Sunday, September 8, 2024

ಹುತಾತ್ಮ ಯೋಧ ಪ್ರಾಂಜಲ್‌ ಕುಟುಂಬಕ್ಕೆ 50 ಲಕ್ಷ ರೂಪಾಯಿಗಳ ಪರಿಹಾರ ಧನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ

ಜನಪ್ರತಿನಿಧಿ ವಾರ್ತೆ(ಬೆಂಗಳೂರು) : ಜಮ್ಮು ಕಾಶ್ಮೀರದ ರಜೌರಿಯಲ್ಲಿ ಉಗ್ರರ ದಾಳಿ ವೇಳೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿ ಹುತಾತ್ಮರಾದ ರಾಜ್ಯದ ವೀರಯೋಧ ಪ್ರಾಂಜಲ್ ಅವರ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಮಾಡಿದ ಘೋಷಣೆಯಂತೆ 50 ಲಕ್ಷ ರೂಪಾಯಿಗಳ ಪರಿಹಾರ ಧನ ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದಾರೆ.

ತಮ್ಮ ಅಧಿಕೃತ ಮೈಕ್ರೋ ಬ್ಲಾಗಿಂಗ್‌ ಖಾತೆ ʼಎಕ್ಸ್‌ʼ ಮೂಲಕ ಈ ಬಗ್ಗೆ ಹಂಚಿಕೊಂಡ ಸಿದ್ದರಾಮಯ್ಯ,  ಜಮ್ಮು – ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗಿನ ಕಾಳಗದ ವೇಳೆ ಹುತಾತ್ಮರಾದ ನಾಡಿನ ಹೆಮ್ಮೆಯ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಕುಟುಂಬಕ್ಕೆ ರೂ. 50,00,000 (ಐವತ್ತು ಲಕ್ಷ ) ಪರಿಹಾರಧನವನ್ನು ನಮ್ಮ ಸರ್ಕಾರದಿಂದ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ ಎಂದಿದ್ದಾರೆ.

ದೇಶ ರಕ್ಷಣೆಗಾಗಿ ಪ್ರಾಣ ಪಣಕ್ಕಿಟ್ಟು ಶ್ರಮಿಸುವ ಪ್ರತಿಯೊಬ್ಬ ಯೋಧನ ಬಗ್ಗೆ ನಮಗೆ ಅಪಾರ ಗೌರವವಿದೆ. ಹುತಾತ್ಮ ಯೋಧ ಪ್ರಾಂಜಲ್ ಅವರ ತ್ಯಾಗ, ಬಲಿದಾನಕ್ಕೆ ಬೆಲೆಕಟ್ಟಲಾಗದು, ಆದರೆ ದೇಶದ ಕೋಟ್ಯಂತರ ಜನರ ಪರವಾಗಿ ಈ ಹೊತ್ತಿನಲ್ಲಿ ಅವರ ಕುಟುಂಬದ ಜೊತೆ ನಿಲ್ಲಬೇಕಾದುದ್ದು ನಮ್ಮ ಕರ್ತವ್ಯವೆಂದು ಭಾವಿಸಿದ್ದೇವೆ. ಪರಿಹಾರಧನದ ಚೆಕ್ ಅನ್ನು ಸಿದ್ಧಪಡಿಸಲಾಗಿದ್ದು ನಾಳೆ ಮೃತ ಯೋಧನ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು. ಮತ್ತೊಮ್ಮೆ ಕ್ಯಾಪ್ಟನ್ ಪ್ರಾಂಜಲ್ ಅವರ ಅನನ್ಯ ದೇಶಸೇವೆ, ಸಮರ್ಪಣಾಭಾವವನ್ನು ಗೌರವದಿಂದ ಸ್ಮರಿಸುತ್ತಾ, ಗೌರವ ನಮನ ಸಲ್ಲಿಸುತ್ತೇನೆ ಎಂದಿದ್ದಾರೆ.

ಕ್ಯಾಪ್ಟನ್ ಎಂವಿ ಪ್ರಾಂಜಲ್ ಅವರ ಕುಟುಂಬಕ್ಕೆ ಪರಿಹಾರದ ಕಾಲಮಿತಿ ಕುರಿತು ಪತ್ರಕರ್ತರು ಕೇಳಿದಾಗ, ಪರಿಹಾರವನ್ನು ಯಾರು, ಯಾವಾಗ ಘೋಷಿಸಿದರು ಎಂದು ಸಿದ್ದರಾಮಯ್ಯ ಸುದ್ದಿಗಾರರನ್ನು ಪ್ರಶ್ನಿಸಿದ್ದರು.

ಈ ವಿಡಿಯೋ ತುಣುಕನ್ನು ಬಳಸಿಕೊಂಡಿದ್ದ ಬಿಜೆಪಿ ಐಟಿ ಸೆಲ್, ಹುತಾತ್ಮ ವೀರ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಕುಟುಂಬಕ್ಕೆ ರೂ.50 ಲಕ್ಷ ಪರಿಹಾರ ನೀಡುವುದಾಗಿ ಹೇಳಿದ್ದ ಸಿಎಂ ಸಿದ್ದರಾಮಯ್ಯ ಅವರು ಇದೀಗ ಮತಿಭ್ರಮಣೆಗೊಂಡು ಯಾರು ಹೇಳಿದ್ದು ಎಂದು ಕೇಳುತ್ತಿದ್ದಾರೆ ಎಂದು ಟೀಕೆ ಮಾಡಿತ್ತು.

ಮಾತ್ರವಲ್ಲದೇ, ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ಅವರು ಹಿಂದೆಂದೂ ‌ನಡೆದುಕೊಂಡಿಲ್ಲ ಅದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಲೇ ಇದ್ದಾರೆ. ಇದೀಗ ಯೋಧನ ಸಾವಿನ ವಿಚಾರದಲ್ಲಿ ತಮ್ಮ ಹೀನ ಮನಸ್ಥಿತಿಯನ್ನು ತೋರಿಸಿದ್ದಾರೆ. ಎಟಿಎಂ ಸರ್ಕಾರ ಮೂರನ್ನೂ ಬಿಟ್ಟುವರು ಊರಿಗೆ ದೊಡ್ಡವರು ಎನ್ನುವ ಸಂದೇಶ ಸಾರುತ್ತಿರುವುದು ನಿಜಕ್ಕೂ ದುರಂತ’ ಎಂದು ತನ್ನ ಅಧಿಕೃತ ʼಎಕ್ಸ್‌ʼ ಖಾತೆಯ ಮೂಲಕ ಆಕ್ರೋಶ ಹೊ ಹಾಕಿತ್ತು.

ಈಗ ಪರಿಹಾರ ಮಂಜೂರಾತಿ ಆದೇಶ ಪ್ರತಿಯನ್ನು ಮುಖ್ಯಮಂತ್ರಿಯವರು ತಮ್ಮ ʼಎಕ್ಸ್‌ʼ ಖಾತೆಯ ಮೂಲಕ ಹಂಚಿಕೊಂಡು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!