spot_img
Wednesday, January 22, 2025
spot_img

ʼಇಂಡಿಯಾʼ ಮತ್ತು ʼಭಾರತʼ ಎರಡೂ ನಮ್ಮನ್ನು ಗುರುತಿಸಿವೆ

-ಶ್ರೀರಾಜ್‌ ವಕ್ವಾಡಿ  
ಬಹು ಸಂಸ್ಕೃತಿಯನ್ನು ಹೊಂದಿರುವ ಈ ದೇಶಕ್ಕೆ ‘ಇಂಡಿಯಾ’ ಎಂಬ ಹೆಸರು ಯೋಗ್ಯವಾಗಿದೆಯೆ  ಅಥವಾ ‘ಭಾರತ್’ ಎನ್ನುವುದೇ ಸೂಕ್ತವೆ ಎನ್ನುವ ವಿಚಾರ ಮುಂದಿಟ್ಟುಕೊಂಡು ವಾದ ಮಾಡುವುದಕ್ಕೆ ನಾನು ಮುಂದುವರಿಯುವುದಿಲ್ಲ, ಆ ಅಗತ್ಯವೂ ನನಗಿಲ್ಲ. ಯಾಕೆಂದರೆ ಈವರೆಗೆ ನಾನು ಇವೆರಡನ್ನೂ ಬಳಸುತ್ತಾ ಬಂದಿದ್ದೇನೆ. ಮಾತೃ ಭಾಷೆಯಲ್ಲಿ ʼಭಾರತʼ ಎಂದು ಕರೆದಿದ್ದೇನೆ. ಕೆಲವು ಕಡೆ ಸರ್ಕಾರಿ ದಾಖಲೆಗಳಲ್ಲಿ, ಖಾಸಗಿ ಅರ್ಜಿಗಳಿಗಾಗಿ ʼಇಂಡಿಯನ್‌ʼ ಎಂದು ʼನ್ಯಾಷನ್ಯಾಲಿಟಿʼ ಯಾವುದು ಎಂಬ ಪ್ರಶ್ನೆಗೆ ಬರೆದಿದ್ದೇನೆ. ಹಾಗಾಗಿ ʼಭಾರತʼ ಮತ್ತು ʼಇಂಡಿಯಾʼ ಎರಡೂ ನನ್ನನ್ನು ಗುರುತಿಸಿವೆ. ನಿಮ್ಮನ್ನೂ ಗುರುತಿಸಿದೆ.  

ಒಂದನ್ನು ಆಯ್ಕೆ ಮಾಡುವ ವಾದವು ಸಮಸ್ಯಾತ್ಮಕವಾಗಿದೆ ಎಂಬ ಸರಳ ಕಾರಣಕ್ಕಾಗಿ, ಒಬ್ಬರು ‘ಇಂಡಿಯಾ’ ಎಂದು ಹೇಳಿದರೆ, ಇತನೊಬ್ಬ ‘ಬ್ರಿಟಿಷ್ ಮನಸ್ಥಿತಿ’ ಹೊಂದಿರುವ ‘ದೇಶವಿರೋಧಿ’ ಎಂದು ಬ್ರ್ಯಾಂಡ್ ಮಾಡುವ ವಾತಾವರಣವೂ ಸಾಮಾಜಿಕ ವಲಯದಲ್ಲಿ ಸೃಷ್ಟಿಯಾಗಿದೆ. ʼಭಾರತʼ ಎಂದು ಇನ್ಮೇಲೆ ಹೇಳುವವನು ʼದೇಶ ಪ್ರೇಮಿʼ, ʼರಾಷ್ಟ್ರೀಯವಾದಿʼ ಎಂದು ಗುರುತಿಸಿಕೊಳ್ಳುತ್ತಾನೆ. ಆದರೆ, ಈ ದೇಶವನ್ನು ʼಭಾರತʼ ಎಂದು ಇನ್ಮೇಲೆ ವಿಶೇಷವಾಗಿ ಹೆಮ್ಮೆ ಇಂದ ಹೇಳುತ್ತೇನೆ ಎನ್ನುವವರು ಕೂಡ ʼಇಂಡಿಯಾʼ ಎಂದು ಎಷ್ಟೋ ಸಂದರ್ಭದಲ್ಲಿ ಬಳಸಿರುತ್ತಾರೆ ಎನ್ನುವುದು ವಾಸ್ತವ ಸತ್ಯಾಂಶವಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ʼಗುಲಾಮ ಗಿರಿʼ, ‌ʼಬಿಟಿಷ್  ಮನಸ್ಥಿತಿʼ ಎಲ್ಲವೂ ಇಲ್ಲಿ ರಾಜಕೀಯಕ್ಕಾಗಿ ಸೃಷ್ಟಿಯಾದ ಒಂದು ವಾದ ಬಿಟ್ಟರೇ, ಮತ್ತೇನೂ ಅಲ್ಲ. ಒಂದು ದೇಶದ ಹೆಸರನ್ನು ಬದಲಾಯಿಸುವುದಕ್ಕೂ ಮುನ್ನ ಸಾಂವಿಧಾನಿಕವಾಗಿ ಮಸೂದೆ ಮಂಡಿಸಬೇಕು, ಸಂಸತ್ತಿನಲ್ಲಿ ಅದು ಅಂಗೀಕಾರಗೊಂಡ ಮೇಲಷ್ಟೆ ಅದನ್ನು ಅಧಿಕೃತವಾಗಿ ಬಳಸಲ್ಪಡಬೇಕು ಎನ್ನುವ ಅರಿವಿಲ್ಲದೇ ಅಥವಾ ಸಾಮಾನ್ಯ ಅರಿಕೆಯನ್ನೂ ತೋರಿಸದೆ ಕೇಂದ್ರ ಸರ್ಕಾರ ತಾನು ಮಾಡಿದ್ದೆಲ್ಲವೂ ಸರಿ ಎಂಬಂತೆ ನಡೆದುಕೊಳ್ಳುತ್ತಿರುವುದು ಪ್ರಜಾಪ್ರಭುತ್ವ ದೇಶದ ಚೌಕಟ್ಟು ಒಪ್ಪುವ ವಿಚಾರವಲ್ಲ. ರಾಜಕೀಯವಾಗಿ ಈಗ ʼಇಂಡಿಯಾʼ ಮತ್ತು ʼಭಾರತʼವನ್ನು ವಿಭಜಿಸುವ ವಿಷಯಗಳನ್ನಾಗಿ ಬಿಂಬಿಸುವಷ್ಟರ ಮಟ್ಟಿಗೆ ಈ ದೇಶದ ಬೌದ್ಧಿಕ ಮಟ್ಟ ಕುಸಿದಿದೆ ಎನ್ನುವುದು ದುರಂತವೇ ಸರಿ.

ಇದು ಖಂಡನೀಯ ಮಾತ್ರವಲ್ಲ, ಅಸಹ್ಯಕರವೂ ಆಗಿದೆ. ಗೂಗಲ್‌, ವಿಕಿಪೀಡಿಯಾದ ಕೆಲವು ಪ್ಯಾರಾಗಳ ಮಾಹಿತಿಯಷ್ಟನ್ನು ಮಾತ್ರ ಓದಿದ ಮೇಲೆ ಇಲ್ಲಿ ಕೆಲವರು ದೇಶದ ಹೆಸರಿನ ಮೇಲೆ ರಾತ್ರೋರಾತ್ರಿ ಪಂಡಿತರಂತೆ ವರ್ತಿಸುತ್ತಿರುವುದು ಹಾಸ್ಯ ಪ್ರಸಂಗ. ವಿಷಯದ ಬಗ್ಗೆ ಯಾವುದೇ ಆಳವಾದ ತಿಳುವಳಿಕೆಯಿಲ್ಲದೆ, ಇದೇ ಸರಿ ಎಂದು ತೀರ್ಪು ನೀಡುವವರೆಗೆ ವಾತಾವರಣ ಸೃಷ್ಟಿಯಾಗಿದೆ. ಈ ʼಇಂಡಿಯಾʼ ಮತ್ತು ʼಭಾರತʼ ಚರ್ಚೆಯು ಕೇಂದ್ರ ಸರ್ಕಾರದ ಪ್ರಾಯೋಜಿತವಾಗಿರುವುದು ಇನ್ನೂ ಹೆಚ್ಚು ನಿರಾಶದಾಯಕ ಸಂಗತಿಯಾಗಿದೆ.  

ಲಂಡನ್‌ ನಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸುತ್ತಿದ್ದ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಇಲ್ಲಿ ಸಂದರ್ಭಾನುಸಾರ ಮೇಲೆ ತಂದು ಉಲ್ಲೇಖಿಸಲಾಗಿದೆ ಮತ್ತು ಅವರು ವಿದೇಶದಲ್ಲಿದ್ದಾಗಲೆಲ್ಲ ಭಾರತವನ್ನು ಅವಮಾನಿಸಲು ಇಷ್ಟಪಡುವ ವ್ಯಕ್ತಿ ಎಂದು ಅವರನ್ನು ‘ಭಾರತ-ದ್ವೇಷಿ’ ಎಂದು ಬ್ರ್ಯಾಂಡ್ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ರಾಹುಲ್ ಗಾಂಧಿ “ಭಾರತವನ್ನು ಅವಮಾನಿಸಿದ್ದಾರೆ” ಎಂದು ಟೀಕಿಸಿದ್ದಾರೆ. ಮತ್ತು ಪ್ರತಿಪಕ್ಷಗಳ ಮೈತ್ರಿಗೆ ಇಟ್ಟ ಹೆಸರೇ, ಇಲ್ಲಿ ದೇಶದ ಹೆಸರು ಬದಲಾಯಿಸಲು ಮುಂದಾಗಿರುವುದಕ್ಕೆ ಕಾರಣ ಎಂದೇ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ದೇಶಕ್ಕೆ ‘ಭಾರತ’ ಎಂದು ಹೆಸರಿಸಬೇಕು ಎಂಬ ಚರ್ಚೆ ಈ ಹಿಂದೆಯೂ ನಡೆದಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ ವಿಚಾರ. ಕರಡು ಸಂವಿಧಾನದಲ್ಲಿ ಭಾರತ ಎಂಬ ಬಳಕೆಯೇ ಇರಲಿಲ್ಲ. ಇಂಡಿಯಾ ಎಂದೇ ಉಲ್ಲೇಖಿಸಲಾಗಿತ್ತು. ಒಂದನೇ ವಿಧಿಯನ್ನು ʼಡಿಸ್ಕ್ರಿಪ್ಶನ್ ಆಫ್‌ ಇಂಡಿಯಾʼ ಎಂದು ಉಲ್ಲೇಖಿಸಲಾಗಿತ್ತು. ೧೯೪೯ರ ಸಪ್ಟೆಂಬರ್‌ ೧೭ರಂದು ನಡೆದ ಸಂವಿಧಾನ ರಚನಾ ಸಭೆಯಲ್ಲಿ ಡಾ. ಬಿ. ಆರ್‌. ಅಂಬೇಡ್ಕರ್‌ ಒಂದು ತಿದ್ದಪಡಿಯನ್ನು ಮಂಡಿಸಿದರು ಅದರಲ್ಲಿ, ಒಂದನೇ ವಿಧಿಗೆ ʼಇಂಡಿಯಾ ಎಂದರೇ ಭಾರತʼ. ಅದು ರಾಜ್ಯಗಳ ಒಕ್ಕೂಟವಾಗಬೇಕು ಎಂದು ಪ್ರತಿಪಾದಿಸಿದ್ದರು. ಅದಾದ ಮೇಲೆಯೂ ಸಾಕಷ್ಟು ತಿದ್ದುಪಡಿಗಾಗಿ ಎಚ್. ವಿ ಕಾಮತ್‌, ಸೇಠ್‌ ಗೋವಿಂದ್ ದಾಸ್‌, ಕಮಲಪತಿ ತ್ರಿಪಾಠಿ ಮೊದಲಾದವರು ಸೂಚಿಸಿದರಾದರೂ ಪ್ರಯೋಜವಾಗಿಲ್ಲ. ಆದರೆ, ಭಾರತ ಎಂದು ದೇಶಕ್ಕೆ ಹೆಸರಿಡಬೇಕು ಎಂದು ಅಂದು ಪ್ರಸ್ತಾಪ ಮಾಡಿದವರು ಇದು ಬ್ರಿಟಿಷರ ವಸಾಹುತು ಕಾಲದ ಹೆಸರು ಎಂದು ʼಇಂಡಿಯಾʼ ಎಂಬ ಹೆಸರಿನ ಬಗ್ಗೆ ತಕರಾರು ಎತ್ತಿಲ್ಲ ಎನ್ನುವುದು ಇಲ್ಲಿ ಉಲ್ಲೇಖಿಸಲೇ ಬೇಕಾದ ವಿಚಾರ. ಯಾರು ʼಭಾರತʼ ಎಂದು ಹೆಸರಿಡಬೇಕು ಎಂದು ಹೆಸರಿಟ್ಟಿದ್ದರೋ ಅವರ ನಿರ್ಣಯಗಳನ್ನು ಮತಕ್ಕೆ ಹಾಕಿದ ನಂತರ ಅಗತ್ಯ ಮತಗಳನ್ನು ಪಡೆಯುವಲ್ಲಿ ವಿಫಲವಾದ ಕಾರಣ ಅಂಬೇಡ್ಕರ್‌ ಸೂಚಿದ್ದನ್ನೇ ಅಂಗೀಕರಿಸಲಾಯಿತು.   

ʼಇಂಡಿಯಾʼ ಮತ್ತು ʼಭಾರತʼ ಎರಡೂ ನಮ್ಮ ದೇಶದ ಇತಿಹಾಸದಲ್ಲಿ ಮೂಲವನ್ನು ಹೊಂದಿವೆ. ಅಲೆಕ್ಸಾಂಡರ್ ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದ ಸಮಯದಿಂದ ‘ಇಂಡಿಯಾ’ ಎಂಬ ಪದದ ಕುರುಹುಗಳು ಕಂಡುಬಂದರೆ, ಅದು ಸಿಂಧೂ (ಇಂಡಸ್) ನದಿಯ ದಡದಲ್ಲಿ ಅಥವಾ ಆಚೆಗೆ ವಾಸಿಸುವವರೆಲ್ಲರನ್ನು ಇಂಡೀಸ್ ಎಂದು ಉಲ್ಲೇಖಿಸಿರುವುದು ನಮಗೆ ಶಬ್ದಕೋಶಗಳಲ್ಲಿ ಮತ್ತು ಬೇರೆ ಬೇರೆ ಆಕಾರ ಗ್ರಂಥಗಳಲ್ಲಿ ಸಿಗುತ್ತವೆ. ಭಾರತ್ ಎಂಬ ಹೆಸರನ್ನು ನಮ್ಮ ಪೌರಾಣಿಕ ಹಿನ್ನಲೆಯಿಂದಲೂ ಕಾಣಬಹುದು. ಅದನ್ನು ಇಲ್ಲಿ ಪ್ರತ್ಯೇಕಿಸಿ ಹೇಳಬೇಕೆಂದೇನಿಲ್ಲ. ಈ ನೆಲದ ಇತಿಹಾಸವನ್ನು ನಿರ್ದಾಕ್ಷಿಣ್ಯವಾಗಿ ತಿರುಚಿದರೂ ರಾಜಕೀಯ ಉದ್ದೇಶಕ್ಕಾಗಿ ಒಬ್ಬರ ವಿರುದ್ಧ ಮತ್ತೊಬ್ಬರನ್ನು ತಿರುಗಿಸುವ ಯತ್ನ ಹೇಗೆ ಮತ್ತು ಏಕೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ.

ಸಂವಿಧಾನ ಸಭೆಯಲ್ಲಿ ಒಂದು ದೊಡ್ಡ ಚರ್ಚೆಯ ನಂತರ “ಇಂಡಿಯಾವೇ ಭಾರತ” ಎಂದು ಒಪ್ಪಿಗೆಗೆ ಬಂದು ಅಳವಡಿಸಿಕೊಳ್ಳಲಾಯಿತು, ಅದು ಆ ಸಮಯದಲ್ಲಿ ಇದು ಸ್ಪಷ್ಟವಾದ ಸೈದ್ಧಾಂತಿಕ ವಿಭಜನೆ ಎಂದೇ ಗುರುತಿಸಲ್ಪಟ್ಟಿತು. ಅದೇನೇ ಇದ್ದರೂ, ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೂಲಕ ಈ ವಿಷಯವನ್ನು ಬಹಳ ಘನತೆಯಿಂದ ಪರಿಹರಿಸಲಾಯಿತು. “ಇಂಡಿಯಾವೇ ಭಾರತ” ಎನ್ನುವುದರ ಪರವಾಗಿ ಮತ ಚಲಾಯಿಸಿದ ಸಂವಿಧಾನ ಸಭೆಯ ಸದಸ್ಯರ ದೇಶಭಕ್ತಿ ಮತ್ತು ರಾಷ್ಟ್ರೀಯತೆಯನ್ನು ಅನುಮಾನಿಸುವುದು ಮೂರ್ಖತನ. ಅವರಲ್ಲಿ ಪ್ರತಿಯೊಬ್ಬರೂ ದೇಶಕ್ಕಾಗಿ ತ್ಯಾಗಗಳನ್ನು ಮಾಡಿದವರು, ಬ್ರಿಟಿಷ್ ಜೈಲುಗಳಲ್ಲಿ ವರ್ಷಗಳ ಕಾಲ, ದಶಕಗಳ ಕಾಲ ಸಹಿಸಿಕೊಂಡವರು ಮತ್ತು ಬ್ರಿಟಿಷ್ ಸಾಮ್ರಾಜ್ಯಶಾಹಿಯ ದಬ್ಬಾಳಿಕೆಯ ಶಕ್ತಿಗಳನ್ನು ಎದುರಿಸಿದವರು. ಬಾಬಾ ಸಾಹೇಬ್ ಅಂಬೇಡ್ಕರ್, ರಾಜೇಂದ್ರ ಪ್ರಸಾದ್, ಚಕ್ರವರ್ತಿ ರಾಜಗೋಪಾಲಾಚಾರಿ, ಜವಾಹರಲಾಲ್ ನೆಹರು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಸ್ವಾತಂತ್ರ್ಯ ಹೋರಾಟಗಾರರು ಮಾತ್ರವಲ್ಲದೆ ದೇಶದ ಏಳ್ಗೆಗಾಗಿ ಭದ್ರ ಬುನಾದಿ ಹಾಕಿಕೊಟ್ಟವರಾಗಿರುವುದರಿಂದ ನಮ್ಮ ದೇಶದ ಹಿನ್ನೆಲೆಯ ಬಗ್ಗೆ ಅವರ ತಿಳುವಳಿಕೆಯನ್ನು ಯಾರೂ ಪ್ರಶ್ನಿಸುವ ಧೈರ್ಯ ಮಾಡಲಿಲ್ಲ. ಅವರನ್ನು ಬ್ರಿಟಿಷ್‌ ದಾಸ್ಯಕ್ಕೆ ಒಳಗಾದವರು ಎಂದು ಬಿಂಬಿಸುವುದು ಮತ್ತು ಭಾವಿಸುವುದು ಹಾಸ್ಯಾಸ್ಪದವಾಗಿ ಕಾಣಿಸುತ್ತಿದೆ. ಇದು ದೇಶಕ್ಕಾಗಿ ಅವರು ಮಾಡಿದ ಮಹಾತ್ಯಾಗಕ್ಕೆ ಮಾಡುವ ಅವಮಾನವೇ ಸರಿ.

ಈ ದೇಶದ ಸ್ವಾತಂತ್ರ್ಯದ ಪರಂಪರೆಯನ್ನು ಹೈಜಾಕ್ ಮಾಡಲು ಪ್ರಯತ್ನಿಸಲಾಗುತ್ತಿದೆಯೇ ಎಂಬ ಅನುಮಾನವೂ ಈಗ ಹುಟ್ಟಲಾರಂಭಿಸಿದೆ. ಚಳುವಳಿ, ಸಂವಿಧಾನವನ್ನು ಒಪ್ಪದ, ತ್ರಿವರ್ಣ ಧ್ವಜದ ಬಗ್ಗೆ ಗೌರವ ಇಲ್ಲದಿರುವವರು ಇಂದು ʼದೇಶ ಭಕ್ತಿʼ / ʼದೇಶ ಪ್ರೇಮʼದ ಸರ್ಟಿಫಿಕೇಟ್‌ ಗಳನ್ನು ಇಲ್ಲಿ ಇವರ ಧೋರಣೆಯನ್ನು ಪ್ರಶ್ನಿಸುವವರಿಗೆ  ಹಂಚುತ್ತಿದ್ದಾರೆ. “ತ್ರಿವರ್ಣ ಧ್ವಜಕ್ಕೆ ಮೂರು ಬಣ್ಣಗಳಿವೆ, ಅದು ಕೆಟ್ಟ ಶಕುನವಾಗಿದೆ ಮತ್ತು ಅದನ್ನು ಜನರು ಒಪ್ಪಿಕೊಳ್ಳುವುದಿಲ್ಲ” ಎಂದು ಅಂದು ಹೇಳಿದವರು ಈ ಮೇಲಿನ ಗುಂಪಿಗೆ ಸೇರದವರು ಎಂಬುದನ್ನು ಈ ದೇಶ ಖಂಡಿತ ಮರೆಯುವುದಕ್ಕೆ ಸಾಧ್ಯವಿಲ್ಲ.

ಒಟ್ಟಿನಲ್ಲಿ ಈಗ ದೇಶದ ಹೆಸರು ಬದಲಾವಣೆಯ ವಿಚಾರ ರಾಜಕೀಯವಾಗಿ ಬಣ್ಣ ಪಡೆದುಕೊಳ್ಳುತ್ತಿದೆ. ಪರ ವಿರೋಧ ಚರ್ಚೆಗಳು ತಾರರಕ್ಕೆ ಏರಿವೆ. ಏನೇ ಆಗಲಿ, ಆದರೇ, ಈ ರಾಜಕೀಯದ ಪ್ರತಿಷ್ಟೆಯ ನಡುವೆ ದೇಶದ ಘನತೆಗೆ, ಗೌರವಕ್ಕೆ ಧಕ್ಕೆಯಾಗದಿರಲಿ ಎನ್ನುವುದೇ ನಮ್ಮ ಉದ್ದೇಶ.

ಸರ್ಕಾರಕ್ಕೆ ಜನಾದೇಶವಿದೆ, ಮತ್ತು ಅದು ಬಯಸಿದರೆ ಬದಲಾವಣೆಯನ್ನು ತರಬಹುದು. ಆದಾಗ್ಯೂ, ಸ್ವಾತಂತ್ರ್ಯ ಚಳುವಳಿಯ ಸಾರ್ವತ್ರಿಕ ಮೌಲ್ಯಗಳನ್ನು ಬದಲಾಯಿಸುವ ಸ್ವಾತಂತ್ರ್ಯವನ್ನು ಹೊಂದಿಲ್ಲ, ಸಂವಿಧಾನವನ್ನು ಹೊಸತಾಗಿ ರಚಿಸುವ ಸ್ವಾತಂತ್ರ್ಯವನ್ನು ಹೊಂದಿಲ್ಲ, ನಮ್ಮ ಈ ದೇಶ ಅನುಸರಿಸಿಕೊಂಡು ಬಂದ ಪ್ರಜಾಪ್ರಭುತ್ವದ ಆಶಯವನ್ನು ಮರುವಿನ್ಯಾಸಗೊಳಿಸುವ ಸ್ವಾತಂತ್ರ್ಯನ್ನು ಹೊಂದಿಲ್ಲ. ಅದಕ್ಕೆ ಸಮಾಜದ ಸಾಮೂಹಿಕ ಒಪ್ಪಿಗೆಯೂ ಅಗತ್ಯವಿದೆ.  

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!