Sunday, September 8, 2024

ಕೋಟ: ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಕಾರ್ಯಕ್ರಮ ‘ಇಂಪನಾ’ ಉದ್ಘಾಟನೆ

ಕೋಟ: (ಜನಪ್ರತಿನಿಧಿ ವಾರ್ತೆ) ಕೋಟ ಶಿವರಾಮ ಕಾರಂತರು ಎಲ್ಲ ಕ್ಷೇತ್ರಗಳಲ್ಲಿಯೂ ಕೈಯಾಡಿಸಿ ಸಾಧನೆ ಮಾಡಿದವರು. ತನ್ನ ಸಾಧನೆಯ ಮೂಲಕವೇ ಕೋಟದ ಹೆಸರನ್ನು ಜಗತ್ತಿನಾದ್ಯಂತ ಪಸರಿಸಿದವರು. ಸಾಹಿತ್ಯ, ಸಂಸ್ಕೃತಿ, ಪರಿಸರ ಹೋರಾಟ, ಕಲೆ ಹೀಗೆ ಎಲ್ಲ ಕ್ಷೇತ್ರದಲ್ಲಿಯೂ ಕೂಡಾ ತನ್ನ ಛಾಪು ಮೂಡಿಸಿದ ಕಾರಂತರು ಪರಿಸರಕ್ಕೆ ಧಕ್ಕೆಯಾಗುವ ಸಂದರ್ಭ ಹೋರಾಟಕ್ಕೂ ಮುಂದಾದವರು. ಮಾತುಗಳು ಸಾಧನೆಯಾಗಬಾರದು, ಸಾಧನೆಗಳು ಮಾತಾಗಬೇಕು ಎನ್ನುವುದಕ್ಕೆ ಕಾರಂತರು ಉತ್ತಮ ನಿದರ್ಶನ ಎಂದು ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ) ಕೋಟ, ಡಾ.ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ ಸಹಯೋಗದಲ್ಲಿ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಅಕ್ಟೋಬರ್ 3 ರಿಂದ 10 ತನಕ ನಡೆಯಲಿರುವ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಕಾರ್ಯಕ್ರಮ ಇಂಪನಾ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಸತೀಶ್ ಕುಂದರ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬೈಂದೂರು ವಿಧಾನಸಭಾ ಕ್ಷೇತ್ರ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಕಾಪು ವಿಧಾನಸಭಾ ಕ್ಷೇತ್ರ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ವಿಧಾನಸಭಾ ಕ್ಷೇತ್ರ ಶಾಸಕ ಯಶ್‌ಪಾಲ್ ಎ ಸುವರ್ಣ, ಡಾ. ಶಿವರಾಮ ಕಾರಂತ ಪ್ರತಿಷ್ಠಾನ(ರಿ)ಕೋಟದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್ ಉಡುಪಿ ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಬ್ರಹ್ಮಾವರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಹೆಚ್.ವಿ.ಇಬ್ರಾಹೀಂಪುರ್ ಉಪಸ್ಥಿತರಿದ್ದರು.

ಮಾಜಿ ಸಚಿವ ಹಾಗೂ ಕರ್ನಾಟಕ ವಿಧಾನ ಪರಿಷತ್ ಶಾಸಕ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಕಾರಂತರು ಈ ನಾಡಿನ ಆಸ್ತಿ. ಕಳೆದ 19 ವರ್ಷಗಳಿಂದ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಕಾರಂತರ ಆಸಕ್ತಿಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೇರು ಸಾಧಕರಿಗೆ ಕಾರಂತ ಹುಟ್ಟೂರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಕೋಟತಟ್ಟು ಗ್ರಾಮ ಪಂಚಾಯತ್ ಸ್ವತಂತ್ರ ಸರ್ಕಾರದಂತೆ ಕಾರ್ಯನಿರ್ವಹಿಸುತ್ತಾ ಕಾರಂತ ಥೀಂಪಾರ್ಕ್ ಸ್ಥಾಪನೆ, ನಿರ್ವಹಣೆಯಲ್ಲಿ ಗುರುತಿಸಿಕೊಂಡಿದೆ. ಪ್ರಸ್ತುತ ಕಾರಂತ ಥೀಂ ಪಾರ್ಕ್ ಇನ್ನಷ್ಟು ನವೀಕರಣಗೊಂಡಿದೆ. ಹವಾನಿಯಂತ್ರಿತ ವ್ಯವಸ್ಥೆ ಅಳವಡಿಸಲಾಗಿದೆ. ಚಿಮ್ಮುವ ಕಾರಂಜಿ, ಅತ್ಯಾಧುನಿಕ ಧ್ವನಿ-ಬೆಳಕಿನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ ಅವರು, ಹಲವು ದಶಕಗಳಿಂದ ಸಂಗೀತ ಕ್ಷೇತ್ರದಲ್ಲಿ ಅಮೂಲ್ಯ ಸೇವೆಯನ್ನು ಹಾಗೂ ಅವರು ಏರಿದ ಸಾಧನೆಯ ಮೆಟ್ಟಿಲುಗಳನ್ನು ಪರಿಗಣಿಸಿ ಖ್ಯಾತ ಶಾಸ್ತ್ರೀಯ ಸಂಗೀತಗಾರ ಡಾ.ವಿದ್ಯಾಭೂಷಣ್ ಈ ವರ್ಷ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.

ಗಾಂಧಿಗ್ರಾಮ ಪುರಸ್ಕಾರ ಪಡೆದ ನೀರೆ ಗ್ರಾಮ ಪಂಚಾಯಿತಿ, ಶಂಕರನಾರಾಯಣ ಗ್ರಾಮ ಪಂಚಾಯಿತಿ, ಅಲೆಯೂರು ಗ್ರಾಮ ಪಂಚಾಯಿತಿ, ಕೋಡಿ ಗ್ರಾಮ ಪಂಚಾಯಿತಿ, ಕಾಲ್ತೋಡು ಗ್ರಾಮ ಪಂಚಾಯಿತಿ, ಮಡಾಮಕ್ಕಿ ಗ್ರಾಮ ಪಂಚಾಯಿತಿ, ಬೆಳ್ಳೆ ಗ್ರಾಮ ಪಂಚಾಯಿತಿ, ಹೊಸಾಡು ಗ್ರಾಮ ಪಂಚಾಯಿತಿಗಳಿಗೆ ಕಾರಂತ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಜನಾರ್ದನ್ ಕುಂಭಾಶಿ ನಾಡಗೀತೆ ಹಾಡಿದರು. ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರ್ವಹಿಸಿದರು.

ಅಕ್ಟೋಬರ್ 10 ರಂದು ಪ್ರಶಸ್ತಿ ಪ್ರದಾನ
ಅಕ್ಟೋಬರ್ 10 ರಂದು ಮಂಗಳವಾರ ಸಂಜೆ 4 ಗಂಟೆಗೆ ಡಾ|| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಖ್ಯಾತ ಶಾಸ್ತ್ರೀಯ ಸಂಗೀತಗಾರ ಡಾ.ವಿದ್ಯಾಭೂಷಣ್ ಅವರಿಗೆ ಕಾನೂನು ಹಾಗೂ ಸಂಸದೀಯ, ಪ್ರವಾಸೋದ್ಯಮ ಇಲಾಖೆ ಸಚಿವರಾದ ಹೆಚ್ ಕೆ ಪಾಟೀಲ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಮಾಡಲಿದ್ದಾರೆ. ಜನಪ್ರತಿನಿಧಿಗಳು ಸೇರಿದಂತೆ ಹಲವಾರು ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮ ನಡಯಲಿದೆ.

ರಾಜ್ಯ ಮಟ್ಟದ ಚಲನಚಿತ್ರ ಉತ್ಸವ-ಸಂವಾದ
ಅಕ್ಟೋಬರ್ 4 ರಿಂದ 8ರ ತನಕ ರಾಜ್ಯಮಟ್ಟದ ಚಲನಚಿತ್ರ ಉತ್ಸವ ಹಾಗೂ ಚಿತ್ರ ತಂಡದೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಮಾರ್ಡನ್ ಮಹಾಭಾರತ, ಕೋಳಿತಾಳ್, ಮೂಕಜ್ಜಿಯ ಕನಸುಗಳು, ಕಾಂತಾರ, ಸುಗಂಧಿ ಚಲನಚಿತ್ರಗಳನ್ನು ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 9 ರಂದು ಡಾ|| ಶಿವರಾಮ ಕಾರಂತ ಅನೌಪಚಾರಿಕ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಅಕ್ಟೋಬರ್ 10 ರಂದು ಜಿಲ್ಲೆಯ ಖ್ಯಾತ ಕಲಾವಿದರ ಸಂಗಮ ಮಧುರ ಗೀತೆಗಳ ಮಧುರಯಾನ ಮಾರ್ದನಿ ಕಾರ್ಯಕ್ರಮ ನಡೆಯಲಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!