spot_img
Saturday, April 18, 2026
spot_img

ಕಾಳಾವರ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಷಷ್ಠಿ ಮಹೋತ್ಸವ

ಕುಂದಾಪುರ, ನ.29: ಪುರಾಣ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ದೇವಸ್ಥಾನ ಕಾಳಾವರ ಇಲ್ಲಿ ಚಂಪಷಷ್ಠಿ (ಹಿರಿಷಷ್ಠಿ) ಮಹೋತ್ಸವ ನ.29 ರಂದು ನಡೆಯಿತು.

ತಂತ್ರಿ ಕೋಟ ಶ್ರೀ ಕೃಷ್ಣ ಸೋಮಯಾಜಿಗಳ ನೇತೃತ್ವದಲ್ಲಿ ನ.29ರಂದು ಉದಯ ಗಂಟೆ 4ರಿಂದ ಅಭಿಷೇಕ, ಪಂಚಾಮೃತ ಪೂಜೆ, ಮಂಗಳಾರತಿ, ಉದಯ ಗಂಟೆ 4.30ರಿಂದ ಹಣ್ಣುಕಾಯಿ, ಹೂವುಕಾಯಿ, ಕಲಶ ಸಮರ್ಪಣೆ, ಕರ್ಪೂರ ಆರತಿ, ದೇವರ ದರ್ಶನ, ತೀರ್ಥಪ್ರಸಾದ ವಿತರಣೆ, ಪೂರ್ವಾಹ್ನ 7 ಗಂಟೆಯಿಂದ ಋತ್ವಿಜರಿಂದ ವೇದ ಪಾರಾಯಣ, ಬಳಿಕ ಮಡೆ ಪ್ರದಕ್ಷಿಣೆ, ಮಧ್ಯಾಹ್ನ 12 ಗಂಟೆಗೆ ಕಲಸಾಭಿಷೇಕ, ಮಹಾಮಂಗಳಾರತಿ, ಸಂದರ್ಶನ, ಕ್ಷೇತ್ರ ಪ್ರದಕ್ಷಿಣೆ, ಪಲ್ಲಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ರಂಗಪೂಜೆ ನಡೆಯಲಿದೆ.

ನ.30ರಂದು ಬೆಳಿಗ್ಗೆ ಹಾಲಿಟ್ಟು ಸೇವೆ, ನಾಗಮಂಡಲೋತ್ಸವ ಕಟ್ಟುಕಟ್ಟಳೆ ಸೇವೆ, ತುಲಾಭಾರ, ಶ್ರೀ ಕ್ಷೇತ್ರ ಪ್ರದಕ್ಷಿಣೆ, ಶ್ರೀ ಕ್ಷೇತ್ರಪಾಲನಿಗೆ ಪೂಜೆ, ಶ್ರೀ ಭೂತರಾಯ ಸ್ವಾಮಿಗೆ ತೆಂಗಿನಕಾಯಿ ಸೇವೆ, ಸಂದರ್ಶನ, ರಾತ್ರಿ ಹಾಲಾಡಿ ಮೇಳದವರಿಂದ ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಹರಕೆ ಸಂಪ್ರದಾಯ: ಸಂತಾನಕಾರಕನಾದ ಸುಬ್ರಮಣ್ಯನಿಗೆ ವಿವಾಹ, ಸಂತಾನ, ಚರ್ಮಾದಿ ರೋಗರುಜಿನಗಳ ಸಂದರ್ಭದಲ್ಲಿ ದೇವರಿಗೆ ಹೇಳಿಕೊಂಡ ಹರಕೆಯನ್ನು ಷಷ್ಠಿಯ ದಿನ ಸಮರ್ಪಿಸುತ್ತಾರೆ. ಈ ದಿನದಂದು ಕ್ಷೇತ್ರದಲ್ಲಿ ಅನೇಕ ಮಂದಿ ಬೆಳ್ಳಿ ಹರಕೆಗಳನ್ನು ಹಬ್ಬದ ಬೀದಿಗಳಲ್ಲಿ ಮಾರಾಟ ಮಾಡುತ್ತಾರೆ. ನೂರಾರು ಸಂಖ್ಯೆಯಲ್ಲಿ ಹರಕೆಗಳನ್ನು ಭಕ್ತರಿಗೆ ಮಾರಾಟ ಮಾಡುತ್ತಾರೆ. ಭಕ್ತಾದಿಗಳ ದೇಹದ ಆಕೃತಿ, ಕೃಷಿ, ಭೂಮಿ, ಮನೆ, ಶಿಕ್ಷಣ, ಉದ್ಯೋಗ, ಸಂತಾನ ಹೀಗೆ ತಮ್ಮ ಮನೋಸಂಕಲ್ಪ ಈಡೇರಿದ ಸಲುವಾಗಿ ಆ ಬಗ್ಗೆ ಹರಕೆ ಖರೀಧಿಸಿ ದೇವಳದ ಹುಂಡಿಯಲ್ಲಿ ಹಾಕಿ ಕೃತಾರ್ಥರಾಗುತ್ತಾರೆ. ಬಾಳೆಹಣ್ಣು ಗೊನೆ, ಹೂವುಕಾಯಿ ದೇವರಿಗೆ ಸಮರ್ಪಿಸಿದರೆ ನಾಗದೋಷ ಪರಿಹಾರವಾಗುತ್ತದೆಂಬ ನಂಬಿಕೆ ಇಲ್ಲಿದೆ. ಕಾಳಾವರ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಜನರು ಷಷ್ಠಿಯಂದು ಹಣ್ಣುಕಾಯಿ ಮಾಡಿ ಪ್ರಸಾದವನ್ನು ಮನೆಗೆ ತಗೆದುಕೊಂಡು ಹೋಗುವ ಪರಿಪಾಠ ಬೆಳೆಸಿಕೊಂಡು ಬಂದಿದ್ದಾರೆ. ಹಣ್ಣುಕಾಯಿ ಸಲ್ಲಿಕೆಗೇ ದೀರ್ಘ ಸರದಿ ಸಾಲು ಇರುತ್ತದೆ.

ಹಬ್ಬದಲ್ಲಿ ಸೊಪ್ಪು ತರಕಾರಿ ಮಾರಾಟ: ಷಷ್ಠಿ ದಿನದಂದು ಈ ಪರಿಸರದ ಮನೆಯಲ್ಲಿ ಕುಂಬಳಕಾಯಿ ಹಾಗೂ ಹರಿವೆಯಿಂದ ತಯಾರಿಸಿದ ಅಡುಗೆ ತಯಾರಿಸುವ ರೂಢಿಯೂ ಈ ಭಾಗದಲ್ಲಿದೆ. ಹಾಗಾಗಿ ಹಬ್ಬದಲ್ಲಿ ಹಸಿರು ತರಕಾರಿ, ಸೊಪ್ಪು ಮಾರಾಟವೂ ಇರುತ್ತದೆ.

ಭಕ್ತರ ಸಂಖ್ಯೆ ದ್ವಿಗುಣ: ಈ ಬಾರಿ ಷಷ್ಠಿಗೆ ಭಕ್ತರ ಸಂಖ್ಯೆ ಅತ್ಯಂತ ಹೆಚ್ಚಾಗಿತ್ತು. ಕಳೆದ ಎರಡು ವರ್ಷ ಕರೋನಾ ಮಹಾಮಾರಿಯ ಆತಂಕ ಇತ್ತು. ಈ ವರ್ಷ ಎಲ್ಲವೂ ಸರಿಯಾಗಿದ್ದರಿಂದ ಭಕ್ತರ ಸಂಖ್ಯೆ ದ್ವಿಗುಣವಾಗಿತ್ತು. ಹಣ್ಣು ಕಾಯಿ, ಹೂ ಕಾಯಿ, ಕಲಶ ಸೇವೆ, ಮಂಗಳಾರತಿ, ಹರಕೆ ಸಮರ್ಪಣೆಯ ಧಾರ್ಮಿಕ ವಿಧಾನಗಳಿಗಾಗಿ ದೇವಸ್ಥಾನದಿಂದ ಕೆರೆಯ ಸಮೀಪದಿಂದಲೇ ಸರದಿ ಆರಂಭವಾಗಿತ್ತು. ಮಧ್ಯಾಹ್ನ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಜನ ಪಾಲ್ಗೊಂಡರು.

ಅನ್ನಪ್ರಸಾದಕ್ಕೆ ಮಹತ್ವ: ನಾಗಕ್ಷೇತ್ರಗಳಲ್ಲಿ ಅನ್ನಪ್ರಸಾದಕ್ಕೆ ವಿಶೇಷವಾದ ಮಹತ್ವವಿದೆ. ಷಷ್ಠಿ ಅಥವಾ ನಾಗಮಂಡಲೋತ್ಸವದ ಸಂತರ್ಪಣೆ ಸ್ವೀಕರಿಸಿದರೆ ಚರ್ಮಕ್ಕೆ ಸಂಬಂಧಪಟ್ಟ ವ್ಯಾದಿಗಳು ದೂರಾಗುತ್ತದೆ ಎನ್ನುವ ನಂಬಿಕೆ ಇದೆ. ಷಷ್ಠಿಯಂದು ನೀಡುವ ಅನ್ನಪ್ರಸಾದವನ್ನು ಸಾಕ್ಷಾತ್ ಪ್ರಸಾದವೆಂದೇ ಸ್ವೀಕರಿಸುತ್ತಾರೆ. ಸರದಿ ಸಾಲಿನಲ್ಲಿ ನಿಂತು ಅನ್ನಪ್ರಸಾದ ಸ್ವೀಕರಿಸುತ್ತಾರೆ. ಕಾಳಾವರದಲ್ಲಿ ಷಷ್ಠಿ ಅನ್ನಪ್ರಸಾದಕ್ಕೆ ನೂಕುನುಗ್ಗಲು ಉಂಟಾಗದಂತೆ ಸಾಕಷ್ಟು ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಮಹಿಳೆಯರಿಗೆ, ಪುರುಷರಿಗೆ ಪ್ರತ್ಯಕ ಕೌಂಟರ್ ವ್ಯವಸ್ಥೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಎಸ್.ಚಂದ್ರಶೇಖರ ಹೆಗ್ಡೆ, ಸಮಿತಿ ಸದಸ್ಯರಾದ ಸತ್ಯನಾರಾಯಣ ಪುರಾಣಿಕ ಅರ್ಚಕರು, ರಂಜಿತ್ ಕುಮಾರ್ ಶೆಟ್ಟಿ ಕಾಳಾವರ, ಭರತ್ ಕುಮಾರ್ ಶೆಟ್ಟಿ ಕಾಳಾವರ, ಶ್ರೀಮತಿ ಲಲಿತಾ ಸಳ್ವಾಡಿ, ಮಹೇಶ್ ಕಾಳಾವರ, ಅಶೋಕ್ ಶೆಟ್ಟಿ ಕಾಳಾವರ, ಚಂದ್ರ ಪೂಜಾರಿ ಅಸೋಡು, ಶ್ರೀಮತಿ ಶ್ರೀಲತಾ ಎಸ್.ಕಾಳಾವರ ಮೊದಲಾದವರು ಉಪಸ್ಥಿತರಿದ್ದರು. ಗ್ರಾಮಸ್ಥರು, ಸ್ವಯಂಸೇವಕರು, ವಿವಿಧ ಸಮಿತಿಗಳು ಷಷ್ಠಿ ಮಹೋತ್ಸವ ಯಶಸ್ಸಿಗೆ ಶ್ರಮಿಸುತ್ತಿವೆ.

(ನಾಗರಾಜ್ ವಂಡ್ಸೆ)

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!