Sunday, September 8, 2024

ಬಹುಪಕ್ಷಗಳಿರುವ ದೇಶದಲ್ಲಿ ʼಒಂದು ದೇಶ, ಒಂದು ಚುನಾವಣೆʼಯ ಕನಸು

-ಶ್ರೀರಾಜ್‌ ವಕ್ವಾಡಿ

ಇಂದಿರಾ ನೇತೃತ್ವದ ಸರ್ಕಾರ ೩೯ಬಾರಿ ೩೫೬ನೇ ವಿಧಿಯನ್ನು ನಿರ್ಲಜ್ಜವಾಗಿ ಬಳಸಿಕೊಂಡಿತ್ತು !

ಒಂದು ದೇಶ, ಒಂದು ಚುನಾವಣೆ. ೨೦೧೮ರಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ ವಿಚಾರ ಈಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಆಡಳಿತಾತ್ಮಕವಾಗಿ ಪೂರಕವಾಗುವಂತೆ ಮಾಡುವ ಉದ್ದೇಶದಿಂದ ಈ ಕಲ್ಪನೆಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿರುವುದು ವಿಪಕ್ಷಗಳ ಕೆಂಗಣ್ಣಿಗೂ ಒಳಗಾಗಿದೆ. ಏಕಕಾಲದಲ್ಲಿ ಎಲ್ಲಾ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮತ್ತು ಲೋಕಸಭಾ ಚುನಾವಣೆ ನಡೆಸಬೇಕು ಎನ್ನುವುದು ಮೋದಿ ನೇತೃತ್ವ ಸರ್ಕಾರದ ಉದ್ದೇಶವಾಗಿದೆ. ೨೦೧೮ರಲ್ಲಿ ಈ ಬಗ್ಗೆ ಒಂದಿಷ್ಟು ಅದ್ಯಯನ ಮಾಡುವ ಉದ್ದೇಶದಿಂದ ಕಾನೂನು ಸಮಿತಿಯನ್ನೂ ಕೂಡ ಮಾಡಲಾಗಿತ್ತು. ಆ ಸಮಿತಿ ಕೇಂದ್ರ ಸರ್ಕಾರಕ್ಕೆ ವರದಿಯನ್ನೂ ಒಪ್ಪಿಸಿತ್ತು. ಅದಾದ ಮೇಲೆ ಅಷ್ಟು ಸುದ್ದಿಯಲ್ಲಿ ಈ ವಿಚಾರ ಇದ್ದಿರಲಿಲ್ಲ. ಈಗ ಮತ್ತೆ ಮುನ್ನೆಲೆಗೆ ಬಂದಿದೆ.  

೧೯೫೨ರಲ್ಲಿ ಈ ದೇಶದಲ್ಲಿ ಮೊದಲ ಚುನಾವಣೆ ನಡೆದಿದ್ದು. ಅಲ್ಲಿಂದ ಸುಮಾರು ೧೯೭೦ರ ದಶಕದವರೆಗೂ (ನಿಖರವಾಗಿ ಹೇಳುವುದಾದರೇ, ೧೯೬೭ರ ಚುನಾವಣೆಯ ತನಕ) ಕೂಡ ಒಂದು ದೇಶ, ಒಂದು ಚುನಾವಣೆಯ ಕಲ್ಪನೆಯಲ್ಲಿಯೇ ಚುನಾವಣೆ ನಡೆದಿತ್ತು ಎನ್ನುವುದು ಇಲ್ಲಿ ಗಮನಾರ್ಹ ವಿಚಾರ. ಬಹುಷಃ ಅಲ್ಲಿಯವರೆಗೆ ಈ ದೇಶದಲ್ಲಿ ಇದ್ದದ್ದು ಕಾಂಗ್ರೆಸ್‌ ಪಕ್ಷವೊಂದೆ. ರಾಜ್ಯದಲ್ಲಿಯೂ ಕೇಂದ್ರದಲ್ಲಿಯೂ ಕಾಂಗ್ರೆಸ್‌ ಸರ್ಕಾರದ ಆಡಳಿತವೇ ಇದ್ದಿತ್ತು. ಹಾಗಾಗಿ ಈ ಕಲ್ಪನೆಯ ಚುನಾವಣೆ ಆ ಕಾಲಕ್ಕೆ ಸೂಕ್ತವಾಗಿತ್ತು ಮತ್ತು ಒಂದು ಹಂತದಲ್ಲಿ ಪೂರಕವೂ ಆಗಿತ್ತು. ಆದರೇ, ೧೯೬೭ರ ನಂತದ ದೇಶದ ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಹುಟ್ಟಿದವು, ಈ ಪ್ರಾದೇಶಿಕ ಪಕ್ಷಗಳ ಹುಟ್ಟಿನ ಕಾರಣದಿಂದಾಗಿ ಜನರಲ್ಲಿ ಕಾಂಗ್ರೆಸ್‌ ಮೇಲೆ ಇದ್ದ ಅಭಿಪ್ರಾಯ ಒಂದು ಹಂತದಲ್ಲಿ ಕಳೆಗುಂದುತ್ತಾ ಹೋಯಿತು. ಪ್ರಾದೇಶಿಕ ಚಿಂತನೆಗಳು ಮುನ್ನೆಲೆಗೆ ಬಂದವು. ಬೇರೆ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್‌ ತನ್ನ ಅಸ್ತಿತ್ವವನ್ನು ಕಲೆದುಕೊಳ್ಳುತ್ತಾ ಬಂದಾಗ ಈ ಕಲ್ಪನೆ ಮೂಲೆಗೆ ಸರಿಯಿತು. ಮಾತ್ರವಲ್ಲದೇ, ೩೫೬ರ ವಿಧಿಯ ಹೇರಿಕೆಯ ನಂತರ ಏಕಕಾಲದಲ್ಲಿ ನಡೆಯುತ್ತಿದ್ದ ಎಲ್ಲಾ ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗಳ ಹಾದಿ ತಪ್ಪಿ ಹೋಯಿತು. ಇದು ಮುಂದೆ ಬರಬರುತ್ತಾ ಚುನಾವಣಾ ಆಯೋಗಕ್ಕೂ, ಜನರಿಗೂ ಹೊರೆಯಾಗುತ್ತಾ ಹೋಯಿತು. ಹಣ, ಸಮಯ, ಆಡಳಿತಾತ್ಮಕವಾದ ಅನುಕೂಲದ ದೃಷ್ಟಿಯಿಂದ ಈಗ ಮತ್ತೆ ಈ ಮಾದರಿಯ ಚುನಾವಣೆ ಆಗಬೇಕು ಎಂಬ ಸಂಕಲ್ಪವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಇದಕ್ಕಾಗಿ ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಅವರ ನೇತೃತ್ವದ ಸಮಿತಿಯೂ ಕೂಡ ರಚನೆಯಾಗಿದೆ.

ಈ ʼಒಂದು ದೇಶ, ಒಂದು ಚುನಾವಣೆʼ ಒಮ್ಮಿಂದೊಮ್ಮೆಲೆ ಮೇಲೆ ಬರುವುದಕ್ಕೆ ಕಾರಣವಾದರೂ ಏನು ಎನ್ನುವುದು ಈಗ ಚಿಂತನೆಗೆ ಗ್ರಾಸವಾಗಿದೆ. ಲೋಕಸಭಾ ಚುನಾವಣೆಗೆ ಇನ್ನೇನು ಕೆಲ ತಿಂಗಳುಗಳು ಬಾಕಿ ಇರುವಾಗಲೇ ಈ ವಿಚಾರ ಮುನ್ನೆಲೆಗೆ ತಂದು ಮತ್ತೆ ಜನಾಭಿಪ್ರಾಯ ಹೇಗಿದೆ ಎಂದು ತಿಳಿದುಕೊಳ್ಳುವ ಉದ್ದೇಶದಿಂದಲೇ ಮುನ್ನೆಲೆಗೆ ತರುವಂತಹ ಪ್ರಯತ್ನ ಮಾಡಿದೆ ಅಂತನ್ನಿಸುತ್ತಿದೆ. ಕೇಂದ್ರದಲ್ಲಿ ಈಗ ಬಿಜೆಪಿ ಇರುವ ಕಾರಣದಿಂದ ಮತ್ತು ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿಯ ಪ್ರಭಾವ ಉಳಿದಿರುವ ರಾಜಕೀಯ ಪಕ್ಷಗಳಿಗಿಂತ ಹೆಚ್ಚಿರುವುದರಿಂದ ಮತ್ತೊಂದು ತರವಾಗಿ ರಾಜಕೀಯ ಲಾಭ ಮಾಡಿಕೊಳ್ಳುವ ಪ್ರಯತ್ನ ಮಾಡೀತೆ ಎನ್ನುವುದು ಇಲ್ಲಿರುವ ಪ್ರಶ್ನೆ. ವಿಪಕ್ಷಗಳು ಭದ್ರಗೊಳ್ಳುತ್ತಿರುವುದು ಒಂದೆಡೆಯಾದರೇ, ದೇಶದ ಚಿತ್ತವನ್ನು ಈ ಒಂದು ದೇಶ, ಒಂದು ಚುನಾವಣೆಯ ಕಲ್ಪನೆಯಡೆಗೆ ಸೆಳೆದು ಒಂದಿಷ್ಟು ರಾಜಕೀಯ ಚರ್ಚಗೆ ಕಾರಣವಾಗುವಂತೆ ಮಾಡಿ ವಿಪಕ್ಷಗಳ ಯೋಜನೆಗಳಿಗೆ ಅಡ್ಡಿ ತರುವಂತಹ ಪ್ರಯತ್ನ ಇದು ಇರಬಹುದೇ ಎನ್ನುವ ವಾದವೂ ಕೂಡ ರಾಜಕೀಯ ವಲಯದಲ್ಲಿ ಆಗುತ್ತಿದೆ. ಈ ವಿಚಾರವನ್ನು ಸಂಪೂರ್ಣವಾಗಿ ತಳ್ಳಿ ಹಾಕುವುದಕ್ಕೂ ಆಗುವುದಿಲ್ಲ ಎನ್ನುವುದಿಲ್ಲಿ ಮುಖ್ಯ.

ಬಹಳ ಪ್ರಮುಖವಾಗಿ ಈ ಹಿಂದೆ ನಡೆದ ಏಕಕಾಲದ ಚುನಾವಣೆಗಳಿಗೂ ಮತ್ತು ಈಗ ಕೇಂದ್ರ ಸರ್ಕಾರ ಅದೇ ಹಳೆಯ ಕಲ್ಪನೆಯನ್ನು ಮತ್ತೆ ಜಾರಿಗೆ ತರಬೇಕು ಎಂದು ಮಾಡುತ್ತಿರುವ ಪ್ರಯತ್ನಕ್ಕೂ ತಾಳೆ ಹಾಕಿ ನೋಡಬೇಕಾದ ಅನಿವಾರ್ಯತೆ ಇದೆ ಎಂದನ್ನಿಸುತ್ತದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಿಪಕ್ಷಗಳ ಮೈತ್ರಿ ರಾಷ್ಟ್ರಮಟ್ಟದಲ್ಲಿ ದೊಡ್ಡದಾಗಿಯೇ ಸೃಷ್ಟಿಯಾಗಿದೆ. ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಪ್ರಾಬಲ್ಯ ಹೊಂದಿರುವ ಪ್ರಾದೇಶಿಕ ಪಕ್ಷಗಳ ಸಹಕಾರದಿಂದಲೇ ರಚನೆಯಾದ ಈ ಮೈತ್ರಿಯನ್ನು ಉಸಿರುಗಟ್ಟಿಸುವ ಯತ್ನ ಎಂದೆ ಹೇಳಲಾಗುತ್ತಿದೆ. ಏಕಪಕ್ಷೀಯ ಮಾದರಿಯ ಸರ್ಕಾರ ಈ ದೇಶವನ್ನು ಆಳುವ ಪರಿಕಲ್ಪನೆ ಇದರ ಹಿಂದಿದೆಯೇ ಎನ್ನುವುದು ಮತ್ತೊಂದು ಪ್ರಶ್ನೆ ಮತ್ತು ಚರ್ಚೆ ಎದ್ದಿದೆ.   

ಭಾರತ ಸಂಸದೀಯ ಮಾದರಿಯ ಸರ್ಕಾರವನ್ನು ಹೊಂದಿರುವ ದೇಶ. ನಮ್ಮದು ಅಧ್ಯಕ್ಷೀಯ ಮಾದರಿಯ ಸರ್ಕಾರವಲ್ಲ.  ಸಂಸದೀಯ ಮಾದರಿಯ ಸರ್ಕಾರದಲ್ಲಿ ಸಂಸತ್ತಿಗೂ ಮತ್ತು ಕಾರ್ಯಾಂಗಕ್ಕೆ ನೇರ ಸಂಬಂಧ ಇರುವ ಕಾರಣ ಸದ್ಯ ಭಾರತದಲ್ಲಿ ಒಂದು ದೇಶ, ಒಂದು ಚುನಾವಣೆ ಕಲ್ಪನೆಯನ್ನು ಜಾರಿಗೆ ತರುವುದಕ್ಕೆ ಸಾಧ್ಯವೇ ಇಲ್ಲ. ಸಂಸತ್ತಿನಲ್ಲಿ ಒಮ್ಮೆ ಸರ್ಕಾರ ವಿಶ್ವಾಸ ಕಳೆದುಕೊಂಡರೆ, ಮತ್ತೆ ಚುನಾವಣೆ ನಡೆಸಲೇ ಬೇಕಾಗುತ್ತದೆ. ಮಧ್ಯಾವಧಿ ಚುನಾವಣೆಯನ್ನು ಮಾಡಬೇಕಾಗುತ್ತದೆ. ಈ ಅನಿವಾರ್ಯತೆ ಇರುವುದು ನಮ್ಮ ಸಂವಿಧಾನದಲ್ಲಿ ಈ ದೇಶ ಕಂಡುಕೊಂಡಿದೆ. ಸರ್ಕಾರ ವಿಶ್ವಾಸ ಕಳೆದುಕೊಂಡಾಗ ಅಥವಾ ಬಹುಮತ ಕಳೆದುಕೊಂಡಾಗ ಎಷ್ಟೋ ಬಾರಿ ಮಧ್ಯಾವಧಿ ಚುನಾವಣೆ ನಡೆದಿದ್ದು ಕೂಡ ಇದೆ. ಅಧ್ಯಕ್ಷೀಯ ಮಾದರಿ ಸರ್ಕಾರ ಇರುವ ದೇಶಗಳಲ್ಲಿ ಹಾಗಲ್ಲ. ಶಾಸಕಾಂಗಕ್ಕೆ ಈ ಮಾದರಿಯಲ್ಲಿ ಯಾವುದೇ ಸಂಬಂಧವಿಲ್ಲ. ಒಬ್ಬ ಅಧ್ಯಕ್ಷ ಹುದ್ದೆಗೇರಿದ ಮೇಲೆ ಅಧ್ಯಕ್ಷಾವಧಿಯನ್ನು ಯಾವುದೇ ಅಡೆತಡೆಗಳಿಲ್ಲದೇ ಪೂರೈಸುತ್ತಾನೆ. ಆದ್ದರಿಂದ ಈ ಕಲ್ಪನೆಯನ್ನು ಭಾರತದ ಸಂವಿಧಾನದ ಚೌಕಟ್ಟಿಗೆ ತರುವುದಕ್ಕೆ ಸಾಧ್ಯವೇ ಇಲ್ಲ. ಪ್ರಾದೇಶಿಕ ಪಕ್ಷಗಳು ಈ ಕಲ್ಪನೆಯಲ್ಲಿ ಮಾನ್ಯತೆಯನ್ನು ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಸ್ಥಳೀಯ ಪಕ್ಷಗಳಿಗೆ ಈ ವ್ಯವಸ್ಥೆಯಲ್ಲಿ ಪ್ರಾಧಾನ್ಯತೆ ದೊರಕದೆ ಹೋಗಬಹುದು. ಬಹುಪಕ್ಷಗಳಿರುವ  ಈ ದೇಶದಲ್ಲಿ ಇಂತಹ ವ್ಯವಸ್ಥೆಯ ಜಾರಿಗೆ ತರುವುದು ಕೂಡ ಕಷ್ಟವಿದೆ.

ಒಂದು ದೇಶ, ಒಂದು ಚುನಾವಣೆಯ ಸವಾಲುಗಳೇನು ? :

ದೇಶದಲ್ಲಿ ಸಂಸದೀಯ ವ್ಯವಸ್ಥೆಯನ್ನು ಅನುಸರಿಸುವ ಸಂಪ್ರದಾಯಗಳನ್ನು ಮೀರಿ ಈ ಕಲ್ಪನೆಯನ್ನು ಇಲ್ಲಿ ಜಾರಿಗೆ ತರುವುದು ಅಷ್ಟು ಸುಲಭವಿಲ್ಲ. ಸರ್ಕಾರಗಳು ಅವಧಿಪೂರ್ಣಗೊಳ್ಳುವ ಮೊದಲೆ ಮುರಿದು ಬೀಳುವ ಸಾಧ್ಯತೆಗಳೂ ಇವೆ. ಮರು ಚುನಾವಣೆ ಅಥವಾ ಮಧ್ಯಾವಧಿ ಚುನಾವಣೆ ಮಾಡಬೇಕಾಗುತ್ತದೆ. ಈ ಕಲ್ಪನೆಗೆ ಪ್ರಾದೇಶಿಕ ಪಕ್ಷಗಳು ಒಪ್ಪುವುದು ಅಥವಾ ಆ ಎಲ್ಲಾ ಸ್ಥಳೀಯ ಪಕ್ಷಗಳ ಮನವೊಲಿಸುವುದು ಕೂಡ ಅಷ್ಟು ಸುಲಭವಿಲ್ಲ. ಇನ್ನು, ಏಕಕಾಲದಲ್ಲಿ ಎಲ್ಲಾ ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆ ನಡೆಸುವಾಗ ಭದ್ರತೆಯ ವಿಚಾರದಲ್ಲಿ, ಚುನಾವಣಾ ಸಿಬ್ಬಂಧಿಗಳ ನಿಯೋಜನೆಯ ವಿಚಾರದಲ್ಲಿಯೂ ಚುನಾವಣಾ ಆಯೋಗಕ್ಕೆ ದೊಡ್ಡ ಹೊರೆಯಾಗಲಿದೆ ಎನ್ನುವುದು ಸತ್ಯ.

ರಾಜ್ಯಗಳ ಮೇಲೆ ೩೫೬ನೇ ವಿಧಿಯ ದುರ್ಬಳಕೆ :  

ಪಾಕಿಸ್ತಾನದ ಸಂವಿಧಾನವನ್ನು ಹೊರತುಪಡಿಸಿ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ರಾಜ್ಯ ಸರ್ಕಾರವನ್ನು ವಜಾಗೊಳಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುವ ೩೫೬ನೇ ವಿಧಿಯಂತಹ ನಿಬಂಧನೆಯನ್ನು ವಿಶ್ವದ ಯಾವುದೇ ಉದಾರ ಪ್ರಜಾಪ್ರಭುತ್ವ ಸಂವಿಧಾನ ಹೊಂದಿಲ್ಲ. ಭಾರತ ಮತ್ತು ಪಾಕಿಸ್ತಾನ ಎರಡೂ ಈ ನಿಬಂಧನೆಯನ್ನು ಭಾರತ ಸರ್ಕಾರದ ಕಾಯಿದೆ, ೧೯೩೫ ರಿಂದ ಎರವಲು ಪಡೆದಿವೆ.

೩೫೬ನೇ ವಿಧಿಯು ರಾಜ್ಯ ಸರ್ಕಾರಗಳ ಮೇಲೆ ತನ್ನ ಅಧಿಕಾರ ಚಲಾಯಿಸಲು ಕೇಂದ್ರ ಸರ್ಕಾರಕ್ಕೆ ವ್ಯಾಪಕ ಅವಕಾಶವನ್ನು ನೀಡಿದೆ. ಇದು ದೇಶದ ಸಮಗ್ರತೆ ಮತ್ತು ಏಕತೆಯನ್ನು ಕಾಪಾಡುವ ಸಾಧನವಾಗಿ ಮಾತ್ರ ಉದ್ದೇಶಿಸಲ್ಪಟ್ಟಿದ್ದರೂ, ಕೇಂದ್ರದಲ್ಲಿ ಅಧಿಕಾರವಿರುವ ಪಕ್ಷ, ರಾಜಕೀಯ ವಿರೋಧಿ ಪಕ್ಷಗಳಿಂದ ಅಧಿಕಾರ ನಡೆಸುತ್ತಿರುವ ರಾಜ್ಯ ಸರ್ಕಾರಗಳನ್ನು ಕಿತ್ತೊಗೆಯಲು ಇದನ್ನು ನಿರ್ಲಜ್ಜವಾಗಿ ಬಳಸಿಕೊಂಡಿದ್ದವು ಎಂಬ ಚರ್ಚೆಯು ಕೂಡ ಇದೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಈ ವಿಧಿಯನ್ನು ೧೯೫೧ರಲ್ಲಿ ಪಂಜಾಬ್‌ನಲ್ಲಿ ಮೊದಲ ಬಾರಿಗೆ ಬಳಸಲಾಯಿತು. ೧೯೬೬ ಮತ್ತು ೧೯೭೭ ರ ನಡುವೆ, ಇಂದಿರಾ ಗಾಂಧಿ ನೇತೃತ್ವದ ಸರ್ಕಾರವು ಬೇರೆಬೇರೆ ರಾಜ್ಯಗಳ ವಿರುದ್ಧ ಸುಮಾರು ೩೯ಬಾರಿ ಈ ವಿಧಿಯನ್ನು ನಿರ್ಲಜ್ಜವಾಗಿ ಬಳಸಿಕೊಂಡಿತ್ತು.  ರಾಜ್ಯದಲ್ಲಿ ಎಸ್‌.ಆರ್ ಬೊಮ್ಮಾಯಿ ಪ್ರಕರಣದಲ್ಲಿ ( ೧೯೯೪), ಭಾರತದ ಸರ್ವೋಚ್ಚ ನ್ಯಾಯಾಲಯವು ವಿಧಿ ೩೫೬ ರ ಹೇರಿಕೆಗೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಹಾಕಿತ್ತು.

ಇಂದಿರಾಗಾಂಧಿ ಈ ವಿಧಿಯನ್ನು ದುರುಪಯೋಗಪಡಿಸಿಕೊಂಡಿರುವುದಕ್ಕೆ ಪ್ರತೀಕಾರವಾಗಿ, ಜನತಾ ಸರ್ಕಾರವು ಒಂಬತ್ತು ರಾಜ್ಯಗಳ ಕಾಂಗ್ರೆಸ್ ಸರ್ಕಾರಗಳ ಮೇಲೆ ಈ ವಿಧಿಯನ್ನು ದುರುಪಯೋಗ ಪಡಿಸಿಕೊಂಡಿರುವ ರಾಜಕೀಯ ಇತಿಹಾಸವಿದೆ. ಇದರ ಕಾರಣದಿಂದಾಗಿ ಜನತಾ ಸರ್ಕಾರ ಮೊದಲ ಬಾರಿಗೆ ೧೯೭೭ರಲ್ಲಿ ಸರ್ಕಾರವನ್ನು ರಚಿಸಿತ್ತು. ಮತ್ತೆ ಇಂದಿರಾ ಗಾಂಧಿಯವರು ೧೯೮೦ರಲ್ಲಿ ಅಧಿಕಾರಕ್ಕೆ ಮರಳಿದ ನಂತರ, ಒಂಬತ್ತು ವಿರೋಧ ಪಕ್ಷದ ಬಹುಮತದ ಸರ್ಕಾರಗಳ ಮೇಲೆ ಈ ವಿಧಿಯನ್ನು ದುರುಪಯೋಗ ಪಡಿಸಿಕೊಂಡರು. ಹೀಗೆ ನಂತರದ ಸರ್ಕಾರಗಳೂ ಇದೇ ಮಾದರಿಯಲ್ಲಿ ನಡೆದುಕೊಂಡವು ಎನ್ನುವುದು ಉಲ್ಲೇಖಾರ್ಹ ವಿಷಯ. ಒಟ್ಟಿನಲ್ಲಿ, ೩೫೬ನೇ ವಿಧಿಯು ರಾಜಕೀಯವಾಗಿ ಮತ್ತೆಮತ್ತೆ ದುರ್ಬಳಕೆಯಾಗುವುದನ್ನು ತಡೆಗಟ್ಟಲು ಪ್ರಮುಖ ಸಾಂವಿಧಾನಿಕ ತಿದ್ದುಪಡಿಗಳು ಮತ್ತು ಬಲವಾದ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ ಎನ್ನುವುದಂತೂ ಸತ್ಯ.

ಒಟ್ಟಿನಲ್ಲಿ ಒಂದು ದೇಶ, ಒಂದು ಚುನಾವಣೆ ಕಲ್ಪನೆಯ ಬಗ್ಗೆ ಪ್ರಾಯೋಗಿಕ ಸಾಧ್ಯತೆಗಳ ಬಗ್ಗೆ ಸರ್ಕಾರ ಮೊದಲು ಯೋಚಿಸಬೇಕಿದೆ. ಚುನಾವಣಾ ವ್ಯವಸ್ಥೆಯಲ್ಲಿ ಆಗಬೇಕಾಗಿರುವ ಸುಧಾರಣೆ ಇನ್ನೂ ಹಲವಿದೆ. ಆ ಸುಧಾರಣೆ ಮಾಡುವುದಕ್ಕಿಂತ ಮೊದಲು ಇಂತಹದ್ದೊಂದು ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕೆ ಯತ್ನಿಸುತ್ತಿರುವುದು ಸರಿಯಲ್ಲ. ಚುನಾವಣಾ ತಜ್ಞರ ಅಭಿಪ್ರಾಯ ಪಡೆಯುವುದಷ್ಟೇ ಅಲ್ಲದೇ, ಎಲ್ಲಾ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆದ ಮೇಲಷ್ಟೇ ಈ ಬಗ್ಗೆ ಯೋಚಿಸಬಹುದಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!