Sunday, September 8, 2024

ಸಿದ್ದರಾಮಯ್ಯನವರಿಂದ ಇಂತಹ ಕಳಪೆ ಬಜೆಟ್‌ ನಿರೀಕ್ಷಿಸಿರಲಿಲ್ಲ, ಎಲ್ಲಾ ದೃಷ್ಟಿಕೋನದಲ್ಲಿಯೂ ಕಳಪೆಯಾಗಿದೆ ಈ ಬಜೆಟ್‌ ಕಳಪೆಯಾಗಿದೆ : ಮಾಜಿ ಸಿಎಂ ಬಿಎಸ್‌ವೈ

ಜನಪ್ರತಿನಿಧಿ (ಬೆಂಗಳೂರು) : ನಾನು ನನ್ನ ಜೀವಮಾನದಲ್ಲೇ ಇಂತಹ ಕಳಪೆ ಮುಂಗಡ ಪತ್ರವನ್ನು ನೋಡಿರಲಿಲ್ಲ. ೧೪ ಬಜೆಟ್‌ಗಳನ್ನು ಮಂಡಿಸಿರುವ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯನವರಿಂದ ಇಂತಹ ಕಳಪೆ ೧೫ನೇ ಬಜೆಟ್‌ ನಿರೀಕ್ಷಿಸಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ.

ಈ ಬಜೆಟ್‌ ಎಲ್ಲಾ ದೃಷ್ಟಿಕೋನದಲ್ಲಿಯೂ ಕಳಪೆಯಾಗಿದೆ. ಬಜೆಟ್‌ ನ ಬಹುತೇಕ ಅಂಶಗಳನ್ನು ಕೇಂದ್ರ ಸರ್ಕಾರವನ್ನು ದೂರಲು ಮೀಸಲಿಡಲಾಗಿದೆಯೇ ಹೊರತು ರಾಜ್ಯದ ಅಭಿವೃದ್ಧಿಗೆ ನಮ್ಮ ಕೊಡುಗೆ ಏನು ಎಂಬುವುದನ್ನು ಎಲ್ಲಿಯೂ ಪ್ರಸ್ತಾಪಿಸಿಲ್ಲ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಮುಂದುವರೆದ ಭಾಗವಾಗಿ ಈ ಆಯ-ವ್ಯಯ ಕಾಣುತ್ತಿದೆ. ವಾಸ್ತಾವಿಕ ಅಂಕಿಸಂಖ್ಯೆಗಳನ್ನು ನೀಡದೇ ಕೇವಲ ಕಾಲ್ಪನಿಕ ಅಂಕಿಸಂಖ್ಯೆಗಳನ್ನು ನೀಡಿ ಕೇಂದ್ರ ಸರ್ಕಾರದಿಂದ ಇನ್ನೂ ಹೆಚ್ಚುವರಿ ಅನುದಾನ ಬರಬೇಕಿತ್ತು ಎಂದು ಸಬೂಬು ಹೇಳುತ್ತಾ ರಾಜ್ಯದ ಜನರನ್ನು ದಿಕ್ಕು ತಪ್ಪಿಸಲೆಂದೇ ಮಾಡಿದ ಆಯ-ವ್ಯಯದಂತೆ ಗೋಚರಿಸುತ್ತಿದೆ. ಈ ಆಯ-ವ್ಯಯ ರಾಜ್ಯದ ಜನರಿಗೆ ಮಾಡಿದ ಮಹಾ ಮೋಸದಂತೆ ಗೋಚರವಾಗುತ್ತಿದೆ. ರಾಜ್ಯದ ಜನರಿಗೆ ಮೋಸ ಮಾಡುವುದಿರಲಿ, ಉಪಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್‌ ಅವರು ನಿರ್ವಹಿಸುತ್ತಿರುವ ಜಲಸಂಪನ್ಮೂಲ ಇಲಾಖೆಗೇ ಯಾವುದೇ ಅನುದಾನ ನೀಡದೇ ಅವರಿಗೂ ಮೋಸ ಹಾಗೂ ಅನ್ಯಾಯ ಮಾಡಿರುವುದು ಎದ್ದು ಕಾಣುತ್ತಿದೆ ಎಂದು ಹೇಳಿದ್ದಾರೆ.

ಸನ್ಮಾನ್ಯ ಡಿ. ಕೆ ಶಿವಕುಮಾರ್‌ ಅವರು ʼಮೇಕೆದಾಟುʼ ಪಾದಯಾತ್ರೆ ಮಾಡಿದ್ದೆ ಸಾಧನೆ. ಈ ಯೋಜನೆಯನ್ನು ಆರಂಭಿಸುವ ಯಾವ ಖಾತರಿಯೂ ಈ ಆಯ-ವ್ಯಯದಲ್ಲಿಲ್ಲ. ಕೃಷ್ಣ ಕೊಳ್ಳದ ಯೋಜನೆಗಳಿಗೆ ಹಾಗೂ ಮಹಾದಾಯಿ ಯೋಜನೆ ಹಾಗೂ ನವಿಲೇ ಜಲಾಶಯ ಯೋಜನೆಗೆ ಅನುದಾನ ನಿಗಧಿಪಡಿಸಿಲ್ಲ. ಇದರಿಂದ ರೈತರಿಗೆ ಹಾಗೂ ಹಿಂದುಳಿದ ಭಾಗಗಳಾದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗಗಳಿಗೆ ಅನ್ಯಾಯ ಮಾಡಲಾಗಿದೆ ಎಂದಿದ್ದಾರೆ.

ರಾಜ್ಯದ ರಾಜಧಾನಿ ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ಯಾವುದೇ ಅನುಧಾನ ನಿಗಧಿಪಡಿಸಲ್ಲ. ಕೇವಲ ಘೋಷಣೆಗಳನ್ನಷ್ಟೇ ಮಾಡಲಾಗಿದೆ. ಇದರಿಂದ ಬೆಂಗಳೂರಿನ ಯಾವ ಸಮಸ್ಯೆಗಳಿಗೂ ಮುಕ್ತಿ ಸಿಗುವುದಿಲ್ಲ. ಪರಿಣಾಮವಾಗಿ ಬೆಂಗಳೂರಿಗೆ ಹರಿದು ಬರುವ ಬಂಡವಾಳ ಹೂಡಿಕೆ ಕಡಿಮೆಯಾಗಿ ಅಭಿವೃದ್ಧಿ ಕುಂಠಿತವಾಗಲಿದೆ. ಇನ್ನು, ಸರ್ಕಾರಿ ನೌಕರರ ಬಹುದಿನದ ಬೇಡಿಕೆಯಾದ ೭೦ನೇ ವೇತನ ಆಯೋಗ ಅನುಷ್ಠಾನಗೊಳಿಸುವ ಬಗ್ಗೆ ಯಾವುದೇ ಸ್ಪಷ್ಟವಾದ ಘೋಷಣೆ ಇಲ್ಲ. ಇದರಿಂದ ಖಜಾನೆ ಖಾಲಿಯಾಗಿರುವುದು ಕಂಡು ಬರುತ್ತದೆ ಎಂದು ಅವರು ಹೇಳಿದ್ದಾರೆ.

ಒ.ಪಿ.ಎಸ್‌ ಯೋಜನೆ ಪುನರ್‌ ಜಾರಿಗೆ ತರುತ್ತೇವೆ ಎಂದು ಆಶ್ವಾಸನೆ ಮಾಡಿ ಬಂದ ಸರ್ಕಾರ ಈ ಬಗ್ಗೆ ಚಕಾರವನ್ನೇ ಎತ್ತಿಲ್ಲ. ತಮ್ಮ ವರುಣಾ ಕ್ಷೇತ್ರಕ್ಕೆ ರೂ. ೨೦೦೦ ಕೋಟಿಗಳನ್ನು ಬಜೆಟ್‌ನಲ್ಲಿ ಒದಗಿಸಿದ್ದು ರಾಜ್ಯದ ಬೇರೆ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡದೇ ತಾರತಮ್ಯ ಮೆರೆದಿದ್ದಾರೆ. ೨೦೨೩-೨೪ನೇ ಸಾಲಿನಲ್ಲಿ ರೂ. ೧೨,೫೨೨ ಕೋಟಿಗಳ ರಾಜಸ್ವ ಕೊರತೆ ಆಯ-ವ್ಯಯ ಮಂಡಿಸಿದ್ದ ಮುಖ್ಯಮಂತ್ರಿಯವರು ೨೦೨೪-೨೫ನೇ ಸಾಲಿಗೆ ರೂ. ೨೭,೩೫೩ ಕೋಟಿಗಳ ರಾಜಸ್ವ ಕೊರತೆ ಬಜೆಟ್‌ ಮಂಡಿಸುತ್ತಿರುವುದು, ರಾಜ್ಯವು ಆರ್ಥಿಕವಾಗಿ ದಿವಾಳಿಯಾಗುತ್ತಿದೆ ಎಂಬುವುದರ ಸ್ಪಷ್ಟ ಸೂಚನೆಯಾಗಿದೆ ಎಂದು ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ.

ಇನ್ನು, ೨೦೨೩-೨೪ನೇ ಸಾಲಿನಲ್ಲಿ ರೂ.೮೫೯೨೮ ಕೋಟಿಗಳ ಸಾಲ ಮಾಡಲಾಗಿದೆ. ೩೦೨೪-೨೫ನೇ ಸಾಲಿನಲ್ಲಿ ರೂ.೧,೦೫,೪೯೬ ಕೋಟಿಗಳಿಗೆ ಸಾಲದ ಮೊತ್ತ ಹೆಚ್ಚಾಗಲಿದೆ. ಇದರಿಂದ ಕಾಂಗ್ರೆಸ್‌ ಸರ್ಕಾರದ ಆಡಳಿತದಿಂದ ರಾಜ್ಯವು ದಿವಾಳಿಯಾಗಲಿದೆ ಎಂಬುವುದರಲ್ಲಿ ಸಂಶಯವೇ ಇಲ್ಲ. ಒಟ್ಟಾರೆಯಾಗಿ ಮಾನ್ಯ ಶ್ರೀ ಸಿದ್ದರಾಮಯ್ಯನವರು ಮಂಡಿಸಿರುವ ೨೦೨೪-೨೫ರ ಆಯ-ವ್ಯಯವು ಗೊತ್ತುಗುರಿ ಇಲ್ಲದ, ರಾಜ್ಯದ ಅಭಿವೃದ್ಧಿಗೆ ಮಾರಕಾವಾದ ಹಾಗೂ ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ದಿವಾಳಿ ಅಂಚಿಗೆ ನಿಲ್ಲಿಸುವ ಅತ್ಯಂತ ಕಳಪೆ ಬಜೆಟ್‌ ಎಂದರೆ ತಪ್ಪಾಗಲಾರದು ಎಂದು ಯಡಿಯೂರಪ್ಪ ಅಭಿಪ್ರಾಯ ಪಟ್ಟಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!