Sunday, September 8, 2024

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿಯಿಂದ ಭಂಡಾರ್ಕಾಸ್ ಕಾಲೇಜಿನ 200 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ಕುಂದಾಪುರ, ಡಿ.24: ಜಾತಿಯನ್ನು ಆಧಾರವಾಗಿಟ್ಟುಕೊಂಡು ವ್ಯಕ್ತಿಯನ್ನು ಗುರುತಿಸುವಂತಾಗಬಾರದು. ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸಿ ಸಂಪನ್ಮೂಲ ಕ್ರೋಢೀಕರಿಸಿ ಆರ್ಥಿಕ, ಸಾಮಾಜಿಕ ಶಕ್ತಿ ನೀಡುವ ಜವಬ್ದಾರಿ ಸರ್ಕಾರ ಮತ್ತು ಸಮಾಜದ ಮೇಲಿದೆ. ಇಂತಹ ಸಂದರ್ಭದಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಶಿಕ್ಷಣಕ್ಕೆ ನೀಡುವ ಕೊಡುಗೆ ಶ್ಲಾಘನಾರ್ಹ ಎಂದು ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಕುಂದಾಪುರ ಭಂಡಾರ್ಕಾಸ್ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ರಿ.,ಬೆಂಗಳೂರು ವತಿಯಿಂದ 2022-23ನೇ ಕಲಿಕಾ ವರ್ಷದ ಭಂಡಾರ್ಕಾಸ್ ಕಾಲೇಜು ಆಯ್ಕೆ ಮಾಡಿದ ೨೦೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ 48000 ಸರ್ಕಾರಿ ಶಾಲೆಗಳಿವೆ. 2500 ಕಾಲೇಜುಗಳಿವೆ. 1.25 ಕೋಟಿ ವಿದ್ಯಾರ್ಥಿಗಳು ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಬಜೆಟ್‌ನಲ್ಲಿ ಶೇ.21ರಿಂದ 22ರಷ್ಟನ್ನು ಹಣವನ್ನು ಶಿಕ್ಷಣಕ್ಕೆ ಮೀಸಲಿಡಬೇಕು. ಇಷ್ಟೆಲ್ಲ ಮಾಡಿಯೂ ಪರಿಪೂರ್ಣತೆ ಕಾಣದ ಆತಂಕ ಕಾಡುತ್ತದೆ ಎಂದು ಹೇಳಿದ ಅವರು, ವಿದ್ಯಾರ್ಥಿ ರಾಷ್ಟ್ರಭಕ್ತ ಪ್ರಜೆಯಾಗಬೇಕು. ನನ್ನ ದೇಶ ಮೊದಲು ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ರಿ., ಬೆಂಗಳೂರು ಇದರ ಅಧ್ಯಕ್ಷರಾದ ಹೆಚ್.ಎಸ್ ಶೆಟ್ಟಿ ಮಾತನಾಡಿ, 42 ವರ್ಷಗಳ ಹಿಂದೆ ಈ ಕಾಲೇಜಿನಲ್ಲಿ ಓದುತ್ತಿದ್ದ ದಿನಗಳು ಈಗಿಲ್ಲ. ಸಾಕಷ್ಟು ಬದಲಾವಣೆಯಾಗಿದೆ. ಆಗಿನಷ್ಟು ಬಡತನ ಈಗ ಇಲ್ಲ. ಆದರೂ ಕೂಡಾ ಶಿಕ್ಷಣಕ್ಕೆ ಬಡತನ ಅಡ್ಡಿಯಾಗಬಾರದು. ವಿದ್ಯಾರ್ಥಿವೇತನಕ್ಕೆ ಮೆರಿಟ್‌ನ್ನು ಪರಿಗಣಿಸದೆ ಆರ್ಹ ವಿದ್ಯಾರ್ಥಿಗಳಿಗೆ ನೀಡುವ ಕೆಲಸವಾಗಬೇಕು. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಶಿಕ್ಷಣಕ್ಕೆ ಒತ್ತು ನೀಡಿದೆ. 60 ಲಕ್ಷ ರೂ. ವಿದ್ಯಾರ್ಥಿವೇತನಕ್ಕೆ ನೀಡಲಾಗಿದೆ. ಇದು ಇಲ್ಲಿ 5ನೇ ವರ್ಷದ ಕಾರ್ಯಕ್ರಮ. ಹಾಗೆಯೇ ಕಾಲೇಜಿನ ಮಧ್ಯಾಹ್ನ ಉಚಿತ ಊಟಕ್ಕೆ 2 ಲಕ್ಷ ರೂಪಾಯಿ ನೀಡುವುದಾಗಿ ಅವರು ಘೋಷಣೆ ಮಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಭಂಡಾಕಾರ್ಸ್ ಕಾಲೇಜು ಹಳೆ ವಿದ್ಯಾರ್ಥಿ, ಸ್ಕೂಲ್ ಆಫ ಮೆಡಿಸಿನ್, ಟೆಕ್ಸಾಸ್ ಎ&ಎಂ ಯೂನಿವರ್ಸಿಟಿ ಯು.ಎಸ್.ಎ ಇಲ್ಲಿನ ಅಸೋಸಿಯೇಟ್ ಡೈರೆಕ್ಟರ್ & ಪ್ರೊಫೆಸರ್ ಪ್ರೊ||ಅಶೋಕ್ ಕೆ.ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಕನಸು ಕಾಣಬೇಕು. ಕಂಡ ಕನಸು ನನಸು ಮಾಡಲು ಪ್ರಯತ್ನಿಸಬೇಕು. ಹಂತ ಹಂತವಾಗಿ ಮೇಲೇರಬೇಕು. ಕಠಿಣ ಪರಿಶ್ರಮ ಪಡಬೇಕು. ಭವಿಷ್ಯದಲ್ಲಿ ಸಾಧಕರಾಗಿ ಮೂಡಿಬರಬೇಕು ಎಂದ ಅವರು ತಾನು ಭಂಡಾಕಾರ್ಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದ ದಿನಗಳನ್ನು ನೆನಪಿಸಿಕೊಂಡರು.

ಈ ಸಂದರ್ಭದಲ್ಲಿ ಪ್ರೊ|| ಅಶೋಕ್ ಕೆ ಶೆಟ್ಟಿ ಅವರು ತನ್ನ ತಂದೆ ತಾಯಿ ನಿವೃತ್ತ ಮುಖ್ಯೋಪಾಧ್ಯಾಯರಾದ ಕೈಲ್ಕೆರೆ ರಘುರಾಮ ಶೆಟ್ಟಿ ವಂಡ್ಸೆ ಹಾಗೂ ಸಿಂಗಾರಿ ಆರ್ ಶೆಟ್ಟಿ ಹೆಸರಿನಲ್ಲಿ ಬಯೋ ಸೈನ್ಸ್ ವ್ಯಾಸಂಗ ಮಾಡುವ ಪದವಿ ವಿದ್ಯಾರ್ಥಿಗಳಿಗೆ ಪ್ರತಿವರ್ಷ 1 ಲಕ್ಷ ರೂ.ವಿದ್ಯಾರ್ಥಿ ವೇತನ ನೀಡುವುದಾಗಿ ಘೋಷಿಸಿದರು.

ಕುಂದಾಪುರ ಭಂಡಾರ್ಕಾಸ್ ಆರ್ಟ್ಸ್ & ಸೈನ್ಸ್ ಕಾಲೇಜಿನ ಹಿರಿಯ ವಿಶ್ವಸ್ಥ ಕೆ.ಶಾಂತರಾಮ ಪ್ರಭು ಅಧ್ಯಕ್ಷತೆ ವಹಿಸಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ ನಾರಾಯಣ ಶೆಟ್ಟಿ ಮಾತನಾಡಿ, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ 2017ರಿಂದ ಪ್ರತಿವರ್ಷ ವಿದ್ಯಾರ್ಥಿ ವೇತನಕ್ಕೆ 10 ಲಕ್ಷ ನೀಡುತ್ತಿದೆ. ಮಧ್ಯಾಹ್ನದ ಬಿಸಿಯೂಟಕ್ಕೆ ರೂ.50 ಸಾವಿರ ನೀಡುತ್ತಿದೆ. ಈ ವರ್ಷದಿಂದ ಅದನ್ನು 2ಲಕ್ಷ ನೀಡುವುದಾಗಿ ತಿಳಿಸಿದ್ದಾರೆ. ಈ ಸಂಸ್ಥೆಯ ಆಶಯದಂತೆ, ಟ್ರಸ್ಟ್ ಪ್ರತಿನಿಧಿಯ ಸಮಕ್ಷಮದಲ್ಲಿ ಆರ್ಹ ವಿದ್ಯಾರ್ಥಿಗಳ ಆಯ್ಕೆ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಪ್ರೊ||ಅಶೋಕ್ ಕೆ.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕಿ ಸುಮ ಜಿ.ಆರ್ ಪರಿಚಯಿಸಿದರು.

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಉಪಾಧ್ಯಕ್ಷ ಹೆಚ್.ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.

ಎಚ್.ರಾಜೀವ ಶೆಟ್ಟಿ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಶುಭಕರಾಚಾರಿ ವಿದ್ಯಾರ್ಥಿವೇತನ ಪಟ್ಟಿ ವಾಚಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ|ಜಿ.ಎಂ.ಗೊಂಡಾ ವಂದಿಸಿದರು. ರೋಹಿಣಿ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!