Sunday, September 8, 2024

ಫೆ.11ರಂದು ಬಂಟರ ಮಹಾಸಮಾಗಮ-ಭಾವೈಕ್ಯ: ಹತ್ತು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ

ಕುಂದಾಪುರ, ಫೆ10: ಕುಂದಾಪುರ ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಫೆಬ್ರವರಿ 11 ರಂದು ಕುಂದಾಪುರ ರೂರಲ್ ಮೆಡಿಕಲ್ ಕಾಲೇಜು ಕ್ರೀಡಾಂಗಣ, ಯುವ ಮೆರಿಡಿಯನ್ ಸಂಕೀರ್ಣ, ಕೋಟೇಶ್ವರ ಇಲ್ಲಿ ಭಾವೈಕ್ಯ: ಬಂಟರ ಮಹಾಸಮಾಗಮ ಕಾರ್ಯಕ್ರಮ ನಡೆಯಲಿದೆ. ಇದು ಕುಂದಾಪುರ ಪರಿಸರದಲ್ಲಿ ನಡೆಯುತ್ತಿರುವ ಮೊದಲ ಬಂಟರ ಸಮಾವೇಶವಾಗಿದ್ದು ವಿದೇಶಗಳನ್ನೂ ಒಳಗೊಂಡಂತೆ ಭಾರತದ ವಿವಿಧೆಡೆಗಳಲ್ಲಿ ನೆಲೆಸಿರುವ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಬಂಟ ಸಮುದಾಯ ಬಾಂಧವರು ಈ ಮಹಾಸಮಾವೇಶದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಪ್ರಧಾನ ಸಂಚಾಲಕ ಪ್ರತಾಪಚಂದ್ರ ಶೆಟ್ಟಿ ಹಳ್ನಾಡು ತಿಳಿಸಿದರು.

ಅವರು ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

ಬಂಟರ ಮಹಾಸಮಾಗಮದ ಅಂಗವಾಗಿ ಬಂಟರ ಸಾಂಸ್ಕೃತಿಕ ಸಂಭ್ರಮ’ ಎಂಬ ರಾಷ್ಟ್ರ ಮಟ್ಟದ ಬಂಟರ ವೈವಿಧ್ಯಮಯ ಸಮೂಹನೃತ್ಯ ಸ್ಪರ್ಧೆ ನಡೆಯಲಿದೆ. ವಿದ್ಯಾದೀವಿಗೆ ಯೋಜನೆಯಡಿ ಕುಂದಾಪುರ ಮತ್ತು ಬೈಂದೂರು ತಾಲೂಕು ವ್ಯಾಪ್ತಿಯ ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸಮುದಾಯದ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ನವಚೇತನ ಯೋಜನೆಯಡಿ ವಿಶೇಷಚೇತನರಿಗೆ ಪ್ರೋತ್ಸಾಹಧನ ವಿತರಣೆ ನಡೆಯಲಿದೆ. ಮಂಗಳೂರಿನ ಎ. ಜೆ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ, ಪ್ರಸಾದ್ ನೇತ್ರಾಲಯ ಹಾಗೂ ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜಿನ ಸಹಯೋಗದೊಂದಿಗೆ ವಿಶೇಷ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ವೈವಿಧ್ಯಮಯ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದ್ದು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಾಗಿ ಸ್ಥಳದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ, ರಂಗೋಲಿ ಸ್ಪರ್ಧೆ ಹಾಗೂ ಧೈಯವಾಕ್ಯ ರಚನಾ ಸ್ಪರ್ಧೆಯನ್ನು ಸಂಘಟಿಸಲಾಗಿದೆ. ಬಂಟರ ಮುಂದಿರುವ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸವಾಲುಗಳು ಎಂಬ ಪರಿಕಲ್ಪನೆಯಡಿ ವಿಚಾರ ಮಂಥನ ಕಾರ್ಯಕ್ರಮ ನಡೆಯಲಿದೆ. ಸಂಜೆ ನಡೆಯಲಿರುವ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್, ಎಂ. ಡಿ ಪಲ್ಲವಿ, ಮಾನಸ ಹೊಳ್ಳ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ಸಂಘದ ಅಧ್ಯಕ್ಷ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಮಾತನಾಡಿ, ನಮ್ಮ ಈ ಕಾರ್ಯಕ್ರಮಕ್ಕೆ ಮಹಾದಾನಿಗಳು ಕೈಜೋಡಿಸಿದ್ದಾರೆ. ನಿರಂತರವಾಗಿ ಯುವ ಬಂಟರ ಸಂಘ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿದೆ. ಕೇವಲ ಬಂಟ ಸಮುದಾಯಕ್ಕೆಮಾತ್ರವಲ್ಲದೇ ಸಾರ್ವಜನಿಕವಾಗಿ ಕಾರ್ಯಕ್ರಮಗಳನ್ನು ನೆಡೆಸಿದೆ. ಶೇ.೧೦ರಷ್ಟು ಇತರ ಸಮುದಾಯದವರಿಗೂ ಅವಕಾಶ ನೀಡಿದೆ. ಶಿಕ್ಷಣ ಆರೋಗ್ಯ ವಿಚಾರದಲ್ಲಿ ಎಲ್ಲ ಜಾತಿಯವರಿಗೂ ಅವಕಾಶ ಮಾಡಿಕೊಟ್ಟಿದೆ. ಇದೆಲ್ಲವನ್ನು ಮನಗಂಡು ನಮ್ಮ ಸಂಸ್ಥೆಗೆ ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ ಎಂದರು.

ಬೆಳಿಗ್ಗೆ 9.30ರಿಂದ ಬಂಟರ ಸಾಂಸ್ಕೃತಿಕ ಸಂಭ್ರಮ ಉದ್ಘಾಟನೆಯಾಗಲಿದೆ. ಪೂರ್ವಾಹ್ನ 11 ಗಂಟೆಗೆ ಸಭಾ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಂಸ್ಮರಣಾ ಪ್ರಶಸ್ತಿ ಪ್ರದಾನ, ದಶಪಥ ಸಂಚಿಕೆ ಬಿಡುಗಡೆ, ವಿದ್ಯಾ ದೀವಿಗೆಗೆ ಚಾಲನೆ, ನವಚೇತನಕ್ಕೆ ಚಾಲನೆ, ಪ್ರೋತ್ಸಾಹಧನ ವಿತರಣೆ, ಯುವ ಸಾಧಕರಿಗೆ ಸನ್ಮಾನ, ದಿ|ಯಡ್ತರೆ ನರಸಿಂಹ ಶೆಟ್ಟಿ ಸಂಸ್ಮರಣ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಂಜೆ 4.3೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಬಿ. ಉದಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!