Sunday, September 8, 2024

ಡಿ.3ರಂದು ಆನೆಗುಡ್ಡೆಯಲ್ಲಿ ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆ: ಜೋಡಿ ಕುಣಿತ ಭಜನಾ ಸ್ಪರ್ಧೆ ವಿಶೇಷ


ಕುಂದಾಪುರ:, ಡಿ.1: (ಜನಪ್ರತಿನಿಧಿ ವಾರ್ತೆ) ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಕುಂಭಾಸಿ ಇವರ ನೇತೃತ್ವದಲ್ಲಿ ಕುಂದಾಪುರ ಭಜನಾ ಮಂಡಳಿಗಳ ಸಹಯೋಗದಲ್ಲಿ ರಾಜ್ಯ ಮಟ್ಟದ ಭಜನಾ ಸ್ಪರ್ಧೆ, ಭಕ್ತಿಗಾನ ನೃತ್ಯ ಜೋಡಿ ಭಜನಾ ಸ್ಪರ್ಧೆ ಡಿ.3 ರವಿವಾರ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ನಡೆಯಲಿದೆ ಎಂದು ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆಯ ಸಮಿತಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ತಿಳಿಸಿದರು.

ಅವರು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಮಟ್ಟದ ಭಜನಾ ಸ್ಪರ್ಧೆಯ ಬಗ್ಗೆ ಮಾಹಿತಿ ನೀಡಿದರು.

ಡಿ.3ರ ಬೆಳಿಗ್ಗೆ 8.30ಕ್ಕೆ ಭವ್ಯ ಪುರಮೆರವಣಿಗೆಗೆ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿಗಳಾದ ಶ್ರೀ ರಮಣ ಉಪಾಧ್ಯಾಯರು ಚಾಲನೆ ನೀಡಿಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆಯನ್ನು ಸುರತ್ಕಲ್ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಲಿದ್ದಾರೆ. ಸಭಾಧ್ಯಕ್ಷತೆಯನ್ನು ಶ್ರೀಕ್ಷೇತ್ರ ಆನೆಗುಡ್ಡೆ ವಿನಾಯಕ ದೇವಸ್ಥಾನದ ವಿಶ್ರಾಂತ ಆಡಳಿತ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ ವಹಿಸಲಿದ್ದಾರೆ ಎಂದರು.

ಬೆಳಿಗ್ಗೆ 10 ಗಂಟೆಗೆ ಭಕ್ತಿಗಾನ ನೃತ್ಯ ಜೋಡಿ ಭಜನಾ ಸ್ಪರ್ಧೆ ಆರಂಭಗೊಳ್ಳಲಿದೆ. ರಾಜ್ಯ ಮಟ್ಟದ 48 ಭಜನಾ ತಂಡಗಳು ಇದರಲ್ಲಿ ಭಾಗವಹಿಸಲಿವೆ. ಸಂಜೆ 7.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಕೋಟ ಅಮೃತೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಆನಂದ ಸಿ.ಕುಂದರ್ ಸಭಾಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಭಜನಾ ತಂಡಗಳನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಭಜಕರ ಪ್ರತಿಭೆಗಳು ಬೇರೆ ಬೇರೆ ವಿಧದಲ್ಲಿ ಎಲ್ಲರ ಮನೆಮನ ತಲುಪಬೇಕು ಎಂಬ ನೆಲೆಯಲ್ಲಿ ವಿಶೇಷ ಸ್ಪರ್ಧೆ ಆಯೋಜನೆ ಮಾಡಿದ್ದೇವೆ ಎಂದರು.

ಶ್ರೀ ವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿಗಳಾದ ಶ್ರೀ ರಮಣ ಉಪಾಧ್ಯಾಯರು ಮಾತನಾಡಿ, ಹಿಂದೆ ಶ್ರೀ ಕ್ಷೇತ್ರದಲ್ಲಿ ನೆಡೆದ ಭಜನಾ ಕಮ್ಮಟಗಳು ಈ ರಾಜ್ಯ ಮಟ್ಟದ ಭಜನಾ ಸ್ಪರ್ಧೆಗೆ ಸ್ಪೂರ್ತಿಯಾಗಿದೆ. ಸಮಾಜ ಪ್ರತಿಯೋರ್ವರು ಕೂಡಾ ಧಾರ್ಮಿಕ ಶ್ರದ್ಧೆಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಧಾರ್ಮಿಕವಾಗಿ, ಸಾಂಸ್ಕೃತಿಕ ವಿಕಸನಕ್ಕೆ ಭಜನೆ ಅನುಕೂಲವಾಗುತ್ತದೆ. ಈ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದರು.
ಶ್ರೀರಾಮ ಕೋಟೇಶ್ವರ ಕಲಾ ಸಂಘದ ಅಧ್ಯಕ್ಷರಾದ ಬಿ.ಜಿ ಸೀತಾರಾಮ ಧನ್ಯ ಗೋಪಾಡಿ ಮಾತನಾಡಿ, ಭಕ್ತಿಗಾನ ನೃತ್ಯ ಜೋಡಿ ಭಜನಾ ಸ್ಪರ್ಧೆ ಹೊಸ ರೀತಿಯ ಪ್ರಯೋಗ. ಇಲ್ಲಿ ಭಜನೆ ಹೇಳುವವರಿಗೆ ಪ್ರತ್ಯೇಕ ವೇದಿಕೆ ಇರುತ್ತದೆ. ನಾಲ್ಕು ಜನ ಭಜನೆ ಹಾಡುವವರು ಇರುತ್ತಾರೆ. ಹಾಡಿಗೆ ತಕ್ಕಂತೆ ಜೋಡಿ ವೇದಿಕೆಗಳಲ್ಲಿ ಎರಡು ತಂಡದವರ ಕುಣಿತ ಭಜನೆ ನಡೆಯುತ್ತದೆ. 8 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಪ್ರತಿ ಭಜನಾ ತಂಡದಲ್ಲಿ 12ರಿಂದ 16 ಜನರಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ಪುರುಷರು, ಮಹಿಳೆಯರು ಪ್ರತ್ಯೇಕ ವಿಭಾಗವಿರುವುದಿಲ್ಲ. ವಯೋಮಾನದ ಮಾನದಂಡ ಇರುವುದಿಲ್ಲ. ಭಜನೆ ಯಾವುದೆಂದು ಕುಣಿತ ತಂಡಕ್ಕೆ ಮೊದಲು ಸೂಚಿಸುವುದಿಲ್ಲ. ದಾಸ ಸಾಹಿತ್ಯವನ್ನು ಮಾತ್ರ ಬಳಸಿಕೊಳ್ಳಲಾಗುತ್ತದೆ. ಏಕಕಾಲದಲ್ಲಿ ಎರಡು ವೇದಿಕೆಗಳಲ್ಲಿ ಸ್ಪರ್ಧೆ ನಡೆಯುತ್ತದೆ. ತಾಳ, ಹಾವ ಭಾವ, ಕುಣಿತವನ್ನು ಮಾತ್ರ ಪರಿಗಣಿಸಲಾಗುತ್ತದೆ. ಈಗಾಗಲೇ 90ಕ್ಕೂ ಹೆಚ್ಚು ತಂಡಗಳು ಭಾಗವಹಿಸುವ ಇಚ್ಛೆ ವ್ಯಕ್ತ ಪಡಿಸಿದ್ದು ಅಂತಿಮವಾಗಿ 48 ತಂಡಗಳನ್ನು ಆಯ್ಕೆ ಮಾಡಲಾಗಿದೆ. ರಾಜ್ಯದ ಮೈಸೂರು, ಶಿವಮೊಗ್ಗ, ಉತ್ತರ ಕನ್ನಡ ಸೇರಿದಂತೆ ಬೇರೆ ಬೇರೆ ಜಿಲ್ಲೆಯ ತಂಡಗಳು ಭಾಗವಹಿಸಲಿವೆ ಎಂದರು.

ಸಂಚಾಲಕರಾದ ರಾಘವೇಂದ್ರ ಶೆಟ್ಟಿಗಾರ್ ಮಾತನಾಡಿ ಜೋಡಿ ಭಜನಾ ಸ್ಪರ್ಧೆ ಇದೊಂದು ಹೊಸ ಪ್ರಯೋಗ. ಏಕಕಾಲದಲ್ಲಿ ಜೋಡಿ ಭಜನಾ ಸ್ಪರ್ಧೆ ನಡೆಯುತ್ತದೆ. ಭಜನೆ ಹೇಳುವವರು ಯಾವ ಭಜನೆ ಹೇಳುತ್ತಾರೋ ಅದಕ್ಕೆ ಕುಣಿತ ಭಜನಾ ತಂಡಗಳು ಕುಣಿಯಬೇಕು. ಇದೊಂದು ವಿಭಿನ್ನವಾದ ಸ್ಪರ್ಧೆಯಾಗಿದೆ. ವಿಜೇತ ತಂಡಕ್ಕೆ ಪ್ರಥಮ 33,000ರೂ ನಗದು ಬಹುಮಾನ, ದ್ವಿತೀಯ 22,000 ಹಾಗೂ ನಾಲ್ಕು ನಗದು ಬಹುಮಾನಗಳು ಇರುತ್ತವೆ ಎಂದರು.

ಸುದ್ಧಿಗೋಷ್ಠಿಯಲ್ಲಿ ದೇವಸ್ಥಾನದ ಮೆನೇಜರ್ ನಟೇಶ ಕಾರಂತ, ಬಾಬಣ್ಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!