Sunday, September 8, 2024

ಒತ್ತಡ ನಿವಾರಣೆಗೆ ಸಂಗೀತವೇ ರಹದಾರಿ :  ಕೊಳಲು ವಾದಕ ಪ್ರವೀಣ್‌ ಗೋಡ್ಖಿಂಡಿ

ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ ʼಸ್ಪಿಕ್‌ ಮೆಕೆʼ ವತಿಯಿಂದ ಕೊಳಲು ವಾದನ ಕಾರ್ಯಕ್ರಮ

ಜನಪ್ರತಿನಿಧಿ ವಾರ್ತೆ (ಕುಂದಾಪುರ): ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನ ಕಲ್ಚರಲ್‌ ಕೋ-ಆರ್ಡಿನೇಷನ್‌ ಕಮಿಟಿ ಹಾಗೂ ಇಲ್ಲಿನ  ಭಂಡಾರ್‌ಕಾರ್ಸ್‌ ಕಲಾ ಮತ್ತು ವಿಜ್ಙಾನ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ʼಸ್ಪಿಕ್‌ ಮೆಕೆʼ ವತಿಯಿಂದ ಖ್ಯಾತ ಕೊಳಲು ವಾದಕ ಪಂಡಿತ್‌ ಡಾ. ಪ್ರವೀಣ್‌ ಗೋಡ್ಖಿಂಡಿ ಅವರ ಕೊಳಲು ವಾದನ ಕಾರ್ಯಕ್ರಮ ಕಾಲೇಜಿನ ಆರ್. ಎನ್‌ ಶೆಟ್ಟಿ ಸಭಾಂಗಣದಲ್ಲಿ ಗುರುವಾರ(ನ.23) ನಡೆಯಿತು.  

ಭಾರತೀಯ ಪರಂಪರೆಯ ಭಿನ್ನ ಆಯಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಅದರಲ್ಲಿನ ಮೌಲ್ಯಗಳನ್ನು ರೂಢಿಸಿಕೊಳ್ಳುವ ಮೂಲಕ ಔಪಚಾರಿಕ ಶಿಕ್ಷಣದ ಗುಣಮಟ್ಟ ವೃದ್ಧಿಸುವ ದೃಷ್ಟಿಯಲ್ಲಿ ದೇಶದ ಉದ್ದಗಲಕ್ಕೂ ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳನ್ನು ʼಸ್ಪಿಕ್‌ ಮೆಕೆʼ (ಸೊಸೈಟಿ ಫಾರ್‌ ದಿ ಪ್ರಮೋಷನ್‌ ಆಫ್‌ ಇಂಡಿಯನ್‌ ಕ್ಲಾಸಿಕಲ್‌ ಮ್ಯೂಸಿಕ್‌ ಅಂಡ್‌ ಕಲ್ಚರ್‌ ಅಮಂಗಸ್ಟ್‌ ಯೂತ್‌) ತಲುಪುತ್ತಿದೆ. ಇದರ ಭಾಗವಾಗಿ ಇಲ್ಲಿನ ಭಂಡಾರ್‌ಕಾರ್ಸ್‌ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾರ್ಯಕ್ರವಮನ್ನು ಆಯೋಜಿಸಲಾಗಿತ್ತು.

ಖ್ಯಾತ ಶಾಸ್ತ್ರೀಯ ಹಿಂದೂಸ್ತಾನಿ ಕೊಳಲು ವಾದಕ ಪಂಡಿತ್‌ ಡಾ. ಪ್ರವೀಣ್‌ ಗೋಡ್ಖಿಂಡಿ ಕೊಳಲು ವಾದನದ ತಂತ್ರಗಾರಿಕೆ ಹಾಗೂ ಸ್ವರ, ಶ್ರುತಿ ಹಾಗೂ ವಿಭಿನ್ನ ಶೈಲಿಯ ಕೊಳಲುಗಳ ಸಂಕ್ಷಿಪ್ತ ಪರಿಚಯ ಮಾಡಿಕೊಟ್ಟರು. ಮಾತ್ರವಲ್ಲದೇ, ಸುಮಾರು ಒಂದು ಗಂಟೆಗಳ ಕಾಲ ಕೊಳಲು ವಾದನ ಮಾಡಿ ಶೋತೃಗಳ ಮನಗೆದ್ದರು. ತಬಲದಲ್ಲಿ ಪಂಡಿತ್ ರವೀಂದ್ರ ಯಾವಗಲ್ ಸಾಥ್‌ ಕೊಟ್ಟರು.

ಕಾರ್ಯಕ್ರಮದಲ್ಲಿ ಕೊಳಲು ವಾದಕ ಪಂಡಿತ್‌ ಡಾ. ಪ್ರವೀಣ್‌ ಗೋಡ್ಖಿಂಡಿ ಹಾಗೂ ತಬಲ ವಾದಕ ಪಂಡಿತ್ ರವೀಂದ್ರ ಯಾವಗಲ್ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದ್ಯಸ್ಯರುಗಳಾದ ಶಾಂತಾರಾಮ ಪ್ರಭು, ದೇವದಾಸ್‌ ಕಾಮತ್‌, ಪ್ರಜ್ಞೇಶ್‌ ಪ್ರಭು, ಯು. ಎಸ್‌ ಶೆಣೈ, ಭಂಡಾರ್‌ಕಾರ್ಸ್‌ ಕಾಲೇಜಿನ ಪ್ರಾಂಶುಪಾಲ ಡಾ. ಶುಭಕರಾಚಾರಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಂ ಗೊಂಡ, ಉಪನ್ಯಾಸಕ ಶಶಾಂಕ್‌ ಪಟೇಲ್‌ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕಿ ಶೈಲಾ ಆರ್. ಕಾರ್ಯಕ್ರಮ ನಿರ್ವಹಿಸಿದರು.

ಒತ್ತಡ ನಿವಾರಣೆಗೆ ಸಂಗೀತವೇ ರಹದಾರಿ : ಪ್ರವೀಣ್‌ ಗೋಡ್ಖಿಂಡಿ

ಸಂಗೀತಕ್ಕೆ ಮಾಂತ್ರಿಕ ಶಕ್ತಿ ಇದೆ. ಸಂಗೀತ ಕಲೆಯ ವಿವಿಧ ಆಯಾಮಗಳನ್ನು, ವಿಭಿನ್ನ ಪ್ರಕಾರಗಳನ್ನು ಉಳಿಸಿ ಬೆಳೆಸುವ ಸಂಘಟಿತ ಪ್ರಯತ್ನವಿದು. ಜೀವನದಲ್ಲಿ ಸಂಗೀತ ಅವಿಭಾಜ್ಯ ಅಂಗ. ನೈಸರ್ಗಿಕವಾಗಿ ನಾವೆಲ್ಲರೂ ಸಂಗೀತದೊಂದಿಗೆ ಒಳಗೊಂಡಿದ್ದೇವೆ. ಸಂಗೀತಕ್ಕೆ ನಮ್ಮ ಜ್ಞಾಪಕಶಕ್ತಿ  ಹಾಗೂ ಏಕಾಗ್ರತೆಯನ್ನು ಹೆಚ್ಚಿಸುವ ಶಕ್ತಿ ಇದೆ. ಒತ್ತಡ ನಿವಾರಣೆಗೆ ಸಂಗೀತವೇ ರಹದಾರಿ. ಸಂಗೀತ ವಾದ್ಯಗಳ ಸಂವಹನ ಬದುಕಿನ ವಿಕಾಸಕ್ಕೆ ಮಹತ್ವದ ಪಾತ್ರ ವಹಿಸುತ್ತವೆ. ಇಂತಹ ಸಂಗೀತ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಧಾರೆ ಎರೆಯುವ ಕಾರ್ಯ ಆಗಬೇಕಿದೆ. ಸಂಗೀತ ಕಾರ್ಯಕ್ರಮಗಳ ಆಯೋಜಕರು ಹೆಚ್ಚಾಗುವ ತುರ್ತಿದೆ ಎಂದು ಖ್ಯಾತ ಕೊಳಲು ವಾದಕ  ಪಂಡಿತ್‌ ಡಾ. ಪ್ರವೀಣ್‌ ಗೋಡ್ಖಿಂಡಿ ಅಭಿಪ್ರಾಯ ಪಟ್ಟರು.  

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!