Thursday, October 31, 2024

ಯಕ್ಷಗುರು, ಭಾಗವತ ವಿಶ್ವೇಶ್ವರ ಸೋಮಯಾಜಿ ಮೋರ್ಟು ಅವರಿಗೆ ‘ವಂಡ್ಸೆ ನಾರಾಯಣ ಗಾಣಿಗ ಪ್ರಶಸ್ತಿ’

ವಂಡ್ಸೆಯ ಶ್ರೀ ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನದ ವಾರ್ಷಿಕ ಪ್ರತಿಷ್ಠಾ ವರ್ಧಂತ್ಯುತ್ಸವದ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಂಡ್ಸೆ ದಿ|ನಾರಾಯಣ ಗಾಣಿಗರ ಸ್ಮರಣಾರ್ಥ ನಾರಾಯಣ ಗಾಣಿಗರ ಕುಟುಂಬದವರು ಕೊಡಮಾಡುವ ವಂಡ್ಸೆ ನಾರಾಯಣ ಗಾಣಿಗ ಪ್ರಶಸ್ತಿ-2024ಕ್ಕೆ ಬಡಗುತಿಟ್ಟಿನ ಯಕ್ಷಗಾನ ಸಾಂಪ್ರದಾಯಿಕ ಶೈಲಿಯ ಭಾಗವತ, ಯಕ್ಷಗುರು, ಮದ್ದಳೆವಾದಕರಾದ ವಿಶ್ವೇಶ್ವರ ಸೋಮಯಾಜಿ ಮೋರ್ಟು ಇವರನ್ನು ಆಯ್ಕೆ ಮಾಡಲಾಗಿದೆ.

ವೇದ ವಿದ್ವಾಂಸರಾಗಿದ್ದ ಮೋರ್ಟು ಶಿವರಾಮ ಸೋಮಯಾಜಿ ಮತ್ತು ಮೀನಾಕ್ಷಿ ದಂಪತಿಗಳ ಪುತ್ರರಾಗಿ ಬೆಳ್ಳಾಲ ಸಮೀಪದ ಮೋರ್ಟು ಎನ್ನುವ ಕುಗ್ರಾಮ ಪ್ರದೇಶದಲ್ಲಿ 1950ರಲ್ಲಿ ಜನಿಸಿದ ಇವರು ಐದನೇ ತರಗತಿಯ ಔಪಚಾರಿಕ ಶಿಕ್ಷಣಕ್ಕೆ ವಿರಾಮ ನೀಡಿದರೂ ಜೀವನ ಎನ್ನುವ ವಿಶ್ವವಿದ್ಯಾಲಯದಲ್ಲಿ ಕಲಿತಿದ್ದು ಅಪಾರ. ಯಕ್ಷಗಾನದ ಚಂಡೆ ಮದ್ದಳೆಯ ನಾದ ನಿನಾದಕ್ಕೆ ಆಕರ್ಷಿತರಾಗಿ ಯಕ್ಷಗಾನ ಕಲಿಕೆಯ ಬಗ್ಗೆ ಒಲವು ಹೊಂದಿದರು. ಬೆಳ್ಳಾಲದ ವೆಂಕಟಾಚಲ ಹೆಬ್ಬಾರರ ಬಳಿ ತಾಳಾಭ್ಯಾಸ, ಕದಳಿಯ ಸೀತಾರಾಮ ಮಧ್ಯಸ್ಥರಿಂದ ಯಕ್ಷಗಾನ ಅಭ್ಯಾಸ, ಜನ್ಸಾಲೆ ನಾಗಪ್ಪಯ್ಯ ಅವರಿಂದ ಮದ್ದಳೆಯ ನುಡಿತಗಳನ್ನು ಸಾಂಪ್ರದಾಯಿಕವಾಗಿ ಅಭ್ಯಾಸಿಸಿದ ಬಳಿಕ ಮಾರ್ವಿ ವಾದಿರಾಜ ಹೆಬ್ಬಾರರಲ್ಲಿ ಭಾಗವತಿಕೆಯನ್ನು ಅಭ್ಯಾಸ ಮಾಡಿದರು. ಕಲಿಕೆಯಲ್ಲಿ ಪರಿಪೂರ್ಣತೆಯನ್ನು ಸಾಧಿಸುವ ನಿಟ್ಟಿನಲ್ಲಿ 1976ರಲ್ಲಿ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದಲ್ಲಿ ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರ ಬಳಿ ಭಾಗವತಿಕೆ ರಂಗತಂತ್ರದ ಸೂಕ್ಷ್ಮಗಳನ್ನು ಅಭ್ಯಾಸ ಮಾಡಿದರು.

ಹೀಗೆ ಕಲಿಕೆಯ ಮೂಲಕ ಪ್ರಭುತ್ವ ಸಾಧಿಸಿದ ಬಳಿಕವೇ ವೃತ್ತಿ ಮೇಳದ ರಂಗಮಂಚವೇರಿದರು. ಅಂದಿನ ದಿನಗಳಲ್ಲಿ ಬಹುಬೇಡಿಕೆಯ ಮದ್ದಳೆ ವಾದಕರಾಗಿ, ಭಾಗವತರಾಗಿ ಮೂಡಿ ಬಂದರು. ಕಮಲಶಿಲೆ ಮೇಳದಲ್ಲಿ ಮದ್ದಳೆಗಾರರಾಗಿ, ಸಂಗೀತಗಾರರಾಗಿ, ಒತ್ತು ಭಾಗವತರಾಗಿ ಅಲ್ಲಿ 12 ವರ್ಷ ಸೇವೆ ಸಲ್ಲಿಸಿದರು. ಕಮಲಶಿಲೆ ಮೇಳದಲ್ಲಿ ಮದ್ದಳೆವಾದಕರಾಗಿದ್ದ ಸಂದರ್ಭ ಮದ್ದಳೆವಾದಕ ಸ್ಥಾನವನ್ನು ತ್ಯಾಗ ಮಾಡಿ ಭಾಗವತಿಕೆಗೆ ತಾಳ ಹಿಡಿದರು.

ಮಾರಣಕಟ್ಟೆ, ಮಂದಾರ್ತಿ, ಕೊಡವೂರು, ಪೆರ್ಡೂರು, ಶಿವರಾಜಪುರ ಹಾಗೂ ಸೌಕೂರು ಮೇಳಗಳಲ್ಲಿ ಸುಮಾರು ೨೮ ವರ್ಷಗಳ ಕಾಲ ಭಾಗವತರಾಗಿ ಸೇವೆ ಸಲ್ಲಿಸಿದರು. ಪುರಾಣ ಪ್ರಸಂಗಗಳನ್ನು ರಸವತ್ತಾಗಿ, ಸಚೇತನಗೊಳಿಸುವ ರಂಗಸೂತ್ರದಾರರಾಗಿ ರಂಗಸ್ಥಳವನ್ನು ಭ್ರಮಾಲೋಕದಂತೆ ರೂಪುಗೊಳಿಸಿದರು.

ನವರಾತ್ರಿ ದಿನಗಳಲ್ಲಿ “ಹೂವಿನಕೋಲು” ತಿರುಗಾಟದ ಮೂಲಕ ಹಿರಿಯ – ಕಿರಿಯರಲ್ಲಿ ಯಕ್ಷಗಾನದ ಆಸಕ್ತಿಯನ್ನು ಬೆಳೆಸಿ, ಕಲಿಯುವ ಮನಸ್ಸುಗಳಿಗೆ ಕಲೆಯ ಧಾರೆ ಎರೆದರು. ಹತ್ತು ಹಲವು ಸಂಘ ಸಂಸ್ಥೆಗಳಿಗೆ ಯಕ್ಷಗುರುವಾಗಿ ಗಂಧದ ಕೊರಡಿನಂತೆ ತೇಯ್ದುಕೊಂಡವರು.

ಬಡಗಿನ ಮೇರು ಭಾಗವತರಾಗಿದ್ದ ಮರವಂತೆ ನರಸಿಂಹ ದಾಸ, ಶ್ರೀನಿವಾಸ ಹಾಗೂ ಅಂಪಾರು ವೈದ್ಯರಿಗೆ ಮದ್ದಲೆಯಲ್ಲಿ ಸಾಥ್ ನೀಡಿದ ಇವರು ಸೈ ಎನಿಸಿಕೊಂಡವರು. ಇವರಲ್ಲಿ ಅದ್ಭುತವಾಗಿ ಕವಿತ್ವವೂ ಅಡಗಿದೆ. ಭಾಷೆಯ ಬಗ್ಗೆ ಹಿಡಿತ, ಯಕ್ಷ ಛಂದಸ್ಸುಗಳ ಬಗ್ಗೆ ಅನುಭವ, ಸೃಜನಶೀಲತೆ ಕಲ್ಪನಾಶಕ್ತಿ ಇವರಿಗಿದೆ.

ಶ್ರೀ ಕಮಲಶಿಲೆ ಕ್ಷೇತ್ರ ಮಹಾತ್ಮೆ ಹಾಗೂ ರಾಜಾರತ್ನ ಸೇನ ಎಂಬ ಕಲಾಕುಸುಮಗಳನ್ನು ರಚಿಸಿ ಪ್ರಯೋಗಿಸಿದವರು. ‘ಕಮಲಶಿಲಾ ಕ್ಷೇತ್ರ ಮಹಾತ್ಮೆ’ 25 ವರ್ಷಗಳ ಹಿಂದೆಯೇ ಮುದ್ರಣ ಕಂಡ ಪ್ರಸಂಗವಾಗಿದೆ. ಇವರ ಶಿಷ್ಯವೃಂದದ ಸಂದೋಹವೇ ಇದೆ. ಇವರ ಕಲಾಸೇವೆಯ ಪ್ರತಿಬಿಂಬ ಎನ್ನುವಂತೆ ತಮ್ಮ ಅಭಿಮಾನಿಗಳು “ಯಕ್ಷಬಂಧು” ಅಭಿನಂದನಾ ಗ್ರಂಥವನ್ನು ಹೊರತಂದಿದ್ದಾರೆ.

ಇವರು ಮಂದರ್ತಿ ಮೇಳದಲ್ಲಿ ಮದ್ದಳೆಗಾರರಾಗಿದ್ದ ಸಂದರ್ಭ ವಂಡ್ಸೆ ನಾರಾಯಣ ಗಾಣಿಗರು ಮುಖ್ಯ ಸ್ತ್ರೀವೇಷಧಾರಿಯಾಗಿದ್ದರು. ಇವರ ಮದ್ದಳೆಯ ನಾದಕ್ಕೆ ನಾರಾಯಣ ಗಾಣಿಗರು ಕುಣಿದಿರುವುದು ಅವಿಸ್ಮರಣೀಯ. ಇವರ ಕಲಾಸೇವೆಗೆ ಹತ್ತು ಹಲವು ಸನ್ಮಾನ, ಪ್ರಶಸ್ತಿ, ಪಾರಿತೋಷಗಳು ಅರಸಿ ಬಂದಿವೆ. ಪ್ರಾಚಾರ್ಯ ನಾರ್ಣಪ್ಪ ಉಪ್ಪೂರ ಪ್ರಶಸ್ತಿ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪ್ರಶಸ್ತಿ, ಬಣ್ಣದ ಸಕ್ಕಟ್ಟು ಪ್ರಶಸ್ತಿ, ಕಲ್ಯಾಣಪುರ ಕೆಳಾರ್ಕಳಬೆಟ್ಟು ಯಕ್ಷಗಾನ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳು ಇವರ ಮುಡಿಯನ್ನು ಅಲಂಕರಿಸಿವೆ. ಪತ್ನಿ ಸುಶೀಲ, ಪುತ್ರಿಯರಾದ ಸುಮಶ್ರೀ, ಸೌಮಶ್ರೀ ಅವರೊಂದಿಗೆ ಸಂತೃಪ್ತ ಕುಟುಂಬ ಇವರದ್ದು.

ವಂಡ್ಸೆ ನಾರಾಯಣ ಗಾಣಿಗ ಪ್ರಶಸ್ತಿ:
ವಂಡ್ಸೆ ನಾರಾಯಣ ಗಾಣಿಗರು 40 ವರ್ಷಗಳ ಕಾಲ ರಂಗಸ್ಥಳದಲ್ಲಿ ತಿಟ್ಟು ಬೇಧವಿಲ್ಲದೇ ಕಲಾವ್ಯವಸಾಯ ಮಾಡಿದ ತೆಂಕು-ಬಡಗಿನ ಸವ್ಯಸಾಚಿ. ವಂಡ್ಸೆ ನಾರಾಯಣ ಗಾಣಿಗರ ಕಲಾ ಸಾಧನೆಯ ಕಿರೀಟಕ್ಕೆ 2014ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ತನ್ನ 12ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟ ನಾರಾಯಣ ಗಾಣಿಗರು ಬಹುಬೇಗ ಪ್ರಸಿದ್ಧಿಯ ಪಥವೇರಿದವರು.

ಸ್ತ್ರೀ ಭೂಮಿಕೆಯಲ್ಲಿ ಹಲವಾರು ಪೌರಾಣಿಕ ಪ್ರಸಂಗಗಳ ಪಾತ್ರಕ್ಕೆ ಸುಭದ್ರವಾದ ತಳಹದಿ ಒದಗಿಸಿದ ಕೀರ್ತಿ ಇವರದ್ದು. ತನ್ನ ಜೀವಿತದ ಕೊನೆಯ ತನಕ ಯಕ್ಷಗಾನವೆಂದಾಗ ಚುರುಕಾಗುತ್ತಿದ್ದರು. ಮಾರಣಕಟ್ಟೆ ಮೇಳ ಗಾಣಿಗರ ಮೊದಲ ಪ್ರವೇಶ, ಹತ್ತು ವರ್ಷ ಸೇವೆ ಮತ್ತೆ ಮಂದಾರ್ತಿ, ಕಮಲಶಿಲೆ, ಕೊಲ್ಲೂರು, ಕೂಡ್ಲು, ಸಾಲಿಗ್ರಾಮ ಮೇಳಗಳಲ್ಲಿ ಮೆರೆದು ತೆಂಕಿನ ಇರಾ, ಸುರತ್ಕಲ್, ಧರ್ಮಸ್ಥಳ ಮೇಳಗಳಲ್ಲಿ ರಂಗ ವೈಭವೀಕರಿಸಿದರು. ಉತ್ತರ ಕನ್ನಡದ ಇಡಗುಂಜಿ ಮೇಳದಲ್ಲಿಯೂ ಕಲಾ ವ್ಯವಸಾಯ ಮಾಡಿದ್ದರು.

ನಾರಾಯಣ ಗಾಣಿಗರ ಹೆಸರನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ಅವರ ಹೆಸರಲ್ಲಿ ಪ್ರಶಸ್ತಿ ನೀಡುವ ಪರಿಪಾಠ ನಾರಾಯಣ ಗಾಣಿಗರ ಮಕ್ಕಳು, ಕುಟುಂಬಸ್ಥರು ಆರಂಭಿಸಿ ಮುನ್ನೆಡೆಸಿಕೊಂಡು ಬರುತ್ತಿದ್ದಾರೆ. ಅವರ ಹುಟ್ಟೂರು ವಂಡ್ಸೆಯ ಗ್ರಾಮದೇವತೆ ಶ್ರೀ ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ವಿಶೇಷ ಆಸಕ್ತಿಯಿಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸುತ್ತಿದೆ. ಈ ತನಕ ಹಿರಿಯ ಹಾಸ್ಯ ಕಲಾವಿದ ಹೊಳ್ಮಗೆ ನಾಗಪ್ಪ ಹಾಸ್ಯಗಾರ್, ಸ್ತ್ರೀ ವೇಷಧಾರಿ ಚಂದ್ರ ಶೆಟ್ಟಿ ಬಿಜೂರು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

(ನಾಗರಾಜ್ ವಂಡ್ಸೆ)

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!