spot_img
Saturday, December 7, 2024
spot_img

ಹೆಣ್ಣಲ್ಲವೇ ತಾಯಿ ಈ ಭರತ ಭೂಮಿ ನಮ್ಮನ್ನು ಹೊತ್ತನಾಡು?

 ಭಾರತೀಯ ನಾರಿ ಅನೇಕ ರೂಪದಲ್ಲಿ ಸಮಾಜದಲ್ಲಿ ತನ್ನ ಪ್ರಭಾವವನ್ನು ಬೀರಿದ್ದಾಳೆ. ಪತ್ನಿ, ಪುತ್ರಿ , ಮಾತೆಯಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ  ಪ್ರಭಾವವನ್ನು ಬೀರಿದ್ದಾಳೆ. ಮಹಿಳೆಯ ಪ್ರಭಾವವಿಲ್ಲದ ಕ್ಷೇತ್ರಗಳಿಲ್ಲಾ ರಾಜಕೀಯ, ಧಾರ್ಮಿಕ,ಸಂಸಾರವೇ ಇರಲಿ ಅಲ್ಲಿ ಹೆಣ್ಣಿಹಳು . 

                  ಮಗುವಾಗಿ ಹುಟ್ಟಿ ಬಂದ ಎಲ್ಲಾ ಮಾನವನಿಗೆ ಪ್ರಥಮ ಆಶ್ರಯ ತಾಯಿಯೇ, ಮೊದಲ ಗುರು, ಎಲ್ಲರ ಅತ್ಯಂತ ಪ್ರೀತಿಯ ಮಾತೆ, ಮಮತೆಯ ಮಾತೆ ಎಂದೆಲ್ಲಾ ವರ್ಣಿಸುತ್ತೇವೆ.  ನಾನು ಮಹಿಳೆಯೆಂದು ಹೆಮ್ಮೆಯಿಂದ ಹೇಳುತ್ತೇನೆ. ಏಕೆಂದರೆ ಮಹಿಳೆ ಎನ್ನುವ ಬಿರುದಿಗಿಂತ ಬೇರೆ ಬಿರುದು ಬೇಕಿಲ್ಲ. ಜಿ.ಎಸ್. ಶಿವರುದ್ರಪ್ಪನವರು ತಮ್ಮ ಕವಿತೆಯಲ್ಲಿ “ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ ಬೆಳಕನಿಟ್ಟು ತೂಗಿದಾಕೆ, ಮನೆ ಮನೆಯಲಿ ದೀಪ ಮುಡಿಸಿ ಹೊತ್ತು ಹೊತ್ತಿಗೆ ಅನ್ನ ಉಣಿಸಿ ತಂದೆ – ಮಗುವ ತಬ್ಬಿದಾಕೆ ಸ್ತ್ರೀ ಎಂದರೆ ಅಷ್ಟೇ ಸಾಕೇ” ಎಂದು ವರ್ಣಿಸಿದ್ದಾರೆ. 

                  ಯಾರು ಕೂಡ ಯಾಕಾದರೂ ಹೆಣ್ಣಾಗಿ ಹುಟ್ಟಿದ್ದೇನೆ ಎಂದು ದೂಷಿಸಬೇಡಿ, ಏಕೆಂದರೆ ಹೆಣ್ಣಿನ ಬಗ್ಗೆ ನಮ್ಮ ಹಿರಿಯರು “ಕಾರ್ಯೇಷುದಾಸಿ ಸಲಹೇಷು ಮಂತ್ರಿ ಭೋಜೇಪು ಮಾತ ರೂಪೇಚ ಲಕ್ಷ್ಮಿ ಶಯನೇಷ ರಂಭಾ ಕ್ಷಮಾಯೇಷು ಧರಿತ್ರಿ”ಎಂದರೆ ಕೆಲಸದಲ್ಲಿ ಸೇವಕನಂತೆ, ಸಲಹೆಯಲ್ಲಿ ಮಂತ್ರಿಯಂತೆ, ಆಹಾರ ನೀಡುವುದರಲ್ಲಿ ತಾಯಿಯಂತೆ, ಗುಣಗಳಲ್ಲಿ ಲಕ್ಷ್ಮಿಯಂತೆಯೇ ಪತಿಗೆ ಒಳ್ಳೆಯ ಪತ್ನಿಯಂತೆ ತಾಳ್ಮೆಯಲ್ಲಿ ಭೂಮಿ ದೇವಿಯಂತೆ ಈ ಉದಾತ್ತ ಷಟ್ ಗುಣಗಳನ್ನು ಹೊಂದಿರುವವಳು ಸ್ತ್ರೀ.. 

                   ಮನು ತನ್ನ ಮನಸ್ಮ್ರತಿಯಲ್ಲಿ “ಯತ್ರನಾರ್ಯಸ್ತು ಪೂಜ್ಯಂತೇ ತತ್ರ ರಮಂತೇ ದೇವತಾ‌:” ಅಂದರೆ ಸ್ತ್ರೀಯರನ್ನು ಪೂಜಿಸುವ ಸ್ಥಳದಲ್ಲಿ ದೇವತೆಗಳು ನೆಲೆಸಿದ್ದಾರೆ ಎಂದರ್ಥ.

ಇನ್ನು ನಮ್ಮ ಹಿಂದೂ ಪರಂಪರೆಯಲ್ಲೂ ಸ್ತ್ರೀಯ ಸ್ಥಾನಮಾನ ಮಹತ್ವದ್ದು, ಶಕ್ತಿಗೆ ಅದಿ ದೇವತೆ ಪಾರ್ವತಿ, ಧನಕ್ಕೆ ಅದಿ ದೇವತೆ ಲಕ್ಷ್ಮಿ, ವಿದ್ಯೆಗೆ ಅಧಿದೇವತೆ ಸರಸ್ವತಿ ಇಷ್ಟೇ ಅಲ್ಲ ನಮ್ಮ ದೇಶದಲ್ಲಿ ಹುಟ್ಟಿ ಹರಿಯುವ ನದಿಗಳು ಹೆಣ್ಣಿನ ಹೆಸರಿಂದಲೇ ಕರೆಯಲ್ಪಟ್ಟಿದೆ ಹೆಣ್ಣೆಂದು ಪೂಜಿಸಲಾಗುತ್ತದೆ ಗಂಗಾ, ತುಂಗಾ, ಭದ್ರಾ, ಕಾವೇರಿ, ಶರವತಿ, ಸೌಪರ್ಣಿಕಾ, ಗೋದಾವರಿ ಎಂದೆಲ್ಲಾ ಪೂಜಿಸುತ್ತೇವೆ.

                  ಇಂತಿಪ್ಪ ತಾಯಿಯ ಬಗ್ಗೆ ನನ್ನ ಮನದಾಳದ ಒಂದೆರಡು ಮಾತುಗಳನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ.

ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧು ಇಲ್ಲ ಹಾಗಾಗಿ ‘ಮಾತೃದೇವೋಭವ’ ಎಂಬ ಮಾತು ‘ಪಿತೃದೇವೋಭವ’ ಎಂಬುವ ಮಾತಿಗಿಂತ ಪ್ರಥಮ ಪ್ರಾಶಸ್ತ್ಯದಲ್ಲಿದೆ. “ಜನನಿ ಜನ್ಮ ಭೂಮಿಷ್ಯ ಸ್ವರ್ಗಾದಪಿ ಗರಿಯಸೇ ”. ಅಂದರೆ ಜನನಿಯು ಜನ್ಮ ಭೂಮಿಯು ಸ್ವರ್ಗಕ್ಕಿಂತಲೂ ಮಿಗಿಲು, ಯಾವ ಋಣ ತೀರಿಸಿದರು ತಾಯಿಯ ಋಣ ತೀರಿಸಲು ಅಸಾಧ್ಯ, ಸ್ವರ್ಗವನ್ನು ತ್ಯಜಿಸಿ ಆದರೂ ತಾಯಿಯ ಸೇವೆ ಮಾಡಬೇಕು ಎಂದಿದ್ದಾರೆ.

               ನವಮಾಸ ತನ್ನ ಗರ್ಭದೊಳಗಿಟ್ಟು ಆರೈಕೆ ಮಾಡಿಹಳು. ಸಹಿಸಲಾಗದ ನೋವನ್ನು ಸಹಿಸಿ ಹೆತ್ತಿಹಳು. ಅತ್ತಾಗ ಅತ್ತು ನಕ್ಕಾಗ ನಕ್ಕು ಕಂದನ ವದನ ನೋಡುತ್ತಾ ಮರೆತಿಹಳು ಜಗವ. ಅಳೆಯಲಾಗದ ಮಮತೆಯನ್ನು ದಾರೆ ಎರದಿಹಳು, ನಮಗೆ ಮೈ ಬೆಚ್ಚಗಾದರೆ ಸಾಕು ಬೆಚ್ಚಿ ಬಿದ್ದು ನಿದ್ರೆ ತೊರೆದು ನೂರು ಬಾರಿ ತಲೆ ಸವರುವಳು,ದೇವರಗುಡಿಯಲ್ಲಿ ಕರಜೋಡಿಸಿ ಕರುಳಿನ ಕುಡಿಗಾಗಿ ಬೇಡಿಹಳು ಶ್ರೇಯಸ್ಸನ್ನು ಆರೋಗ್ಯವನ್ನು. ತೊದಲು ನುಡಿ ಹಾಡು ಕುಣಿತವನ್ನು ನೋಡಿ ಒಳಒಳಗೆ ಹೆಮ್ಮೆಪಡುತ್ತಾ ನಸುನಗುತ್ತಾದೃಷ್ಟಿ ತೆಗೆಯುತಿಹಳು.  

                 ತಪ್ಪು ಮಾಡಿದಾಗ ಗದರಿ ಮೌನ ತಾಳುವಳು ಸ್ವಲ್ಪ ಸಮಯದಲ್ಲಿ ಮಗುವ ಎದೆಗವಚಿ ಕೊಳ್ಳುವಳು ತನಗೆ ಬೇಕೆನಿಸಿದರು ತನ್ನ ಮಗುವಿಗಿರಲಿ ಎಂದು ಎತ್ತಿಟ್ಟಿಹಳು ತನ್ನ ತುತ್ತಾ.. ಎಷ್ಟೇ ಕೆಲಸವಿರಲಿ ತನ್ನ ಕುಡಿ ಸಪ್ಪೆ ಮೋರೆಯ ಹಾಕಿದರೆ ದಿನವೆಲ್ಲಾ ಕೊರಗುವಳುತಾಯಿ, ತಪ್ಪುಗಳನ್ನೆಲ್ಲ ಕ್ಷಮೆ ನೀಡಿ ಸನ್ಮಾರ್ಗ ತೋರುವಳು ತಾಯಿ ಗುರುವಾದಳು. ಮಕ್ಕಳ ಉನ್ನತಿಗಾಗಿ ತನ್ನ ಕನಸುಗಳನ್ನು ತ್ಯಾಗ ಮಾಡುವಳು ತಾಯಿ. ತಾಯಿಯ ಸೇವೆಗೆ ಸರಿಸಾಟಿ ಇಲ್ಲ ತ್ಯಾಗಕ್ಕೂ ಮಿತಿ ಇಲ್ಲ.

              ಎಲ್ಲರೂ ಹೆಣ್ಣನ್ನು ಗೌರವಿಸೋಣ ಪ್ರೀತಿಸೋಣ. ಛತ್ರಪತಿ ಶಿವಾಜಿಯ ತಾಯಿ ಜೀಜಾಬಾಯಿಯಂತೆ ಉತ್ತಮ ತಾಯಿಯಾಗೋಣ, ಮದರ್ ತೆರೇಸಾರಂತೆ ಮಕ್ಕಳನ್ನು ಬೆಳೆಸೋಣ ಕಲ್ಪನಾ ಚಾವ್ಲಾಳಂತೆ ಗಗನದೆತ್ತರಕ್ಕೆ ಹಾರೋಣ. ಪಿ.ವಿ ಸಿಂಧು ,ಬಚೇಂದ್ರಿ ಪಾಲ್ ,ಕಿರಣ್ ಬೇಡಿಯರಂತೆ ಸಾಹಸಿಗಳಾಗೋಣ ಎನ್ನುತ್ತಾ ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು .

 – ನೀತಾಶ್ರೀ ಪ್ರಸಾದ್ ಶೆಟ್ಟಿ ಸುಣ್ಣಾರಿ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!