Wednesday, September 11, 2024

ಪುರಿ ಜಗನ್ನಾಥ ದೇವಸ್ಥಾನಕ್ಕೆ ಅನಧಿಕೃತ ಪ್ರವೇಶಿಸಿದ 9 ಮಂದಿ ಬಾಂಗ್ಲಾ ಪ್ರಜೆಗಳು ಪೊಲೀಸರ ವಶಕ್ಕೆ !

ಜನಪ್ರತಿನಿಧಿ (ಭುವನೇಶ್ವರ) : ಪುರಿ ಜಗನ್ನಾಥ ದೇವಸ್ಥಾನಕ್ಕೆ ಉನ್ನತ ಮಟ್ಟದ ಭದ್ರತೆಯ ನಡುವೆಯೂ 9 ಮಂದಿ ಬಾಂಗ್ಲಾ ಪ್ರಜೆಗಳು ಅನಧಿಕೃತವಾಗಿ ಪ್ರವೇಶಿಸಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಒಡಿಶಾ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು  ಬಂದಿದೆ.

ಪುರಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಶೀಲ್ ಮಿಶ್ರಾ  ಈ ಬಗ್ಗೆ ಮಾಹಿತಿ ನೀಡಿದ್ದು, 12ನೇ ಶತಮಾನದ ಈ ಪವಿತ್ರ ದೇಗುಲಕ್ಕೆ ನಿಯಮಗಳನ್ನು ಉಲ್ಲಂಘಿಸಿ ಹಿಂದೂಗಳಲ್ಲದ ಹಲವು ಬಾಂಗ್ಲಾ ಪ್ರಜೆಗಳು ಪ್ರವೇಶಿಸಿರುವುದನ್ನು ಕಂಡು ಕೆಲವು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಸಿಂಗ್‌ದ್ವಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ಆದಿತ್ಯವಾರ ಸಂಜೆ ಸ್ಥಳಕ್ಕಾಗಮಿಸಿದ ಪೊಲೀಸರು ವಿಚಾರಣೆಗಾಗಿ ಬಾಂಗ್ಲಾ ಪ್ರಜೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

‘ದೇವಾಲಯದ ನಿಯಮಗಳ ಪ್ರಕಾರ, ದೇಗುಲವನ್ನು ಪ್ರವೇಶಿಸಲು ಹಿಂದೂಗಳಿಗೆ ಮಾತ್ರ ಅವಕಾಶವಿದೆ. ಅವರು ಹಿಂದೂಗಳು ಅಲ್ಲ ಎಂದು ಕಂಡುಬಂದರೆ, ಕಾನೂನಿನ ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನಾವು ಅವರ ಪಾಸ್‌ಪೋರ್ಟ್‌ಗಳನ್ನು ಪರಿಶೀಲಿಸುತ್ತಿದ್ದೇವೆ. ಅವರಲ್ಲಿ ಒಬ್ಬ ಹಿಂದೂ ಇರುವುದು ಪತ್ತೆಯಾಗಿದೆ. ವಶಕ್ಕೆ ಪಡೆದ 9 ಮಂದಿಯಲ್ಲಿ ನಾಲ್ವರು ದೇವಸ್ಥಾನಕ್ಕೆ ಪ್ರವೇಶಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ’ ಎಂದವರು ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿದ ಪುರಿ ಎಸ್ಪಿ ಪಿನಾಕ್ ಮಿಶ್ರಾ, ಬಾಂಗ್ಲಾದೇಶದ ಕೆಲವು ಹಿಂದೂಯೇತರರು ದೇವಾಲಯಕ್ಕೆ ಪ್ರವೇಶಿಸಿದ್ದಾರೆ ಎಂದು ನಮಗೆ ದೂರು ಬಂದಿದೆ. ಸದ್ಯ 9 ಮಂದಿ ಬಾಂಗ್ಲಾ ಪ್ರಜೆಗಳನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದೇವೆ’ ಎಂದು ತಿಳಿಸಿದ್ದಾರೆ.

ತನಿಖೆ ಪೂರ್ಣಗೊಳ್ಳುವವರೆಗೆ ಪುರಿ ನಗರವನ್ನು ಬಿಡದಂತೆ ಆಪಾಧಿತ ವ್ಯಕ್ತಿಗಳಿಗೆ ಸೂಚಿಸಲಾಗಿದ್ದು, ದೇಗುಲದ ಪ್ರವೇಶ ನಿಯಮಗಳ ಬಗ್ಗೆ ನಮಗೆ ತಿಳಿದಿಲ್ಲ ಎಂದು ಆರೋಪಿತ ಗುಂಪು ಹೇಳಿಕೊಂಡಿದೆ ಮತ್ತು ಪುರಿಗೆ ಭೇಟಿ ನೀಡುವ ಉದ್ದೇಶವನ್ನು ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!