!