Sunday, September 8, 2024

ಕಾವೇರಿ ಬಗ್ಗೆ ಕರ್ನಾಟಕವನ್ನು ಪ್ರತಿನಿಧಿಸುವುದು  ರಾಜ್ಯ ಸರ್ಕಾರ ಎಂಬುದು ಗೊತ್ತಿಲ್ಲದಷ್ಟು ಸಿದ್ದರಾಮಯ್ಯ ದಡ್ಡರಲ್ಲ : ಬಿಜೆಪಿ ವ್ಯಂಗ್ಯ

ಜನಪ್ರತಿನಿಧಿ ವಾರ್ತೆ : ತಮಿಳುನಾಡಿಗೆ ಕಾವೇರಿ ಈರು ಹರಿಸಬಾರದು ಎಂದು ಆಗ್ರಹಿಸಿ ಬೆಂಗಳೂರು ಬಂದ್‌ ನಡೆದ ಬೆನ್ನೆಲ್ಲೆ, ಕೆಲವು ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಈ ನಡುವೆ ಬಿಜೆಪಿ ಕಾಂಗ್ರೆಸ್‌ ನಡೆ ವಿರುದ್ಧ ಮತ್ತೆ ಆಕ್ರೋಶ ಹೊರಹಾಕಿದೆ.   

ಸಾಮಾಜಿಕ ಜಾಲತಾಣ ʼಎಕ್ಸ್‌ʼನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡ ಬಿಜೆಪಿ, ಸದಾ ಸಣ್ಣತನದ ರಾಜಕಾರಣವನ್ನೇ ಮಾಡುವುದು ಸಿದ್ದರಾಮಯ್ಯ ಅವರ ಚಾಳಿ. ತಮ್ಮ ಸ್ವಾರ್ಥ ಮತ್ತು ಅಸಾಮರ್ಥ್ಯದಿಂದ ಬಂದ ಸಮಸ್ಯೆಗಳಿಗೆಲ್ಲಾ ಪರರನ್ನೇ ದೂಷಣೆ ಮಾಡುವುದು ಅವರು ದಶಕಗಳಿಂದ ಪಾಲಿಸುತ್ತಾ ಬಂದ ತಂತ್ರ. ವಿವಿಧ ಪಕ್ಷಗಳನ್ನು ಬದಲಿಸಿದ್ದರಿಂದ ಹಿಡಿದು ಕಾಂಗ್ರೆಸ್‌ ಸೇರುವುದಕ್ಕೂ ಮತ್ತು ಮುಖ್ಯಮಂತ್ರಿಯಾಗುವುದಕ್ಕೂ ಅವರು ಬಳಸಿದ್ದು ಇದೊಂದೇ ತಂತ್ರ. ಕಾವೇರಿ ವಿಚಾರದಲ್ಲಿಯೂ ಕಳೆದ ನಾಲ್ಕೂ ತಿಂಗಳಿನಿಂದ ಕಾಲಹರಣ ಮಾಡಿ ಈಗ ಕೇಂದ್ರ ಸರ್ಕಾರವನ್ನು ಅನಗತ್ಯವಾಗಿ ಎಳೆದು ತರುತ್ತಿರುವುದು ಅದೇ ತಂತ್ರದ ಮುಂದುವರಿದ ಭಾಗ ಎಂದು ಜರೆದಿದೆ.

ಮುಂಗಾರು ವಿಳಂಬವಾಗುತ್ತಿದೆ ಎಂಬ ಸೂಚನೆ ಸಿಕ್ಕಾಗ ಹವಾಮಾನ ಮುನ್ನೋಟ ಪಡೆದು ಸಂಭಾವ್ಯ ಪರಿಸ್ಥಿತಿಯನ್ನು ಅವಲೋಕಿಸುವುದು ಒಬ್ಬ ಮುಖ್ಯಮಂತ್ರಿಯ ಆದ್ಯ ಕರ್ತವ್ಯ. ಆದರೆ ಆ ಹೊತ್ತಿಗೆ ಅಧಿಕಾರಿಗಳನ್ನು ಖಾಸಗಿ ಹೋಟೆಲಲ್ಲಿ ಗುಡ್ಡೆ ಹಾಕಿ ಕಲೆಕ್ಷನ್‌ ವ್ಯವಹಾರದ ಮಾತುಕತೆಯಲ್ಲೇ ಅವರು ಮತ್ತು ಅವರ ಮಂತ್ರಿ ಮಂಡಲ ಕಾಲಹರಣ ಮಾಡಿತ್ತು ಎಂದು ಕಿಡಿ ಕಾರಿದೆ.

ಇನ್ನು, ಕಾಂಗ್ರೆಸ್‌ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿ, ತಮ್ಮ ಸ್ವಾರ್ಥದ I.N.D.I.A ಮೈತ್ರಿಕೂಟಕ್ಕಾಗಿ ಸ್ಟಾಲಿನ್‌ ಅವರನ್ನು ಬೆಂಗಳೂರಿಗೆ ಕರೆಸಿಕೊಂಡಾಗ, ಅವರಿಗೆ ಅನುಕೂಲ ಮಾಡಿಕೊಡುವ ಯೋಜನೆ ರೂಪಿಸಿಕೊಂಡ ಕಾಂಗ್ರೆಸ್ ಕಾವೇರಿಯ ಬಗ್ಗೆ ಹತ್ತು ನಿಮಿಷ ಕಾಲವೂ ಚರ್ಚಿಸಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಅನುಕೂಲವಾಗಲು ಹೆಚ್ಚುವರಿ ಪ್ರದೇಶದಲ್ಲಿ ಬೇಸಾಯಕ್ಕೆ ಸ್ಟಾಲಿನ್‌ ಸರ್ಕಾರ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ತಿಳಿದಿದ್ದರೂ I.N.D.I.A ಮೈತ್ರಿಕೂಟದ ಹಿತಾಸಕ್ತಿ ಕಾಪಾಡಲು ಸಿದ್ದರಾಮಯ್ಯ ಅವರ ಸರ್ಕಾರ ಜಾಣ ಕುರುಡು ಪ್ರದರ್ಶಿಸಿತು.

ಕರ್ನಾಟಕದಲ್ಲಿ ಬರ ಪರಿಸ್ಥಿತಿಯನ್ನು ಕಾವೇರಿ ನಿರ್ವಹಣಾ ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡದೆ, ನ್ಯಾಯಾಲಯದ ಆದೇಶಕ್ಕೂ ಮೊದಲೇ ಸ್ವಯಂ ಪ್ರೇರಿತವಾಗಿ ನೀರು ಹರಿಸಿ ಸ್ಟಾಲಿನ್‌ ಸರ್ಕಾರಕ್ಕೆ ಈಗಾಗಲೇ ಸಾಕಷ್ಟು ಅನುಕೂಲಗಳನ್ನು ಕಾಂಗ್ರೆಸ್‌ ಸರ್ಕಾರ ಮಾಡಿದೆ ಎಂದು ಗುಡುಗಿದೆ.  

ನೀರೆಲ್ಲಾ ಹರಿಸಿ, ಜಲಾಶಯಗಳನ್ನು ಬರಿದು ಮಾಡಿದ ಮೇಲೆ ಸರ್ವಪಕ್ಷ ಸಭೆ ಕರೆದದ್ದು ವಾಸ್ತವದಲ್ಲಿ ಸಮಸ್ಯೆಯ ಪರಿಹಾರಕ್ಕಲ್ಲ, ಬದಲಾಗಿ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡು ಜನತೆಗೆ ತನ್ನ ಒಳ ಆಟ ತಿಳಿಯದಂತೆ ಮರೆಮಾಚುವುದಕ್ಕೆ. ಆ ಮೂಲಕ ಕೇಂದ್ರ ಸರ್ಕಾರಕ್ಕೆ ನಿಯೋಗ ಕೊಂಡೊಯ್ದು ಕಾವೇರಿ ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಕಳ್ಳಾಟವನ್ನು ಸಿದ್ದರಾಮಯ್ಯ ಅವರು ಶುರು ಮಾಡಿದರು.

ಕಾವೇರಿ ಬಗ್ಗೆ ನ್ಯಾಯಮಂಡಳಿ ಅಥವಾ ನ್ಯಾಯಾಲಯಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವುದು ರಾಜ್ಯ ಸರ್ಕಾರ ಎಂಬುದು ಗೊತ್ತಿಲ್ಲದಷ್ಟು ಸಿದ್ದರಾಮಯ್ಯರವರು ದಡ್ಡರಲ್ಲ. ಆದರೆ ಜನತೆಗೆ ಗೊಂದಲ ಮೂಡಿಸಲು ಈಗ ಕೇಂದ್ರ ಸರ್ಕಾರ ಹಾಗೂ ಸಂಸದರ ಮೇಲೆ ಗೂಬೆ ಕೂರಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಸಿಡಿದಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!