Wednesday, October 30, 2024

ಗಂಗೊಳ್ಳಿ ಪಂಜುರ್ಲಿ ತೋಡು ಗಬ್ಬೆದ್ದು ನಾರುತ್ತಿದೆ: ಸಂಬಂಧಪಟ್ಟವರ ನಿರ್ಲಕ್ಷ್ಯ-ಗ್ರಾಮಸ್ಥರ ಆಕ್ರೋಶ

ಗಂಗೊಳ್ಳಿ : ಗಂಗೊಳ್ಳಿ ಗ್ರಾಮದ ಪಂಜುರ್ಲಿ ದೈವಸ್ಥಾನದ ಸಮೀಪದ ತೆರೆದ ಚರಂಡಿಯನ್ನು ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ಪರಿಸರದ ನಾಗರಿಕರು ಭಾನುವಾರ ಶಾಂತಿಯುತ ಪ್ರತಿಭಟನೆ ನಡೆಸಿದರು.

ಪಂಜುರ್ಲಿ ತೋಡು ಸೇತುವೆಯ ಸಮೀಪದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೂರಾರು ಸಂಖ್ಯೆಯಲ್ಲಿನ ಮಕ್ಕಳು, ಮಹಿಳೆಯರು ಹಾಗೂ ನಾಗರಿಕರು ಪಂಜುರ್ಲಿ ತೋಡು ಅಭಿವೃದ್ಧಿಪಡಿಸಿ ಜನರನ್ನು ಸಾಂಕ್ರಾಮಿಕ ಕಾಯಿಲೆಗಳಿಂದ ರಕ್ಷಿಸುವಂತೆ ಆಗ್ರಹಿಸಿದರು. ಜನಪ್ರತಿನಿಧಿಗಳು ಅಥವಾ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಕಾಮಗಾರಿ ಪ್ರಾರಂಭದ ಬಗ್ಗೆ ಭರವಸೆ ನೀಡುವ ತನಕ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.

ಇದೇ ಸಂದರ್ಭ ಸ್ಥಳಕ್ಕೆ ಆಗಮಿಸಿದ ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ, ಪಂಜುರ್ಲಿ ತೋಡಿನ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನದ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಬಳಿಕ ಪ್ರತಿಭಟನಾ ನಿರತರೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.

ಸ್ಥಳೀಯ ಸಮಸ್ಯೆಗಳ ಬಗ್ಗೆ ಪರಿಸರದ ಮಹಿಳೆಯರು ತಹಶೀಲ್ದಾರ್ ಗಮನ ಸೆಳೆದು, ಗಂಗೊಳ್ಳಿ ಗ್ರಾಮದ ದೊಡ್ಡಹಿತ್ಲು ಪರಿಸರದಲ್ಲಿರುವ ಪಂಜುರ್ಲಿ ತೋಡಿನ ಅಭಿವೃದ್ಧಿಗೆ ಈ ಹಿಂದಿನ ಸರ್ಕಾರ ಮೀಸಲಿಟ್ಟಿದ್ದ ಲಕ್ಷಾಂತರ ರೂ. ಅನುದಾನ ಬಳಕೆಯಾಗಿಲ್ಲ. ಪಂಜುರ್ಲಿ ತೋಡಿನಲ್ಲಿ ತ್ಯಾಜದ ದುರ್ನಾತ ಜನಜೀವನದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಗಂಗೊಳ್ಳಿ ಗ್ರಾಮದ ಪ್ರಮುಖ ಚರಂಡಿಗಳ ಮೂಲಕ ಹರಿದು ಬರುವ ನೀರು ಈ ಚರಂಡಿಯ ಮೂಲಕ ನದಿ ಸೇರುತ್ತದೆ. ಇಂತಹ ಪ್ರಮುಖ ಚರಂಡಿ ಇದೀಗ ತ್ಯಾಜ್ಯದ ಕೊಂಪೆಯಾಗಿ ಮಾರ್ಪಟ್ಟಿದೆ ಎಂದರು.

ಚರಂಡಿಯಲ್ಲಿ ತ್ಯಾಜ್ಯ ಹೆಚ್ಚಾಗಿದ್ದು, ದುರ್ನಾತ ಸ್ಥಳೀಯರನ್ನು ಕಂಗೆಡಿಸಿದೆ. ಜತೆಗೆ ಸೊಳ್ಳೆಗಳ ಉಪಟಳದಿಂದ ಮಕ್ಕಳು, ಹಿರಿಯರು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಬದುಕುತ್ತಿದ್ದಾರೆ. ಈ ಚರಂಡಿಗೆ ಆಸ್ಪತ್ರೆಯ ರಾಸಾಯನಿಕ ಮತ್ತು ಔಷಧಗಳ ತ್ಯಾಜ್ಯಗಳನ್ನು, ಪ್ಲಾಸ್ಟಿಕ್ ಹಾಗೂ ಕೊಳೆತ ಪ್ರಾಣಿಗಳ ಮತ್ತು ಇನ್ನಿತರ ವಿಷಪೂರಿತ ರಾಸಾಯನಿಕ ತ್ಯಾಜ್ಯಗಳನ್ನು ಬಿಸಾಡುತ್ತಿದ್ದು ಇದರಿಂದ ಪಂಚಗಂಗಾವಳಿ ನದಿಯಲ್ಲಿ ಮೀನಿನ ಸಂತತಿ ನಾಶಕ್ಕೂ ಕಾರಣವಾಗುತ್ತಿದೆ. ಚರಂಡಿ ಅಭಿವೃದ್ಧಿ ಬಗ್ಗೆ ಹಲವಾರು ವರ್ಷಗಳಿಂದ ಸ್ಥಳೀಯಾಡಳಿತ, ಸಂಸದರು, ಶಾಸಕರು ಹಾಗೂ ಗ್ರಾಮಸಭೆಗಳನ್ನು ಮನವಿ ಸಲ್ಲಿಸಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸುತ್ತಾ ಬಂದಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಬಿಡುಗಡೆಯದ ಅನುದಾನ ಕೂಡ ಬಳಕೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸ್ಥಳೀಯರು, ಮಳೆಗಾಲದ ಮೊದಲು ಬಿಡುಗಡೆ ಆಗಿರುವ ಅನುದಾನದಿಂದ ಕಾಮಗಾರಿ ಆರಂಭಿಸಬೇಕು ಹಾಗೂ ತುರ್ತು ಸಂದರ್ಭದಲ್ಲಿ ದಾರಿಯಿಲ್ಲದೆ ದಿನ ಕಳೆಯುತ್ತಿರುವ ಈ ವಠಾರದ ಜನಸಾಮಾನ್ಯರಿಗೆ ಈ ಚರಂಡಿಯ ಮೇಲೆ ಎರಡು ವಠಾರಕ್ಕೆ ದಾರಿ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.

ಪಂಜುರ್ಲಿ ತೋಡಿನ ಅಭಿವೃದ್ಧಿ ಬಗ್ಗೆ ಸ್ಥಳೀಯರಿಂದ ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಶೋಭಾಲಕ್ಷ್ಮೀ, ಚರಂಡಿ ಅಭಿವೃದ್ಧಿ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡಲಾಗಿದೆ. ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಇನ್ನೊಂದು ವಾರದೊಳಗೆ ಚರಂಡಿ ಅಭಿವೃದ್ಧಿ ಕಾಮಗಾರಿ ಆರಂಭಿಸುವ ಭರವಸೆ ನೀಡಿದರು.

ಬಿಜೆಪಿ ಅಧ್ಯಕ್ಷರಿಗೆ ತರಾಟೆ:
ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಬಂದ ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ ಕುಮಾರ್ ಶೆಟ್ಟಿ ಅವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಅನುದಾನ ಬಿಡುಗಡೆಯಾಗಿ ಇಷ್ಟು ವರ್ಷ ಚರಂಡಿ ಅಭಿವೃದ್ಧಿ ಕೆಲಸ ಆಗಿಲ್ಲ. ಬಿಡುಗಡೆಯಾದ ಅನುದಾನ ಬಳಕೆಯಾಗದಿರಲು ಯಾರು ಕಾರಣ, ಅಧಿಕಾರಿಗಳು, ರಾಜಕಾರಣಿಗಳು ಬಂದರೆ ಫೋಟೋ ಫೋಸ್ ಕೊಡಲು ಬರುತ್ತಾರೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಚರಂಡಿ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗದಿರಲು ಈಗಿನ ಸರಕಾರ ಕಾರಣ ಎಂದಾಗ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಗಂಗೊಳ್ಳಿ ಗ್ರಾಮ ಪಂಚಾಯತ್ ಪಿಡಿ‌ಒ ಉಮಾಶಂಕರ, ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ (ತನಿಖೆ) ಬಸವರಾಜ್, ಪಂಜುರ್ಲಿ ದೇವಸ್ಥಾನದ ಮೊಕ್ತೇಸರ ಜಿ.ಪುರುಷೋತ್ತಮ ಆರ್ಕಾಟಿ, ಸ್ಥಳೀಯರಾದ ಸೌಪರ್ಣಿಕಾ ಬಸವ ಖಾರ್ವಿ, ಸುರೇಂದ್ರ ಖಾರ್ವಿ, ಸಕು ಉದಯ, ನವೀನ್ ಗಂಗೊಳ್ಳಿ, ಯಶವಂತ ಗಂಗೊಳ್ಳಿ, ದಿಲೀಪ್ ಖಾರ್ವಿ, ಅನಿಲ್ ಸಾಲಿಯಾನ್, ನರಸಿಂಹ ಖಾರ್ವಿ, ಜಿ.ಎನ್.ಸತೀಶ ಖಾರ್ವಿ, ವೆಂಕಟೇಶ, ಗಂಗೊಳ್ಳಿ ಗ್ರಾಪಂ ಸದಸ್ಯ ಬಿ.ಗಣೇಶ ಶೆಣೈ, ಯಶೋಧಾ ಪೂಜಾರಿ, ಶಕುಂತಲಾ ಖಾರ್ವಿ, ಲಲಿತಾ ಪೂಜಾರಿ, ಮಂಜುರಾಜ್, ಗಣೇಶ, ಸುನೀತಾ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!