spot_img
Monday, April 20, 2026
spot_img

ಕಲಾವಿದ ಬಿಜೂರು ಚಂದ್ರ ಶೆಟ್ಟಿ ಅವರಿಗೆ ‘ವಂಡ್ಸೆ ನಾರಾಯಣ ಗಾಣಿಗ ಪ್ರಶಸ್ತಿ’

ತೆಂಕು-ಬಡಗುತಿಟ್ಟಿನಲ್ಲಿ ಸುದೀರ್ಘ 40 ವರ್ಷಗಳ ಕಾಲ ಸೇವೆಗೈದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ವಂಡ್ಸೆ ನಾರಾಯಣ ಗಾಣಿಗರ ಸವಿ ನೆನಪಿನಲ್ಲಿ ನೀಡಲ್ಪಡುವ ಎರಡನೇ ವರ್ಷದ ವಂಡ್ಸೆ ನಾರಾಯಣ ಪ್ರಶಸ್ತಿ-2023ಕ್ಕೆ ಬಡಗುತಿಟ್ಟಿನ ಸ್ತ್ರೀ ವೇಷ ಕಲಾವಿದ ಬಿಜೂರು ಚಂದ್ರ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದ

ಫೆ.22ರಂದು ನಡೆಯುವ ವಂಡ್ಸೆಯ ತಿರುಮಲ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವದ ಸಂದರ್ಭದಲ್ಲಿ ದೇವಸ್ಥಾನದ ಆಶ್ರಯದಲ್ಲಿ, ವಂಡ್ಸೆ ನಾರಾಯಣ ಗಾಣಿಗರ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಮುಂಬೈಯ ಹಿರಿಯ ಯಕ್ಷಗಾನ ಕಲಾಪೋಷಕರು ಹಾಗೂ ಯಕ್ಷಗುರುಗಳಾದ ದೇವಲ್ಕುಂದ ಭಾಸ್ಕರ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಬಿಜೂರು ಚಂದ್ರ ಶೆಟ್ಟಿ:
ಬಡಗುತಿಟ್ಟು ಯಕ್ಷಗಾನದಲ್ಲಿ ಸ್ತ್ರೀ ಭೂಮಿಕೆಯಲ್ಲಿ ಪರಂಪರೆಯ ಸೊಗಡನ್ನು ಮೈಗೂಡಿಸಿಕೊಂಡು ಬಂದ ಕಲಾವಿದ ಚಂದ್ರ ಶೆಟ್ಟಿ ಬಿಜೂರು. ಮಾರಣಕಟ್ಟೆ ಮೇಳದಲ್ಲಿಯೇ ಸುದೀರ್ಘ ತಿರುಗಾಟ ಮಾಡಿರುವ ಚಂದ್ರ ಶೆಟ್ಟರು ಸ್ತ್ರೀ ಭೂಮಿಕೆಯಲ್ಲಿ ಎಲ್ಲ ರೀತಿಯ ಪಾತ್ರಗಳನ್ನು ನಿರ್ವಹಿಸಿ ಸಾರ್ವಕಾಲಿಕವಾಗಿ ಸೈ ಎನಿಸಿಕೊಂಡ ಸಮರ್ಥ ಕಲಾವಿದ.

ಕಥಾನಾಯಕಿ, ಕಸೆ ವೇಷ, ಗರತಿ ಪಾತ್ರ, ದೇವಿಯಂತಹ ಪಾತ್ರಗಳನ್ನು ಕೂಡಾ ಯಕ್ಷಗಾನದ ಚೌಕಟ್ಟಿನಲ್ಲಿ ನಿರ್ವಹಿಸಿ ಪಾತ್ರಕ್ಕೆ ಗರಿಷ್ಠ ನ್ಯಾಯ ನೀಡುತ್ತಿರುವ ಕಲಾವಿದ. ಹೆಣ್ಣನ್ನೇ ನಾಚಿಸುವ ಒನಪು ಒಯ್ಯಾರ, ಸ್ತ್ರೀ ಪಾತ್ರಕ್ಕೆ ಒಪ್ಪುವ ಮುಖಮುದ್ರೆ, ಕುಣಿತದಲ್ಲಿ ಬಡಗಿನ ಪರಂಪರೆಯ ಲಾಲಿತ್ಯ, ಸ್ಪುಟವಾದ ಮಧುರ ವಾಚಿಕ, ಅಭಿವ್ಯಕ್ತಿಯಲ್ಲಿ ಭಾವನೆಗಳ ಸ್ಥಿರೀಕರಣ, ಪಾತ್ರವನ್ನು ಜೀವಂತಗೊಳಿಸುವ ರಂಗಶ್ರದ್ದೆ, ಗಂಭೀರ ಸ್ತ್ರೀ ಪಾತ್ರಗಳಲ್ಲಿ ಅವರ ತಾದ್ಯಾತ್ಮ ಸ್ಥಿತಿ, ಕರುಣಾ, ಭಕ್ತಿ, ಶೃಂಗಾರ ರಸದಲ್ಲಿ ಪಾತ್ರವನ್ನು ಭಾವತೀವ್ರತೆಯಲ್ಲಿ ಕಡೆದಿಡುವಲ್ಲಿ ಚಂದ್ರ ಶೆಟ್ಟರ ರಂಗ ನೈಪುಣ್ಯತೆ ಅಪಾರವಾದುದು.

ದಿನಾಂಕ 07-04-1970ರಂದು ಉಪ್ಪುಂದ ಬಿಜೂರು ತ್ರಾಸಿಮನೆ ಮುತ್ತಮ್ಮ ಶೆಡ್ತಿ ಮತ್ತು ದಿ.ಮಹಾಬಲ ಶೆಟ್ಟಿ ದಂಪತಿಗಳ ಪುತ್ರರಾಗಿ ಜನಿಸಿದ ಚಂದ್ರ ಶೆಟ್ಟಿ ಅವರು ಬಿಜೂರು ಶಾಲೆಯಲ್ಲಿ ೫ನೇ ತರಗತಿಯ ತನಕ ಶಿಕ್ಷಣ ಪಡೆದರು. ಯಕ್ಷಗಾನದ ಬಗ್ಗೆ ತೀವ್ರ ಆಸಕ್ತಿಯಿಂದ ಮುಂದೆ ಶಾಲೆಗೆ ಹೋಗದೇ ರಂಗಶಿಕ್ಷಣದತ್ತ ಉತ್ಸುಕರಾದರು. ತನ್ನ 15ನೇ ವಯಸ್ಸಿನಲ್ಲಿಯೇ ಕಳವಾಡಿ ಮೇಳಕ್ಕೆ ಸೇರ್ಪಡೆಗೊಳ್ಳುತ್ತಾರೆ. ಪ್ರಸಂಗಕರ್ತ ಡಾ|ವೈ ಚಂದ್ರಶೇಖರ ಶೆಟ್ಟರ ಗುರುತನದಲ್ಲಿ ಹೆಜ್ಜೆ, ಪ್ರಸಂಗಾಭ್ಯಾಸ ಮಾಡಿದ ಇವರು ಶೃದ್ದೆಯಿಂದ ಬಹುಬೇಗ ಯಕ್ಷಶಿಕ್ಷಣ ಸಿದ್ಧಿಸಿಕೊಳ್ಳುತಾರೆ. ಹಂತ ಹಂತವಾಗಿ ರಂಗಾನುಭವ ಪಡೆಯುತ್ತಾರೆ. ಪ್ರಾರಂಭದಲ್ಲಿ ಪುರುಷವೇಷಗಳನ್ನು ಮಾಡುತ್ತಾ ಭರವಸೆಯ ಯುವ ಕಲಾವಿದರಾಗಿ ಮೂಡಿಬಂದ ಇವರು ಸಾಲಿಗ್ರಾಮ ಮೇಳಕ್ಕೆ ಸೇರ್ಪಡೆಗೊಂಡಾಗ ಸ್ತ್ರೀವೇಷಕ್ಕೆ ಒಂದು ಅವಕಾಶ ದೊರೆಯುತ್ತದೆ. ಅಲ್ಲಿ ಇವರ ಪ್ರತಿಭಾಪೂರ್ಣ ಅಭಿನಯ, ರಂಗನಡೆ, ಭಾವಾಭಿವ್ಯಕ್ತಿ ಹಿರಿಯ ಕಲಾವಿದರಿಂದ ಶ್ಲಾಘನೆಗೆ ಪಾತ್ರವಾಗುವುದರೊಂದಿಗೆ ಪರಿಪೂರ್ಣ ಸ್ತ್ರೀ ವೇಷ ಕಲಾವಿದರಾಗಿ ರೂಪುಗೊಳ್ಳುತ್ತಾರೆ. ಆಗ ಕಾಳಿಂಗ ನಾವಡರು ಸಾಲಿಗ್ರಾಮ ಮೇಳದಲ್ಲಿದ್ದರು. ನಾವಡರ ಪ್ರೋತ್ಸಾಹ, ಉತ್ತೇಜನ ಇವರಿಗೆ ಸಿಗುತ್ತದೆ. ಪೌರಾಣಿಕ ಹಾಗೂ ಸಾಮಾಜಿಕ ಪ್ರಸಂಗಗಳಲ್ಲಿಯೂ ನಾವಡರು ಇವರಿಗೆ ಅನೇಕ ಮಹತ್ವದ ಪಾತ್ರಗಳನ್ನು ನೀಡುತ್ತಾರೆ. ಅದನ್ನು ಸಮರ್ಪಕವಾಗಿ ನಿರ್ವಹಿಸಿ ನಾವಡರ ಮೆಚ್ಚುಗೆಗೂ ಪಾತ್ರರಾಗುತ್ತಾರೆ. ಇದು ಚಂದ್ರ ಶೆಟ್ಟರ ಕಲಾಜೀವನದಲ್ಲಿ ಮಹತ್ವದ ತಿರುವು ನೀಡುತ್ತದೆ.

ಚಂದ್ರ ಶೆಟ್ಟರು ಕಳೆದ 35 ವರ್ಷಗಳ ಯಕ್ಷ ತಿರುಗಾಟ ನಡೆಸಿದ್ದಾರೆ. ನಾಗರಕೊಡಿಗೆ ಮೇಳದಲ್ಲಿ1 ವರ್ಷ, ಹಾಲಾಡಿ 3 ವರ್ಷ, ಮಂದರ್ತಿ 1 ವರ್ಷ, ಸೌಕೂರು 1 ವರ್ಷ, ಇದೀಗ 21 ವರ್ಷಗಳಿಂದ ಮಾರಣಕಟ್ಟೆ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಮೀನಾಕ್ಷಿ, ದ್ರೌಪದಿ, ಸುಭದ್ರೆ, ಮಾಯಾಮಹಿ, ಮೋಹಿನಿ, ಕೊಲ್ಲಾಂಬಿಕೆ, ಮಹಿಷಾಮರ್ದಿನಿ, ಸೀತೆ, ಯಶೋಮತಿ, ಮಯಾ ಪೂತನಿ, ಬನಶಂಕರಿ, ಸಾಮಾಜಿಕ ಪ್ರಸಂಗಗಳಲ್ಲಿ ನಂದಾ, ಚಂಪ, ವಿನಯವತಿ ಮೊದಲಾದ ಪಾತ್ರಗಳು ಇವರಿಗೆ ಖ್ಯಾತಿ ತಂದುಕೊಟ್ಟಿವೆ. ಸ್ತ್ರೀ ಪಾತ್ರವಲ್ಲದೇ ಸಂದರ್ಭಕ್ಕನುಸಾರವಾಗಿ ಪುರುಷ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.

ಹಿರಿಯ ಕಲಾವಿದರ ಮಾರ್ಗದರ್ಶನ, ಕಿರಿಯ ಕಲಾವಿದರ ಸಹಕಾರ, ಮೇಳದ ಯಜಮಾನರ ಪ್ರೋತ್ಸಾಹವನ್ನು ಸದಾ ಸ್ಮರಿಸಿಕೊಳ್ಳುವ ಇವರು, ಅರಾಟೆ, ನಾಗೂರು ದಯಾನಂದ, ಜಲವಳ್ಳಿ, ಐರ್‌ಬೈಲ್ ಆನಂದ ಶೆಟ್ಟಿ, ಮಡಾಮಕ್ಕಿ ಪ್ರಭಾಕರ ಶೆಟ್ಟಿ, ಅರೆಹೊಳೆ ಸಂಜೀವ ಶೆಟ್ಟಿ, ಸುಧಾಕರ ಕೊಠಾರಿ, ಹೆನ್ನಾಬೈಲು ಸಂಜೀವ ಶೆಟ್ಟಿ, ಉಮೇಶ ಸುವರ್ಣ ಮುಂತಾದ ಕಲಾವಿದರ ಒಡನಾಟ ಹೊಂದಿದ್ದಾರೆ.

ಪತ್ನಿ ನಾಗರತ್ನ ಶೆಟ್ಟಿ, ಪುತ್ರರಾದ ನಾಗರಾಜ, ಸಚಿನ, ಪ್ರದೀಪ, ಕಿರಣ, ಪುತ್ರಿ ಜ್ಯೋತಿ ಅವರೊಂದಿಗಿನ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಅವರ ಕಲಾಸೇವೆಗೆ ಯೋಗ್ಯವಾಗಿಯೇ ವಂಡ್ಸೆ ನಾರಾಯಣ ಗಾಣಿಗ ಪ್ರಶಸ್ತಿ ಲಭಿಸಿದೆ.


-(ನಾಗರಾಜ್ ವಂಡ್ಸೆ)

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!