Sunday, September 8, 2024

ಬರ ಪರಿಹಾರ : ವಿತ್ತ ಸಚಿವೆ ಸುಖಾಸುಮ್ಮನೆ ಸುಳ್ಳು ಹೇಳುತ್ತಿದ್ದಾರೆ : ಸಿಎಂ ಸಿದ್ದರಾಮಯ್ಯ

ಜನಪ್ರತಿನಿಧಿ  (ಬೆಂಗಳೂರು) : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬರ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು  ಹೇಳಿದ್ದು ಸುಖಾಸುಮ್ಮನೆ ಸುಳ್ಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಕಟುವಾಗಿ ಆರೋಪಿಸಿದ್ದಾರೆ.

ವರದಿಗಾರರೊಂದಿಗೆ ಮಾತನಾಡಿದ್ದ ನಿರ್ಮಲಾ ಅವರು, ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಇದರಿಂದಾಗಿ ಹಣ ಬಿಡುಗಡೆ ಮಾಡುವ ಕಾರ್ಯವಿಧಾನಗಳಿಗೆ ಕಾಲಾವಕಾಶ ಬೇಕಾಗಿದೆ ಎಂದು ಹೇಳಿದ್ದರು.

ವಿತ್ತ ಸಚಿವೆ ನೀಡಿರುವ ಹೇಳಿಕೆಯ ಬೆನ್ನಲ್ಲೇ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವಿವಿಧೆಡೆ ಪ್ರಚಾರ ನಡೆಸಿದ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಂತ್ರಿ ಸಿದ್ದರಾಮಯ್ಯ, ಕೇಂದ್ರದ ಆರ್ಥಿಕ ಅನ್ಯಾಯ, ಬರ ಪರಿಹಾರ ವಿಳಂಬದ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ಸುಳ್ಳು ಹೇಳಿದ್ದಾರೆ. ಈ ಮೂಲಕ ರಾಜ್ಯದ ಜನತೆಯ ಮುಂದೆ ಅವರ ಬಣ್ಣ ಬಯಲಾಗಿದ್ದು, ಮತದಾರರು ಅಂತಹ ಸುಳ್ಳರಿಗೆ ಮತ ಹಾಕಿದರೆ ನಿಮ್ಮ ಮತಕ್ಕೆ ಗೌರವ ಬರುತ್ತದೆಯೇ ಎಂದು ಸಿಎಂ ಕಟುವಾಗಿ ಪ್ರಶ್ನಿಸಿದ್ದಾರೆ.

ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಮೇಕೆದಾಟು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನುಮತಿ ನೀಡಲಿಲ್ಲ. ಮೋದಿಯವರೂ ಬೆಂಗಳೂರಿನ ಜನತೆಗೆ ಕುಡಿಯುವ ನೀರು ಕೊಡುವ ಯೋಜನೆಗೆ ಬೆಂಬಲ ಘೋಷಿಸಲಿಲ್ಲ. ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದರು, 15 ರುಪಾಯಿಯನ್ನೂ ಹಾಕಿಲ್ಲ. ಮೋದಿಯವರು ಹೇಳಿದ ಯಾವುದನ್ನೂ ಜಾರಿ ಮಾಡಿಲ್ಲ. ಹೀಗಾಗಿ ಅವರ ಮುಖ ನೋಡಿ ಮತ ಹಾಕಿದರೆ ನಿಮ್ಮ ಮತ ಗೌರವ ಕಳೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

ನುಡಿದಂತೆ ನಡೆದು ನಿಮ್ಮ ಮತಗಳಿಗೆ ಘನತೆ ತರುವ ಕೆಲಸವನ್ನು ನಾವು ಮಾಡಿದ್ದೇವೆ. ಹೀಗಾಗಿ ನಮಗೆ ಶಕ್ತಿ ತುಂಬಿ. ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಸಂಸದರಾಗಿ ನಾಡಿನ ಜನತೆಗೆ ಆದ ಅನ್ಯಾಯಗಳ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಲಿಲ್ಲ. ಶೋಭಾ ಅವರನ್ನು ಉಡುಪಿ-ಚಿಕ್ಕಮಗಳೂರಿನ ಬಿಜೆಪಿ ಕಾರ್ಯಕರ್ತರೇ ಗೋ ಬ್ಯಾಕ್ ಎಂದು ಓಡಿಸಿದ್ದಾರೆ. ಹೀಗಾಗಿ ನೀವೂ ಕೂಡ ಸೋಲಿಸಿ ಎಂದು ಹೇಳಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!