spot_img
Wednesday, January 22, 2025
spot_img

ಮಂಗಳೂರಿನಲ್ಲಿ ಮತ್ತೆ ಬೀಸಿದ ಮೋದಿ ಹವಾ, ಬಿಲ್ಲವರ ಮುನಿಸು ತಣಿಸಿದ ಮೋದಿ ! | ನಾರಾಯಣ ಗುರುಗಳ ಅನುಯಾಯಿಗಳು ಕೋಮುವಾದಿಗಳಾಗಿರಲ್ಲ : ಕಾಂಗ್ರೆಸ್‌

ಜನಪ್ರತಿನಿಧಿ (ಮಂಗಳೂರು) : ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಪೈಕಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಹೈವೋಲ್ಟೇಜ್‌ ಕಣ. ಈ ಭಾರಿ ಕಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಅಡ್ವೋಕೇಟ್ ಪದ್ಮರಾಜ್‌ ಪೂಜಾರಿ ನಡುವೆ ಬಾರಿ ಜಿದ್ದಾಜಿದ್ದಿನ ಹೋರಾಟದ ಲಕ್ಷಣಗಳು ಕಾಣಿಸಿಕೊಂಡ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ರೋಡ್‌ ಶೋ ನಡೆಸಿ ಇಲ್ಲಿ ಮತ್ತೆ ಹವಾ ಎಬ್ಬಿಸಿದ್ದಾರೆ.

ಸಹಜವಾಗಿ ಹಿಂದುತ್ವ ಹಾಗೂ ಮೋದಿ ಅಲೆ ತುಸು ಹೆಚ್ಚೇ ಇರುವ ಈ ಕ್ಷೇತ್ರದಲ್ಲಿ ಮೋದಿ ರೋಡ್‌ ಶೋನಿಂದ ಮತ್ತಷ್ಟು ಇದರ ಉನ್ಮಾದ ತಾರಕಕ್ಕೇ ಏರಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದರ ಮೇಲೇ ಇದ್ದ ಅಸಮಾಧಾನ ಹಾಗೂ ಈ ಭಾರಿ ಬಿಲ್ಲವ ಮತಗಳು ವಿಭಜನೆಯಾಗಬಹುದು ಎಂಬ ದೃಷ್ಟಿಯಲ್ಲಿ ಬಿಜೆಪಿ ಮೋದಿಯವರನ್ನು ಕರೆಸಿ ತಂತ್ರಗಾರಿಕೆ ಹೆಣೆದಿದೆ.

ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಕನ್ನಡ ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳಾದ ಬ್ರಿಜೇಶ್‌ ಚೌಟ ಹಾಗೂ ಕೋಟ ಶ್ರೀನಿವಾ ಪೂಜಾರಿ ಅವರ ಮತಯಾಚಿಸಿದರು.

ಸಾಮಾಜಿಕ ನ್ಯಾಯದ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಇಲ್ಲಿದ್ದ ಬಿಲ್ಲವರ ಮುನಿಸನ್ನು ತಣಿಸುವ ಪ್ರಯತ್ನ ಮಾಡಿದರು. ಹೂಗಳನ್ನು ಅಲಂಕರಿಸಿದ ತೆರೆದ ವಾಹನದಲ್ಲಿ ಬ್ರಿಜೇಶ್‌ ಚೌಟ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ರಸ್ತೆಯ ಇಕ್ಕೆಲಗಳಲ್ಲಿ ಸಾಗರೋಪಾದಿಯಲ್ಲಿ ನೆರೆದಿದ್ದ ಜನರೆಡೆಗೆ ನಗುತ್ತಾ, ಕೈ ಬೀಸಿದರು.

ಮೋದಿ ಅವರ ಬರುವಿಕೆಯನ್ನೇ ಕಾದು ನಿಂತಿದ್ದ ಸಹಸ್ತ ಸಂಖ್ಯೆಯ ಹಿಂದು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮೋದಿ ತೆರೆದ ವಾಹನದ ಮೂಲಕ ತಮ್ಮ ಬಳಿ ಬಂದಾಗ ಅಭಿಮಾನಿಗಳ ಹರ್ಷೋದ್ಘಾರ ಮೊಳಗಿಸಿದರು. ಕೆಲವರು ಮೋದಿಯೆಡೆಗೆ ಕೈಮುಗಿದು ನಿಂತರು, ನಿಂತ ಸ್ಥಳದಲ್ಲೇ ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಮಾತ್ರವಲ್ಲದೇ ಪ್ರಧಾನಿ ಆಗಮಿಸುತ್ತಿದ್ದಂತೆ, ಜೈ ಜೈ ಮೋದಿ… ʼಅಬ್‌ ಕಿ ಬಾರ್‌ ಚಾರ್‌ ಸೌ ಪಾರ್‌ʼ, ಜೈ ಶ್ರೀರಾಮ್‌ ಘೋಷಣೆಗಳು ಮುಗಿಲು ಮುಟ್ಟಿತು. ಕೇಸರಿ ಪೇಟಾ, ಕೇಸರಿ ಶಾಲು, ಕೇಸರಿ ಟೋಪಿ ಧರಿಸಿದ್ದ ಅಭಿಮಾನಿಗಳಿಗೆ ಆರಾಧ್ಯ ನಾಯಕನಿಗೆ ಜೈಕಾರ ಹಾಕಿದಷ್ಟು ಮನ ತಣಿಯಲಿಲ್ಲ. ಮತ್ತೆ ಮತ್ತೆ ಜೈಕಾರ ಕೂಗಿದರು.

ನಾರಾಯಣ ಗುರುಗಳ ನಿಜವಾದ ಅನುಯಾಯಿಗಳು ಕೋಮುವಾದಿಯಾಗಿರಲ್ಲ : ಕಾಂಗ್ರೆಸ್‌

ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ನ್ಯಾಯದ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಾಟಕವಾಡಿದ್ದಾರೆ. ನಿಜವಾದ ನಾರಾಯಣ ಗುರುಗಳ ಅನುಯಾಯಿಗಳು ಕೋಮುವಾದಿಗಳಾಗಿರುವುದಕ್ಕೆ ಸಾದ್ಯವಿಲ್ಲ ಎಂದು ಪ್ರಧಾನಿ ವಿರುದ್ಧ ಕಾಂಗ್ರೆಸ್‌ ಹರಿಹಾಯ್ದಿದೆ. ಬಿಜೆಪಿಗೆ ಈವರೆಗೆ ಬಿಲ್ಲವರು ಬೇಕಾಗಿರಲಿಲ್ಲ. ಈಗ ಚುನಾವಣೆ ಬಂದಿದೆ ಹಾಗಾಗಿ ಬಿಲ್ಲವರು ಬೇಕಾಗಿದ್ದಾರೆ. ಇವೆಲ್ಲಾ ಚುನಾವಣೆಯ ನಾಟಕ ಅಷ್ಟೇ ಎಂದು ಕಾಂಗ್ರೆಸ್‌ ಹೇಳಿದೆ.

ಇನ್ನು, ಸಿಎಂ ಸಿದ್ದರಾಮಯ್ಯ ಪ್ರಧಾನಿ ಅವರಿಗೆ ಪುಂಖಾನುಪುಂಖವಾದ ಪ್ರಶ್ನೆಗಳನ್ನು ಕೇಳಿದ್ದಾರೆ. ಮೂರು ದಶಕಗಳಿಂದ ನಿಮ್ಮ ಪಕ್ಷವನ್ನು ಗೆಲ್ಲಿಸುತ್ತಾ ಬಂದಿರುವ ದಕ್ಷಿಣ ಕನ್ನಡದ ಜನತೆಯ ಬಗ್ಗೆ ಯಾಕೆ ನಿಮಗೆ ಈ ಪರಿಯ ದ್ವೇಷ? ಈ ಜಿಲ್ಲೆಯಲ್ಲಿ ಬಹುಸಂಖ್ಯಾತ ಸಮುದಾಯವಾದ ಬಿಲ್ಲವರ ಆರಾಧ್ಯಗುರು ಬ್ರಹ್ಮಶ್ರೀ ನಾರಾಯಣ ಗುರುಗಳು. ಗಣರಾಜ್ಯೋತ್ಸವದ ಪರೇಡ್ ನಲ್ಲಿ ರಾಜ್ಯ ಸರ್ಕಾರ ನಾರಾಯಣ ಗುರುಗಳ ಟ್ಯಾಬ್ಲೋ ಪ್ರದರ್ಶನ ಮಾಡಲು ಹೊರಟರೆ ಅದಕ್ಕೆ ನೀವು ಅಡ್ಡಗಾಲು ಹಾಕಿದಿರಿ. ನಾರಾಯಣ ಗುರುಗಳಿಗೆ ಹಿಂದೂ ಧರ್ಮದ ಗುರುಗಳ ಪಕ್ಕದಲ್ಲಿ ಜಾಗ ಇಲ್ಲವೇ?

ನಾರಾಯಣ ಗುರುಗಳಿಗೆ ನಿಮ್ಮ ನೇತೃತ್ವದ ಕೇಂದ್ರ ಸರ್ಕಾರ ಅನ್ಯಾಯ ಮಾಡಿದ್ದು ಸಾಕಾಗಲಿಲ್ಲ ಎಂದೋ ಏನೋ? ಯಾರೋ ತಲೆತಿರುಕನ ನೇತೃತ್ವದಲ್ಲಿ ರಾಜ್ಯದ ರಾಜ್ಯ ಬಿಜೆಪಿ ಸರ್ಕಾರ ನೇಮಿಸಿದ್ದ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಶಾಲಾ ಪಠ್ಯದಲ್ಲಿದ್ದ ನಾರಾಯಣ ಗುರುಗಳ ಪಾಠವನ್ನೂ ಕಿತ್ತು ಹಾಕಿತು. ನಾರಾಯಣ ಗುರುಗಳಿಗೆ ಮಾಡಿರುವ ಅಪಮಾನದ ವಿರುದ್ಧ ಜನ ಸಿಡಿದೆದ್ದು ಪ್ರತಿಭಟನೆ ನಡೆಸಿದರೂ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದಕ್ಕೆ ಲಕ್ಷ್ಯವನ್ನೇ ಕೊಡಲಿಲ್ಲ. ಈಗ ಹೇಳಿ ನೀವು ದಕ್ಷಿಣ ಕನ್ನಡಕ್ಕೆ ಕೊಟ್ಟದ್ದೆಷ್ಟು? ಕಿತ್ತುಕೊಂಡದ್ದೆಷ್ಟು? ಎಂದು ಕೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!