Sunday, September 8, 2024

ಚುನಾವಣಾ ಬಾಂಡ್ ನಿಷೇಧ : “ಧನ ಪ್ರಭುತ್ವ ಚುನಾವಣೆಗೆ ಇತಿಶ್ರೀ ಹಾಡಿದ ಸುಪ್ರೀಂ

ಭಾರತದ ಪ್ರಜಾಪ್ರಭುತ್ವದ ಚುನಾವಣಾ ಇತಿಹಾಸದಲ್ಲೇ ದಾಖಲಿಸಬೇಕಾದ ತೀರ್ಪು ಸುಪ್ರೀಂ ಕೇೂರ್ಟು ನೀಡಿರುವುದು ಅತ್ಯಂತ ಶ್ಲಾಘನೀಯವಾದ ತೀರ್ಪು ಎನ್ನುವುದರಲ್ಲಿ ಎರಡು ಮಾತಿಲ್ಲ. ಎಲ್ಲಾ ರಾಜಕೀಯ ಪಕ್ಷಗಳನ್ನು ಒಂದು ಘಳಿಗೆ ಬದಿಗಿಟ್ಟು ಸುಪ್ರೀಂ ಕೇೂರ್ಟು ನೀಡಿದ ತೀರ್ಪಿನ ಮೇಲೆ ಪಕ್ಷ ವ್ಯಕ್ತಿ ಮೀರಿ ಪ್ರಜಾಪ್ರಭುತ್ವದ ಘನತೆ ಗೌರವ ಉಳಿಯುವಿನ ದೃಷ್ಟಿಯಿಂದ ವಿಶ್ಲೇಷಣೆ ಮಾಡ ಬೇಕಾದದ್ದು ಸಕಾಲ.

2018ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಚುನಾವಣಾ ಬಾಂಡ್ ಎನ್ನುವ ಹಣಕಾಸಿನ ವ್ಯವಹಾರದ ಒಳ ಮಜಲು ಇಷ್ಟೊಂದು ಆಘಾತಕಾರಿ ವಿಷಯ ಎನ್ನುವುದು ಇಂದಿನ ಸುಪ್ರೀಂ ತೀರ್ಪು ಬಂದ ಅನಂತರವೇ ಅದರ ಆಳದ ಕರಾಳ ಮುಖದ ಪರಿಚಯ ನಿಧಾನವಾಗಿ ಪ್ರಾರಂಭವಾಗುತ್ತಿದೆ. ಇಷ್ಟು ದಿನ ನಾವೆಲ್ಲರೂ ಯಾಕೆ ಸುಮ್ಮನಿದ್ದೇವೆ ಎನ್ನುವುದು ಅರ್ಥವಾಗಲಿಲ್ಲ. ಆಡಳಿತ ಪಕ್ಷವಾಗಲಿ, ವಿಪಕ್ಷಗಳಾಗಲಿ ಯಾಕೆ ಇದನ್ನು ವಿರೇೂಧಿಸಲಿಲ್ಲ ಅನ್ನುವುದೇ ಅರ್ಥವಾಗುತ್ತಿಲ್ಲ. ಅಂದರೆ ಹೆಚ್ಚು ಕಡಿಮೆ ಇದು ಎಲ್ಲಾ ರಾಜಕೀಯ ಪಕ್ಷಗಳಿಗೆ ವರದಾನವಾಗಿತ್ತೇನೊ ಗೊತ್ತಿಲ್ಲ. ಆದರೆ ಸುಪ್ರೀಂ ತೀರ್ಪಿನ ಅನಂತರ ಚುನಾವಣಾ ಬಾಂಡ್ ಕರಾಳ ಮುಖ ಒಂದೊಂದಾಗಿ ಜಾಹೀರುಗೊಳ್ಳಲು ಪ್ರಾರಂಭವಾಗಿದೆ. ಆದರೆ ಯಾವುದೇ ರಾಷ್ಟ್ರೀಯ ರಾಜ್ಯ  ಟಿ.ವಿ.ವಾಹಿನಿಗಳು ಕೂಡಾ ಈ ಕಡೆ ಮುಖ ಮಾಡದಿರುವುದನ್ನು ನೇೂಡಿದರೆ ಅವರು ಕೂಡ ಈ ಬಾಂಡ್ ಮೇಲೆ ಹಣ ಹೂಡಿದ್ದಾರೊ ಎನ್ನುವ ಶಂಕೆ ಮೂಡಲು ಶುರುವಾಗಿದೆ.

ಬಹು ಹಿಂದೆ ಚುನಾವಣಾ ಖರ್ಚು ವೆಚ್ಚಗಳು ಕುರಿತಾಗಿ ಚರ್ಚೆ ನಡೆಯುವಾಗ ಒಂದು ವಿಷಯ ಚರ್ಚೆಗೆ ಬಂದಿದ್ದು ನೆನಪಿದೆ. ಚುನಾವಣೆಗಳನ್ನು ನಡೆಸುವ  ಖರ್ಚು ಸರಕಾರಕ್ಕೆ ಭರಿಸುವುದು ಕಷ್ಟವಾದರೆ ಖಾಸಗಿ ಸಂಸ್ಥೆಗಳಿಗೆ ಚುನಾವಣೆ  ನಡೆಸುವ ಜವಾಬ್ದಾರಿ ನೀಡಿದರೆ ಹೇಗೆ? ಎನ್ನುವ ಪ್ರಶ್ನೆ ಬಂದಾಗ “ಅಯ್ಯೊ..ಇದು ಬೇಡ ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ ಧನಿಕರು ನಡೆಸುವ ಚುನಾವಣೆ ಆಗಬಾರದು ಎನ್ನುವ ಕಾರಣಕ್ಕಾಗಿಯೇ ಈ ವಾದವನ್ನು  ಬದಿಗೆ ಸರಿಸಲಾಯಿತು. ಚುನಾವಣೆ ಅಂದರೆ ಪ್ರಜಾಪ್ರಭುತ್ವವನ್ನು ಅಳೆಯುವ ಮೌಲ್ಯ ಮಾಪನವೆಂದೇ ತಿಳಿಯ ಬೇಕಾಗಿದೆ. ಆದರೆ ಪ್ರಜಾಪ್ರಭುತ್ವ ಚುನಾವಣಾ ವ್ಯವಸ್ಥೆಯನ್ನು  ಸಂಪೂರ್ಣವಾಗಿ ಕುಲಗೇಡಿಸಿ ಧನ ಪ್ರಭುತ್ವದ ಚುನಾವಣೆಗೆ ನಾಂದಿ ಹಾಡಿದ ಚುನಾವಣಾ  ಬಾಂಡ್ ತಂತ್ರಗಾರಿಕೆಯ ಒಳ ಮರ್ಮ ನಮಗೆ ಇಷ್ಟು ದಿನ ತಿಳಿಯದೇ ಇರುವುದು ಆಶ್ಚರ್ಯ.

ಈ ಚುನಾವಣಾ ಬಾಂಡ್‌ ಹೇಗೆಂದರೆ ಪ್ರೊಮಿಸರಿ ನೇೂಟಗಳಿದ್ದ ಹಾಗೆ. ರಾಜಕೀಯ ಪಕ್ಷಗಳಿಗೆ ಯಾರು ಬೇಕಾದರೂ ಅನಾಮಧೇಯರಾಗಿ ಹಣದ ರೂಪದಲ್ಲಿ ದೇಣಿಗೆ ನೀಡುವುದಕ್ಕೆ ಅವಕಾಶ ಮಾಡಿಕೊಡುವ ಕಾನೂನಾತ್ಮಕ ವ್ಯವಸ್ಥೆ. ಈ ಹಣ ಎಲ್ಲಿಂದ ಬಂತು ಹೇಗೆ ಬಂತು ಎಷ್ಟು ಬಂತು ಎಂದು ಕೇಳುವ ಹಕ್ಕು ನಾಗರಿಕರಿಗೆ ಇಲ್ಲ. ಇದನ್ನೇ ಪ್ರಶ್ನಿಸಿ ಚುನಾವಣಾ ಬಾಂಡ್‌ನ ಪಾವಿತ್ರ್ಯತೆಯನ್ನು ಪ್ರಶ್ನೆ ಮಾಡಿದ್ದು. ಕಪ್ಪು ಹಣ ಖದೀಮರ ರಾಜಕೀಯ ಪಕ್ಷಗಳ ನಡುವಿನ ಅಪವಿತ್ರ ಹೊಂದಾಣಿಕೆಯ ಸಾಧ್ಯತೆಗಳೆ ಸುಪ್ರೀಂ ಕೇೂರ್ಟಿನ ಕಣ್ಣು ತೆರೆಸಿದ್ದು ಅಂದರೂ ತಪ್ಪಾಗಲಾರದು.

2017ರ ಹಿಂದೆ ಈ ಎಲ್ಲಾ ನೊಂದಾಯಿತ ರಾಜಕೀಯ ಪಕ್ಷಗಳು  ತಮ್ಮ ದೇಣಿಗೆಯ ಹಣವನ್ನು ನಗದು ರೂಪದಲ್ಲಿ ಸಂಗ್ರಹಿಸುತ್ತಿದ್ದವು ಇದನ್ನು ದುರ್ಬಳಕ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನುವ ಕಾರಣಕೇೂಸ್ಕರವೇ 2018ರ ಮಾರ್ಚಿನಲ್ಲಿ ಕೇಂದ್ರ ಸರಕಾರ ತನ್ನ ಬಜೆಟ್ ನಲ್ಲಿ ಈ ರೀತಿಯ ಹೊಸ ತಂತ್ರವನ್ನು ಕಾನೂನಿನ ರೂಪದಲ್ಲಿ ಜಾರಿಗೊಳಿಸಿತು.

ಹಾಗಾದರೆ ಇಂದಿನ ಚುನಾವಣಾ ವೆಚ್ಚದ ಕಾಲದಲ್ಲಿ ಈ ರೀತಿಯಲ್ಲಿ  ತಪ್ಪೆ? ರಾಜಕೀಯ ಪಕ್ಷಗಳಿಗೆ ಹಣ ಎಲ್ಲಿಂದ ಬರ ಬೇಕು? ಜನರಿಂದ ಪಕ್ಷಗಳಿಗೆ ಹಣ ಸಂಗ್ರಹಿಸ ಬೇಕೇ?

ಮುಂತಾದ ಪ್ರಶ್ನೆಗಳು ಹುಟ್ಟಿ ಕೊಳ್ಳುವುದು ಸರಿಯೇ ಆದರೆ ಈ ರೀತಿಯಲ್ಲಿ ಕಾನೂನು ರೂಪದಲ್ಲಿ ಚುನಾವಣಾ ಬಾಂಡ್‌ ಸಂಗ್ರಹಿಸುವುದರಲ್ಲಿ ಕೆಲವೊಂದು ಆಘಾತಕಾರಿ ಅಂಶಗಳು ಅಡಗಿದೆ.ಈ ಹಣದ ಸಂಗ್ರಹಿಸುವುದರಲ್ಲಿ ಇಷ್ಟೊಂದು ಗೌಪ್ಯತೆ ಯಾಕೆ ಬೇಕು. ಸಾಮಾನ್ಯ ಜನರಿಗೆ ಈ ಹಣ ಯಾವ ವ್ಯಕ್ತಿಗಳಿಂದ ಬಂದಿದೆ ಯಾವ ಪಕ್ಷಗಳಿಗೆ ಸಂದಾಯವಾಗಿದೆ ಅನ್ನುವ ಮಾಹಿತಿ ಯಾಕೆ ನೀಡಬಾರದು ಎನ್ನುವ ಮೂಲ ಭೂತವಾದ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಆದುದರಿಂದ ಸುಪ್ರೀಂ ಕೇೂರ್ಟ್‌ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಕೊಟ್ಟ ನಿರ್ದೇಶನವೆನೆಂದರೆ ಈ ಎಲ್ಲಾ ಲೆಕ್ಕಾಚಾರವನ್ನು ಚುನಾವಣಾ ಆಯೇೂಗಕ್ಕೆ ನೀಡಬೇಕು. ಅನಂತರದಲ್ಲಿ ಕೇಂದ್ರ ಸರ್ಕಾರ ಮತ್ತು ಸ್ಟೇಟ್  ಬ್ಯಾಂಕ್ ಮೈ ಪರಚಿಕೊಳ್ಳಲು ಶುರುಮಾಡಿದ್ದು.

ಕೇಂದ್ರ ಸರ್ಕಾರ ವಾದಿಸುವ ಪ್ರಮುಖವಾದವೆಂದರೆ ಕಪ್ಪು ಹಣವನ್ನು ಹೊರಗೆ ತೆಗೆಯಲು ಇದೊಂದು ಬ್ರಹ್ಮಾಸ್ತ್ರ ಅನ್ನುವ ರೀತಿಯಲ್ಲಿ ವಾದಿಸುತ್ತಿದೆ.ಆದರೆ ಇದರಿಂದಾಗಿ ಕಪ್ಪು ಹಣದ ಧನಿಕರನ್ನು ಕಾನೂನಿನ ಅಡಿಯಲ್ಲಿ ರಕ್ಷಣೆಗೂ ಇದೊಂದು ದಾರಿ ಮಾಡಿಕೊಡುತ್ತದೆ.ಈ ರೀತಿಯಲ್ಲಿ ರಾಜಕೀಯ ಪಕ್ಷಗಳಿಗೆ ದೇಣಿಗೆನೀಡುವುದರಿಂದಾಗಿ ಅವರಿಗೆ ತೆರಿಗೆ ವಿನಾಯಿತಿಯೂ ಸಿಗುತ್ತದೆ ಮಾತ್ರವಲ್ಲ ಅಧಿಕಾರ ರೂಢ ಪಕ್ಷಗಳ ಬೆಂಬಲವೂ ತಮ್ಮಮುಂದಿನ ಅವ್ಯವಹಾರಗಳಿಗೆ ಬಳಸಿಕೊಳ್ಳುವ ನೈತಿಕ ಬಲವೂ ಸಿಕ್ಕಂತೆ ಆಗುತ್ತದೆ ; ಮಾತ್ರವಲ್ಲ  ದೇಣಿಗೆ ಸ್ವೀಕರಿಸಿದ ಪಕ್ಷಗಳಿಗೂ  ಇಂತಹ ಕಳ್ಳ ಖಾಕರನ್ನು ರಕ್ಷಣೆ ಮಾಡಬೇಕಾದದ್ದು ನೈತಿಕ ಜವಾಬ್ದಾರಿಯೂ ಹೌದು.

ಇತ್ತೀಚೆಗೆ ಸುಪ್ರೀಂ ಕೇೂರ್ಟಿನ ಬಲವಾದ ಆದೇಶದಂತೆ ಸ್ಟೇಟ್ ಬ್ಯಾಂಕ್ ನೀಡಿದ ಮಾಹಿತಿಯಂತೆ ಈ ರೀತಿಯಲ್ಲಿ ದೇಣಿಗೆ ಸಂಗ್ರಹಿಸಿದವರಲ್ಲಿ ಪ್ರಥಮ ಸ್ಥಾನದಲ್ಲಿ ನಿಲ್ಲುವ ಪಕ್ಷವೆಂದರೆ ಭಾರತೀಯ ಜನತಾ ಪಕ್ಷ ದ್ವಿತೀಯ ಸ್ಥಾನದಲ್ಲಿ ನಿಲ್ಲುವ ಪಕ್ಷ ಪಶ್ಚಿಮ ಬಂಗಾಳದ ತೃಣ ಮೂಲ ಪಕ್ಷ. ಮೂರನೇ ಸ್ಥಾನದಲ್ಲಿ ನಿಲ್ಲಿವ ಪಕ್ಷ ಕಾಂಗ್ರೆಸ್. ಈ ಲೆಕ್ಕಾಚಾರ ನೇೂಡುವಾಗಲೇ ನಮಗೆ ಸ್ವಷ್ಟವಾಗುತ್ತದೆ ತೆರಿಗೆ ವಂಚಕರು ಕಳ್ಳ ಖದೀಮ ಉದ್ಯಮಿಗಳು ತಮ್ಮ  ದೇಣಿಗೆ ನೀಡುವಾಗ ರಾಜಕೀಯ ಪಕ್ಷಗಳು ಮುಂದೆ ಅಧಿಕಾರ ಹಿಡಿಯುವ ಲೆಕ್ಕಾಚಾರದಲ್ಲಿಯೇ ತಮ್ಮ ದೇಣಿಗೆಯನ್ನು ಹಂಚಲು ಮುಂದಾಗುತ್ತಾರೆ. ಅಂದರೆ ಸದ್ಯದ ಪರಿಸ್ಥಿತಿಯಲ್ಲಿ ಇಂತಹ ದೇಣಿಗೆ ಸಂಗ್ರಹ ಬಿಜೆಪಿಗೆ ಅತೀ ದೊಡ್ಡ ಆರ್ಥಿಕ ಬಲ ನೀಡಿದೆ ಎನ್ನುವುದು ಗೊತ್ತಾಗಿದೆ. ಅಂದರೆ  ಅದು 6;986.5 ಕೇೂಟಿ ರೂಪಾಯಿ.ಟಿ ಎಂ.ಸಿ 1397 ಕೇೂಟಿ. ಅದೇ ಕಾಂಗ್ರೆಸ್ ಮೂರನೇಯ ಸ್ಥಾನದಲ್ಲಿ ಅಂದರೆ ಅವರ ಪಕ್ಷಕ್ಕೆ ಸಂದಾಯವಾಗಿದ್ದು 1,334 ಕೇೂಟಿ ರೂಪಾಯಿ. ಇದರಿಂದಲೇ ನಾವು ಲೆಕ್ಕ ಹಾಬಹುದು ಈ ಕಳ್ಳ ಖದೀಮ ತೆರಿಗೆ ವಂಚಕರು ಅಧಿಕಾರಕ್ಕೆ ಬರುವ ಪಕ್ಷಗಳನ್ನು ಹಣ ನೀಡಿ ತಮಗೆ ಬೇಕಾದ ಕಾನೂನುಗಳನ್ನು ರೂಪಿಸಿಕೊಳ್ಳಬಹುದು ಎನ್ನುವುದರ ಒಳಮರ್ಮ.

ಈ ಕಪ್ಪು ಹಣದ ಧನಿಕರಿಂದಲೇ ಹಣ ಪಡೆದು ತಮ್ಮ ಚುನಾವಣೆಯನ್ನು ಅದ್ದೂರಿಯಲ್ಲಿ ನಡೆದುವುದು ಗೆದ್ದ ಚಿಕ್ಕ ಪುಟ್ಟ ಸರಕಾರಗಳನ್ನು ಇದೇ ಸಂಗ್ರಹಿಸಿದ ಕಪ್ಪು ಹಣದಿಂದಲೇ ದಗ್ಗು ಬಡಿಯುವುದು, ಒಟ್ಟಿನಲ್ಲಿ ಇಡಿ ಪ್ರಜಾಪ್ರಭುತ್ವ  ವ್ಯವಸ್ಥೆಯನ್ನೆ ತಲೆಕೆಳಗೆ ಮಾಡುವ ಶಕ್ತಿ ಈ ಚುನಾವಣಾ ಬಾಂಡ್‌ಗೆ ಇದೆ ಎನ್ನುವುದು ನಮ್ಮ ಇಂದಿನ ರಾಜಕೀಯ ವಿದ್ಯಮಾನಗಳಿಂದ ಸ್ವಷ್ಟವಾಗಿದೆ.

ಈ ಚುನಾವಣಾ ಬಾಂಡ್ ನ ಪ್ರಭಾವದಿಂದಲೊ ಗೊತ್ತಿಲ್ಲ ಲೇೂಕಸಭಾ ಅಭ್ಯರ್ಥಿಗಳ ಚುನಾವಣಾ  ವೆಚ್ಚದ ಮಿತಿಯನ್ನು 95 ಲಕ್ಷಕ್ಕೆ ಎರಿಸಿದ್ದು. ಅಂತೂ ಬಡ ಮಧ್ಯಮ ವರ್ಗದ ಜನರಿಗೆ ಈ ಚುನಾವಣೆ ಈ ಅಧಿಕಾರ ಈ ಪ್ರಜಾಪ್ರಭುತ್ವ ಅನ್ನುವುದು ಬರೇ ತಿರುಕನ ಕನಸು ಅನ್ನುವುದರಲ್ಲಿ ಎರಡು ಮಾತಿಲ್ಲ. ಇದು ಬಂಡವಾಳ ಶಾಹಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬರೇ ಭಾವನಾತ್ಮಕ ಮತ್ತು ಹಣದ ಶಕ್ತಿಯಿಂದ ಕಟ್ಟಿ ಹಾಕಬಹುದು ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಇನ್ನೊಂದು ಇಲ್ಲ.

ಚುನಾವಣಾ ಬಾಂಡ್  ವ್ಯವಸ್ಥೆಯ ಕರಾಳ ಮುಖ ಎಷ್ಟು  ಕೆಟ್ಟದಾಗಿದೆ ಅಂದರೆ ರಾಜಕೀಯ ಪಕ್ಷ ಗಳಿಗೆ ಕಳ್ಳರು ಕದ್ದಿಮರು ಕಪ್ಪು ಹಣಕೇೂರರು;  ತೆರಿಗೆ ವಂಚಕರು ದೇಶ ವಿದೇಶಿ ಉದ್ಯಮಿಗಳು ಚುನಾವಣೆಯಲ್ಲಿ ಸ್ಪರ್ಧಿಸುವ ರಾಜಕೀಯ ಪಕ್ಷಗಳನ್ನು  ತಮ್ಮ ಗೆಲುವಿನ ಜೂಜಿನ ಕುದುರೆಗಳಾಗಿ ಬಳಸಿಕೊಳ್ಳಲು ಅನುಕೂಲವಾಗುವ ತರದಲ್ಲಿ ಕೇೂಟಿ ಕೇೂಟಿ ಹಣವನ್ನು ಬಾಂಡ್‌ ಗಳ ರೂಪದಲ್ಲಿ ರಾಜಕೀಯ ಪಕ್ಷಗಳಲ್ಲಿ ತೊಡಗಿಸುವ ವ್ಯವಸ್ಥೆ ನಿಜಕ್ಕೂ ನಮ್ಮ ನೆಲದ ಪ್ರಜಾಪ್ರಭುತ್ವ ವನ್ನು ಸಂಪೂರ್ಣವಾಗಿ ಧನಿಕರ ಪ್ರಜಾಪ್ರಭುತ್ವ ಮಾಡುವ ಮೊದಲೇ ನಮ್ಮ ಸುಪ್ರೀಂ ಕೇೂರ್ಟು ಸರಿಯಾದ ಪಾಠ ಕಲಿಸಿದೆ. ಇದಕ್ಕಾಗಿಯೇ ಹೇಳುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಸಂರಕ್ಷಕ  ನಮ್ಮ ನ್ಯಾಯಾಂಗ ಎನ್ನುವ ಮಾತು ಇಂದು ಸತ್ಯವಾಗಿ ಪರಿಣಮಿಸಿದೆ.

ದೇಶದ ಒಳಗಿನಿಂದ ಹೊರಗಿನಿಂದ ಕಪ್ಪು ಹಣವನ್ನು ತರುತ್ತವೆ ಅನ್ನುವವರು ತಮ್ಮ ಪಕ್ಷಗಳ ಖಜಾನೆಗೆ ಲೆಕ್ಕಕ್ಕಿಲ್ಲದಷ್ಟು ಪ್ರಮಾಣದ ಹಣವನ್ನು ಸಂಗ್ರಹಿಸಿ ಕೊಂಡಿದ್ದಾರೆ ಅನ್ನುವುದಂತೂ ನೂರಕ್ಕೆ  ನೂರು ಸತ್ಯ..ಇದನ್ನು ನಮ್ಮ ನ್ಯಾಯಾಂಗ ಈ ಎಲ್ಲಾ ಪಕ್ಷಗಳಿಂದ ಕಕ್ಕಿಸಲೇ ಬೇಕು.

ಸುಪ್ರೀಂ ತೀರ್ಪು ನೀಡುವಾಗ ಉಲ್ಲೇಖಿಸಿದ ಒಂದು ಪ್ರಮುಖವಾದ ಅಂಶವೆಂದರೆ ಇದು ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯ ಕ್ಕೂ ದಕ್ಕೆ ತರುತ್ತದೆ ಎನ್ನುವುದು. ಅಂದರೆ ಯಾವಾಗ ನಾವು ಯಾವುದೇ ಒಂದು ಪಕ್ಷದ ಮೇಲೇ ಹಣ ನೀಡಿ ಬಾಂಡ್‌ ಕೊಳ್ಳುತ್ತೇವೆ ಅಂದರೆ ನಾವು ಆ ಪಕ್ಷಕ್ಕೆ ಖಾಯಂ ಗಿರಾಕಿಗಳಾಗಿಯೇ ಮುಂದುವರಿಯಲೇ ಬೇಕು. ಮತ್ತು ಅವರಿಂದ ಹೆಚ್ಚಿನ ಲಾಭ ಪಡೆಯಲು ಪ್ರಯತ್ನಶೀಲರಾಗಬೇಕು. ಅಂದರೆ ಇದನ್ನು ಪ್ರಜಾಪ್ರಭುತ್ವ ಎನ್ನುವುದಕ್ಕಿಂತ ರಾಜಕೀಯ ಒಂದು ಉದ್ಯಮ ವೆಂದು ಸ್ವೀಕರಿಸಬೇಕಾದ ಅನಿವಾರ್ಯತೆ. ಒಂದು ರೀತಿಯಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದ ವ್ಯವಸ್ಥೆ ತರಹ. ಅಂತೂ ಕಳ್ಳ ಖದೀಮರಿಗೆ ತೆರಿಗೆ ವಂಚಕರಿಗೆ ರಾಜಾಶ್ರಯ ನೀಡುವ ನಮ್ಮ ಪ್ರಜಾಪ್ರಭುತ್ವದ ಗೌರವ ಘನತೆ ಸಂರಕ್ಷಣೆ  ಮಾಡಿದ ಕೀರ್ತಿ ನಮ್ಮ ನ್ಯಾಯಾಲಯಕ್ಕೆ ಸಂದಿದೆ.

ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

 ರಾಜಕೀಯ ವಿಶ್ಲೇಷಕರು

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!