Sunday, September 8, 2024

ಬ್ರಹ್ಮಾವರದಲ್ಲಿ ಕೃಷಿ ಪದವಿ ಕಾಲೇಜು ಆರಂಭಿಸುವಂತೆ ಕೃಷಿ ಸಚಿವರಿಗೆ ಉಡುಪಿ ಜಿಲ್ಲಾ ರೈತ ಸಂಘ ಮನವಿ

ಕೊಲ್ಲೂರು: ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರವು ಮೂರು ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿದ್ದು ಇಲ್ಲಿ ಕೃಷಿ ಡಿಪ್ಲೋಮಾ ಕೋರ್ಸ್ ಸ್ಥಗಿತಗೊಳ್ಳುವ ಹಂತದಲ್ಲಿದೆ. ಕಟ್ಟಡ ಸಹಿತ ಎಲ್ಲ ಮೂಲಭೂತ ಸೌಕರ್ಯ ಇರುವ ಇಲ್ಲಿ ಕೃಷಿ ಬಿ‌ಎಸ್ಸಿ ಪದವಿ ಕಾಲೇಜು ಪ್ರಾರಂಭಿಸುವಂತೆ ಉಡುಪಿ ಜಿಲ್ಲಾ ರೈತ ಸಂಘ ಕೃಷಿ ಸಚಿವ ಚೆಲುವರಾಯ ಸ್ವಾಮಿ ಅವರಿಗೆ ಕೊಲ್ಲೂರಿನಲ್ಲಿ ಮನವಿ ಸಲ್ಲಿಸಿದೆ.

1987 ರಿಂದ ಬ್ರಹ್ಮಾವರದಲ್ಲಿನ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರವು ಕಳೆದ ಮೂರು ದಶಕಗಳಿಂದಲೂ ರೈತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಸುಮಾರು 350 ಎಕರೆ ವಿಸ್ತೀರ್ಣದಲ್ಲಿ ಚಾಚಿಕೊಂಡಿರುವ ಸಂಶೋಧನಾ ಕೇಂದ್ರವು ಕೃಷಿ ಸಂಶೋಧನೆ, ವಿಸ್ತರಣಾ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ತಾಂತ್ರಿಕತೆಯನ್ನು ಅಳವಡಿಸುವಂತೆಯು ರೈತರಿಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಆದರೆ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿರುವ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಪದವಿ ವ್ಯಾಸಂಗ ಮಾಡಲು ಅವಕಾಶ ಇಲ್ಲದೇ ಇರುವುದು ಕರಾವಳಿಯ ವಿದ್ಯಾರ್ಥಿಗಳಿಗೆ ಹಿನ್ನಡೆಯಾಗಿದೆ. ಈ ಹಿನ್ನಲೆಯಲ್ಲಿ ಕಳೆದ ಮೂರು ದಶಕಗಳಿಂದಲೂ ಕರಾವಳಿಯಲ್ಲಿ ಕೃಷಿ ಕಾಲೇಜು ಆರಂಭಿಸಬೇಕು ಎನ್ನುವ ಬೇಡಿಕೆ ಇದೆ.

2010ರಲ್ಲಿ ಬಿ.ಎಸ್.ಯುಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿತ್ತು . ಕೃಷಿ ಕಾಲೇಜು ಆರಂಭಕ್ಕೆ ರಾಜ್ಯ ಸರ್ಕಾರ ಸಮ್ಮತಿ ನೀಡದ ಹಿನ್ನಲೆಯಲ್ಲಿ 2014 ರಿಂದ ಡಿಪ್ಲೋಮಾ ಕೃಷಿ ಮಹಾವಿದ್ಯಾಲಯವನ್ನು ಆರಂಭ ಮಾಡಲಾಗಿತ್ತು ಕರಾವಳಿ ಜಿಲ್ಲೆಗಳಾದಂತಹ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಯಾವುದೇ ಕೃಷಿ ಕಾಲೇಜು ಇಲ್ಲದ ಕಾರಣ 2016 ರಲ್ಲಿ ಅಂದಿನ ಕೃಷಿ ಮಂತ್ರಿಗಳಾದಂತಹ ಕೃಷ್ಣಬೈರೆಗೌಡರು ಕೃಷಿ ಡಿಪ್ಲೋಮಾ ಕಟ್ಟಡ ಉದ್ಘಾಟನಾ ಸಂದರ್ಭದಲ್ಲಿ ಬ್ರಹ್ಮಾವರಕ್ಕೆ ಕೃಷಿ ಕಾಲೇಜನ್ನು ಘೋಷಿಸುವ ಭರವಸೆಯನ್ನು ನೀಡಿದ್ದರು.

ಈಗಿರುವ ಡಿಪ್ಲೋಮಾ ಮಹಾವಿದ್ಯಾಲಯದ ಕಾಲೇಜು ಕಟ್ಟಡ, ಹಾಸ್ಟೆಲ್ ಬಳಸಿಕೊಂಡು ಕೃಷಿ ಕಾಲೇಜು ಆರಂಭಿಸಬಹುದಾಗಿದೆ. ಇಲ್ಲವಾದರೆ ಕೋಟ್ಯಾಂತರ ರೂಪಾಯಿ ವ್ಯಯಿಸಿ ನಿರ್ಮಾಣಗೊಂಡಿರುವ ಕಟ್ಟಡಗಳು ಅವಸಾನದ ಅಂಚಿಗೆ ತಲುಪಲಿವೆ. ಇವೆಲ್ಲಾ ಅನುಕೂಲಗಳಿರುವಾಗ ರಾಜ್ಯ ಸರಕಾರ ಧನಾತ್ಮಕವಾಗಿ ಯೋಚಿಸಿ ನಮ್ಮ ಮನವಿಯನ್ನು ಹೃದಯಪೂರಕವಾಗಿ ಸ್ವೀಕರಿಸಿ, ಕರಾವಳಿ ಪ್ರದೇಶದಲ್ಲಿರುವ ಬ್ರಹ್ಮಾವರಕ್ಕೆ ಈಗಾಗಲೇ ಮಂಜೂರಾಗಿರುವ ಕೃಷಿ ಪದವಿ ಕಾಲೇಜನ್ನು ಆರಂಭಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ದಿನೇಶ ಹೆಗ್ಡೆ ಮೊಳಹಳ್ಳಿ, ಜಿ.ಪಂ,ಮಾಜಿ ಅಧ್ಯಕ್ಷ ರಾಜು ಪೂಜಾರಿ, ಜಿ.ಪಂ.ಮಾಜಿ ಸದಸ್ಯ ಬಾಬು ಹೆಗ್ಡೆ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ತಾ.ಪಂ. ಮಾಜಿ ಸದಸ್ಯ ರಮೇಶ ಗಾಣಿಗ ಕೊಲ್ಲೂರು, ವಾಸುದೇವ ಪೈ ಸಿದ್ಧಾಪುರ, ರೈತ ಸಂಘದ ವಲಯಾಧ್ಯಕ್ಷರುಗಳಾದ ಉದಯ ಕುಮಾರ್ ಶೆಟ್ಟಿ ವಂಡ್ಸೆ, ಶರತ್ ಶೆಟ್ಟಿ ಬಾಳಿಕೆರೆ, ಶರತಚಂದ್ರ ಶೆಟ್ಟಿ ಗುಲ್ವಾಡಿ, ವಸಂತ ಹೆಗ್ಡೆ, ಚಂದ್ರಶೇಖರ ಶೆಟ್ಟಿ ಮರಾತ್ತೂರು, ಸದಾಶಿವ ಶೆಟ್ಟಿ, ವಂಡಬಳ್ಳಿ ಜಯರಾಮ ಶೆಟ್ಟಿ, ಕೃಷ್ಣದೇವ ಕಾರಂತ ಕೋಣಿ, ಪ್ರದೀಪ ಶೆಟ್ಟಿ ಗುಡಿಬೆಟ್ಟು, ಸಂಪಿಗೇಡಿ ಸಂಜೀವ ಶೆಟ್ಟಿ, ಕಿರಣ್ ಹೆಗ್ಡೆ ಅಂಪಾರು, ಸತೀಶ್ ಶೆಟ್ಟಿ ಹಳ್ಳಿ, ಚೋರಾಡಿ ಅಶೋಕ್ ಶೆಟ್ಟಿ, ಸತೀಶ ಶೆಟ್ಟಿ ಕಡ್ರಿ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!