Thursday, October 31, 2024

ಶಿವಪೂಜೆಯಲ್ಲಿ ಬಿಲ್ವಪತ್ರೆಯ ಮಹತ್ವ

ಭಾರತದ ಸಂಸ್ಕೃತಿಯಲ್ಲಿ ಯಾವುದೇ ಭಗವಂತನ ಪೂಜೆಯ ದಿವಸದಂದು ಆ ದೇವರಿಗೆ ಪ್ರಿಯವೆಂದು ಹೇಳಲಾಗುವ ಫಲಪುಷ್ಪ ಪತ್ರಗಳನ್ನು ಸಹ ಗೌರವಿಸುವುದು ಬಹಳ ಮೊದಲಿನಿಂದಲೂ ಬೆಳೆದು ಬಂದಿದೆ. ಬಹುಶಃ ಶಿವರಾತ್ರಿ ಯಂದು ಶಿವನ ಪೂಜೆಗೆ ಬಳಸುವ ಫಲ ಪುಷ್ಪ ಮತ್ತು ಎಲೆಗಳಲ್ಲಿ ಬಿಲ್ವಪತ್ರೆಗೆ ಎಲ್ಲಿಲ್ಲದ ಪ್ರಾಶಸ್ತ್ಯವಿದೆ. ಶಿವನ ಪಾದಗಳಿಗೆ ಈ ಬಿಲ್ವಪತ್ರೆಯನ್ನು ಅರ್ಪಿಸಿ ಶಿವನನ್ನು ಪೂಜಿಸಿದರೆ ಎಲ್ಲ ಪಾಪಗಳೂ ಕ್ಷಣದೊಳಗೆ ನಾಶವಾಗುತ್ತವೆ ಎಂಬ ನಂಬಿಕೆಯೂ ಇದೆ. ಬಿಲ್ವಪತ್ರೆಯ ಮರವಿರುವ ಸ್ಥಳವು ಕಾಶಿಗೆ ಸಮಾನ ಎನ್ನುವ ಭಾವನೆಯೂ ಇದೆ.

ಈ ಬಿಲ್ವಪತ್ರೆಗೆ ಪ್ರತಿಯೊಂದು ದಂಟಿನಲ್ಲೂ ಮೂರು ಎಲೆಗಳು ಇರುತ್ತವೆ. ಈ ಎಲೆಗಳಲ್ಲಿ ಎಡಗಡೆ ಇರುವುದು ಬ್ರಹ್ಮನೆಂದೂ ಬಲಗಡೆ ಇರುವುದು ವಿಷ್ಣುವೆಂದೂ ಹಾಗೂ ಮಧ್ಯದಲ್ಲಿ ಇರುವುದು ಈಶ್ವರನೆಂದೂ ಪುರಾಣಗಳಲ್ಲಿ ವರ್ಣಿತವಾಗಿದೆ. ಈ ಬಿಲ್ವಪತ್ರೆಯ ಮುಂಭಾಗದಲ್ಲಿ ಅಮೃತವಿರುತ್ತದೆ ಎಂದೂ ಹಿಂಭಾಗದಲ್ಲಿ ಯಕ್ಷರು ನೆಲೆಸಿರುತ್ತಾರೆ ಎಂಬ ನಂಬಿಕೆಯೂ ಶಿವಭಕ್ತರಲ್ಲಿ ಇದೆ.

 ಸ್ಕಂದ ಪುರಾಣದಲ್ಲಿ ಬಿಲ್ವಪತ್ರೆಯ ಬಗ್ಗೆ ಕೆಲವು ಮಾಹಿತಿಗಳು ದೊರಕುತ್ತವೆ. ಬಿಲ್ವಪತ್ರೆಯ ಮರವು ಪಾರ್ವತಿಯ ಬೆವರ ಹನಿಗಳಿಂದ ಹುಟ್ಟಿಕೊಂಡಿದ್ದಂತೆ. ಅಗಜೆಯ ಬೆವರ ಹನಿಗಳು ಮಂದಾರ ಪರ್ವತದಲ್ಲಿ ಬಿದ್ದಾಗ ಹುಟ್ಟಿದ ಈ ಬಿಲ್ವಪತ್ರೆಯ ಮರದ ಬೇರಿನಲ್ಲಿ ಗಿರಿಜೆಯು ನೆಲೆಗೊಂಡಿದ್ದಾಳಂತೆ. ಬಿಲ್ವಪತ್ರೆಯ ಮರದ ಕಾಂಡದಲ್ಲಿ ಮಹೇಶ್ವರಿಯಾಗಿಯೂ ಕೊಂಬೆಯಲ್ಲಿ ದಾಕ್ಷಾಯಿಣಿಯಾಗಿಯೂ ಎಲೆಗಳಲ್ಲಿ ಪಾರ್ವತಿಯಾಗಿಯೂ ಹಣ್ಣಿನಲ್ಲಿ ಕಾತ್ಯಾಯಿನಿಯಾಗಿಯೂ ಹೂವಿನಲ್ಲಿ ಗೌರಿಯಾಗಿಯೂ ಈಶ್ವರಿ ನೆಲೆಸಿರುವುದರಿಂದ ಚಿದಂಬರನಿಗೆ ಬಿಲ್ವಪತ್ರೆಯೂ ಬಹಳ ಮೆಚ್ಚುಗೆಯಂತೆ.

 "ತ್ರಿದಳ ತ್ರಿಗುಣಾಕಾರಂ ತ್ರಿನೇತ್ರಂ ತ್ರಿಯಾಯುಧಂ ತ್ರಿಜನ್ಮ ಪಾಪ ಸಂಹಾರ ಏಕ ಬಿಲ್ವಂ ಶಿವಾರ್ಪಣಂ" ಎನ್ನುವ ಶಿವನ ಸ್ತೋತ್ರವಿದೆ. ಎಂದರೆ_ ಮೂರು ದಳ ಮೂರು ಆಕಾರ ಮೂರು ಕಣ್ಣು ಹಾಗೂ ಮೂರು ಶಸ್ತ್ರವನ್ನು ಹೊಂದಿರುವ ಒಂದು ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿದರೆ ಮೂರು ಜನ್ಮಗಳ ಪಾಪವು ಪರಿಹಾರವಾಗುತ್ತದೆ. ಬಿಲ್ವಪತ್ರೆಯ ಎಲೆಗಳು ಮೂರರ ಗಣದಲ್ಲಿ ಇದ್ದು ವಿಶ್ವದ ಸೃಷ್ಟಿ, ಸ್ಥಿತಿ,ಲಯ್ ಸಂಕೇತವೆಂದು ಆಸ್ಥಿಕರು ಭಾವಿಸುತ್ತಾರೆ.


  ಬಿಲ್ವಪತ್ರೆಯನ್ನು ಭಾರತೀಯ ಸಂಸ್ಕೃತಿಯಲ್ಲಿಯೂ ಬಹಳ ಶ್ರೇಷ್ಠ ಹಾಗೂ ಪರಮ ಪವಿತ್ರ ಎಂದು ಭಾವಿಸಲಾಗಿದೆ. ಹಲವಾರು ಧರ್ಮ ಗ್ರಂಥಗಳಲ್ಲಿಯೂ ಬಿಲ್ವಪತ್ರೆಯನ್ನು ಬಹಳ ಮಹತ್ವದ ಎಲೆ ಎಂದು ಭಾವಿಸಲಾಗಿದೆ. ಒಂದು ಮಂಡಲ ಎಂದರೆ 48 ದಿವಸ ಬಿಲ್ವಪತ್ರೆಯ ಮರವನ್ನು ಪೂಜಿಸಿದರೆ ಮಕ್ಕಳಾಗದವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ.ಈ ಬಿಲ್ವಪತ್ರೆಯ ಮರಕ್ಕೆ ಶಿವದ್ರುಮ,ಶ್ರೀವೃಕ್ಷ ಎನ್ನುವ ಹೆಸರುಗಳೂ ಇವೆ. ಶ್ರೀ ಮಹಾ ವಿಷ್ಣು ಅಲಂಕಾರ ಹಾಗೂ ತುಳಸಿಯ ಪ್ರಿಯನಾದಲ್ಲಿ ಈಶ್ವರನು ಜಲಪ್ರಿಯ ಹಾಗೂ ಬಿಲ್ವಪ್ರಿಯ. ಶ್ರೀ ಮಹಾಲಕ್ಷ್ಮಿಯ ಬಲದ ಕೈ ಕಮಲದಿಂದ ಬಿಲ್ವಪತ್ರೆಯ ಮರವು ಹುಟ್ಟಿತು ಎನ್ನುವ ನಂಬಿಕೆಯು ಭಕ್ತರಲ್ಲಿದೆ.ಹೋಮ ಹವನಗಳಲ್ಲಿ ಬಿಲ್ವಪತ್ರೆಯ ಕಡ್ಡಿಗಳನ್ನು ಉಪಯೋಗಿಸಿದರೆ ಶುಭವಾಗುತ್ತದೆ ಎನ್ನುವುದು ಒಂದು ನಂಬಿಕೆಯಾಗಿದೆ. ಬಿಲ್ವ ಪತ್ರದ ಕಡ್ಡಿಗಳ ಹೊಗೆಯಿಂದ ಸೊಳ್ಳೆ, ಜಿರಳೆಗಳು ನಾಶವಾಗುತ್ತವೆ.ಬಿಲ್ವಪತ್ರೆಯ ಮರವನ್ನು ನೆಟ್ಟವನಿಗೆ ಮರಣಾನಂತರ ಮುಕ್ತಿಯು ಸಿಕ್ಕಿ ಆತನಿಗೆ ಕೈಲಾಸದಲ್ಲಿ ಸ್ಥಾನವು  ದೊರೆಯುತ್ತದೆ ಎನ್ನಲಾಗುತ್ತದೆ.ಬಹುಶಃ ನಮ್ಮ ಪೂರ್ವಜರು ಪರಿಸರದ ರಕ್ಷಣೆಯನ್ನು ಮಾಡುವ ಉದ್ದೇಶದಿಂದ ಜನರಲ್ಲಿ ಧಾರ್ಮಿಕ ನಂಬಿಕೆಗಳನ್ನು ಬಲಪಡಿಸಿ ಬಿಲ್ವಪತ್ರೆಯ ಮರಗಳನ್ನು ನಡೆಸಲು ಚೋದನೆಯನ್ನು ನೀಡುತ್ತಿರಬಹುದು.

 ಬಿಲ್ವಪತ್ರೆಯು ಆರೋಗ್ಯವನ್ನು ವರ್ಧಿಸುವ, ಹಲವಾರು ವ್ಯಾಧಿಗಳನ್ನು ಬುಡ ಸಮೇತ ಕಿತ್ತೆಸೆಯುವ ಶಕ್ತಿಯನ್ನು ಹೊಂದಿದೆ. ಬಿಲ್ವಪತ್ರೆಯನ್ನು ನಿಯಮಿತವಾಗಿ ಸೇವಿಸಿದರೆ ಮಧುಮೇಹ ರೋಗವು ಹತೋಟಿಗೆ ಬರುತ್ತದೆ. ಇದರ ಹಣ್ಣಿನ ಸೇವನೆಯಿಂದ ಅಜೀರ್ಣ, ಅತಿಸಾರ, ರಕ್ತದೊತ್ತಡದ ಸಮಸ್ಯೆಗಳು ಮುಂತಾದ ತೊಂದರೆಗಳು ಕಡಿಮೆಯಾಗುತ್ತವೆ. ಆಯುರ್ವೇದದ ಚಿಕಿತ್ಸೆಯಲ್ಲಿ ಈ ಮರದ ಬಹುತೇಕ ಎಲ್ಲ ಭಾಗವನ್ನು ಔಷಧಿಯಾಗಿ ಬಳಸುತ್ತಾರೆ. ಬಿಲ್ವಪತ್ರೆ ವಿಷವನ್ನು ಅಳಿಸುವ ಅಂಶವನ್ನು ಹೊಂದಿದೆ. ಭಕ್ತಾದಿಗಳ ನಂಬಿಕೆಯಂತೆ ಈ ಹಿಂದೆ ದೇವ ದಾನವರು ಸೇರಿ ಸಮುದ್ರ ಮಂಥನವನ್ನು ಮಾಡುವಾಗ ಈಶ್ವರನ್ನು ವಿಷವನ್ನು ಸೇವಿಸಿದನಂತೆ. ಆ ವಿಷದ ಪ್ರಭಾವದಿಂದ ಆತನ ಗಂಟಲು ಉರಿಯುತೊಡಗಿತಂತೆ. ಶಿವನು ಬಿಲ್ವಪತ್ರದ ಎಲೆಗಳನ್ನು ತಿಂದಾಗ ಆ ವಿಷದ ನಂಜು, ಉರಿಯುವಿಕೆಯು ಅಳಿದು ಹೋಯಿತಂತೆ.

ಈ ಬಿಲ್ವಪತ್ರೆಯ ಫಲವನ್ನು ಪೂಜಿಸಿ ಮನೆಯೊಳಗೆ ಇರಿಸಿದರೆ ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತದೆ. ವ್ಯಾಪಾರ ವ್ಯವಹಾರಗಳು ಅಭಿವೃದ್ಧಿಗೊಳ್ಳುತ್ತವೆ. ಭೂತ ಬಾಧೆಗಳಿಂದಲೂ ಮುಕ್ತಿಯು ದೊರೆಯುತ್ತದೆ ಎನ್ನುವ ನಂಬಿಕೆಯೂ ಇದೆ. ಈಶ್ವರನಿಗೆ ಬಿಲ್ವ ದಂಡಿನ್ ಎಂಬ ಹೆಸರೂ ಇದೆ.ಪರಶಿವನು ಬಿಲ್ವ ಮರದ ದಂಡನ್ನು ಕೈಯಲ್ಲಿ ಹಿಡಿದಿರುವನು ಎನ್ನುವುದು ಇದರ ಅರ್ಥವಾಗಿದೆ. ಈಶ್ವರನು ಬಿಲ್ವಪತ್ರೆಯ ಮರದ ನೆರಳಿನಲ್ಲಿ ವಾಸವಾಗಿರುತ್ತಾನೆ. ಅಲ್ಲಿ ಯಾವುದೇ ಭೂತ ಪ್ರೇತಗಳ ಮಾತುಗಳು ಇರುವುದಿಲ್ಲವೆನ್ನುತ್ತಾರೆ.

  ಭಾರತೀಯ ಹಬ್ಬಗಳಲ್ಲಿ ಶಿವರಾತ್ರಿ ಸಹ ಒಂದು ಪ್ರಮುಖ ಹಬ್ಬವಾಗಿದ್ದು ಹಗಲು ಉಪವಾಸ ವಿದ್ದು ರಾತ್ರಿ ಇಡೀ ಶಿವನನ್ನು ಸ್ತುತಿಸುತ್ತ ಜಾಗರಣೆಯನ್ನು ಮಾಡಿದರೆ ಎಲ್ಲ ಭವ ಬಂಧನಗಳು ಮುಕ್ತಿಗೊಳ್ಳುತ್ತವೆ ಎಂದು ಹಿಂದಿನಿಂದಲೂ ಬಂದ ನಂಬಿಕೆಯಾಗಿದ್ದು ಈ ದಿವಸದಲ್ಲಿ ಶಿವನ ಆರಾಧನೆಗೆ ಬಿಲ್ವಪತ್ರೆಯನ್ನು ಬಳಸಿದಲ್ಲಿ ಹೆಚ್ಚಿನ ಫಲವು ದೊರೆಯುತ್ತದೆಯಂತೆ. ಹಾಗಾಗಿ ಎಲ್ಲರೂ ಮನೆಯ ಅಂಗಳದ ಮೂಲೆಯಲ್ಲಿ ಈ ಮರದ ಸಸಿ ಒಂದನ್ನು ನೆಟ್ಟರೆ ಇದು ಗಾಳಿಯನ್ನು ಶುದ್ಧಗೊಳಿಸುವುದಲ್ಲದೆ ಔಷಧಿಯಾಗಿಯೂ ಬಳಸಲು ಸಾಧ್ಯವಾಗುತ್ತದೆ.

 ಆಸ್ತಿಕರಿಗೆ ಮಾನಸಿಕ ಸ್ಥೈರ್ಯವನ್ನು ಕೊಡುವುದಲ್ಲದೆ ಶಿವನ ಪೂಜೆಗೂ ಇದು ಲಭ್ಯವಾಗುತ್ತದೆ.
  • ರಶ್ಮಿ ಉಡುಪ ಮೊಳಹಳ್ಳಿ
    ಡಾ ಬಿ ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!