spot_img
Saturday, December 7, 2024
spot_img

ದೇಶ ಗೆಲ್ಲುವ ಸವಾಲು : ಗೇಮ್ ಅಭಿ ಬಾಕಿ ಹೈ

ನಿಷ್ಠಾವಂತ ಮತದಾರರೇ ಎಲ್ಲಾ ರಾಜಕೀಯ ಪಕ್ಷಗಳ ಹಿಂದಿನ ಎಲುಬುಗಳು !

 

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಮತ್ತೊಂದು ಸುತ್ತಿನ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದ ಹಾಗೆ ಚುನಾವಣಾ ಕಾವು ಜೋರಾಗಿದೆ. ಮಿತ್ರಪಕ್ಷಗಳಾದ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮತ್ತು ತೃಣಮೂಲ ಕಾಂಗ್ರೆಸ್ ʼಇಂಡಿಯಾʼ ಮೈತ್ರಿಯನ್ನು ತೊರೆಯುವುದರೊಂದಿಗೆ ಮತ್ತು ತೆಲುಗು ದೇಶಂ ಪಕ್ಷದ(ಟಿಡಿಪಿ) ಚಂದ್ರಬಾಬು ನಾಯ್ಡು ಮತ್ತು ಜನತಾ ದಳ (ಯುನೈಟೆಡ್) (ಜೆಡಿ-ಯು) ನಿತೀಶ್ ಕುಮಾರ್ ಅವರ ಘರ್ವಾಪ್ಸಿ ಭಾರಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಯ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನಾಯಕತ್ವದ  ಎನ್‌ಡಿಎ ಮೈತ್ರಿ ಈ ಚುನಾವಣೆಯಲ್ಲಿ ನೆಚ್ಚಿನ ಪಕ್ಷವಾಗಿ ಕಾಣಿಸಿಕೊಳ್ಳುತ್ತಿದೆ. ಏತನ್ಮಧ್ಯೆ, ಪ್ರತಿಪಕ್ಷಗಳು ಅಷ್ಟೊಂದು ಹಾಟ್‌ ಫೇವರೇಟ್‌ ಪಕ್ಷಗಳು ಎಂದು ಕಾಣಿಸುತ್ತಿಲ್ಲವಾದರೂ ಈ ಬಾರಿ ಚುನಾವಣೆ ಪ್ರತಿಪಕ್ಷಗಳ ಏಳ್ಗೆಗೆ ಕಾರಣವಾಗಬಹುದು ಎನ್ನುವ ರಾಜಕೀಯ ವಿಶ್ಲೇಷಣೆ ಈಗ ಕೇಳಿ ಬರುತ್ತಿವೆ.  ಬಿಜೆಪಿ ನೇತೃತ್ವದ ಎನ್‌ಡಿಎಗೆ ರಾಮ ಮಂದಿರ, ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಹಕ್ಕು ಆರ್ಟಿಕಲ್‌ ೩೭೦ ಪರವಾದ ಮತಗಳನ್ನು ತಂದುಕೊಡಬಹುದು ಎಂಬ ಲೆಕ್ಕಚಾರ ಸ್ವಲ್ಪ ಮಟ್ಟಿಗೆ ಇದ್ದರೇ, ಕಾಂಗ್ರೆಸ್‌ ನೇತೃತ್ವದ ʼಇಂಡಿಯಾʼ ಮೈತ್ರಿಕೂಟಕ್ಕೆ ಚುನಾವಣಾ ಬಾಂಡ್‌, ವಿವಾದಾತ್ಮಕ ಸಿಎಎ ಹಾಗೂ  ರೈತರ ಪ್ರತಿಭಟನೆ ವಿಚಾರಗಳು ಪರವಾದ ಮತಗಳನ್ನು ಒದಗಿಸಿಕೊಡಬಹುದು ಎಂಬ ವಿಶ್ಲೇಷಣೆ ಇದೆ.

ಮತ್ತೆ ಮರಳಿ ಮೂರನೆ ಸುತ್ತಿಗೆ ಎನ್‌ಡಿಎ ಗೆಲುವಿನ ವಿಶ್ವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಈ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಭರವಸೆಯನ್ನು ಹೊಂದಿದ್ದಾರೆ. ಎನ್‌ಡಿಎ 335 ರಿಂದ 398 ಸ್ಥಾನಗಳನ್ನು ಗೆಲ್ಲಬಹುದು ಎಂದು ಬೇರೆ ಬೇರೆ ರಾಷ್ಟ್ರೀಯ ಮಟ್ಟದ ಚುನಾವಣಾ ಪೂರ್ವ ಸಮೀಕ್ಷಾ ವರದಿಗಳು ಭವಿಷ್ಯ ನುಡಿದಿವೆಯಾದರೇ, ರಾಷ್ಟ್ರದ ಅತ್ಯಂತ ಹಿರಿಯ ಪಕ್ಷ ಎಂದು ಕರೆಸಿಕೊಳ್ಳುವ ಕಾಂಗ್ರೆಸ್‌ ನೇತೃತ್ವದ ʼಇಂಡಿಯಾʼ ಮೈತ್ರಿಕೂಟ ದೇಶದಾದ್ಯಂತ 93-166  ಕ್ಷೇತ್ರಗಳಲ್ಲಿ ಜಯ ಗಳಿಸಬಹುದು ಎಂದು ಹೇಳಿವೆ. ಆದರೇ, ಕಾಂಗ್ರೆಸ್‌ ಹಾಗೂ ʼಇಂಡಿಯಾʼ ಮೈತ್ರಿಕೂಟ ಅದಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವನ್ನು ಹೊಂದಿದೆ. ತಮ್ಮ ಸಮೀಕ್ಷಾ ವರದಿಯ ಆಧಾರದ ಮೇಲೆ, ಕ್ಷೇತ್ರಗಳಲ್ಲಿನ ರಾಜಕೀಯ ಸ್ಥಿತಿಗತಿಗಳ ಮೇಲೆ ಪಕ್ಷಗಳು ವಿಶ್ವಾಸವನ್ನು ವ್ಯಕ್ತಪಡಿಸುವುದು ಚುನಾವಣೆಯ ಸಂದರ್ಭದಲ್ಲಿ ತೀರಾ ಸಹಜ. ಆದರೇ, ಈ ಲೋಕಸಭಾ ಚುನಾವಣೆಯ ಮುಂದೆ ರಾಮ ಮಂದಿರ, ಇತ್ತೀಚೆಗಷ್ಟೇ ರಾಷ್ಟ್ರ ರಾಜಕಾರಣದಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್‌ ಸೇರಿ ಪ್ರತಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದ್ದ ಚುನಾವಣಾ ಬಾಂಡ್‌ ಅನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್‌ ೩೭೦ ರದ್ದು ಮಾಡಿದ್ದು ಸರಿ ಎಂದು ಕೇಂದ್ರದ ನಿಲುವಿಕೆ ಸುಪ್ರೀಂ ಕೋರ್ಟ್‌ ಸಹಮತ ವ್ಯಕ್ತಪಡಿಸಿದ್ದು, ೨೦೧೯ರ ಪೌರತ್ವ(ತಿದ್ದುಪಡಿ) ಕಾಯ್ದೆಯ ಅನುಷ್ಠಾನ, ರೈತರ ಸಮಸ್ಯಗಳು ಹಾಗೂ ಕನಿಷ್ಠ ಬೆಂಬಲ ಬೆಲೆಯ ವಿಚಾರ, ಅಮೃತ್ ಕಾಲ್‌ ವರ್ಸಸ್‌ ಅನ್ಯಾಯ್‌ ಕಾಲ್‌, ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳು, ಮೋದಿ ಕಿ ಗ್ಯಾರಂಟಿಗಳೆಲ್ಲವೂ ಈ ಬಾರಿಯ ಚುನಾವಣೆಯ ಮೇಲೆ ಪ್ರಭಾವ ಹೇಗೆ ಬೀರಲಿವೆ ಎನ್ನುವುದು ಕೂಡ ಈ ಬಾರಿಯ ಚುನಾವಣೆಯ ಮೇಲೆ ಗಣನೀಯ ವಿಚಾರಗಳಾಗಿವೆ.

  1. ಅಳೆದು ತೂಗುವ ಮತದಾರರು :

ಸೆಂಟರ್‌ ಫಾರ್‌ ದಿ ಸ್ಟಡಿ ಆಫ್‌ ಡೆವಲಪ್ಪಿಂಗ್‌ ಸೊಸೈಟಿಸ್‌ (ಸಿಎಸ್‌ಡಿಎಸ್‌) ಪ್ರಕಟಿಸಿದ ರಾಷ್ಟ್ರೀಯ ಚುನಾವಣಾ ಅಧ್ಯಯನ ವರದಿಗಳ ಪ್ರಕಾರ, ಭಾರತದಲ್ಲಿ, ಶೇ. 25 ರಿಂದ 30ರಷ್ಟು ಮತದಾರರು ಮತದಾನದ ದಿನದಂದು ಅಥವಾ ಮತದಾನಕ್ಕೆ ಕೆಲವೇ ದಿನಗಳ ಮೊದಲು ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸುತ್ತಾರೆ. ಇದರರ್ಥ ಚುನಾವಣೆಯ ಅಂತಿಮ ದಿನದವರೆಗೆ ತಾವು ಯಾರಿಗೆ ಮತ ಚಲಾಯಿಸಬೇಕು ಎಂಬ ಗೊಂದಲದಲ್ಲೇ ಇರುವ ಮತದಾರರು ಬಹಳಷ್ಟು ಮಂದಿ ಇದ್ದಾರೆ ಮತ್ತು ಅವರು ಯಾವುದೇ ಸಂದರ್ಭದಲ್ಲಿಯೂ ಚುನಾವಣೆಯ ಫಲಿತಾಂಶದ ನಿರೀಕ್ಷೆಯನ್ನೇ ಬದಲಾಯಿಸಬಲ್ಲವರಾಗಿದ್ದಾರೆ ಎನ್ನುವುದು ಇಲ್ಲಿ ಪ್ರಮುಖಾಂಶ.

ಕೇವಲ ಶೇ. 36ರಷ್ಟು ಮತದಾರರು ಆರಂಭದಿಂದ ತಾವು ಯಾವ ಪಕ್ಷಕ್ಕೆ ಬೆಂಬಲಿಸಬೇಕೆಂದು ಅಂದುಕೊಂಡಿರುತ್ತಾರೋ ಅದೇ ಪಕ್ಷಕ್ಕೆ ಮತ ಚಲಾಯಿಸುವವರಿದ್ದಾರೆ. ಇನ್ನು, ಶೇ.12ರಷ್ಟು ಮತದಾರರು ಅಭ್ಯರ್ಥಿಗಳ ಘೋಷಣೆಯ ಬಳಿಕ ತಮ್ಮ ಮತ ಚಲಾವಣೆಯ ನಿರ್ಧಾರ ಮಾಡುತ್ತಾರೆ. ಇನ್ನು, ಸುಮಾರು ಶೇ. 18 ರಷ್ಟು ಮಂದಿ ಚುನಾವಣಾ ಪ್ರಚಾರ ಹಾಗೂ ಪ್ರಣಾಳಿಕೆಯ ಆಧಾರದ ಮೇಲೆ ತಾವು ಯಾರಿಗೆ ಮತದಾನ ಮಾಡುವುದೆಂದು ನಿರ್ಧಾರ ಮಾಡುತ್ತಾರೆ.

ಆಕ್ಸಿಸ್ ಮೈ ಇಂಡಿಯಾ 2019 ಎಕ್ಸಿಟ್ ಪೋಲ್, ರಾಜಕೀಯ ಪಕ್ಷಗಳ ಬಹು ಹಂತದ ಚುನಾವಣಾ ತಯಾರಿ, ತಿಂಗಳ ಅವಧಿಯ ಚುನಾವಣಾ ಪ್ರಚಾರಗಳ ಮಹತ್ವವನ್ನು ಒತ್ತಿಹೇಳುತ್ತದೆ. ಸುಮಾರು ಶೇ. 43ರಷ್ಟು ಮಂದಿ ಪ್ರತಿಕ್ರಿಯಿಸಿದವರಲ್ಲಿ ಶೇ. 14ರಷ್ಟು ಮಂದಿ  ಮತದಾನದ ದಿನದಂದು ತಾವು ಯಾರಿಗೆ ಮತದಾನ ಮಾಡುವುದೆಂದು ನಿರ್ಧರಿಸಿದ್ದು ಎಂದು ಹಾಗೂ ಶೇ. 29ರಷ್ಟು ಮಂದಿ ಕೆಲವು ದಿನಗಳ ಹಿಂದೆ ನಡೆಯುವ ಸಮುದಾಯ ಸಭೆಗಳು, ಪ್ರಚಾರ ಸಭೆಗಳ ರಾಜಕೀಯ ವೈಬ್‌ ಅನ್ನು ಆಧರಿಸಿ ತಮ್ಮ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳುತ್ತದೆ.

ಇನ್ನು, ವರದಿಗಳ ಪ್ರಕಾರ ಒಡಿಶಾದಲ್ಲಿ ಶೇ. 68, ಮಹಾರಾಷ್ಟ್ರದಲ್ಲಿ ಶೇ. 56ರ, ಜಾರ್ಖಂಡ್ ನಲ್ಲಿ ಶೇ. 63, ಛತ್ತೀಸ್‌ಗಢದಲ್ಲಿ ಶೇ. 55, ತೆಲಂಗಾಣದಲ್ಲಿ ಶೇ. 57, ಬಿಹಾರದಲ್ಲಿ ಶೇ. 55 ಮತ್ತು ಪಶ್ಚಿಮ ಬಂಗಾಳದಲ್ಲಿ ಶೇ. 50 ರಷ್ಟು ಮಂದಿ ಚುನಾವಣೆಯಲ್ಲಿ ತಾವು ಯಾರಿಗೆ ಮತದಾನ ಮಾಡುವುದೆಂದು ತಡವಾಗಿ ನಿರ್ಧರಿಸುತ್ತಾರೆಂದು ಹೇಳಲಾಗಿದೆ. ಛತ್ತೀಸ್‌ಗಢ ಹೊರತುಪಡಿಸಿ ಉಳಿದೆಲ್ಲವೂ ತ್ರಿಕೋನ ಅಥವಾ ಬಹುಕೋನ ಸ್ಪರ್ಧೆಗಳನ್ನು ನಾವಿಲ್ಲಿ ಗಮನಿಸಬಹುದು ಈ ಕಾರಣಕ್ಕಾಗಿ ಇಲ್ಲಿ ಮತದಾರರಿಗೂ ಯಾವ ಅಭ್ಯರ್ಥಿಯನ್ನು ಆರಿಸಬೇಕು ಎನ್ನುವುದು ಗೊಂದಲವೇ ಸರಿ. ಈ ಎಲ್ಲಾ ರಾಜ್ಯಗಳಲ್ಲಿ, ಕನಿಷ್ಠ ಅರ್ಧದಷ್ಟು ಮತದಾರರು ಮತದಾನದ ದಿನವೇ ಯಾವ ಪಕ್ಷವನ್ನು ಬೆಂಬಲಿಸಬೇಕೆಂದು ನಿರ್ಧರಿಸುತ್ತಾರೆ ಎಂದು ಸಮೀಕ್ಷಾ ವರದಿಗಳು ಹೇಳುತ್ತವೆ. ಅಂತಿಮ ಹಂತದವರೆಗೂ ಮತದಾರರು ಅಭ್ಯರ್ಥಿಗಳನ್ನು, ಪಕ್ಷಗಳನ್ನು ಅಳೆದು ತೂಗುತ್ತಾರೆ.

  1. ನಾವ್ಯಾರೇ ಬಂದರೂ ಬದಲಾಗಲ್ಲ ಎನ್ನುವವರು ಕಡಿಮೆ :

ಆಕ್ಸಿಸ್ ಮೈ ಇಂಡಿಯಾ 2019 ಎಕ್ಸಿಟ್ ಪೋಲ್‌ನಲ್ಲಿ ಪ್ರತಿಕ್ರಿಯಿಸಿದವರಲ್ಲಿ ಶೇ. 31ರಷ್ಟು ಮಂದಿ ಒಂದು ಪಕ್ಷಕ್ಕೆ ಸದಾ ನಿಷ್ಠರಾಗಿದ್ದೇವೆ ಮತ್ತು ಚುನಾವಣೆಯಲ್ಲಿ ಸೋತರೂ, ಗೆದ್ದರೂ ಅವರನ್ನೇ ಬೆಂಬಲಿಸುತ್ತೇವೆ ಎಂದು ಹೇಳಿಕೊಂಡಿದ್ದರು. ಇದು ದೇಶದಲ್ಲಿ ಶೇ. 31 ಜನರು ಹಾರ್ಡ್‌ಕೋರ್, ಸೈದ್ಧಾಂತಿಕವಾಗಿ ಬದ್ಧರಾಗಿರುವ ಮತದಾರರೆಂದು ಸೂಚಿಸುತ್ತದೆ.

2009ರ ಲೋಕಸಭಾ ಚುನಾವಣೆಯಲ್ಲಿ, ಶೇ. 18.8ರಷ್ಟು ಮತಗಳನ್ನು ಪಡೆದ ಬಿಜೆಪಿ, ಶೇ. 28.6ರಷ್ಟು ಮತಗಳನ್ನು ಗಳಿಸಿದ ಕಾಂಗ್ರೆಸ್‌ ಎದುರು ಸೋಲನುಭವಿಸಿತ್ತು. 1991ರಿಂದೀಚೆಗಿನ ಚುನಾವಣೆಗಳಲ್ಲಿ ಬಿಜೆಪಿಯ ಅತ್ಯಂತ ಕಳಪೆ ಮತಪ್ರಮಾಣವಾಗಿದೆ. ಇದಕ್ಕೆ ವಿರುದ್ಧವಾಗಿ, 2019ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ ಶೇ. 37.7ರಷ್ಟು ಮತಗಳಿಸಿ ಕಾಂಗ್ರೆಸ್‌ ವಿರುದ್ಧ ಗೆದ್ದಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಶೇ.19.7ರಷ್ಟೆ ಮತಗಳನ್ನು ಗಳಿಸುವಲ್ಲಿ ಸಫಲವಾಗಿತ್ತು. ಇದು ಕಾಂಗ್ರೆಸ್ಸಿನ ಅತ್ಯಂತ ಕಳಪೆ ಮತ ಹಂಚಿಕೆಯ ಪ್ರಮಾಣ. 2009ರಲ್ಲಿ ಸೋತ ಬಿಜೆಪಿಯನ್ನು ಅದು ಸೋತ ಕಾರಣಕ್ಕಾಗಿ ಬೆಂಬಲಿಸಿದವರು ಅದರ ನಿಷ್ಠಾವಂತ ಅಥವಾ ಸೈದ್ಧಾಂತಿಕ ಬೆಂಬಲಿಗರು ಎಂದು ಭಾವಿಸಬಹುದಾದಂತೆಯೇ ಇಂದು ಕಾಂಗ್ರೆಸ್‌ಗೆ ಮತ ಹಾಕುತ್ತಿರುವವರು ಹೆಚ್ಚಾಗಿ ನಿಷ್ಠಾವಂತ ಮತದಾರರು ಎಂದು ಭಾವಿಸಬಹುದಾಗಿದೆ.

ಸುಮಾರು ಶೇ. 70ರಷ್ಟು ಮತದಾರರು ‘ಸ್ವಿಂಗ್’ ಅಂದರೆ, ಅವರ ಆದ್ಯತೆಗಳ ಆಧಾರದ ಮೇಲೆ ತಮ್ಮ ನಿಲುವನ್ನು ಬದಲಾಯಿಸುತ್ತಾರೆ. ಉಳಿದ ಶೇ. 31 ಜನರು ‘ನಿಷ್ಠಾವಂತರು’. ಅಂತಹ ನಿಷ್ಠಾವಂತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ರಾಜ್ಯಗಳೆಂದರೆ ಉತ್ತರಾಖಂಡ್ನಲ್ಲಿ  ಶೇ.60, ಗುಜರಾತ್ನಲ್ಲಿ ಶೇ.52, ರಾಜಸ್ಥಾನದಲ್ಲಿ ಶೇ.48, ಆಂಧ್ರಪ್ರದೇಶದಲ್ಲಿ ಶೇ.44, ಮಧ್ಯಪ್ರದೇಶದಲ್ಲಿ ಶೇ. 44, ಉತ್ತರ ಪ್ರದೇಶದಲ್ಲಿ ಶೇ.38, ಕೇರಳದಲ್ಲಿ ಶೇ.37 ಮತ್ತು ಹರಿಯಾಣದಲ್ಲಿ ಶೇ.36. ರಷ್ಟು ಮಂದಿ ಇದ್ದಾರೆ. ಇವುಗಳಲ್ಲಿ ಐದು ರಾಜ್ಯಗಳು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹೆಚ್ಚಾಗಿ ಸ್ಪರ್ಧೆಗಳಿಗೆ ಸಾಕ್ಷಿಯಾಗುತ್ತವೆ, ಆದರೆ ಕೇರಳ ಮತ್ತು ಆಂಧ್ರಪ್ರದೇಶ ಎರಡು ರಾಜ್ಯಗಳು ಕ್ರಮವಾಗಿ ಕಾಂಗ್ರೆಸ್ ವಿರುದ್ಧ ಎಡಪಕ್ಷಗಳ ಸ್ಪರ್ಧೆ ಮತ್ತು ಪ್ರಾದೇಶಿಕ ಪಕ್ಷಗಳ ಕದನಗಳಿಗೆ ಸಾಕ್ಷಿಯಾಗುತ್ತವೆ.

  1. ಸ್ಥಳೀಯ ಅಭ್ಯರ್ಥಿಯೂ ಒಮ್ಮೊಮ್ಮೆ ಗಣನೆಗೆ :

2019ರ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್  ಪ್ರಕಾರ, ಶೇ. 25ರಷ್ಟು ಮತದಾರರು ಸ್ಥಳೀಯ ಅಭ್ಯರ್ಥಿಯ ಆಧಾರದ ಮೇಲೆ ಅವರ ಆಯ್ಕೆಯನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದೆ.  ಶೇ. 37 ರಷ್ಟು ಮತದಾರರಿಗೆ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವುದು ಮುಖ್ಯವಾಗುತ್ತದೆ, ಶೇ. 22ರಷ್ಟು ಮಂದಿ ಪಕ್ಷದ ಮೇಲೆ, ಕೇವಲ ಶೇ. 3ರಷ್ಟು ಪ್ರಣಾಳಿಕೆಯ ಭರವಸೆಗಳ ಮೇಲೆ ಮತ್ತು ಶೇ. 13 ಇತರ ಅಂಶಗಳ ಆಧಾರದ ಮೇಲೆ ಮತದಾನ ಮಾಡಿದ್ದಾರೆ.

ಹೀಗಾಗಿ, ಅನೇಕ ಚುನಾವಣಾ ಪೂರ್ವ ಸಮೀಕ್ಷಾ ವರದಿಗಳು ಬಹುತೇಕ ಸರಿಯಾಗಿದ್ದರೂ, ಈ ಅಂಶಗಳಿಂದಾಗಿ ಲೆಕ್ಕಾಚಾರಗಳು ಬದಲಾಗಬಹುದು. ಬಹಳ ಪ್ರಮುಖವಾಗಿ ನಾವು ಗಮನಿಸಬೇಕು 2009ರ ಚುನಾವಣೆಯಲ್ಲಿ ಸಮೀಕ್ಷಾ ವರದಿಗಳು ಯುಪಿಎ ಅತ್ಯುತ್ತಮ ಅಂದಾಜಿನ ಪ್ರಕಾರ 257 ಕ್ಷೇತ್ರಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದ್ದವು. ಆದರೇ, ಯುಪಿಎ 262 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್‌ಗೆ 144 ಕ್ಷೇತ್ರಗಳಲ್ಲಿ ಗೆಲ್ಲಬಹುದೆಂಬ ಲೆಕ್ಕಚಾರವಿದ್ದಿತ್ತು, ಆದರೇ, ಕಾಂಗ್ರೆಸ್‌ ಅಂದು 206ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

2014ರ ಚುನಾವಣೆಯಲ್ಲಿ, ಎನ್‌ಡಿಎ 275 ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆಯಿತ್ತು, ಆದರೆ ಅಂತಿಮವಾಗಿ 336 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ 226 ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆಯಿತ್ತು, ಆದರೇ, 282 ಕ್ಷೇತ್ರಗಳನ್ನು ಜಯ ಕಂಡಿತ್ತು.

2019 ರ ಚುನಾವಣೆಯಲ್ಲಿ, ಎನ್‌ಡಿಎ ಮೈತ್ರಿ 285 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಹೇಳಲಾಗಿತ್ತು. ಅಂತಿಮವಾಗಿ 353 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. ಬಿಜೆಪಿಗೆ 248 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಹೇಳಲಾಗಿತ್ತು ಆದರೇ, 313 ಕ್ಷೇತ್ರಗಳನ್ನು ಪಡೆದುಕೊಂಡಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಈ ಸಂಖ್ಯೆಗಳು ಮತ್ತು ಮಾದರಿಗಳು ಪಕ್ಷಗಳ ಬೆಂಬಲಿಗರನ್ನು ಹುರಿದುಂಬಿಸಬೇಕು. ಕಳೆದ ಎರಡು ಚುನಾವಣೆಗಳಲ್ಲಿನ ಸಮೀಕ್ಷಾ ವರದಿಗಳನ್ನೂ ಮೀರಿ ಫಲಿತಾಂಶ ಬಂದಿರುವುದರಿಂದ ಈಗ ಬಂದಿರುವ ಪ್ರೀ ಪೋಲ್‌ ಸಮೀಕ್ಷೆಗಳೇ ಅಂತಿಮವಲ್ಲ ಎನ್ನುವುದು ಖಚಿತ. ಇನ್ನು, ದೇಶ ಗೆಲ್ಲುವ ಸವಾಲನ್ನು ಎಲ್ಲಾ ರಾಜಕೀಯ ಪಕ್ಷಗಳು ಎದುರಿಸುತ್ತಿವೆ.  “ಗೇಮ್ ಅಭಿ ಬಾಕಿ ಹೈ” ಎಂಬ ಹಳೆಯ ಮಾತಿನಲ್ಲಿ ಪ್ರತಿಪಕ್ಷಗಳು ಸ್ವಲ್ಪ ಸಮಾಧಾನವನ್ನು ಕಂಡುಕೊಳ್ಳಬಹುದು.

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!