Sunday, September 8, 2024

ಮಾರ್ಚ್ 3ರಂದು ಹಳನಾಡುವಿನಲ್ಲಿ ಚತುಃಪವಿತ್ರ ನಾಗಮಂಡಲೊತ್ಸವ


ಕುಂದಾಪುರ: (ಜನಪ್ರತಿನಿಧಿ ವಾರ್ತೆ) ಕುಂದಾಪುರ ತಾಲೂಕು ಹಳನಾಡು ಗ್ರಾಮದ ದೇವರಮನೆ ಕುಟುಂಬಸ್ಥರ ಸೇವೆಯಾಗಿ ಚತುಃಪವಿತ್ರ ನಾಗಮಂಡಲೊತ್ಸವ, ಮಾರ್ಚ್ 3 ಭಾನುವಾರ, ಅರ್ಭಕಧಾರಕ, ಸಹಿತ ಸಹ ಪರಿವಾರ ಶ್ರೀ ಹೊಳ್ಳಾಡಿ, ಅಮ್ಮ ದೈವಸ್ಥಾನ, ಹಳನಾಡು ಇಲ್ಲಿ ನಡೆಯಲಿದೆ.

ಮಾ.2ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದೆ. ಮಾ.3ರಂದು ಆದಿತ್ಯವಾರ ಬೆಳಿಗ್ಗೆ 6.30ರಿಂದಲೇ ನಾಗಮಂಡಲೋತ್ಸವದ ಧಾರ್ಮಿಕ ಕರ್ಮಾಂಗಗಳು ಪ್ರಾರಂಭವಾಗಲಿದೆ. ಬೆಳಿಗ್ಗೆ 11ಕ್ಕೆ ಸಂದರ್ಶನ, ಪಲ್ಲಪೂಜೆ, ತೀರ್ಥ ಪ್ರಸಾದ ವಿತರಣೆ, ಮಧ್ಯಾಹ್ನ 12ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.45ಕ್ಕೆ ರಂಗ ಪೂಜೆ ಅಷ್ಟಾವಧಾನ ಸೇವೆ, ಸಂಜೆ 7.30ಕ್ಕೆ ಹಾಲಿಟ್ಟು ಸೇವೆ, ರಾತ್ರಿ 8.30ಕ್ಕೆ ಮಂಡಲ ಪೂಜಾ, ರಾತ್ರಿ 9ರಿಂದ ಚತುಃಪವಿತ್ರ ನಾಗಮಂಡಲ ಸೇವೆ ನಂತರ ಪ್ರಸಾದ ವಿತರಣೆ, ಮಂತ್ರಾಕ್ಷತೆ ಸಹಿತ ವಿಧಿವಿಧಾನಗಳು ಸಂಪನ್ನಗೊಳ್ಳಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ:
ನಾಗಮಂಡಲೋತ್ಸವದ ವಿವಿಧ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಮಧ್ಯಾಹ್ನ 11.45ರಿಂದ 1-15ರ ತನಕ ಸುಗಮ ಸಂಗೀತ ಭಕ್ತಿ ಗಾಯನ, ಬಿ.ರಾಜೇಂದ್ರ ಕುಮಾರ್ ಬಸ್ರೂರು ಇವರಿಂದ. ಮಧ್ಯಾಹ್ನ 1.15ರಿಂದ 2.15ರ ತನಕ ಭಜನಾ ಗಾನ ಸಂಕೀರ್ತನ ದ್ವಂದ್ವ ಹಾಡುಗಾರಿಕೆ, ಮಧ್ಯಾಹ್ನ 2.15ರಿಂದ 3 ಗಂಟೆಯ ತನಕ ಭರತನಾಟ್ಯ-ನಾಟ್ಯಾಂಜಲಿ ಕಲಾ ನಿಕೇತನ ಬಸ್ರೂರು ಇಲ್ಲಿನ ವಿದ್ಯಾರ್ಥಿಗಳಿಂದ. ಮಧ್ಯಾಹ್ನ 3 ರಿಂದ 5 ಗಂಟೆಯ ತನಕ ಶ್ರೀದೇವಿ ಮಹಾತ್ಮೆ ಹರಿಕಥಾ ಸತ್ಸಂಗ -ಡಾ.ಎಸ್.ಪಿ ಗುರುದಾಸ್ ಮಂಗಳೂರು ಹಾಗು ಬಳಗದವರಿಂದ ಪ್ರಸ್ತುತಗೊಳ್ಳಲಿದೆ.

ಧಾರ್ಮಿಕ ಸಭಾ ಕಾರ್ಯಕ್ರಮ:
ಸಂಜೆ 5 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆ ಪರಿವೀಕ್ಷಕರಾದ ಪ್ರತಾಪಚಂದ್ರ ಹಳನಾಡು ಧಾರ್ಮಿಕ ಪ್ರವಚನ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇ.ಧ.ಗ್ರಾ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ, ಗೀತಾ ಪೌಂಡೇಶನ್ ಕೋಟ ಇದರ ಪ್ರವರ್ತಕ ಆನಂದ್ ಸಿ.ಕುಂದರ್, ಹಳನಾಡು ದೊಡ್ಮನೆಯ ಎಚ್.ಬೋಜರಾಜ್ ಶೆಟ್ಟಿ, ಎಚ್.ಸದಾಶಿವ ಶೆಟ್ಟಿ, ಕಂಡ್ಲೂರು ಕನ್ನಿಕಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಎನ್.ಚಂದ್ರಶೇಖರ ಜೋಗಿ, ಎಚ್.ಕೆ ದೇವಾನಂದ ಶೆಟ್ಟಿ ಹಳನಾಡು, ಜಯಪ್ರಕಾಶ್ ಶೆಟ್ಟಿ ಪಟೇಲ್ ಹೌಸ್ ಸಿದ್ಧಾಪುರ, ಬೆಂಗಳೂರು ಹೋಟೆಲ್ ಉದ್ಯಮಿ ಹರೀಶ್ ಕುಮಾರ್ ಶೆಟ್ಟಿ, ಮಹಾಬಲ ಶೆಟ್ಟಿ ದೇವರುಮನೆ, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಯೋಜನಾಧಿಕಾರಿ ಪಾರ್ವತಿ, ಭಜನಾ ಪರಿಷತ್ ಅಧ್ಯಕ್ಷ ಬಿ.ರಾಜೇಂದ್ರ ಕುಮಾರ್ ಬಸ್ರೂರು ಭಾಗವಹಿಸಲಿದ್ದಾರೆ.

ಧಾರ್ಮಿಕ ನೇತೃತ್ವ:
ಚತುಃಪವಿತ್ರ ನಾಗಮಂಡಲೋತ್ಸವವು ವೇ.ಮೂ.ವಿನಾಯಕ ಭಟ್ ಹಳನಾಡು, ವೇ.ಮೂ.ಯಜ್ಞನಾರಾಯಣ ಭಟ್ ಹಳನಾಡು, ವೇ,.ಮೂ.ಪ್ರಕಾಶ್ ಭಟ್ ಹಳನಾಡು ಇವರ ಅರ್ಚಕತ್ವದಲ್ಲಿ ವೇ.ಮೂ.ಬಿ.ಗಣೇಶ್ ಭಟ್ ಬನ್ನಾಡಿ, ವೇ.ಮೂ.ಮಂಜುನಾಥ ಅಡಿಗರು ತೌಡ್ಕಲ್ಲು ಮತ್ತು ಬಳಗದವರ ಪ್ರಧಾನ ಪೌರೋಹಿತ್ಯದಲ್ಲಿ ನಾಗಪಾತ್ರಿಗಳಾಗಿ ವೇ.ಮೂ. ಸುದರ್ಶನ ಉಡುಪರು (ಹರ್ಕಾಡಿ) ಗೋಪಾಡಿ ಕೋಟೇಶ್ವರ, ವೇ,ಮೂ. ಸುಬ್ರಹ್ಮಣ್ಯ ಅಡಿಗರು ನೈಕರಮಠ ಕುಮ್ರಗೋಡು, ವೈದ್ಯರು: ಸರ್ವೋತ್ತಮ ವೈದ್ಯರು, ಗಣಪತಿ ವೈದ್ಯರು, ಆನಂದರಾಮ ವೈದ್ಯರು ಮತ್ತು ಬಳಗ ಅಂಪಾರು ಭಾಗವಹಿಸಲಿದ್ದಾರೆ.

‘ದೇವರ ಮನೆ’ ಕುಟುಂಬದ ಹಿನ್ನೆಲೆ
ಕುಂದಾಪುರ ತಾಲೂಕಿನ ಹಳ್ನಾಡು ಗ್ರಾಮದ ’ದೇವರಮನೆ ಕುಟುಂಬ’ ಎನ್ನುವುದು ಒಂದು ಇತಿಹಾಸ ಹೊಂದಿರುವ ಕುಟುಂಬ. ’ದೇವರ ಮನೆ’ ಎಂಬ ಹೆಸರು ಬರಲು ಹಲವು ಕಾರಣಗಳಿವೆ. ಹಿರಿಯರ ಮಾತಿನಂತೆ ಒಟ್ಟು 99೯ ಗಣಗಳು ಕೈಲಾಸದಿಂದ ಉಳ್ಳಾಲಕ್ಕೆ ಬಂದು ಉಳ್ಳಾಲದಿಂದ ಹಳೆಯಮ್ಮ ಮತ್ತು ಭದ್ರಮಹಾಂಕಾಳಿ ಎಂಬ ದೈವವನ್ನು ಸೇರಿ ಒಟ್ಟು 101 ಗಣಗಳು, ಈ ಶ್ರೀ ಹೊಳ್ಳಾಡಿ ಅಮ್ಮ ದೈವದ ಮನೆಯಲ್ಲಿ ಸ್ಥಾಪನೆ ಆಗಿರುವುದು ಬಹಳ ವಿಶೇಷ.

ಆ ಕಾಲದಲ್ಲಿ ಬಂದ ಗಣಗಳಿಗೆ ತಮ್ಮ ಮನೆಯನ್ನೇ ತ್ಯಾಗ ಮಾಡಿದ್ದಾರೆ ಎನ್ನುವ ಕಾರಣಕ್ಕೆ, ಈ ಕುಟುಂಬಕ್ಕೆ ’ದೇವರ ಮನೆ’ ಕುಟುಂಬ ಎಂದು ಕರೆಯಲಾಯಿತು ಎನ್ನುತ್ತಾರೆ ಈ ಮನೆಯ, ಯಜಮಾನರು. ಈ ಕುಟುಂಬದ ಪ್ರಧಾನ ದೈವ ಹಳೆಯಮ್ಮ, ಹೊಳ್ಳಾಡಿಯಮ್ಮ ದೇವಸ್ಥಾನ ಎಂದೇ ಕರೆಯಲ್ಪಟ್ಟಿತ್ತು. ಪರಿವಾರ ದೇವರುಗಳು, ನಂದಿಕೇಶ್ವರ, ವೀರಭದ್ರ ಮುಡೂರುಹೈಗುಳಿ, ಬಾಲ ಚಿಕ್ಕು, ಮರ್ಲ್‌ಚಿಕ್ಕು, ಕೊಂಗಳ್ಳಿ ಅಮ್ಮ, ಇನ್ನು ಅದೆಷ್ಟೋ ದೈವಗಳು ಇಲ್ಲಿ ನೆಲೆನಿಂತಿವೆ.

ಮರ್ಲು ಚಿಕ್ಕು ಮರಾಶಿಯಲ್ಲಿ ಪ್ರಧಾನವಾದರೆ, ಬಾಲಚಿಕ್ಕು ಕಲ್ಲಾರ್ ಬೈಲಲ್ಲಿ ಪ್ರಧಾನವಾಗಿದೆ. ’ದೇವರ ಮನೆ’ ಕುಟುಂಬ ಒಟ್ಟು ಐದು ಬುಡಗಳಿದ್ದು, ಅವರ ಕುಟುಂಬದ ಬಳ್ಳಿಗಳು, ಬೈಂದೂರು, ಶಿರೂರು, ಎಡಮೊಗೆ, ಸಾಗರ, ನಿಟ್ಟೂರು, ಸಂಪೆಕಟ್ಟೆ, ಹೀಗೆ ಅವರವರ ಅನುಕೂಲದ ದೃಷ್ಟಿಯಿಂದ ವಾಸಿಸುವ ಸ್ಥಳ ಮಾಡಿಕೊಂಡಿದ್ದಾರೆ. ಆದರೆ ಮೂಲ ನಾಗ ಮತ್ತು ಮೂಲ ದೈವದ ಮನೆ ದೇವರಮನೆ ಕುಟುಂಬದ 500ಕ್ಕೂ ಅಧಿಕ ಸದಸ್ಯರ ಹೊಂದಿರುವ ಈ ಕುಟುಂಬಕ್ಕೆ, ಹಳ್ನಾಡು ಹೊಳ್ಳಾಡಿ ಅಮ್ಮ ದೈವದ ಮನೆ ದೇವರಮನೆ ಕುಟುಂಬದ, ದೈವದ ಮನೆ, ಈ ಕುಟುಂಬದವರು ಹೊರಗಡೆ ವಾಸಿಸುವ ಒಟ್ಟು 125ಕ್ಕೂ ಅಧಿಕ ಮನೆಗಳಿವೆ. ಈಗ ಬಹಳ ಸಂಭ್ರಮದಿಂದ ಚತುಃಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು ಪಾಲ್ಗೊಂಡು ತಮ್ಮ ಮೂಲ ನಾಗಬನದಲಿ ನಡೆಯುವ ಉತ್ಸವದ ತಯಾರಿ ಕಾರ್ಯಕ್ರಮದಲ್ಲಿ ನಿರತರಾಗಿದ್ದಾರೆ.

‘ದೇವರ ಮನೆ’ ಕುಟುಂಬದಲ್ಲಿ ನಡೆಯುವ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ನಮಗೆ ಸಂಪೂರ್ಣ ಸಹಕಾರ ನೀಡುತ್ತಾ ಬಂದವರು ದೊಡ್ಮನೆ ಕುಟುಂಬದವರು ಎನ್ನುತ್ತಾರೆ ಈ ಚತುಃಪವಿತ್ರ ನಾಗಮಂಡಲೋತ್ಸವದ ಜವಬ್ದಾರಿಯನ್ನು ನಿರ್ವಹಿಸುತ್ತಿರುವ ಸಂತೋಷ್ ಕುಮಾರ್ ಶೆಟ್ಟಿ ಅವರು.

ನಾಗಮಂಡಲೋತ್ಸವ ಭರದ ಸಿದ್ಧತೆ:
ನಾಗಮಂಡಲೋತ್ಸವಕ್ಕೆ ಸಕಲ ಸಿದ್ಧತೆಗಳು ಬಹುಭರದಿಂದ ಸಾಗುತ್ತಿದೆ. ಸಮಸ್ತ ದೇವರುಮನೆ ಕುಟುಂಬದರು, ದೊಡ್ಮನೆ ಕುಟುಂಬದವರು, ಊರ ಪುರೋಹಿತರು, ಹಳನಾಡು ಐದು ಮನೆಯವರು, ಕಟ್ಟುಕಟ್ಟಳೆಯವರು, ಸಮಸ್ತ ಹಳನಾಡು ಗ್ರಾಮಸ್ಥರು, ಸಂಘ ಸಂಸ್ಥೆಗಳು ಸದಸ್ಯರು ನಾಗಮಂಡಲದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಈಗಾಗಲೇ ಕುಟುಂಬದ ಮೂಲನಾಗದ ಹತ್ತಿರ ಸುಂದರವಾದ ಸಾಂಪ್ರಾದಾಯಿಕ ಚಪ್ಪರ ನಿರ್ಮಾಣವಾಗಿದೆ. ನಾಗಮಂಡಲದ ವೇದಿಕೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಮುಖ್ಯರಸ್ತೆಯಿಂದ ನಾಗಮಂಡಲ ಸ್ಥಳಕ್ಕೆ ಪ್ರವೇಶ ಪಡೆಯುವಲ್ಲಿ ಸುಂದರವಾದ ಸ್ವಾಗತಗೋಪುರ ನಿರ್ಮಾಣವಾಗುತ್ತಿದೆ. ಸ್ವ ಇಚ್ಚೆಯಿಂದ ಗ್ರಾಮಸ್ಥರು, ಸಂಘ ಸಂಸ್ಥೆಗಳ ಸದಸ್ಯರು ಸ್ವಯಂಸೇವಕರಾಗಿ ಭಾಗವಹಿಸಿ ಕರಸೇವೆ ಮಾಡುತ್ತಿರುವುದನ್ನು ಇಲ್ಲಿ ಗಮನಿಸಬಹುದು.
ನಾಗಮಂಡಲೋತ್ಸವದಲ್ಲಿ ಅನ್ನಸಂತರ್ಪಣೆಗೆ ವಿಶೇಷ ಮಹತ್ವಿಕೆಯಿದ್ದು ಸುಮಾರು ೧೫ ಸಾವಿರಕ್ಕೂ ಹೆಚ್ಚು ಜನರಿಗೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಅತ್ಯಂತ ವ್ಯವಸ್ಥಿತವಾಗಿ ಸಂತರ್ಪಣೆ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಉಡುಪಿ ಜಿಲ್ಲೆಯಿಂದ ಮಾತ್ರವಲ್ಲದೆ ವಿವಿಧೆಡೆಗಳಿಂದ ಭಕ್ತಾದಿಗಳು ನಾಗಮಂಡಲಕ್ಕೆ ಆಗಮಿಸಲಿದ್ದಾರೆ. ಇಡೀ ಹಳನಾಡು ಗ್ರಾಮವೇ ಈ ಮಹಾ ಉತ್ಸವಕ್ಕೆ ಸಕಲ ರೀತಿಯಲ್ಲಿ ಸನ್ನದ್ಧವಾಗಿದೆ.

ಧಾರ್ಮಿಕ ಮಹಾತ್ಕಾರ್ಯಕ್ಕೆ ಹಳನಾಡು ಸಿದ್ಧ:
ಹಳನಾಡುವಿನಲ್ಲಿ ನಡೆಯುತ್ತಿರುವ ಈ ಮಹತ್ಕಾರ್ಯಕ್ರಮಕ್ಕೆ ಇಡೀ ಹಳನಾಡು ಗ್ರಾಮವೇ ಸರ್ವರೀತಿಯಲ್ಲಿ ಸಿದ್ಧವಾಗುತ್ತಿದೆ. ಮುಖ್ಯರಸ್ತೆಯಿಂದ ನಾಗಮಂಡಲೋತ್ಸವ ಸ್ಥಳದ ತನಕ ಆಲಂಕೃತಗೊಳಿಸಲಾಗುತ್ತಿದೆ. ನ ಭೂತೋ ನ ಭವಿಷ್ಯತಿ ಎನ್ನುವಂತೆ ನಾಗಮಂಡಲೋತ್ಸವವನ್ನು ಸಂಪನ್ನಗೊಳಿಸಿಕೊಳ್ಳಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಹಳನಾಡು ಪ್ರದೇಶವೇ ಸರ್ವಾಂಗ ಸುಂದರ; ನಿಸರ್ಗದ ಸ್ವರ್ಗ. ಇಂಥಹ ನಾಗಪ್ರೀತಿಯ ಸ್ಥಳದಲ್ಲಿ ನಾಗಾರಾಧನೆ ನಡೆಯಲಿದೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಇಲ್ಲಿಗೆ ಆಗಮಿಸುವ ನಿರೀಕ್ಷೆ ಇದೆ. ನಾಗಮಂಡಲೋತ್ಸದ ಮೂಲಕ ನಾಗದೇವರನ್ನು ಸಂಪ್ರೀತಗೊಳಿಸಲು ಕ್ಷಣಗಣನೆ ಆರಂಭವಾಗಿದೆ.

ಹೊರೆಕಾಣಿಕೆ ಸಲ್ಲಿಕೆ
ನಾಗಮಂಡಲೋತ್ಸವಕ್ಕೆ ಹೊರೆಕಾಣಿಕೆ ಸಲ್ಲಿಸುವ ಭಕ್ತಾದಿಗಳು ಫೆ.೨೮ರಿಂದ ಮಾ.2ರ ವರೆಗೆ ಹಳನಾಡು ಶ್ರೀ ಹೊಳ್ಳಾಡಿ ಅಮ್ಮನವರ ಸನ್ನಿಧಿಯಲ್ಲಿ ಸಲ್ಲಿಸಬಹುದಾಗಿದೆ. ದೂರವಾಣಿ ಸಂಖ್ಯೆ 8296385136, 7019206268  ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಾಹನ ವ್ಯವಸ್ಥೆ
ಮಾ.3ರಂದು ನಾಗಮಂಡಲಕ್ಕೆ ಬರುವವರಿಗಾಗಿ ಬೆಳಿಗ್ಗೆಯಿಂದ ಸಿದ್ಧಾಪುರ-ಶಂಕರನಾರಾಯಣ-ಅಂಪಾರು-ಮುಳ್ಳುಗುಡ್ಡೆ ಹಾಗೂ ಬಸ್ರೂರು-ಕಂಡ್ಲೂರು ಮಾರ್ಗದಲ್ಲಿ ವಾಹನದ ವ್ಯವಸ್ಥೆ ಮಾಡಲಾಗಿದೆ. ದೂಪದಕಟ್ಟೆ ಮುಖ್ಯರಸ್ತೆಯಿಂದ ಮತ್ತು ಮುಳ್ಳುಗುಡ್ಡೆ ಮುಖ್ಯರಸ್ತೆಯಿಂದ ನಾಗಮಂಡಲ ಸ್ಥಳಕ್ಕೆ ನಿರಂತರ ವಾಹನದ ವ್ಯವಸ್ಥೆ ಇರುತ್ತದೆ.

(ದಿನಕರ ಶೆಟ್ಟಿ ಮುಂಬಾರು)

ವಿಡಿಯೋ ವರದಿ ವೀಕ್ಷಿಸಿ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!