Saturday, October 12, 2024

ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ : ಉಡುಪಿಯಲ್ಲಿ ಬಿಜೆಪಿ ಬಲ, ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್‌ ಬಲ !

ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ  ಈ ಭಾರಿ ಜಿದ್ದಾಜಿದ್ದಿನ ಹಣಾಹಣಿಗೆ ಸಾಕ್ಷಿಯಾಗಲಿದೆ ಎಂಬ ವಿಶ್ಲೇಣೆಗಳು ರಾಜಕೀಯ ವಲಯದಲ್ಲಿ ಕೇಳಿ ಬರ್ತಿವೆ. ಉಭಯ ಪಕ್ಷಗಳು ಕಳೆದ ವಿಧಾನಸಭಾ ಚುನಾವಣಾ ಲೆಕ್ಕಚಾರದ ಮೇಲೆಯೇ ಈ ಲೋಕಸಾಭಾ ಚುನಾವಣೆಯನ್ನು ಅರ್ಥೈಸಿಕೊಂಡು ತಂತ್ರಗಾರಿಕೆ ಹೆಣೆಯುತ್ತಿರುವ ಹಾಗೆ ಕಾಣಿಸ್ತಿದೆ. ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶವೇ ಈ ಚುನಾವಣೆಗೆ ಮಾನದಂಡವಾದರೇ ಉಭಯ ಪಕ್ಷಗಳಿಗೆ ಗೆಲುವು ಅಷ್ಟು ಸುಲಭದಲ್ಲಂತೂ ಇಲ್ಲ ಅಂತಲೇ ಕಾಣಿಸ್ತಿದೆ.

ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಉಡುಪಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಾದ ಉಡುಪಿ, ಕಾಪು, ಕುಂದಾಪುರ, ಕಾರ್ಕಳ ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್‌ಗೆ ಸವಾಲಾಗಿದ್ದರೆ, ಚಿಕ್ಕಮಗಳೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಾದ ಶೃಂಗೇರಿ, ಚಿಕ್ಕಮಗಳೂರು, ಮೂಡಿಗೆರೆ, ತರೀಕೆರೆ ವಿಧಾನಸಭಾ ಕ್ಷೇತ್ರಗಳು ಬಿಜೆಪಿಗೆ ಸವಾಲಾಗಿ ಪರಿಣಮಿಸಿವೆ.

ಬಹಳ ಗಮನಾರ್ಹ ವಿಚಾರ ಏನು ಕೇಳಿದ್ರೇ, ಕಳೆದ 2023ರ ವಿಧಾನಸಭೆ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ 91,938 ಮತಗಳ ಅಂತರ ಸಾಧಿಸಿದರೆ, ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಒಟ್ಟು ಮುನ್ನಡೆ 18,980 ಮತಗಳು. ಅಂದರೇ, ಇಲ್ಲಿ ಬಿಜೆಪಿಗೂ ಮತ್ತು ಕಾಂಗ್ರೆಸ್ ಗೂ 72,958 ಮತಗಳ ವ್ಯತ್ಯಾಸವಿದೆ. ಅಂದರೇ, 72,958 ಮತಗಳು ಬಿಜೆಪಿಯಲ್ಲಿಯೇ ಹೆಚ್ಚಿವೆ. ಆದರೇ ಇದು ವಿಧಾನಸಭಾ ಚುನಾವಣೆ ಅಲ್ಲ. ಲೋಕಸಭಾ ಚುನಾವಣೆ ಎನ್ನುವುದು ಇಲ್ಲಿ ಮುಖ್ಯಾಂಶ.

ಲೋಕಸಭಾ ಚುನಾವಣೆಯಲ್ಲಿ ವಿಧಾನಸಭಾ ಚುನಾವಣೆಯ ಲೆಕ್ಕಾಚಾರ ಗಣನೆಗೆ ಬರುತ್ತದೆಯೇ ಅಥವಾ ಇಲ್ಲವೇ ? ಹೌದು ಅಥವಾ ಇಲ್ಲ ಎನ್ನುವ ಎರಡೂ ಅಂಶಗಳನ್ನು  ತೀರಾ ಸಾರಸಗಟಾಗಿ ಅಲ್ಲಗಳೆಯುವಂತಿಲ್ಲ. ಇಲ್ಲಿ ಅಭ್ಯರ್ಥಿಗಳ ರಾಜಕೀಯ ವರ್ಚಸ್ಸಿನ ಮೇಲೆ, ಪಕ್ಷದ ಮೇಲೆ, ಅಭಿವೃದ್ಧಿಯ ಮೇಲೆ ಹಾಗೂ ವೈಯಕ್ತಿಕ ಹಾಗೂ ಯೋಜನೆಗಳ ಉಪಕಾರ ಸ್ಮರಣೆಯ ಮೇಲೂ ಮತ್ತು ಜಾತಿಗಳ ಆಧಾರದ ಮೇಲೂ ಮತಗಳು ವಿಭಜನೆಯಾಗಬಹುದು.

ಇನ್ನು, 2023ರ ವಿಧನಾಸಭಾ ಚುನಾವಣೆಯಲ್ಲಿ ಉಭಯ ಜಿಲ್ಲೆಗಳ ಮತಗಳನ್ನು ಕ್ಷೇತ್ರವಾರು ಗಮನಿಸೋಣ … ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಶಪಾಲ್ ಸುವರ್ಣ, ಕಾಂಗ್ರೆಸ್ ನ ಪ್ರಸಾದ್ ಕಾಂಚನ್ ಎದುರು 32,776 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕುಂದಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ, ಕಾಂಗ್ರೆಸ್ ನ ದಿನೇಶ್ ಹೆಗ್ಡೆ ಮೊಳಹಳ್ಳಿ ಎದುರು 41,556 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಶೆಟ್ಟಿ ಗುರ್ಮೆ, ಕಾಂಗ್ರೆಸ್ ನ ವಿನಯ್ ಕುಮಾರ್ ಸೊರಕೆ ಎದುರು 13,004 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ, ಇನ್ನು ಭಾರಿ ವಿವಾದಕ್ಕೆ ಕಾರಣವಾದ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸುನೀಲ್ ಕುಮಾರ್ ಕಾರ್ಕಳ, ಕಾಂಗ್ರೆಸ್ ನ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರ ಎದುರು ಅತಿ ಕಡಿಮೆ ಗೆಲುವಿನ ಅಂತರ, ಅಂದರೇ 4,602 ಮತಗಳ ಅಂತರದಲ್ಲಿ ಗೆದ್ದಿದ್ದರು.

ಇನ್ನು, ಚಿಕ್ಕಮಗಳೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಕಳೆದ ಚುನಾವಣೆಯ ಮತಗಳ ಅಂತರಗಳನ್ನು ಗಮನಿಸೋಣ… ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಟಿ.ಡಿ ರಾಜೇಗೌಡ, ಬಿಜೆಪಿಯ ಡಿ.ಎನ್ ಜೀವರಾಜ್ ಅವರ ವಿರುದ್ದ  ಕೇವಲ 201 ಮತಗಳು ಅಂತರದಲ್ಲಿ ಗೆದ್ದಿದ್ದರು, ಮೂಡಿಗೆರೆಯಲ್ಲಿ ಕಾಂಗ್ರೆಸ್ ನ ನಯನಾ ಮೋಟಮ್ಮ, ಬಿಜೆಪಿಯ ದೀಪಕ್ ದೊಡ್ಡಯ್ಯ ವಿರುದ್ದ  722 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಹೆಚ್. ಡಿ ತಮ್ಮಯ್ಯ, ಬಿಜೆಪಿಯ ಸಿ.ಟಿ ರವಿ ಎದುರು 5,926 ಮತಗಳ ಅಂತರದಲ್ಲಿ ಗೆದ್ದಿದ್ದರು. ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಉತ್ತಮ ಗೆಲುವಿನ ಅಂತರವನ್ನು ಕಂಡಿದೆ, ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ. ಎಚ್  ಶ್ರೀನಿವಾಸ್, ಬಿಜೆಪಿಯ ಡಿ.ಎಸ್ ಸುರೇಶ್ ವಿರುದ್ಧ 12,131 ಮತಗಳ ಅಂತರದಿಂದ ಗೆದ್ದಿದ್ದಾರೆ.

ಹಾಗೆ ನೋಡುವುದಕ್ಕೆ ಹೋದರೇ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಉಡುಪಿ ಜಿಲ್ಲೆಯ ನಾಲ್ಕು ವಿಧನಾಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ, ಕಾರ್ಕಳವನ್ನು ಹೊರತುಪಡಿಸಿ, ಇನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ ನ ಅಭ್ಯರ್ಥಿಗಳು ತೀರಾ ಕಡಿಮೆ ಅಂತರದಲ್ಲಿ ಗೆದ್ದಿದ್ದಾರೆ, ತರಿಕೆರೆ ಕ್ಷೇತ್ರದಲ್ಲಿ ಮಾತ್ರ ಸ್ವಲ್ಪ ಹೆಚ್ಚು ಅಂತರದಲ್ಲಿ ಗೆದ್ದಿದ್ದಾರೆ.

ಕಳೆದ ಎರಡು ಸುತ್ತಿನ ಲೋಕಸ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಗೆದ್ದಿದ್ದಾರೆ. ಅವರ ಮೇಲಿನ ಅಸಮಾಧಾನದಿಂದ, ಕ್ಷೇತ್ರಕ್ಕೆ ಶೂನ್ಯ ಕೊಡುಗೆ ನೀಡಿದ್ದಾರೆ ಎಂಬ ಆರೋಪಗಳಿಂದ ಬಿಜೆಪಿಯಲ್ಲಿ ಅಭ್ಯರ್ಥಿ ಬದಲಾವಣೆಯಾಗಿದೆ. ಕಾಂಗ್ರೆಸ್ ಈ ಭಾರಿ ಹೇಗಾದರೂ ಮಾಡಿ ಕ್ಷೇತ್ರವನ್ನು ವಶಕ್ಕೆ ಪಡೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಅನುಭವಿ ಹಾಗೂ ಸಮರ್ಥ ಮಾಜಿ ಸಂಸದ, ಮಾಜಿ ಸಚಿವ, ಜನಪ್ರಿಯ ರಾಜಕಾರಣಿ ಎಂಬೆಲ್ಲಾ ಕೀರ್ತಿಗೆ ಕಾರಣರಾದ ಕೆ. ಜಯಪ್ರಕಾಶ್ ಹೆಗ್ಡೆ ಅವರನ್ನು ಕಣಕ್ಕೆ ಇಳಿಸಿದೆ. ಇತ್ತ ಬಿಜೆಪಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ನಿಲ್ಲಿಸಿದೆ.

ಶ್ರೀನಿವಾಸ ಪೂಜಾರಿ ಅವರು ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತ್ ಮಟ್ಟದ ರಾಜಕಾರಣದಿಂದ ಬಂದು ಸಚಿವರಾಗಿ, ವಿಧಾನಪರಿಷತ್ ಸದಸ್ಯರಾಗಿ, ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದವರು, ಸರಳ ರಾಜಕಾರಣಿ ಎಂಬ ಹೆಸರೂ ಕೂಡ ಅವರಿಗಿದೆ. ಒಂದೆಡೆ ನಾನು ಮಾಡಿದ ಅಭಿವೃದ್ಧಿ ಕೆಲಸವನ್ನೇ ಮುಂದಿಟ್ಟು ಮತ ಕೇಳುತ್ತೇನೆ, ಕ್ಷೇತ್ರದ ಅಭಿವೃದ್ಧಿಯ ಕೆಲಸಗಳ ದಾಖಲೆಗಳನ್ನು ನೋಡಿದರೇ ಯಾರು ಇಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ ಎಂದು ತಿಳಿಯುತ್ತದೆ ಎನ್ನುವ ಕಾಂಗ್ರೆಸ್ ನ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಇನ್ನೊಂದೆಡೆ ರಾಮ ಮಂದಿರವೇ ಅಭಿವೃದ್ಧಿ ಎನ್ನುವುದಲ್ಲದೇ, ಮೋದಿ ಹೆಸರಿನ ಜೊತೆಗೆ ಹಿಂದುಳಿದ ವರ್ಗದಿಂದ ಬಂದವನು ಎನ್ನುವ ತಂತ್ರಗಾರಿಕೆ ಬಳಸಿ ಚುನಾವಣೆಗೆ ಮುಂದಾಗಿರುವ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಣದಲ್ಲಿರುವುದು ಈ ಭಾರಿಯ ಚುನಾವಣೆಯ ಕಣದ ಬಗ್ಗೆ ಇಡೀ ರಾಜ್ಯವೇ ಇತ್ತ ನೋಡುವ ಹಾಗೆ ಮಾಡಿದೆ.

ಕಳೆದ ಬಾರಿ ಬಿಜೆಪಿಯಿಂದ ಶೋಭಾ ಕರಂದ್ಲಾಜೆ, ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಶಾಲುಗಳನ್ನು ಹಾಕಿಕೊಂಡು ಕಣಕ್ಕಿಳಿದಿದ್ದ ಪ್ರಮೋದ್ ಮಧ್ವರಾಜ್ ವಿರುದ್ಧ 3,49,599 ಮತಗಳ ಬೃಹತ್ ಅಂತರದಿಂದ ಗೆದ್ದಿದ್ದರು. ಆದರೇ, ಈ ಬಾರಿ ಇಷ್ಟು ಅಂತರದ ನಿರೀಕ್ಷೆ ಬಿಜೆಪಿಗಿಲ್ಲ. ಕ್ಷೇತ್ರವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂಬ ದೃಷ್ಟಿಯಲ್ಲಿ ತಂತ್ರಗಾರಿಕೆ ಮಾಡ್ತಿದೆ ಬಿಜೆಪಿ. ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ತನ್ನ ಅಧಿಕಾರವಾದಿಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನ ಇಂದಿಗೂ ನೆನಪಿಟ್ಟುಕೊಂಡಿರುವುದೇ ಇದಕ್ಕೆ ಪ್ರಮುಖ ಕಾರಣ ಮತ್ತು ಜನರೊಂದಿಗಿನ ಜೆಪಿ ಹೆಗ್ಡೆ ಉಳಿಸಿಕೊಂಡ ಸಂಪರ್ಕ ಇನ್ನೊಂದು ಕಾರಣ!. ಶ್ರೀನಿವಾಸ ಪೂಜಾರಿ ಅವರು ನೇರವಾಗಿ ಚುನಾವಣೆಯಲ್ಲಿ ಗೆದ್ದ ಉದಾಹರಣೆ ಇಲ್ಲದಿರುವುದೇ ಬಿಜೆಪಿಯಲ್ಲಿ ಕಳೆದ ಬಾರಿಯ ಪಡೆದ ಮತಗಳ ಅಂತರದ ನಿರೀಕ್ಷೆ ಇಲ್ಲದಿರುವುದಕ್ಕೆ ಕಾರಣ ಅಂತ ಕಾಣಿಸ್ತಿದೆ. ಶ್ರೀನಿವಾಸ ಪೂಜಾರಿ ಅವರು ಜನರೊಂದಿಗೆ ಆಪ್ತವಾಗಿ ಮಾತಾಡಿಸಿಕೊಂಡು ಇರುವವರೇ ಆಗಿದ್ದರೂ ಈ ಜಿಲ್ಲೆಯಲ್ಲಿ ಯಾವುದೋ ಒಂದು ಕ್ಷೇತ್ರಕ್ಕೆ ಶಾಸಕನಾಗಿಯೋ ಅಥವಾ ಜಿಲ್ಲಾ ಉಸ್ತುವಾರಿ ಆಗಿಯೋ ಕೆಲಸ ಮಾಡಿದ್ದಿಲ್ಲ. ಸಚಿವರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಒಬ್ಬ ಒಳ್ಳೆಯ ವಾಗ್ಪಟುವಾಗಿ ಜನರಿಗೆ ಗೊತ್ತು ಅಷ್ಟೆ.

ಇನ್ನು, ಜಾತಿ ಲೆಕ್ಕಾಚಾರ ಕೂಡ ಜೋರಾಗಿ ನಡೆಯುತ್ತಿದ್ದು ಜಯಪ್ರಕಾಶ್ ಹೆಗ್ಡೆ ಪ್ರತಿನಿಧಿಸುವ ಬಂಟ್ಸ್ ಸಮುದಾಯ ಈ ಬಾರಿ ಅವರ ಕೈ ಹಿಡಿದರೆ ಅವರ ಗೆಲುವಿಗೆ ದೊಡ್ಡ ಕಾರಣವಾಗಬಹದು, ಅದರೊಂದಿಗೆ ಅಲ್ಪಸಂಖ್ಯಾತ, ಎಸ್ಸಿ/ಎಸ್ಟಿ, ಹಿಂದುಳಿದ ವರ್ಗಗಳ ಮತ ಬ್ಯಾಂಕ್ ಗಳು ಕೂಡ ಈ ಬಾರಿ ನಿರ್ಣಯಕ ಎನಿಸಲಿದೆ. ಪೂಜಾರಿ ಅವರಿಗೆ ಬಿಲ್ಲವ ಮತಗಳು ಹಾಗೂ ಬಿಜೆಪಿ ಜೆಡಿಸ್ ಮೈತ್ರಿಯಾಗಿರುವುದರಿಂದ ಲಿಂಗಾಯತರು, ಒಕ್ಕಲಿಗರ ಮತಗಳು ಹಂಚಿಹೋಗಬಹುದೆಂಬ ವಿಶ್ಲೇಷಣೆಗಳು ಈ ಕ್ಷೇತ್ರದಲ್ಲಿದೆ.  ಸಹಜವಾಗಿ ಈ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದೆಯ ವಿರುದ್ಧ ಅಭಿವೃದ್ಧಿ ಕಾರ್ಯದ ಕುರಿತು ಅಸಮಾಧಾನವಿದ್ದು ಬಿಜೆಪಿ ಅಭ್ಯರ್ಥಿ ಮತ್ತೊಮ್ಮೆ ಮೋದಿ, ಹಿಂದುತ್ವ, ರಾಮ ಮಂದಿರದ ಹೆಸರಿನಲ್ಲಿ ಮತ ಕೇಳಲು ಮುಂದಾಗಿದ್ದಾರೆ. ಜನ ಯಾವ ರೀತಿ ಸ್ಪಂದಿಸಬಹುದೆಂಬುವುದನ್ನು ಕಾದು ನೋಡಬೇಕಾಗಿದೆ.

-ಶ್ರೀರಾಜ್ ವಕ್ವಾಡಿ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!