Sunday, September 8, 2024

ಕುಂದಾಪುರ : ಸಹಕಾರಿಗಳಿಂದ ಬೃಹತ್ ರಕ್ತದಾನ ಶಿಬಿರ

ಕುಂದಾಪುರ : (ಜನಪ್ರತಿನಿಧಿ ವಾರ್ತೆ) ಸಮಾಜಕ್ಕೆ ಸಹಕಾರಿ ಸಂಘದ ಮೂಲಕ ಅನೇಕ ಕೊಡುಗೆ ನೀಡಲಾಗಿದೆ. ರಕ್ತದಾನ ಶಿಬಿರ ಆಯೋಜಿಸಿರುವುದು ಶ್ಲಾಘನೀಯ. ಮನುಷ್ಯನಿಗೆ ಆರೋಗ್ಯ ಮುಖ್ಯ. ರಕ್ತವೂ ಅಷ್ಟೇ ಮುಖ್ಯ. ಒಬ್ಬ ವ್ಯಕ್ತಿ ಸ್ವಯಿಚ್ಛೆಯಿಂದ ರಕ್ತದಾನ ಮಾಡುವುದೊಂದು ಶ್ರೇಷ್ಠವಾದ ಕೆಲಸ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರು ಹಾಗೂ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು.

ಅವರು, ರಕ್ತನಿಧಿ ಕೇಂದ್ರ ರೆಡ್ ಕ್ರಾಸ್ ಕುಂದಾಪುರ, ಸಹಕಾರ ಇಲಾಖೆ ಕುಂದಾಪುರ ಉಪ ವಿಭಾಗ, ಕುಂದಾಪುರ-ಬೈಂದೂರು ತಾಲೂಕಿನ ವಿವಿಧ ಸಹಕಾರ ಸಂಘಗಳ ನೇತೃತ್ವದಲ್ಲಿ ಜೆಸಿ‌ಐ ಸಿಟಿ ಕುಂದಾಪುರ ಹಾಗೂ ರೋಟರಿ ಸನ್ ರೈಸ್ ಕುಂದಾಪುರ ಇವರ ಸಹಯೋಗದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಕಲಾಮಂದಿರ, ಜೂನಿಯರ್ ಕಾಲೇಜು ಕುಂದಾಪುರದಲ್ಲಿ ರಕ್ತದಾನ ಶಿಬಿರವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಭಾರತದಲ್ಲಿ ಬಹುಮಟ್ಟಿನ ಜನರು ರಕ್ತದಾನ ಮಾಡಲು ಹೆದರುತ್ತಾರೆ. ಈ ಕುರಿತು ಜಾಗೃತಿ ಮೂಡಿಸಲು ಸರ್ಕಾರ ಕಾಲದಿಂದ ಕಾಲಕ್ಕೆ ಅನೇಕ ಅಭಿಯಾನಗಳನ್ನು ನಡೆಸಿದೆ. ಅನೇಕ ಸಂಘ ಸಂಸ್ಥೆಗಳು ಇಂತಹ ಶಿಬಿರ ಆಯೋಜಿಸುವುದರ ಮುಖೇನ ಜವಾಬ್ದಾರಿಯನ್ನು ಮೆರೆದಿವೆ. ಸಹಕಾರಿ ಸಂಘವೂ ಈ ನಿಟ್ಟಿನಲ್ಲಿ ಮಹತ್ವದ ಯೋಚನೆಯ ಹಾದಿಯನ್ನು ಕಾರ್ಯನಿರ್ವಹಿಸುತ್ತಿರುವುದು ಪ್ರಶಂಸನೀಯ ಎಂದಿದ್ದಾರೆ.

ರಕ್ತನಿಧಿ ಕೇಂದ್ರ ರೆಡ್ ಕ್ರಾಸ್ ಕುಂದಾಪುರ ಇದರ ಅಧ್ಯಕ್ಷ ಜಯಕರ ಶೆಟ್ಟಿ ಶಿಬಿರವನ್ನು ಉದ್ದೇಶಿಸಿ ಮಾತನಾಡಿ, ರಕ್ತಕ್ಕೆ ಯಾವುದೇ ಪರ್ಯಾಯವಿಲ್ಲ. ಒಬ್ಬರು ರಕ್ತದಾನಿಯು ಮಾಡುವ ದಾನದಿಂದ ನಾಲ್ವರ ಜೀವವನ್ನು ಉಳಿಸಬಹುದಾಗಿದೆ. ರಕ್ತದಾನದಿಂದ ಹೆಚ್ಚುವರಿ ಕಬ್ಬಿಣಾಂಶ ಹೊರಹೋಗುತ್ತದೆ. ಹೆಚ್ಚವರಿ ಕಬ್ಬಿಣಾಂಶದಿಂದ ಅಧಿಕ ರಕ್ತದ ಒತ್ತಡ ಮುಂತಾದ ಅಡ್ಡ ಪರಿಣಾಮಗಳಿರುತ್ತವೆ. ಇದು ಲಿವರ್, ಹೃದಯ ಮತ್ತು ಪಿತ್ತಜನಕಾಂಗದಲ್ಲಿ ಶೇಖರಣೆಯಾಗಿ ಹೃದಯಬೇನೆ, ರಕ್ತದೊತ್ತಡ ಉಲ್ಬಣವಾಗುತ್ತದೆ. ರಕ್ತದಾನ ಮಾಡುವುದರಿಂದ ಈ ಸಮಸ್ಯೆಗಳಿಂದ ಮುಕ್ತರಾಗಬಹುದು ಎಂದು ಅವರು ಅಭಿಪ್ರಾಯ ಪಟ್ಟರು.

ಸಹಕಾರಿ ಇಲಾಖೆಯ ಕುಂದಾಪುರ ಉಪ ವಿಭಾಗದ ಸಹಯಾಕ ನಿಬಂಧಕರು ಅರುಣ್ ಕುಮಾರ್ ಎಸ್. ವಿ ಶಿಬಿರದ ಪ್ರಾಸ್ತಾವಿಕ ಮಾತಗಳನ್ನಾಡಿ, ಸಾಮಾನ್ಯವಾಗಿ ರಕ್ತದ ಅವಶ್ಯಕತೆ ಯಾರಿಗೆ ಬೇಕಾದರೂ ಬೀಳಬಹುದು. ರಕ್ತದಾನ ಮಹಾದಾನ. ಸಹಕಾರಿ ಸಂಘದಿಂದು ಇಷ್ಟ ಸಂಖ್ಯೆಯಲ್ಲಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿರುವುದು ಸಂತಸದ ವಿಷಯ. ಸಹಕಾರಿ ಸಂಘಗಳು ಸದಾ ಒಂದಿಲ್ಲೊಂದು ಕಾರ್ಯದಿಂದ ಸಮಾಜಕ್ಕೆ ಸ್ಪೂರ್ತಿಯಾಗುತ್ತಲೇ ಬಂದಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಸಂಘದ ನಿರ್ದೇಶಕ ಮೊಳಹಳ್ಳಿ ಮಹೇಶ್ ಹೆಗ್ಡೆ, ಇಂದು ಸಾಕಷ್ಟು ಜನರಲ್ಲಿ ರಕ್ತದಾನದ ಬಗ್ಗೆ ಅರಿವಿದೆ. ಬ್ಲಡ್ ಬ್ಯಾಂಕ್ ಸೇರಿದಂತೆ ಹಲವು ಕಡೆ ಆಗಾಗ್ಗೇ ರಕ್ತದಾನದ ಶಿಬಿರಗಳನ್ನು ನಡೆಸುತ್ತಾ ಬರಲಾಗಿದೆ. ಆದರೂ ಸಹ ಇಂದು ದೇಶದಲ್ಲಿ ರಕ್ತದ ಕೊರತೆ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕುಂದಾಪುರ -ಬೈಂದೂರು ತಾಲೂಕಿನ ವಿವಿಧ ಸಹಕಾರ ಸಂಘಗಳ ಸಹಯೋಗದೊಂದಿಗೆ, ರೆಡ್ ಕ್ರಾಸ್ ಸಂಸ್ಥೆ ಹಾಗೂ ಇತರೆ ಸಂಘಟನೆಗಳ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ ಆಯೋಜಿಸಿರುವುದು ಅಭಿನಂದನಾರ್ಹ ಎಂದರು.

ಸಭಾ ಕಾರ್ಯಕ್ರಮದಲ್ಲಿ ರಕ್ತದಾನಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ರೆಡ್ ಕ್ರಾಸ್ ವತಿಯಿಂದ ಸಹಕಾರಿ ಇಲಾಖೆಯ ಕುಂದಾಪುರ ಉಪ ವಿಭಾಗದ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್.ವಿ. ಅವರನ್ನು ಸನ್ಮಾನಿಸಲಾಯಿತು.

ಕುಂದಾಪುರ ರೋಟರಿ ಸಂಘದ ಅಧ್ಯಕ್ಷರ ನಾಗರಾಜ್, ಜೆಸಿ‌ಐ ಸಿಟಿ ಕುಂದಾಪುರ ಅಧ್ಯಕ್ಷ ರಾಘವೇಂದ್ರ, ದ.ಕ ಹಾಲು ಒಕ್ಕೂಟದ ನಿರ್ದೇಶಕ ಪ್ರಕಾಶ್ಚಂದ್ರ ಶೆಟ್ಟಿ, ಹಾಲು ಉತ್ಪಾದಕರ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷೆ ಸುಲೇಖಾ ಶೆಟ್ಟಿ, ಕೃಷಿ ಪತ್ತಿನ ಸಹಕಾರಿ ಸಂಘದ ನೌಕರರ ಸಂಘದ ತಾಲೂಕು ಘಟಕದ ವಿಶ್ವೇಶ್ವರ ಐತಾಳ್, ಇತರೆ ಸಹಕಾರಿ ಸಂಘದ ಅಧ್ಯಕ್ಷರಾದ ಉದಯಕುಮಾರ್ ಹಟ್ಟಿಯಂಗಡಿ, ಮತ್ತಿತರರು ಉಪಸ್ಥಿತರಿದ್ದರು.
ಕೊಮೆ ಕೊರವಡಿ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಗೋಪಾಲ್ ಪೂಜಾರಿ ವಂದಿಸಿ, ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

ಶಿಬಿರದಲ್ಲಿ ಒಟ್ಟು 117 ಯೂನಿಟ್ ರಕ್ತ ಸಂಗ್ರಹವಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!