Sunday, September 8, 2024

ಪೊಲೀಸರ ಬಗ್ಗೆ ಭಯ ಬೇಡ- ಡಿ.ವೈ.ಎಸ್.ಪಿ ಬೆಳ್ಳಿಯಪ್ಪ

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ‘ನಾ ಕಂಡಂತೆ ಪೊಲೀಸ್’ ಪ್ರಬಂಧ ಸ್ಪರ್ಧೆ ಉದ್ಘಾಟನೆ

ಕುಂದಾಪುರ: ಪೊಲೀಸ್ ವ್ಯವಸ್ಥೆ ಸದಾ ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಕಾರ್ಯನಿರತವಾಗಿರುತ್ತದೆ. ಪೊಲೀಸರು ಎಂದರೆ ಸಮಾಜದ ಒಂದು ಭಾಗ. ಪೊಲೀಸರ ಬಗ್ಗೆ ಭಯ ಬೇಡ, ಸಾರ್ವಜನಿಕ ವಲಯದಲ್ಲಿ ಉತ್ತಮ ಭಾವನೆ ಮೂಡಿಸುವ ಕೆಲಸ ವಿದ್ಯಾರ್ಥಿದಿಸೆಯಿಂದಲೇ ಆದರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ನಾ ಕಂಡಂತೆ ಪೊಲೀಸ್’ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಿರುವುದು ಅರ್ಥಪೂರ್ಣ ಎಂದು ಕುಂದಾಪುರ ಡಿವೈ‌ಎಸ್ಪಿ ಬೆಳ್ಳಿಯಪ್ಪ ಕೆ.ಯು ಹೇಳಿದರು.

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕುಂದಾಪುರ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವದ ಅಂಗವಾಗಿ ಕನ್ನಡ ಶಾಲೆ ಉಳಿವಿಗಾಗಿ ಮತ್ತು ಪ್ರೋತ್ಸಾಹಕ್ಕಾಗಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ‘ನಾ ಕಂಡಂತೆ ಪೊಲೀಸ್’ ಎಂಬ ವಿಷಯದ ಕುರಿತು ಕುಂದಾಪುರ ಬೋರ್ಡ್ ಹೈಸ್ಕೂಲ್‌ನ ಕಲಾಮಂದಿರದಲ್ಲಿ ಪ್ರಬಂಧ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಪೊಲೀಸರ ಬಗ್ಗೆ ವ್ಯಕ್ತವಾಗುವ ಅಭಿವ್ಯಕ್ತಿ ಮುಕ್ತವಾಗಿರಲಿ. ವಿದ್ಯಾರ್ಥಿಗಳ ಕಂಡ ಹಾಗೆ ಪೊಲೀಸರ ಬಗ್ಗೆ ಬರೆಯಿರಿ. ಅದರಲ್ಲಿ ವಿಷಯಗಳು ನಮಗೆ ಅಗತ್ಯವಾಗುತ್ತದೆ. ತಿದ್ಧಿಕೊಳ್ಳಲು, ಬದಲಾವಣೆ ತಂದುಕೊಳ್ಳಲು, ಇನ್ನಷ್ಟು ಪರಿಣಾಮಕಾರಿಯಾಗಿ ಸಾರ್ವಜನಿಕ ಸೇವೆ ನೀಡಲು ಈ ಟಿಪ್ಪಣಿಗಳು ಅಗತ್ಯವಾಗುತ್ತದೆ. ಆಯ್ದ ಪ್ರಬಂಧಗಳನ್ನು ಸಾರ್ವಜನಿಕ ಪ್ರಕಟಣೆಗೊಂಡರೆ ಅನುಕೂಲವಾಗುತ್ತದೆ ಎಂದರು.

ಶಿಕ್ಷಣವೆಂದರೆ ಕೇವಲ ಅಂಕ ಗಳಿಕೆ ಮಾತ್ರವಲ್ಲ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕ ಗಣಪತಿ ಮಾತನಾಡಿ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆಗೆ ಅವಿನಾಭಾವ ಸಂಬಂಧವಿದೆ. ಶಾಲೆಗಳಲ್ಲಿ ಕಾನೂನು ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮಗಳನ್ನು ಇಲಾಖೆ ಮಾಡುತ್ತಿದೆ. ವಿದ್ಯಾರ್ಥಿಗಳು ಶಿಸ್ತನ್ನು ಮೈಗೂಡಿಸಿಕೊಳ್ಳುವ ಮೂಲಕ ಕಾನೂನನ್ನು ಪಾಲನೆ ಮಾಡಬೇಕು. ನಾವು ಕಾನೂನು ಪಾಲನೆ ಮಾಡಿದರೆ ಕಾನೂನು ನಮ್ಮನ್ನು ಪಾಲಿಸುತ್ತದೆ. ಶಿಕ್ಷಣವೆಂದರೆ ಕೇವಲ ಅಂಕ ಗಳಿಕೆ ಮಾತ್ರವಲ್ಲ ವ್ಯಕ್ತಿತ್ವ ವಿಕಸನ, ಸಭ್ಯ ನಾಗರಿಕರಾಗಿ ರೂಪಿಸುವುದು ನಿಜವಾದ ಶಿಕ್ಷಣ ಎಂದು ಹೇಳಿದ ಅವರು, ವಿದ್ಯಾರ್ಥಿಗಳು ಮಾದಕ ವಸ್ತುಗಳತ್ತ ಆಕರ್ಷಿತರಾಗದೇ ಜ್ಞಾನರ್ಜನೆಯ ಕಡೆಗೆ ಒಲವು ಹರಿಸಬೇಕು. ನಿರ್ದಿಷ್ಟ ಗುರಿಯ ಕಡೆಗೆ ಗಮನ ವಿರಲಿ. ಇವತ್ತು ಸುದ್ಧಿಯನ್ನು ಬಿತ್ತರಿಸುವ ಪತ್ರಕರ್ತರು ಸಮಾಜದ ಜವಬ್ದಾರಿಯನ್ನು ಅರಿತು ಈ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದ್ದಾರೆ. ಇದು ಸ್ತುತ್ಯರ್ಹವಾದುದು ಎಂದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಮಾತನಾಡಿ ರಜತ ಮಹೋತ್ಸವ ಸಂಭ್ರಮದಲ್ಲಿರುವ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ರಜತ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ವಿದ್ಯಾರ್ಥಿಗಳಿಗೆ ಕ್ವೀಜ್ ಸ್ಪರ್ಧೆ, ಕುಗ್ರಾಮ ಪ್ರದೇಶದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಯೋಜನೆ ಆಳವಡಿಸಿಕೊಂಡಿದ್ದೇವೆ ಎಂದರು.

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅಧ್ಯಕ್ಷತೆ ವಹಿಸಿದ್ದರು.

ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ವಿನಯ ಪಾಯಸ್, ಛಾಯಾಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಗಿರೀಶ್ ಜಿ.ಕೆ., ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಟಿ.ಲೋಕೇಶ ಆಚಾರ್ಯ ತೆಕ್ಕಟ್ಟೆ ಉಪಸ್ಥಿತರಿದ್ದರು.

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾಘವೇಂದ್ರ ಪೈ ಗಂಗೊಳ್ಳಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗಣೇಶ ಎಸ್.ಬೀಜಾಡಿ ವಂದಿಸಿದರು. ಹಿರಿಯ ಪತ್ರಕರ್ತ ಕೆ.ಜಿ ವೈದ್ಯ ಕಾರ್ಯಕ್ರಮ ನಿರ್ವಹಿಸಿದರು.

ಕುಂದಾಪುರ ತಾಲೂಕಿನ ಸರಕಾರಿ ಪ್ರೌಢಶಾಲೆ ಮತ್ತು ಅನುದಾನಿತ ಸೇರಿದಂತೆ ಒಟ್ಟು ೨೭ ಶಾಲೆಗಳ ೯೯ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳು ಈ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!