Sunday, September 8, 2024

ಹಸಿರು ಕ್ರಾಂತಿ ಹರಿಕಾರ ಎಂ. ಎಸ್‌ ಸ್ವಾಮಿನಾಥನ್‌ ಅಸ್ತಂಗತ : ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಸಂತಾಪ

ಜನಪ್ರತಿನಿಧಿ ವಾರ್ತೆ : ಅಧಿಕ ಇಳುವರಿಯ ಭತ್ತದ ತಳಿ ಅಭಿವೃದ್ಧಿಯಿಂದ ದೇಶದ ಆಹಾರ ಭದ್ರತೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದ ಹಸಿರು ಕ್ರಾಂತಿ ಹರಿಕಾರ ಎಂದೇ ಖ್ಯಾತರಾಗಿದ್ದ ಎಂ. ಎಸ್‌ ಸ್ವಾಮಿನಾಥನ್‌ (98) ಚೆನ್ನೈನಲ್ಲಿ ಇಂದು(ಗುರುವಾರ, ಸೆ.28) ವಿಧಿವಶರಾದರು.

೧೯೨೫ರ ಆಗಸ್ಟ್‌ ೭ರಂದು ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಜನಿಸಿದ ಅವರು ಹವಾಮಾನ ತಜ್ಞ, ಕೃಷಿ ವಿಜ್ಙಾನಿ, ಸಸ್ಯ ತಳಿವಿಜ್ಙಾನಿಯೂ ಆಗಿದ್ದರು. ಕೃಷಿ ಕ್ಷೇತ್ರದಲ್ಲಿ ಮಾಡಿದ ಅಸಾಧರಣಾ ಕೊಡುಗೆಗಾಗಿ ಅವರಿಗೆ 1971ರಲ್ಲಿ ಜಗತ್ತಿನ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ರೇಮನ್‌ ಮ್ಯಾಗ್ಸೆಸೆ ಪ್ರಶಸ್ತಿ, 1986ರಲ್ಲಿ ಆಲ್ಬರ್ಟ್‌ ಐನ್‌ಸ್ಟೀನ್‌ ವಿಶ್ವ ವಿಜ್ಙಾನ ಪ್ರಶಸ್ತಿಯೂ ಲಭಿಸಿವೆ. ಇವರ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ, ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.

ಎಂ. ಎಸ್‌ ಸ್ವಾಮಿನಾಥನ್‌ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮರ್ಮು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಳಗೊಂಡು ಅನೇಕ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಎಂ. ಎಸ್‌ ಸ್ವಾಮಿನಾಥನ್‌ ನಿಧನದಿಂದ ತೀವ್ರ ದುಃಖವಾಗಿದೆ.  ಆಹಾರ ಭದ್ರತೆ ಸಾಧನೆಗಾಗಿ ಇನ್ನಿಲ್ಲದಂತೆ ಶ್ರಮಿಸಿದ ದೂರದೃಷ್ಟಿಯುಳ್ಳ ಅವರನ್ನು ಹಸಿರು ಕ್ರಾಂತಿಯ ಹರಿಕಾರ ಎಂದು ಕರೆಯುತ್ತಿದ್ದದ್ದು ಸೂಕ್ತವಾಗಿದೆ. ಅವರು ಬಿಟ್ಟುಹೋಗಿರುವ ಶ್ರೀಮಂತ ಕೃಷಿ ವಿಜ್ಙಾನ ಪರಂಪರೆಯು ಮನುಕುಲವನ್ನು ಸುರಕ್ಷಿತ ಮತ್ತು ಹಸಿವು ಮುಕ್ತ ಭವಿಷ್ಯದತ್ತ ಮುನ್ನಡೆಸಲು ಮಾರ್ಗದರ್ಶಿಯಾಗಲಿದೆ ಎಂದು ತಮ್ಮ ಅಧಿಕೃತ  ʼಎಕ್ಸ್‌ʼ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಸ್ವಾಮಿನಾಥನ್‌ ನಿಧನಕ್ಕೆ ಸಾಮಾಜಿಕ ಜಾಲತಾಣ ʼಎಕ್ಸ್‌ʼ ನಲ್ಲಿ ಸಂತಾಪ ವ್ಯಕ್ತ ಪಡಿಸಿದ ಪ್ರಧಾನಿ ನರೇಂದ್ರ ಮೋದಿ, ನಾನು ಅವರೊಂದಿಗಿನ ಸಂಭಾಷಣೆಯನ್ನು ಸದಾ ಸ್ಮರಿಸುತ್ತೇನೆ.  ದೇಶದ ಪ್ರಗತಿಯನ್ನು ಸಾಧಿಸಲು ಅವರು ಹೊಂದಿದ್ದ ದೂರದೃಷ್ಟಿ , ಉತ್ಸಾಹ ಸದಾ ಮಾದರಿಯಾದದ್ದು. ಅವರು ಬದುಕು ಮತ್ತು ಸಾಧನೆ ಭವಿಷ್ಯದ ಪಿಳಿಗೆಗೆ ಮಾದರಿಯಾಗಿರುತ್ತದೆ. ದೇಶದೆಲ್ಲೆಡೆ ಇರುವ ಅವರ ಅಭಿಮಾನಿಗಳಿಗೆ ಸಂತಾಪಗಳಿಗೆ ನಾನು ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ ಎಂದು ಅವರು ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ʼಎಕ್ಸ್‌ʼ ನಲ್ಲಿ ತಮ್ಮ ಬೇಸರ ವ್ಯಕ್ತ ಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಖ್ಯಾತ ಕೃಷಿ ವಿಜ್ಞಾನಿ, ಹಸಿರು ಕ್ರಾಂತಿಯ ಹರಿಕಾರರಾದ ಎಂ.ಎಸ್ ಸ್ವಾಮಿನಾಥನ್ ಅವರ ನಿಧನದ ಸುದ್ದಿ ದುಃಖವುಂಟುಮಾಡಿದೆ. ಸುಸ್ಥಿರ ಕೃಷಿ ಉತ್ಪನ್ನಗಳ ಉತ್ಪಾದಕತೆಗೆ ಸ್ವಾಮಿನಾಥನ್ ಅವರು ನೀಡಿದ ಕೊಡುಗೆಗಳ ಫಲವಾಗಿ ಭಾರತವು ಕೃಷಿ ಉತ್ಪಾದಕತೆಯಲ್ಲಿ ಸ್ವಾವಲಂಬನೆ ಸಾಧಿಸಿ, ಜಾಗತಿಕ ಮನ್ನಣೆ ಗಳಿಸಲು ಸಾಧ್ಯವಾಯಿತು. ವಿಶ್ವಸಂಸ್ಥೆಯಿಂದ ಆರ್ಥಿಕ ಪರಿಸರ ವಿಜ್ಞಾನದ ಪಿತಾಮಹ ಎಂದು ಕರೆಯಲ್ಪಟ್ಟ ಹಿರಿಯ ಸಸ್ಯ ತಳಿ ಶಾಸ್ತ್ರಜ್ಞ ಸ್ವಾಮಿನಾಥನ್ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬವರ್ಗ ಮತ್ತು ಬಂಧು ಮಿತ್ರರಿಗೆ ನೋವು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!