spot_img
Saturday, December 7, 2024
spot_img

ಬಿಜೆಪಿಯ ಇಬ್ಬರು “ಅಪ್ಪಂದಿರಿಗೆ” ಒಂದೇ ಬಾಣ ಹೂಡಿದ ಬಿಜೆಪಿಯ ಚಾಣಕ್ಯ

ಕರ್ನಾಟಕ ಮಟ್ಟಿಗೆ ಬಿಜೆಪಿಯ ಹೈಕಮಾಂಡ್ ನೀತಿ ಹೇಗಿದೆ ಅಂದರೆ ಇಲ್ಲಿಯ ನಾಯಕರನ್ನು ಎಷ್ಟು ಹಿಡಿಯಬೇಕು, ಎಷ್ಟು ಬಿಡಬೇಕು ಮತ್ತು ಎಲ್ಲಿ ಮಲಗಿಸಬೇಕು ಎನ್ನುವ ಕಡಿವಾಣ ಹೈಕಮಾಂಡಿನ ವರಿಷ್ಠರಾದ ಮೇೂದಿ ಮತ್ತು ಅಮಿತ್ ಶಾರವರ ಕೈಯಲ್ಲಿ ಇರುವುದಂತೂ ಸತ್ಯ. ಮೇೂದಿಯವರು ಪ್ರಧಾನಿಯಾಗಿ ತಾನಾಗಿ ಎದುರಿನಲ್ಲಿ  ಏನನ್ನು ಮಾಡುವುದಿಲ್ಲ ಅದನ್ನು ತಮ್ಮ  ಚಾಣಕ್ಯ ಶಾರ ಮೂಲಕ ಮಾಡಿ ತೇೂರಿಸುತ್ತಾರೆ.

ಅವರ ಇದುವರಿಗಿನ ಕಾರ್ಯಚರಣೆ ಸೂಕ್ಷ್ಮವಾಗಿ ಗಮನಿಸಿದಾಗ ಕರ್ನಾಟಕದಲ್ಲಿ ಅವರಿಗೆ ಯಾರೇ ಶಾಶ್ವತ ಮಿತ್ರರು ಇಲ್ಲ ಶತ್ರುಗಳು ಇಲ್ಲ. ಯಾರನ್ನು ಯಾವಾಗ ಎಲ್ಲಿ ಬಳಸಿಕೊಳ್ಳಬೇಕು ಎಲ್ಲಿ ಮಲಗಿಸಬೇಕು ಎನ್ನುವ ಸಂಪೂರ್ಣ ಲಾಭದ ಲೆಕ್ಕಾಚಾರ ಅವರಲ್ಲಿದೆ ಅನ್ನುವುದು ಅಷ್ಟೇ ಸತ್ಯ.

ಬಿಜೆಪಿ ಹೈಕಮಾಂಡಿಗೆ ಯಡಿಯೂ”ರಪ್ಪ”ನವರ ಮೇಲೆ ಸಂಪೂರ್ಣ ಪ್ರೀತಿ ವಿಶ್ವಾಸ ಇದೆ ಅಂದು ತಿಳಿಯುವುದು ಕೂಡಾ ತಪ್ಪು. ಪ್ರಸ್ತುತ ಪರಿಸ್ಥಿತಿಯಲ್ಲಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಎನ್ನುವ ಮನವರಿಕೆ ಬಹು ಹಿಂದೆ ಆಗಿದೆ. ಜಾತಿ ಆಧರಿತ ಮಾಸ್ ಲೀಡರ್ ಅನ್ನಿಸಿಕೊಂಡ ಯಡಿಯೂರಪ್ಪನವರನ್ನು ಬೇರೆಯವರನ್ನು ಮುಟ್ಟಿದಷ್ಟು ಸುಲಭವಾಗಿ ಮುಟ್ಟಲು ಸಾಧ್ಯವಿಲ್ಲ ಅನ್ನುವುದಕೇೂಸ್ಕರವಾಗಿಯೇ ಅವರ ಸುಪುತ್ರ ರಿಬ್ಬರಿಗೂ ಕೇಳಿದ ಸ್ಥಾನಮಾನ ಅವರ ಆಪ್ತರಿಗೂ ಆಡಳಿತ ವಿರೋಧಿ ಧ್ವನಿ ಇದ್ದಾಗಲೂ ಕೂಡಾ  ಗೆಲುವಿನ ಕ್ಷೇತ್ರ ದಯಾಪಾಲಿಸಿದ್ದು ಎಲ್ಲವೂ ಬಿಜೆಪಿ ವರಿಷ್ಠರು ಹೃದಯ ತುಂಬಿ ನೀಡಿದ ಪ್ರಸಾದ ಖಂಡಿತವಾಗಿಯೂ ಅಲ್ಲ. ಪರಿಸ್ಥಿತಿಯ ಅನಿವಾರ್ಯತೆ ಚಾಣಕ್ಯರನ್ನು ಹಿಡಿದು ನಿಲ್ಲಿಸಿದೆ ಅಷ್ಟೇ.

ಶಿವಮೊಗ್ಗದಲ್ಲಿ ಇನ್ನೊಬ್ಬ ಬಿಜೆಪಿ ಕಟ್ಟಾಳು ಮೂಲತ: ಬಿಜೆಪಿಯ ಉಸಿರಾಗಿರುವ ಕೆ.ಎಸ್ ಈಶ್ವ”ರಪ್ಪ” ಶಿವಮೊಗ್ಗದ ಮಟ್ಟಿಗೆ ಬಿಜೆಪಿ ಕಟ್ಟಿ ಬೆಳೆಸುವುದರಲ್ಲಿ ಹೆಚ್ಚು ಕಡಿಮೆ  ಯಡಿಯೂರಪ್ಪನವರಷ್ಟೆ ಸಮಪಾಲು ಇದೆ. ಯಡಿಯೂರಪ್ಪನವರಿಗೆ ಜಾತಿ ಬೆಂಬಲ ಹೆಚ್ಚಿರುವ ಕಾರಣ ರಾಜ್ಯ ವ್ಯಾಪಿಯಾಗಿ ನಾಯಕತ್ವ ವಿಸ್ತರಣೆಗೆ ಸಾಧ್ಯವಾಯಿತು. ಅದೇ ಈಶ್ವರಪ್ಪನವರಿಗೆ ಜಾತಿ ಬೆಂಬಲ ಕಡಿಮೆ ಇದ್ದ ಕಾರಣ ತನ್ನ ಕ್ಷೇತ್ರದಲ್ಲೂ ಯಡಿಯೂರಪ್ಪನವರನ್ನೆ ಮುಂದಿಟ್ಟು ರಾಜಕೀಯ ಮಾಡಬೇಕಾದ ಅನಿವಾರ್ಯತೆ ಅವರಿಗಿತ್ತು. ಹಿಂದುಳಿದ ಜಾತಿಗಳನ್ನು  ಕೂಡಿಸಿಕೊಂಡು ಒಂದು ಸಂಗೇೂಳಿ ರಾಯಣ್ಣ  ಬ್ರಿಗೇಡ್ ಮಾಡಲು ಮುಂದಾಗಿದ್ದರು ಆದರೆ ಅದಕ್ಕೂ ಯಡಿಯೂರಪ್ಪನವರು ತಮ್ಮ ಚಾಣಾಕ್ಷತನದಿಂದ ಕಲ್ಲು ಹಾಕಿದ್ದರು. ಅದು ಅಲ್ಲಿಗೆ ನಿಂತು ಹೇೂಯಿತು. ಈಶ್ವರಪ್ಪನವರಿಗೂ ಪ್ರಾಯವಾಗುತ್ತಾ ಬಂತು ತನಗೆ ಸಿಗಬೇಕಾದ ಮಂತ್ರಿ ಪದವಿ ಪಕ್ಷದಲ್ಲಿನ ಸ್ಥಾನಮಾನ ಎಲ್ಲವೂ ವರುಷ ಕಳೆದಂತೆ ಕಡಿಮೆಯಾಗುತ್ತಿದೆ ಅನ್ನುವ ಅರಿವು ಈಶ್ವರಪ್ಪನವರನ್ನುಕೊರೆಯಲು ಶುರು ಮಾಡಿತು. ಇನ್ನೂ ಹೀಗೆ ಕೂತರೆ ತಾನು ಮೂಲೆಗುಂಪಾಗುತ್ತೇನೆ ಎಂದು ತಿಳಿದ ಈಶ್ವರಪ್ಪನವರು ಕೊನೆಗಾದರೂ ತಮ್ಮ ಮಗನಿಗಾದರೂ ರಾಜಕೀಯದಲ್ಲಿ ದಾರಿ ತೋರಿಸಬೇಕು ಅನ್ನುವ ಕಾರಣಕ್ಕೆ  ಪುತ್ರ ಕಾಮ ಇಷ್ಟ ರಾಜಕೀಯಕ್ಕೆ ಮುಂದಾದರು. ಆದರೆ ಈ ಕನಸು ನನಸಾಗುವುದಿಲ್ಲ ಎಂದು ತಿಳಿದ ಈಶ್ವರಪ್ಪನವರು ಕೊನೆಯ ಬ್ರಹ್ಮಾಸ್ತ್ರವನ್ನು ಯಡಿಯೂರಪ್ಪನವರನ್ನೆ ಮುಖ್ಯ ಗುರಿಯಾಗಿಟ್ಟುಕೊಂಡು ಮಾತಿನ ಯುದ್ಧಕ್ಕೆ ಮುಂದಾದರು. ಎಲ್ಲಿಯವರೆಗೆ ಮುಂದಾದರೂ ಕೇಳಿದರೆ ಯಡಿಯೂರಪ್ಪ ನವರ ಕುಟುಂಬದ ಜಾತಕವನ್ನೆ ಕೈಯಲ್ಲಿ  ಹಿಡಿದು ವಾಕ್ ಸಮರಕ್ಕೆ ಮುಂದಾದರು. ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಯಡಿಯೂರಪ್ಪವರು ಮತ್ತು ಮಕ್ಕಳು ಈಶ್ವರಪ್ಪನವರಿಗೆ ಸರಿಯಾಗಿ ಪಾಠ ಕಲಿಸಬೇಕು ಅನ್ನುವ ಕಾರಣಕ್ಕಾಗಿಯೇ ಬಿಜೆಪಿ ಹೈಕಮಾಂಡಿನ ಗಮನಕ್ಕೂ ತಂದು ಈಶ್ವರಪ್ಪನವರ ಪುತ್ರ ಕಾಮೇಷ್ಟ ಕುದುರೆಯನ್ನು ಕಟ್ಟಿ ಹಾಕುವ ಕೆಲಸವನ್ನು ಚುನಾವಣಾ ಸಂದರ್ಭದಲ್ಲಿಯೇ ಮಾಡಿ ಬಿಟ್ಥರು.

ಈಗ ಈಶ್ವರಪ್ಪನವರ ಮುಂದಿರುವ ಒಂದೇ ಒಂದು ದೀಕ್ಷೆ ಅಂದರೆ ಮೇೂದಿಜಿಯವರನ್ನೆ ತನ್ನ ಹೃದಯದಲ್ಲಿ ತುಂಬಿಸಿಕೊಂಡು ಶಿವಮೊಗ್ಗದಲ್ಲಿ ಯಡಿಯೂರಪ್ಪನವರ ಪುತ್ರ ಕಾಮೇಷ್ಟ ಕುದುರೆಯನ್ನು ಅವರ ವೈರಿಗಳ ಕೈಯಿಂದಲೇ ಕಟ್ಟಿ ಹಾಕಿ ಆ ಚೆಂದವನ್ನು ಒಮ್ಮೆ ನೇೂಡಿ ಆನಂದಿಸಬೇಕು. ಮಾತ್ರವಲ್ಲ ಈ ಈಶ್ವರಪ್ಪ ಅಂದರೆ ಯಾರು ಯಡಿಯೂರಪ್ಪ ಅಂದರೆ ಯಾರು ಅನ್ನುವುದನ್ನು ದೆಹಲಿಯಲ್ಲಿ ಪವಡಿಸಿರುವ  ವರಿಷ್ಠರಿಗೆ ತೇೂರಿಸಬೇಕು ಅನ್ನುವ ಶಪಥ ಮಾಡಿದ ಹಾಗೇ ಕಾಣುತ್ತದೆ ನಮ್ಮ ಈಶ್ವರಪ್ಪನವರು ಹಿಡಿದ ಬಾಣದ ದಿಕ್ಕು ನೇೂಡಿದರೆ. ಹಾಗಂತ ತಾನು ಗೆಲುವುದಿಲ್ಲ ಅನ್ನುವ ಸತ್ಯ ಈಶ್ವರಪ್ಪನವರಿಗೆ ಗೊತ್ತಿದೆ. ಆದರೂ ಯಡಿಯೂರಪ್ಪನವರ ಮಗ ರಾಘವೇಂದ್ರರಮೂಲಕ  ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಈಶ್ವರಪ್ಪ ಗಟ್ಟಿಯಾಗಿ ಕೂತಿರುವುದಂತೂ ನಿಜ.

ಈ ಎರಡು “ಅಪ್ಪಗಳ” ಜಗಳವನ್ನು ಬಿಜೆಪಿಯ ಚಾಣಾಕ್ಷ ಅಮಿತ್ ಶಾ ಮತ್ತು ಪ್ರಧಾನಿ ಮೇೂದಿಯವರಿಗೆ ಬಿಡಿಸಲಾರದ ಜಗಳದ ಕಗ್ಗೆಂಟೇನು.. ಅಲ್ಲ. ಅಂದರೆ ಮಹಾಭಾರತ ಯುದ್ಧದ ಕಾಲದಲ್ಲಿ ಶ್ರೀಕೃಷ್ಣ ಪರಮಾತ್ಮನಿಗೆ ಕುರುಕ್ಷೇತ್ರದಲ್ಲಿನ ಯುದ್ಧ ನಿಲ್ಲಿಸುವುದೇನು ದೊಡ್ಡ ಕೆಲಸವಾಗಿರಲಿಲ್ಲ. ಆದರೆ ಶ್ರೀಕೃಷ್ಣನಿಗೆ ಈ ಯುದ್ಧ ಆಗ ಬೇಕಾದ ಅನಿವಾರ್ಯತೆ ಇತ್ತು. ಇದರಿಂದಾಗಿ ಪಾಂಡವರಿಗೂ ತಮ್ಮ ಸಾಮರ್ಥ್ಯದ ಅರಿವಿನ ಪಾಠವಾಗಬೇಕು ಕೌರವರಿಗೂ ತಮ್ಮ ತಪ್ಪಿನ ಜ್ಞಾನೇೂದಯವಾಗಬೇಕು. ಆ ಕಾರಣಕ್ಕಾಗಿಯೇ ಕುರುಕ್ಷೇತ್ರ ಯುದ್ಧ ನಡೆಯ ಬೇಕಾದ ನಿರ್ಧಾರವನ್ನು ಶ್ರೀಕೃಷ್ಣ ಹೆಣೆದು ಬಿಟ್ಟ ಅನ್ನುವುದು ಮಹಾಭಾರತ ಯುದ್ಧಕ್ಕೆ ನೀಡುವ ಮುನ್ನುಡಿ. ಅದೇ ರೀತಿಯಲ್ಲಿ ಶಿವಮೊಗ್ಗದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪನವರ ರಾಜಕೀಯ ಸ್ಥಾನಮಾನದ ಕದನ ನಡೆದಾಗಲೇ ಇಬ್ಬರಿಗೂ ತಮ್ಮ ತಪ್ಪಿನ ಜ್ಞಾನೇೂದಯವಾಗಬಹುದು ಅನ್ನುವ ಗಟ್ಟಿ ತೀರ್ಮಾನವನ್ನು ಬಿಜೆಪಿಯ ಚಾಣಕ್ಯರು ತೆಗೆದುಕೊಂಡಿದ್ದಾರೆ ಅನ್ನುವುದಂತೂ ಸ್ವಷ್ಟ.

-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ.

ರಾಜಕೀಯ ವಿಶ್ಲೇಷಕರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!