Sunday, September 8, 2024

ಸರ್ಕಾರದ ವತಿಯಿಂದಲೇ ರಾಷ್ಟ್ರೀಯ ರೈತ ದಿನಾಚರಣೆ ಆಚರಿಸಿದರೆ ಹೆಚ್ಚು ಅರ್ಥಪೂರ್ಣ-ಕೆ.ಪ್ರತಾಪಚಂದ್ರ ಶೆಟ್ಟಿ

ಉಡುಪಿ ಜಿಲ್ಲಾ ರೈತ ಸಂಘ ನೇತೃತ್ವದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ


ಕುಂದಾಪುರ, ಡಿ.23: ಸರ್ಕಾರ ಮತ್ತು ರೈತರ ನಡುವೆ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಲು ಸೂಕ್ತ ವೇದಿಕೆಗಳಿಲ್ಲ. ಆ ಹಿನ್ನೆಲೆಯಲ್ಲಿ ರಾಷ್ಟ್ರೀಯ ರೈತ ದಿನಾಚರಣೆಯನ್ನು ಸರ್ಕಾರದ ವತಿಯಿಂದಲೇ ಆಚರಿಸಿದರೆ ಅದು ಹೆಚ್ಚು ಅರ್ಥಪೂರ್ಣವಾಗುತ್ತದೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.

ಅವರು ಉಡುಪಿ ಜಿಲ್ಲಾ ರೈತ ಸಂಘ ರಿ., ನೇತೃತ್ವದಲ್ಲಿ ಡಿ.23 ಶುಕ್ರವಾರ ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಲ್ಲಾ ಸರಕಾರಗಳು ಜನಪರವಾಗಿ, ರೈತರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಟಾನಿಸುತ್ತಿವೆಯಾದರೂ ರೈತರ ಕಡೆಗಣನೆ ಆಗುತ್ತಿದೆ ಎನ್ನುವ ವಿಚಾರವೂ ಹೌದು. ಸೌಲಭ್ಯಗಳು ದೊರೆಯುತ್ತಿವೆಯಾದರೂ ಸಮರ್ಪಕವಾಗಿ ಅದು ಆರ್ಹ ರೈತರಿಗೆ ತಲುಪುತ್ತಿಲ್ಲ ಎನ್ನುವ ಅಸಮಧಾನವೂ ಇದೆ. ಹಿಂದೆ ಗ್ರಾಮಕ್ಕೊಬ್ಬರು ಗ್ರಾಮಸೇವಕರು ಇದ್ದರು. ಈಗ ಅದು ಹೋಬಳಿಗೊಂದು ಆಗಿದೆ. ಕಾಡುಪ್ರಾಣಿಗಳ ಉಪಟಳ, ತೆಂಗಿಗೆ ಕೋತಿಗಳ ಹಾವಳಿ ಇತ್ಯಾದಿ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳದೆ ಇರುವುದು ರೈತರಲ್ಲಿ ನಿರಾಸಕ್ತಿ ಮೂಡಿಸುತ್ತದೆ. ರೈತರನ್ನು ಸರಿಯಾಗಿ ಪ್ರೋತ್ಸಾಹಿಸದೆ ಇದ್ದರೆ ರೈತರು ಕೃಷಿಕ್ಷೇತ್ರದಿಂದ ಕಾಣೆಯಾಗುವ ಭೀತಿ ಇದೆ ಎಂದರು.

ಯಾಂತ್ರೀಕೃತ ಕೃಷಿ ಕಾರ್ಯರೂಪಕ್ಕೆ ಬಾರದೇ ಇದ್ದಿದ್ದರೆ ಭಾರತದಲ್ಲಿ ಇಂದು 70% ಕೃಷಿ ಬಿಡುತ್ತಿದ್ದರು. ಹಾಗಾಗಿ ಯಾಂತ್ರೀಕೃತ ಕೃಷಿಯನ್ನು ಉತ್ತೇಜಿಸುವ ಕೆಲಸ ಆಗಬೇಕು. ಭವಿಷ್ಯದಲ್ಲಿ ವಿದ್ಯುತ್ ಖಾಸಗೀಕರಣವಾಗಿ, ಸಬ್ಸಿಡಿ ನೀಡುವ ಯೋಜನೆ ಜಾರಿಯಾದರೆ ಮುಂದೊಂದು ದಿನ ರೈತ ನೀರಾವರಿಗೆ ದುಬಾರಿ ವಿದ್ಯುತ್ ಬಿಲ್ ಪಾವತಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.

ಇವತ್ತು ಕಿಂಡಿ ಅಣೆಕಟ್ಟುಗಳು ರೈತರನ್ನು, ಹಳ್ಳಗಳನ್ನು ಹುಡುಕಿಕೊಂಡು ಬರುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಾದರೂ ಆ ಕಿಂಡಿ ಅಣೆಕಟ್ಟು ನಿರ್ಮಾಣವಾಗುವುದನ್ನು ಸ್ಥಳೀಯ ರೈತರು ಗಮನಿಸಬೇಕು. ಕಳಪೆಯಾಗಿ ನಿರ್ಮಾಣವಾದರೆ ಮುಂದೆ ಅದರಲ್ಲಿ ನೀರು ನಿಲ್ಲದೇ ವ್ಯರ್ಥವಾದಾಗ ರೈತ ಪಶ್ಚಾತ್ತಾಪ ಪಡಬೇಕಾಗುತ್ತದೆ. ನಿರ್ಮಾಣ ಸಂದರ್ಭದಲ್ಲಿ ರೈತರ ಕಾಳಜಿಯೂ ಬೇಕು ಎಂದರು.

ಬೀಡಾಡಿ ಗೋವುಗಳ ನಿಯಂತ್ರಣಕ್ಕೆ ಸರ್ಕಾರ ಗ್ರಾಮ ಮಟ್ಟದಲ್ಲಿ ಅಥವಾ ಹೋಬಳಿ ಮಟ್ಟದಲ್ಲಿಯಾದರೂ ಗೋಶಾಲೆಗಳ ನಿರ್ಮಾಣ ಮಾಡಿ, ಅಲ್ಲಿ ಅನಾಥ ಗೋವುಗಳಿಗೆ ಆಶ್ರಯ ಕಲ್ಪಿಸಬೇಕು. ಇಲ್ಲದಿದ್ದರೆ ಬೀಡಾಡಿ ಗೋವುಗಳು ಕೃಷಿಗೆ ತೊಂದರೆ ಉಂಟು ಮಾಡುತ್ತವೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದರು.

ತೋಟಗಾರಿಕೆ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಜಯಶೀಲ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ, ರೈತ ಸಂಘಟನೆಗಳಿಗೆ ರೈತರ ಸಮಸ್ಯೆಗಳ ಅರಿವಿರಬೇಕು. ರಾಜಕೀಯ ಹೊರತು ಪಡಿಸಿ ಮುನ್ನೆಡೆದಾಗ ಯಶಸ್ವಿಯಾಗುತ್ತದೆ. ಉಡುಪಿ ಜಿಲ್ಲಾ ರೈತ ಸಂಘ ಪ್ರಾಮಾಣಿಕ, ಶಕ್ತಿಯುತ ನಾಯಕ ಕೆ.ಪ್ರತಾಪಚಂದ್ರ ಶೆಟ್ಟರ ನೇತೃತ್ವದಲ್ಲಿ ಸಮರ್ಥವಾಗಿ ಮುನ್ನೆಡೆಯುತ್ತಿದೆ ಎಂದರು.

ಮಾಜಿ ಪ್ರಧಾನಿ ಚೌದರಿ ಚರಣ್ ಸಿಂಗ್ ರೈತರ ಬಗ್ಗೆ ಗರಿಷ್ಠ ಕಾಳಜಿಯನ್ನು ಎತ್ತಿ ಹಿಡಿದವರು. ಲಾಲ್ ಬಹದ್ದೂರ್ ಶಾಸ್ತ್ರೀಯವರು ಕೂಡಾ ರೈತರ ಬಗ್ಗೆ ಪ್ರಾಮಾಣಿಕ ಪ್ರಯತ್ನ ಪಟ್ಟಿರುವುದು ಸ್ಮರಿಸಲೇಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾರತೀಯ ಕಿಸಾನ್ ಸಂಘದ ಕುಂದಾಪುರ ತಾಲೂಕು ಅಧ್ಯಕ್ಷರಾದ ಸೀತಾರಾಮ ಗಾಣಿಗ ಭಾಗವಹಿಸಿದ್ದರು.

ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಂ.ಮಹೇಶ ಹೆಗ್ಡೆ, ಸಂಜೀವ ಶೆಟ್ಟಿ ಸಂಪಿಗೇಡಿ, , ಜಯರಾಮ ಶೆಟ್ಟಿ ಸುರ್‍ಗೊಳಿ, ದೀನಪಾಲ ಶೆಟ್ಟಿ, ಸಚ್ಚಿದಾನಂದ ವೈದ್ಯ, ಉಡುಪಿ ಜಿಲ್ಲಾ ರೈತ ಸಂಘದ ಕಾವ್ರಾಡಿ ವಲಯಾಧ್ಯಕ್ಷ ಶರತ್ಚಂದ್ರ ಶೆಟ್ಟಿ, ಕೋಟೇಶ್ವರ ವಲಯಾಧ್ಯಕ್ಷ ಕೃಷ್ಣದೇವ ಕಾರಂತ, ಬೀಜಾಡಿ ವಲಯಾಧ್ಯಕ್ಷ ಕೆದೂರು ಸದಾನಂದ ಶೆಟ್ಟಿ, ಸಿದ್ಧಾಪುರ ವಲಯಾಧ್ಯಕ್ಷ ಕೆ.ಸದಾಶಿವ ಶೆಟ್ಟಿ, ತ್ರಾಸಿ ವಲಯಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಬೈಂದೂರು ವಲಯಾಧ್ಯಕ್ಷ ವಸಂತ ಹೆಗ್ಡೆ, ಮಂದಾರ್ತಿ ವಲಯಾಧ್ಯಕ್ಷ ಕೃಷ್ಣರಾಜ ಶೆಟ್ಟಿ, ಹೆಬ್ರಿ ವಲಯಾಧ್ಯಕ್ಷ ಕಿರಣ್ ತೋಳಾರ್, ಹಾಲಾಡಿ ವಲಯಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಮರತ್ತೂರು, ಬ್ರಹ್ಮಾವರ ವಲಯಾಧ್ಯಕ್ಷ ರೋಹಿತ್ ಕುಮಾರ್ ಶೆಟ್ಟಿ, ಪೆರ್ಡೂರು ವಲಯಾಧ್ಯಕ್ಷ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.

ರೈತ ಸಾಧಕರಿಗೆ ಸನ್ಮಾನ:

ಈ ಸಂದರ್ಭದಲ್ಲಿ ಉತ್ತರ ಆಪ್ರಿಕಾದ ಮೊರೊಕೊದಲ್ಲಿ ನಡೆದ ಎಸ್.ಬಿ.ಸಿ.ಸಿ ಅಂತರಾಷ್ಟ್ರೀಯ ಶೃಂಗಸಭೆಯಲ್ಲಿ ಕರ್ನಾಟಕವನ್ನು ಪಂಚಾಯತ್ ರಾಜ್ ವಿಭಾಗದಿಂದ ಪ್ರತಿನಿಧಿಸಿದ ಏಕೈಕ ಚುನಾಯಿತ ಪ್ರತಿನಿಧಿ ರೈತ ಸಂಘದ ವಂಡ್ಸೆ ವಲಯ ಅಧ್ಯಕ್ಷರಾದ ಉದಯಕುಮಾರ ಶೆಟ್ಟಿ, ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ ಡಾ|ಅತುಲ್ ಕುಮಾರ್ ಶೆಟ್ಟಿ ಚಿತ್ತೂರು, ವಂಡ್ಸೆ ವಲಯ, ಕೃಷಿ, ಹೈನುಗಾರಿಕೆ, ಸಹಕಾರಿ ಸಾಧಕ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಕಂಬದಕೋಣೆ ವಲಯ, ಪ್ರಗತಿಪರ ಕೃಷಿಕ ಬಸವ ರಾಜ್ ಪೂಜಾರಿ ಕೊರವಡಿ, ಬೀಜಾಡಿ ವಲಯ, ಸಮಗ್ರ ಕೃಷಿ ಸಾಧಕ ಚಿತ್ತರಂಜನ್ ರಾವ್ ಹಾಲಾಡಿ ವಲಯ, ಚಂದ್ರಶೇಖರ ಉಡುಪ ಮಸ್ವಾಡಿ, ಕಾವ್ರಾಡಿ ವಲಯ, ಪ್ರಗತಿಪರ ಕೃಷಿಕ ಜಯಕರ ಶೆಟ್ಟಿ, ಮಂದರ್ತಿ ವಲಯ, ಮಲ್ಲಿಗೆ ಕೃಷಿ ಸಾಧಕಿ ಲಲಿತಾ ಶೆಟ್ಟಿ ಕೋಟೇಶ್ವರ ವಲಯ, ಕೃಷಿ, ಸಮಾಜ ಸೇವೆಯಲ್ಲಿ ಪ್ರಸಾದ್ ಹೆಗ್ಡೆ ಹೆಬ್ರಿ ವಲಯ, ಪ್ರಗತಿಪರ ಕೃಷಿಕ ಬಿ.ರತ್ನಾಕರ ಶೆಟ್ಟಿ ಸಿದ್ಧಾಪುರ ವಲಯ, ಪ್ರಗತಿಪರ ಕೃಷಿಕ ಸುಕೇಶ ಶೆಟ್ಟಿ ಬೈಂದೂರು ವಲಯ, ಹೈನುಗಾರರಾದ ಸತೀಶ ಶೆಟ್ಟಿ ಪೆರ್ಡೂರು ವಲಯ, ಪ್ರಗತಿಪರ ಕೃಷಿಕ ವೆಂಕಟ ಪೂಜಾರಿ ತ್ರಾಸಿ ವಲಯ ಇವರುಗಳನ್ನು ಸನ್ಮಾನಿಸಿಲಾಯಿತು.

ಈ ಸಂದರ್ಭದಲ್ಲಿ ರೈತ ಸಂಘದ 2023ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬೆಳ್ವೆ ಸತೀಶ್ ಕಿಣಿ ಸ್ವಾಗತಿಸಿ, ಉಡುಪಿ ಜಿಲ್ಲಾ ರೈತ ಸಂಘದ ವಕ್ತಾರ ವಿಕಾಸ್ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಡುಪಿ ಜಿಲ್ಲಾ ರೈತ ಸಂಘದ ಅಶೋಕ್ ಶೆಟ್ಟಿ ಚೋರಾಡಿ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!