spot_img
Saturday, March 28, 2026
spot_img

ಉಡುಪಿ: ಯಕ್ಷಗಾನ ಸ್ತ್ರೀವೇಷಗಳು ಮತ್ತು ಹಾಸ್ಯ ವೇಷಗಳ ಪ್ರಾತ್ಯಕ್ಷಿಕೆ ಹಾಗೂ ದಾಖಲೀಕರಣ

ಉಡುಪಿ: ಅಕ್ಟೋಬರ್ 1, 2023 ಆದಿತ್ಯವಾರದಂದು ಉಡುಪಿ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಯಕ್ಷಗಾನ ಕೇಂದ್ರ ಇಂದ್ರಾಳಿ, ಉಡುಪಿ, ಮಾಹೆ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಯಕ್ಷದಿಗ್ಗಜರಿಂದ ಯಕ್ಷಗಾನ ಪುರಾಣ ಪ್ರಸಂಗಗಳ ಆಯ್ದ ಸ್ತ್ರೀವೇಷಗಳು ಮತ್ತು ಹಾಸ್ಯವೇಷಗಳ ಪ್ರಾತ್ಯಕ್ಷಿಕೆ ಹಾಗೂ ದಾಖಲೀಕರಣ ನಡೆಯಿತು.

ಮಣಿಪಾಲ ಮಾಹೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿ, ‘ಕಲೆ-ಸಾಹಿತ್ಯ-ಸಂಸ್ಕೃತಿಗೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಆ ಹಿನ್ನಲೆಯಲ್ಲಿ ಮಾಹೆ ವಿಶ್ವವಿದ್ಯಾಲಯ ಯಕ್ಷಗಾನ ಕೇಂದ್ರದ ಮೂಲಕ ಯಕ್ಷಕಲೆಗೆ ಕಾಯಕಲ್ಪ ನೀಡುವಲ್ಲಿ ಸಹಾಯವನ್ನು ನೀಡುತ್ತಾ ಬಂದಿದೆ. ಯಕ್ಷಗಾನದಲ್ಲಿ ಸ್ತ್ರೀವೇಷ ಹಾಗೂ ಹಾಸ್ಯವೇಷಗಳ ನಿರ್ವಹಣೆ ಸವಾಲಿನದ್ದು, ಕಲಾವಿದರ ಬದ್ಧತೆಯು ಮೆಚ್ಚುವಂತದ್ದು. ಆ ನಿಟ್ಟಿನಲ್ಲಿ ಮಾಹೆ ಆಡಳಿತಕ್ಕೊಳಪಟ್ಟ ಯಕ್ಷಗಾನ ಕೇಂದ್ರ ಇಂದ್ರಾಳಿ ಹಾಗೂ ಪ್ರಾದೇಶಿಕ ಜಾನಪದರಂಗಕಲೆಗಳ ಅಧ್ಯಯನ ಕೇಂದ್ರದ ಮೂಲಕ ಪ್ರಾತ್ಯಕ್ಷಿಕೆಯ ಜೊತೆಯಲ್ಲಿ ದಾಖಲೀಕರಣದ ಉಪಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅದರ ಸದುಪಯೋಗ ಯಕ್ಷಗಾನ ಕ್ಷೇತ್ರಕ್ಕೆ ದೊರಕಲಿ’ ಎಂದು ಶುಭ ಹಾರೈಸಿದರು.

ಸಭಾಧ್ಯಕ್ಷತೆಯನ್ನು ವಹಿಸಿರುವ ಯಕ್ಷಗಾನ ಕೇಂದ್ರದ ಸಲಹಾ ಸಮಿತಿಯ ಅಧ್ಯಕ್ಷರಾದ ಪಿ. ಕಿಶನ್ ಹೆಗ್ಡೆ ಅವರು ಮಾತನಾಡಿ ‘ಯಕ್ಷಗಾನ ರಂಗದ ಭವಿಷ್ಯದ ದೃಷ್ಟಿಯಿಂದ ಇಂತಹ ಪ್ರಾತ್ಯಕ್ಷಿಕೆ ಮತ್ತು ದಾಖಲೀಕರಣದ ಅಗತ್ಯವನ್ನು ಮನಗಂಡು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಅವರು ಮಾತನಾಡಿ ‘ಹಿಂದೆ ಯಕ್ಷಗಾನ ರಂಗಸ್ಥಳ ಮತ್ತು ಚೌಕಿಯೇ ಕಲಿಕೆಗೆ ಪೂರಕವಾಗಿತ್ತು, ಯಕ್ಷಗಾನ ಕೇಂದ್ರ ಯಕ್ಷಗಾನ ಕಲಿಕೆಗೆ ಗುರುಕುಲ ಮಾದರಿಯಲ್ಲಿ ಶೈಕ್ಷಣಿಕ ರೂಪುಕೊಟ್ಟು ಕಲಿಸುತ್ತಿರುವುದು ಶ್ಲಾಘನೀಯ ಮತ್ತು ಇಂತಹ ಪ್ರಾತ್ಯಕ್ಷಿಕೆ ದಾಖಲೀಕರಣ ಕಾರ್ಯಕ್ರಮ ಯಶಸ್ವಿಯಾಗಲಿ’ ಎಂದು ಶುಭ ಹಾರೈಸಿದರು.

ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಅವರು ಮಾತನಾಡಿ ‘ಪ್ರಾದೇಶಿಕ ಜಾನಪದ ಕಲೆಗಳನ್ನು ಉಳಿಸುವುದು ಅಗತ್ಯ, ಅದನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಾದರೆ ದಾಖಲೀಕರಣದ ಅಗತ್ಯ ಇದೆ. ಅಂತಹ ಕಾರ್ಯಕ್ರಮಗಳಿಗೆ ಕನ್ನಡ ಸಂಸ್ಕೃತಿ ಇಲಾಖೆ ಸದಾ ಪ್ರೋತ್ಸಾಹವನ್ನು ನೀಡುತ್ತದೆ’ ಎಂದರು.

ಕೆ.ಎಂ.ಸಿ ಮಣಿಪಾಲದ ನೇತ್ರತಜ್ಞರಾದ ಡಾ. ಶೈಲಜಾ ಹಾಗೂ ಹಿರಿಯ ಸ್ತ್ರೀವೇಷಧಾರಿ ಬೇಳಂಜೆ ಜಯಂತ ನಾಯ್ಕ ಸಭೆಯಲ್ಲಿ ಉಪಸ್ಥಿತರಿದ್ದರು. ಯಕ್ಷಗಾನ ಕೇಂದ್ರ ಹಾಗೂ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಪ್ರಾತ್ಯಕ್ಷಿಕೆಯ ಸಂಯೋಜಕ ಪ್ರೊ ಎಸ್.ವಿ ಉದಯಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ರಾಘವೇಂದ್ರ ತುಂಗ ನಿರೂಪಿಸಿದರು. ಕೇಂದ್ರದ ಸಲಹಾಸಮಿತಿಯ ಸದಸ್ಯರಾದ ವಿಶ್ವನಾಥ ಶೆಣೈ, ಭುವನಪ್ರಸಾದ ಹೆಗ್ಡೆ, ಮಂಜುನಾಥ ಮಯ್ಯ, ಅತಿಥಿಗಳನ್ನು ಗೌರವಿಸಿದರು.

ಪ್ರಾತ್ಯಕ್ಷಿಕೆಯ ಆರಂಭದಲ್ಲಿ ‘ಬಬ್ರುವಾಹನ ಕಾಳಗದ’ ಚಿತ್ರಾಂಗದೆ-ಕಟಕಿ ಪಾತ್ರಗಳ ಸಂಭಾಷಣೆಯ ಸನ್ನಿವೇಶವನ್ನು ಪ್ರದರ್ಶಿಸಲಾಯಿತು. ಪಾಂಡವಾಶ್ವಮೇಧದ ತುರಗ ಮಣಿಪುರವನ್ನು ಪ್ರವೇಶಿಸಿದ ವಿಷಯವನ್ನು ಸಖಿ ಕಟಕಿಯಿಂದ ಕೇಳಿ ತಿಳಿದ ಚಿತ್ರಾಂಗದೆ ತುರಗದ ಬೆಂಗಾವಲಿಗಾಗಿ ಬಂದು ಅರ್ಜುನನ ಕುರಿತಾಗಿ ಮತ್ತೆ ಮತ್ತೆ ಕೇಳಿ ಸಂತೋಷ ಪಡುವುದು, ಅರಿಯದೆ ಕುದುರೆಯನ್ನು ಕಟ್ಟಿದ ಮಗ ಬಬ್ರುವಾಹನನಿಂದ ಆದ ಪ್ರಮಾದಕ್ಕೆ ಪ್ರತಿಕ್ರಯಿಸುವ ಮನೋಜ್ಞ ಅಭಿನಯವನ್ನು ಹೊಸಂಗಡಿ ರಾಜೀವ ಶೆಟ್ಟಿ -ಚಿತ್ರಾಂಗದೆ, ಮನೋಹರ ನಾಯಕ್- ಕಟಕಿ ಪಾತ್ರಗಳನ್ನು ನಿರ್ವಹಿಸಿದರು.

ಬಳಿಕ ‘ರಾಜಾಯಯಾತಿ ‘(ಕಚದೇವಯಾನಿ) ಪ್ರಸಂಗದ ಪ್ರಮುಖ ಸನ್ನಿವೇಶವಾದ ದೇವಯಾನಿ ಮತ್ತು ಶರ್ಮಿಷ್ಠೆ ವನವಿಹಾರಕ್ಕೆ ಹೋಗುವುದು ಜಲಕ್ರೀಡೆಯನ್ನಾಡುವುದು ಅಲ್ಲಿ ವಸನದ ಕಾರಣಕ್ಕಾಗಿ ನಡೆಯುವ ವಾಗ್ವಾದವನ್ನು ಸಮರ್ಥವಾಗಿ ಪ್ರದರ್ಶಿಸಲಾಯಿತು. ಹಿರಿಯ ಕಲಾವಿದರಾದ ಆನಂದರಾವ್ -ದೇವಯಾನಿಯಾಗಿ, ಸಂಜೀವ ಶೆಟ್ಟಿ- ಶರ್ಮಿಷ್ಠೆಯಾಗಿ ಪಾತ್ರಗಳಿಗೆ ನ್ಯಾಯ ಒದಗಿಸಿದರು.

‘ದ್ರೌಪದಿ ಪ್ರತಾಪ’ದ ದ್ರೌಪದಿಯಾಗಿ ಸುಂದರ ನಾಯ್ಕ ಸುಭದ್ರೆಯಾಗಿ ಪ್ರದೀಪ ಶೆಟ್ಟಿಯವರು ಆ ಪ್ರಸಂಗದ ದ್ರೌಪದಿ-ಸುಭದ್ರೆ ಯುದ್ಧಕ್ಕಾಗಿ ಮುಖಾಮುಖಿಯಾಗುವ ಸನ್ನಿವೇಶವನ್ನು ಪ್ರದರ್ಶಿಸಿದರು. ಕಸೆ ಸ್ತ್ರೀವೇಷದ ಪಾರಂಪರಿಕ ನಡೆಗಳನ್ನು ತೋರಿಸುವ ಮೂಲಕ ದಾಖಲೀಕರಣಕ್ಕೆ ಬೇಕಾದ ಗ್ರಾಸವನ್ನೊದಗಿಸಿದರು.

ಹಿರಿಯ ಅನುಭವಿ ಸ್ತ್ರೀಪಾತ್ರಧಾರಿ ವಿಷ್ಣುಮೂರ್ತಿ ಬಾಸ್ರಿ- ಮಾಯಾ ಶೂರ್ಪನಖಿಯಾಗಿ, ಮುಗ್ವಗಣೇಶ ನಾಯಕ -ರಾಮನಾಗಿ ‘ಪಂಚವಟಿ’ ಪ್ರಸಂಗದ ಸನ್ನಿವೇಶವನ್ನು ಕಟ್ಟಿಕೊಟ್ಟರು. ಪ್ರಮುಖ ಪದ್ಯಗಳಿಗೆ ಭಾವನಾತ್ಮಕ ಅಭಿನಯದಿಂದ ಶೃಂಗಾರ ರಸಾಭಿವ್ಯಕ್ತಿಯ ಪರಿಚಯವನ್ನು ಮಾಡಿಸಿದರು.

ವೀರರಸ ಪ್ರಧಾನವಾದ ‘ಅಭಿಮನ್ಯು ಕಾಳಗ’ದ ಸುಭದ್ರೆಯಾಗಿ -ಜಯಾನಂದ, ಅಭಿಮನ್ಯುವಾಗಿ- ಆದಿತ್ಯ ಹೆಗಡೆ ಭಾಗವಹಿಸಿದ್ದರು. ಗುರುದ್ರೋಣಾಚಾರ್ಯರಿಂದ ರಚಿಸಲ್ಪಟ್ಟ ಚಕ್ರವ್ಯೂಹವನ್ನು ಭೇದಿಸಲು ಧರ್ಮರಾಯನಿಂದ ಅಪ್ಪಣೆ ಪಡೆದು ಹೊರಟ ಅಭಿಮನ್ಯು ತಾಯಿಯಿಂದ ಆಶೀರ್ವಾದ ಪಡೆಯುವ ಸನ್ನಿವೇಶ ಪ್ರಾತ್ಯಕ್ಷಿಕೆಗೆ ಪೂರಕವಾಗಿತ್ತು.
ಬಿಡುವಿಲ್ಲದೆ ನಡೆದ ದಾಖಲೀಕರಣದಲ್ಲಿ ಮುಂದೆ ಹಾಸ್ಯಸನ್ನಿವೇಶಗಳನ್ನು ಪ್ರದರ್ಶಿಸಲಾಯಿತು.

‘ಪಟ್ಟಾಭಿಷೇಕ’ ಪ್ರಸಂಗದ ಮಂಥರೆಯಾಗಿ -ಮಹಾಬಲ ದೇವಾಡಿಗ, ಕೈಕೆಯಾಗಿ -ರಮೇಶ ಗಾಣಿಗ ಅಚ್ಚುಕಟ್ಟಾದ ಸಮರ್ಥ ಪ್ರಸ್ತುತಿಯನ್ನು ಮಾಡಿದರು. ರಾಮನಿಗೆ ಪಟ್ಟಾಭಿಷೇಕ ಎಂದು ಗುಪ್ತವಾಗಿ ತಿಳಿದ ಮಂಥರೆ ತನ್ನ ನಿರ್ಧಾರವನ್ನು ಕೈಕೆಯ ಮೂಲಕ ನೆರವೇರಿಸುವ, ಕೈಕೆಯ ಮನಸ್ಸು ವಿಚಲಿತವಾಗುವ ದೃಶ್ಯ ಚೆನ್ನಾಗಿ ಮೂಡಿಬಂದಿತು.

ನಂತರ ಬಡಗುತಿಟ್ಟು–ತೆಂಕುತಿಟ್ಟಿನಲ್ಲಿ ಹೆಚ್ಚು ಪ್ರದರ್ಶನ ಕಾಣುವ ನಾಟಕೀಯತೆ ಪ್ರಧಾನವಾದ ‘ಬೇಡರ ಕಣ್ಣಪ್ಪ’ ಪ್ರಸಂಗದ ಕೈಲಾಸಶಾಸ್ತ್ರಿ-ಕಾಶಿಮಾಣಿ ಗೌರಿ ಸನ್ನಿವೇಶವನ್ನು ಪ್ರಸ್ತುತಿಗಾಗಿ ತೆಗೆದುಕೊಳ್ಳಲಾಯಿತು. ಕಾಶಿಮಾಣಿಯಾಗಿ- ಹಳ್ಳಾಡಿ ಜಯರಾಮ ಶೆಟ್ಟಿ, ಶೇಖರ ಶೆಟ್ಟಿ ಕೈಲಾಸ -ಶಾಸ್ತ್ರಿಯಾಗಿ, ಗೌರಿಯಾಗಿ -ನಾಗಪ್ಪ ಉತ್ತಮ ಪ್ರದರ್ಶನ ನೀಡಿದರು.


‘ಶ್ರೀಕೃಷ್ಣ ಗಾರುಡಿ’ ಪ್ರಸಂಗದ ಪ್ರಮುಖ ಹಾಸ್ಯಸನ್ನಿವೇಶದ ಪ್ರಸ್ತುತಿಗಾಗಿ ಗಾರುಡಿಗರಾಗಿ- ಪೂವಪ್ಪ ಮತ್ತು ಚಂದ್ರಕುಲಾಲ ರಂಜಿಸಿ, ಕಾರ್ಯಕ್ರಮದ ಯಶಸ್ಸಿನಲ್ಲಿ ಭಾಗಿಯಾದರು.

ನಂತರ ‘ಘೋಷಯಾತ್ರೆ’ ಪ್ರಸಂಗದಲ್ಲಿ ಅಪಶಕುನದ ಪಾತ್ರವನ್ನು ನಾಗಪ್ಪ ಅವರು ನಿರ್ವಹಿಸಿದರು. ಘೋಷಯಾತ್ರೆ ಅಥವಾ ಚಿತ್ರಸೇನ ಕಾಳಗ ಯಕ್ಷರಂಗದಲ್ಲಿ ಅಪರೂಪವಾಗುತ್ತಿರುವ ಈ ಸಂದರ್ಭದಲ್ಲಿ ‘ಅಪಶಕುನ’ದ ಸನ್ನಿವೇಶವನ್ನು ಕಲಾವಿದರು ಸಮರ್ಥವಾಗಿ ನಿರ್ವಹಿಸಿ ರಂಗದಲ್ಲಿ ಕಣ್ಮರೆಯಾದ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾದರು.

‘ಸುಭದ್ರಕಲ್ಯಾಣ’ದ ಯತಿ ಅರ್ಜುನನಾಗಿ -ಶಿವಕುಮಾರ್, ವನಪಾಲಕನಾಗಿ- ಚಂದ್ರಕುಲಾಲ ನಿರ್ವಹಿಸಿದರು. ಸುಭದ್ರಾಕಲ್ಯಾಣಕ್ಕೆ ಆಗಮಿಸಿದ ಅರ್ಜುನ, ಶ್ರೀಕೃಷ್ಣನ ನಿರ್ದೇಶನದಂತೆ ಮುನಿ ವೇಶದಲ್ಲಿ ಉದ್ಯಾನವನದಲ್ಲಿರುವ ಅರ್ಜುನನನ್ನು ಬೇರೆ ಬೆರೆ ರೀತಿಯಿಂದ ಮಾತನಾಡಿಸುವ ಪ್ರಯತ್ನದಲ್ಲಿ ನಿರತವಾದ ವನಪಾಲಕನ ಅಭಿನಯ ಸುಂದರವಾಗಿ ಮೂಡಿಬಂದಿತು.

ಯಕ್ಷಗಾನ ರಂಗದಲ್ಲಿ ಬಾಹುಕನ ವೇಷ ನಿರ್ವಹಣೆಗೆ ಹೆಸರಾದ ಮಹಾಬಲ ದೇವಾಡಿಗ ಖ್ಯಾತ ಸ್ತ್ರೀವೇಷಧಾರಿ ರಾಜೀವ ಶೆಟ್ಟಿಯವರು ಮುಂದಿನ ‘ನಳದಮಯಂತಿ’ ಆಖ್ಯಾನದ ಬಾಹುಕ -ದಮಯಂತಿಯ ದೃಶ್ಯವನ್ನು ಚೆನ್ನಾಗಿ ಪ್ರಸ್ತುತ ಪಡಿಸಿದರು.

ಈ ಎಲ್ಲಾ ದೃಶ್ಯಗಳಿಗೆ ಸಮರ್ಥ ಭಾಗವತರಾಗಿ ಯಕ್ಷಗಾನ ಕೇಂದ್ರದ ಗುರುಗಳಾದ ಉಮೇಶ ಸುವರ್ಣ ಯಕ್ಷರಂಗದ ಭಾಗವತ ದೇವರಾಜ ದಾಸ್ ಸಹಕರಿಸಿದರು. ಕೇಂದ್ರದ ಇನ್ನೋರ್ವ ಗುರು ಕೃಷ್ಣಮೂರ್ತಿ ಭಟ್ ಚಂಡೆಯಲ್ಲಿ, ಮಹೇಶ್ ಕುಮಾರ್ ಹಾಗೂ ನಾಗರಾಜ ಎಡಮೊಗೆ ಮದ್ದಲೆಯಲ್ಲಿ ಸಾಥ್ ನೀಡಿದರು. ಪ್ರಾತ್ಯಕ್ಷಿಕೆಯ ಸಮಗ್ರ ನಿರ್ವಹಣೆಯನ್ನು ಪ್ರಾಧ್ಯಾಪಕ ಉದಯಕುಮಾರ್ ಶೆಟ್ಟಿ ನಿರ್ವಹಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿರುವ ಮಣಿಪಾಲ ಮಾಹೆ ವಿಶ್ವವಿದ್ಯಾಲಯದ ಕುಲಸಚಿವ ಡಾ ಪಿ ಗಿರಿಧರ ಕಿಣಿ ಮಾತನಾಡಿ, ‘ಯಕ್ಷಗಾನ ಕೇಂದ್ರದ ಮೂಲಕ ಸರ್ಟಿಫಿಕೇಟ್ ಕೋರ್ಸ್, ಡಿಪ್ಲೋಮಾ ಕೋರ್ಸ್ ಆರಂಭಿಸುವ ಇರಾದೆ ಇದೆ. ಈ ಯೋಜನೆ ಕಾರ್ಯಗತಗೊಳಿಸುವುದಕ್ಕೆ ಪ್ರಯತ್ನಿಸಲಾಗುತ್ತದೆ. ಇದರಿಂದ ಯಕ್ಷಗಾನ ಕ್ಷೇತ್ರಕ್ಕೆ ಸಹಾಯವಾಗಲಿ’ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಯರಾಮ ಶೆಟ್ಟಿ ಮಾತನಾಡಿ, ‘ಇಂದಿನ ಪ್ರಾತ್ಯಕ್ಷಿಕೆ ಪೂರ್ಣಪ್ರಮಾಣದ ದೃಶ್ಯ ಸಂಯೋಜನೆಯಲ್ಲ, ಕಾಲಾನುಕ್ರಮದಲ್ಲಿ ಅಭಿನಯ, ಸಂಭಾಷಣೆಯನ್ನು ಕಲಾವಿದರು ಬದಲಾಯಿಸಿಕೊಳ್ಳಬಹುದು, ಆದರೆ ವೇಷಗಾರಿಕೆ ಹೀಗಿತ್ತು ಎಂಬುದನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಪ್ರಯತ್ನ ಮಾಡಿದ್ದೇವೆ’ ಎಂದರು.

ನಿವೃತ್ತ ಮುಖ್ಯೋಪಾಧ್ಯಾಯ ಸರ್ಪು ಸದಾನಂದ ಪಾಟೀಲ್, ಯಕ್ಷಗಾನ ಪ್ರೋತ್ಸಾಹಕರಾದ ಗುಳ್ಮೆ ಕೃಷ್ಣ ನಾಯಕ್ ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡದ್ದಕ್ಕಾಗಿ ಯಕ್ಷಗಾನ ಕೇಂದ್ರವನ್ನು ಶ್ಲಾಘಿಸಿದರು. ಕೇಂದ್ರದ ಆಡಳಿತಾಧಿಕಾರಿ ಡಾ ಬಿ. ಜಗದೀಶ್ ಶೆಟ್ಟಿ ನಿರೂಪಿಸಿ, ಸಲಹಾಸಮಿತಿ ಸದಸ್ಯ ಮಂಜುನಾಥ ಮಯ್ಯ ವಂದಿಸಿದರು.

ನಂತರ ಉಡುಪಿ ಯಕ್ಷಗಾನ ಕೇಂದ್ರದ ಅಂಗಸಂಸ್ಥೆಯಾದ ಯಕ್ಷರಂಗದ ಕಲಾವಿದರಿಂದ ‘ಭೀಷ್ಮಪ್ರತಿಜ್ಞೆ’ ಯಕ್ಷಗಾನ ಪ್ರದರ್ಶನಗೊಂಡಿತು. ಭಾಗವತರಾಗಿ ಉಮೇಶ ಸುವರ್ಣ, ದೇವರಾಜ ದಾಸ, ಮದ್ದಲೆಯಲ್ಲಿ ನಾಗರಾಜ ಎಡಮೊಗೆ, ಚಂಡೆ ವಾದಕರಾಗಿ ಕೃಷ್ಣಮೂರ್ತಿ ಭಟ್ ಬಗ್ವಾಡಿ, ಶಂತನು ಗಣೇಶ ನಾಯ್ಕ ಮುಗ್ವ, ಗಾಲವ ಶಿವಕುಮಾರ ಅಳಗೋಡು, ಮುನಿಗಳಾಗಿ ಕೌಶಿಕ, ರಾಘವೇಂದ್ರ ಕರುಣಾಕರ, ತಮಾಲಕೇತುವಾಗಿ ರಾಘವೇಂದ್ರ ತುಂಗ ಕೋಟ, ದೇವವೃತ ಆದಿತ್ಯಭಟ್ ಯಡೂರು, ಯೋಜನಗಂಧಿಯಾಗಿ ಪ್ರತೀಶ್ ಕುಮಾರ್, ಮಂತ್ರಿಯಾಗಿ ಪ್ರವೀಣ ಕೊಪ್ಪಲ, ಕಂದರನಾಗಿ ಶೇಖರ ಶೆಟ್ಟಿ ಭಾಗವಹಿಸಿದ್ದರು. ವೇಷಭೂಷಣದಲ್ಲಿ ಗಣೇಶ ಬಳೆಗಾರ ಮತ್ತು ಬಳಗ, ಜನ್ನಾಡಿ, ಶಾಂತಾರಾಮ ಆಚಾರ್ಯ, ರಂಗನಾಥ ಶೆಟ್ಟಿಗಾರ ಸಹಕರಿಸಿದರು.

-ರಾಘವೇಂದ್ರ ತುಂಗ
ಉಪನ್ಯಾಸಕರು, ಎಂ.ಜಿ.ಎಂ ಕಾಲೇಜು

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!