Sunday, October 13, 2024

ಒಂದು ವರ್ಷದಲ್ಲಿ ಕಾಂಗ್ರೆಸ್ ಮನೆ ಖಾಲಿ : ದೀಪಕ್ ಕುಮಾರ್ ಶೆಟ್ಟಿ

ಅನುದಾನ ತಡೆಹಿಡಿದಿದ್ದಲ್ಲದೇ ಸಂಸದರ ಮೇಲೆ ಅಪಪ್ರಚಾರ ಮಾಡುವುದು ಶೋಭೆಯಲ್ಲ : ದೀಪಕ್‌ ಕುಮಾರ್‌ ಆಕ್ರೋಶ 

ಜನಪ್ರತಿನಿಧಿ (ಬೈಂದೂರು) : ಬಿ. ವೈ. ರಾಘವೇಂದ್ರ ಅವರು ಈ ಬಾರಿ ನಾಲ್ಕನೇ ಬಾರಿಗೆ ಸಂಸತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಗಂಗೊಳ್ಳಿ ಬಂದರು, ಮರವಂತೆ ಬಂದರು, ಕೊಡೇರಿ ಬಂದರು, ಅಳ್ವೆಗದ್ದೆಯ ಬಂದರು ಕನಸು ಸಾಕಾರವಾಗುವುದಕ್ಕೆ ಬಿ. ಎಸ್ ಯಡಿಯೂರಪ್ಪ ಹಾಗೂ ಸಂಸದರಾದ ಬಿ. ವೈ. ರಾಘವೇಂದ್ರ ಅವರ ಶ್ರಮವೇ ಮೂಲ ಕಾರಣ ಎಂದು ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣ, ನೆಟ್ವರ್ಕ್ ಸೇರಿದಂತೆ ಶೈಕ್ಷಣಿಕ ವಿಚಾರವಾಗಿ ಹಾಗೂ ಎಲ್ಲಾ ಸಮುದಾಯಗಳನ್ನು ಒಳಗೊಳ್ಳುವ ಅಭಿವೃದ್ಧಿ ಕಾರ್ಯ ಆಗಿದೆ. ನಮ್ಮ ಸಂಸದರ ಕಾರ್ಯವನ್ನು ಮೆಚ್ಚಿ ಕೆಲವು ಕಾಂಗ್ರೆಸ್ ಕಾರ್ಯಕರ್ತರೂ ಕೂಡ ನಾವು ಬಿ. ವೈ ರಾಘವೇಂದ್ರ ಅವರಿಗೆ ಮತ ಚಲಾಯಿಸುತ್ತೇವೆ ಎಂದು ಹೇಳಿದ್ದಾರೆ. ಗೋಪಾಲ ಪೂಜಾರ ಅವರೇ, ನಿಮ್ಮ ಅವಧಿ ಮತ್ತು ನಮ್ಮ ಸಂಸದರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿ ಮಾಡುವ, ಯಾರ ಪಟ್ಟಿ ಜಾಸ್ತಿ ಆಗುತ್ತದೆ ಎಂದು ನೋಡೋಣ. ಸಂಸದರ ಬಗ್ಗೆ ಅವಹೇಳನಕಾರಿಯಾದ ಮಾತುಗಳು ಮಾಜಿ ಶಾಸಕರಾದ ತಮಗೆ ಶೋಭೆ ತರುವಂತದಲ್ಲ ಎಂದು ಅವರು ಕಿಡಿ ಕಾರಿದರು.

ದೇವಾಡಿಗ ಸಮಾಜ ವಿಶೇಷ ವಿಶ್ವಾಸವನ್ನು ಬಿಜೆಪಿ ಮೇಲೆ ಇರಿಸಿಕೊಂಡಿದೆ. ದೇವಾಡಿಗ ಸಮುದಾಯ ಭವನಕ್ಕೆ ಬಿಡುಗಡೆಯಾಗಬೇಕಿದ್ದ ಅನುದಾನವನ್ನು ಕಾಂಗ್ರೆಸ್ ಸರ್ಕಾರ ತಡೆ ಹಿಡಿದಿದೆ. ಗೋಪಾಲ ಪೂಜಾರಿ ಅವರೇ ತಮ್ಮ ಪ್ರಭಾವದಿಂದ ಅನುದಾನ ಬಿಡುಗಡೆಯಾಗುವುದನ್ನು ತಡೆದಿದ್ದಾರೆ ಎಂದು ಮಾಜಿ ಶಾಸಕ ಗೋಪಾಲ ಪೂಜಾರಿ ಅವರಿಗೆ ದೀಪಕ್ ಕುಮಾರ್ ಶೆಟ್ಟು ತಿರುಗೇಟು ನೀಡಿದರು.

ಎಲ್ಲಾ ಸಮುದಾಯದವರನ್ನೂ ಸರಿಸಮಾನವಾಗಿ ಸಂಸದರು ನೋಡಿಕೊಂಡಿದ್ದಾರೆ. ನಮ್ಮ ಸಂಸದರು ಪಾದರಸದಂತೆ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಚುನಾವಣೆಯ ಕಾರಣಕ್ಕೆ ಸಂಸದರ ಬಗ್ಗೆ ಹೀಗೆಲ್ಲಾ ಅಪಪ್ರಚಾರ ಮಾಡುವುದು ಸರಿ ಅಲ್ಲ.

ಸೋಮೇಶ್ವರ ಬೀಚ್, ಮರವಂತೆ ಬೀಚ್ ಸೇರಿ ಅನೇಕ ಅಭಿವೃದ್ಧಿ ಕೆಲಸಗಳು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ. ಪಕ್ಷದೊಳಗೆ ಸಣ್ಣ ಪುಟ್ಟ ದೋಷಗಳಿರುವುದು ಸಹಜ. ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಯಾವುದಾದರೂ ಸರ್ಕಾರ ನ್ಯಾಯ ಕೊಟ್ಟಿದೆ ಅಂತಿದ್ದರೇ ಅದು ಬಿಜೆಪಿ ಸರ್ಕಾರ ಎಂದು ಅವರು ಹೇಳಿದರು.

ಬೈಂದೂರು ಬಿಜೆಪಿಯಲ್ಲಿ ಯಾವುದೇ ವೈಮನಸ್ಸಿಲ್ಲ, ಬಣ ಇಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಒಂದು ವರ್ಷದಲ್ಲಿ ಕಾಂಗ್ರೆಸ್ ಮನೆ ಖಾಲಿ ಆಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ ಎಂದು ಮಾಜಿ ಶಾಸಕ ಸುಕುಮಾರ ಶೆಟ್ಟಿ ಅವರ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.

ಗೋಪಾಲ ಪೂಜಾರಿ ಅವರು ಆಣೆ ಪ್ರಮಾಣಕ್ಕೆ ಬರಲಿ : ಪ್ರಿಯದರ್ಶಿನಿ

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಮಾತನಾಡಿ, ದೇವಾಡಿಗ ಸಮುದಾಯಕ್ಕೆ ಅನುದಾನ ಬಿಡುಗಡೆಗೆ ಅನುಮೋದನೆ ನೀಡಿದ್ದರು. ಆದರೇ ಕಾಂಗ್ರೆಸ್ ಸರ್ಕಾರ ಅನುದಾನ ಬಿಡುಗಡೆಗೆ ತಡೆಯಾಜ್ಞೆ ನೀಡದೆ. ಇದಕ್ಕೆ ಮೂಲಕ ಕಾರಣವೇ ಮಾಜಿ ಶಾಸಕರಾದ ಗೋಪಾಲ ಪೂಜಾರಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯದಲ್ಲಿ ಹಲವಾರು ವರ್ಷಗಳ ಅನುಭವ ಇರುವ ಅವರು ಒಬ್ಬ ಸಂಸದರ ಬಗ್ಗೆ ಏಕವಚನದಲ್ಲಿ ಮಾತಾನಾಡುವುವುದು ಶೋಭೆಯಲ್ಲ. ದೇವಾಡಿಗ ಸಮುದಾಯ ಭವನಕ್ಕಾಗಲಿ ಅಥವಾ ಸಮುದಾಯಕ್ಕಾಗಲಿ ಯಾವುದೇ ರೀತಿಯ ಅನ್ಯಾಯ ನಮ್ಮ ಸಂಸದರಿಂದ ಆಗಿಲ್ಲ. ಅನುದಾನ ಬಿಡುಗಡೆಯಾಗುವುದನ್ನು ಗೋಪಾಲ ಪೂಜಾರಿ ಅವರು ತಡೆಯಲಿಲ್ಲ ಎನ್ನುವುದಿದ್ದರೇ, ಅವರ ಕಾಂಗ್ರೆಸ್ ಸರ್ಕಾರ ತಡೆಯಲಿಲ್ಲ ಎಂದಾದರೇ ಅವರು ನಂಬುವ ದೇವಸ್ಥಾನಕ್ಕೆ ಪ್ರಮಾಣ ಮಾಡಲಿ, ನಾವು ಕೂಡ ಬರ್ತೇವೆ ಎಂದು ಅವರು ಬಹಿರಂಗ ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸದಾನಂದ ಉಪ್ಲಿನಕುದ್ರು, ಬೈಂದೂರು ಬಿಜೆಪಿ ಮಂಡಲದ ಕಾರ್ಯದರ್ಶಿ ಅಶೋಕ್ ದೇವಾಡಿಗ ಸೇರಿ ಮತ್ತಿತರರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!