Sunday, September 8, 2024

ರಾಷ್ಟ್ರದ ಆರ್ಥಿಕ ನವ ಉದಾರೀಕರಣ ನೀತಿ ಕಾರ್ಮಿಕರಿಗೆ ಸಂಕಷ್ಟ-ಡಾ.ಕೆ.ಹೇಮಲತಾ

ಕುಂದಾಪುರದಲ್ಲಿ ಸಿ‌ಐಟಿಯು 15ನೇ ರಾಜ್ಯ ಸಮ್ಮೇಳನ ಉದ್ಘಾಟನೆ
ಕುಂದಾಪುರ, ನ.15: ಆರ್ಥಿಕ ನವ ಉದಾರೀಕರಣ ನೀತಿ ಕಾರ್ಮಿಕರು, ದುಡಿಯುವ ವರ್ಗವನ್ನು ಬಿಕ್ಕಟ್ಟಿಗೆ ತಳ್ಳುತ್ತಿದೆ. ಸರಕಾರಗಳು ಕಾರ್ಪೋರೇಟ್ ಬಂಡವಾಳದಾರರ ಪರವಾಗಿ ನಿಂತು ಕಾರ್ಮಿಕ ವರ್ಗದ ನ್ಯಾಯಯುತ ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಕಳೆದ ಮೂರು ವರ್ಷಗಳಿಂದ ಕೋವಿಡ್ ಆರ್ಥಿಕ ಸಂಕಷ್ಟದ ನಡುವೆಯಲ್ಲಿಯೇ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳಿಂದ ಕಾರ್ಮಿಕ ಅಸಹಾಯಕರಾಗಿದ್ದಾರೆ. ನಿರಂತರ ಬೆಲೆ ಏರಿಕೆ, ಕೈಗಾರಿಕೆಗಳು ಮುಚ್ಚುತ್ತಿರುವುದು, ಉದ್ಯೋಗವಕಾಶಗಳ ಕಡಿತ, ವೇತನ ತಾರತಮ್ಯ ಇತ್ಯಾದಿಗಳಿಂದ ದುಡಿಯುವ ವರ್ಗದ ಬದುಕು ದುಸ್ತರವಾಗಿದೆ. ಈ ಹಿನ್ನೆಲೆಯಲ್ಲಿ ದುಡಿಯುವ ವರ್ಗದ ಪ್ರತಿರೋಧ ಇನ್ನಷ್ಟು ಪ್ರಬಲವಾಗಿ ಐಕ್ಯತೆಯ ಹೋರಾಟಗಳು ನಡೆಯಬೇಕಿದೆ ಎಂದು ಸಿ‌ಐಟಿಯುವ ರಾಷ್ಟ್ರೀಯ ಅಧ್ಯಕ್ಷೆ ಡಾ.ಕೆ.ಹೇಮಲತಾ ಹೇಳಿದರು.

ಅವರು ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ನಡೆದ ಕಾರ್ಮಿಕರ ಐಕ್ಯತೆ-ಜನತೆಯ ಸೌಹಾರ್ದತೆಗಾಗಿ 15ನೇ ಸಿ‌ಐಟಿಯು ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ನವ ಉದಾರೀಕರಣ ನೀತಿ ಒಡ್ಡುತ್ತಿರುವ ಕಾರ್ಮಿಕ ಶೋಷಣೆಯುತ ವ್ಯವಸ್ಥೆಯನ್ನು ಬದಲಾಯಿಸಲೇಬೇಕಾಗಿದೆ. ಬಂಡವಾಳಶಾಹಿ ವ್ಯವಸ್ಥೆಯನ್ನು ಬೆಂಬಲಿಸುವ ರಾಜಕೀಯ ಪಕ್ಷಗಳು ಕಾರ್ಮಿಕರ ಐಕ್ಯತೆಯ ಹೋರಾಟವನ್ನು ದಮಿನಿಸುವ ಸಲುವಾಗಿ ಜಾತಿ, ಧರ್ಮಗಳ ಮೂಲಕ ವಿಭಜನೆ ಮಾಡಲಾಗುತ್ತಿದೆ. ಧರ್ಮಧಾರಿತವಾದ ರಾಜಕಾರಣ, ಹಿಂದೂತ್ವ, ಹಿಂದುರಾಷ್ಟ್ರ-ಹಿಂದೂಸ್ತಾನ ರೀತಿಯಲ್ಲಿ ಸಮಾಜದ ನಡುವೆ ಒಡಕು ಮೂಡಿಸುವ ವಿಭಜಿಸುವ ಕಾರ್ಯ ನೆಡೆಯುತ್ತಿದೆ. ಕಾರ್ಮಿಕರ ಪ್ರತಿರೋಧಕ್ಕೆ ಬೇರೆಯದ್ದೇ ಬಣ್ಣ ನೀಡಲಾಗುತ್ತಿದೆ. ಬಲಪಂಥಿಯ ಪಕ್ಷಗಳನ್ನು ಬಂಡವಾಳಶಾಹಿಗಳು ಬೆಂಬಲಿಸುತ್ತಿವೆ. ಬಂಡವಾಳಶಾಹಿಗಳ ಪರವಾದ ಆರ್ಥಿಕ ನೀತಿ, ಮಾಧ್ಯಮಗಳು ಬಂಡವಾಳಶಾಹಿಗಳ ಹಿಡಿತದಲ್ಲಿರುವುದು ಸತ್ಯ ಮರೆಮಾಚಿಸುತ್ತಿದೆ. ಹಾಗಾಗಿ ಸಿ‌ಐಟಿಯುವನಂತಹ ಪ್ರಬಲ ಸಂಘಟನೆಗಳು ಸತ್ಯವನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು.

ಕೋವಿಡ್ ಸಮಯದಲ್ಲಿ ಭಾಷಣ ಬೇಡ-ರೇಷನ್ ಬೇಕು ಎಂಬ ಅಭಿಯಾನಕ್ಕೆ ವ್ಯಾಪಕ ಬೆಂಬಲ ಸಿಕ್ಕಿತು. ಸಿ‌ಐಟಿಯು ಅಷ್ಟೊಂದು ಪ್ರಾಬಲ್ಯವಿಲ್ಲದ ಜಮ್ಮು-ಕಾಶ್ಮೀರ, ಗುಜರಾತ್‌ನಂತಹ ರಾಜ್ಯಗಳಲ್ಲಿ ಜನ ಹೋರಾಟಕ್ಕೆ ಅಣಿಯಾದರು. ಕೋವಿಡ್ ಸಮಯದಲ್ಲಿ ಸೃಷ್ಟಿಯಾದ ಆರ್ಥಿಕ ಬಿಕ್ಕಟ್ಟು, ವಿರೋಧ ಪಕ್ಷವನ್ನು ಅಮಾನತಿನಲ್ಲಿಟ್ಟು ಅನುಮೋದನೆ ಪಡೆದ ಕಾರ್ಮಿಕ ವಿರೋಧಿ ಕಾಯ್ದೆಗಳು, ರೈತವಿರೋಧಿ ನೀತಿಗಳು ಇವತ್ತು ಜನಸಾಮಾನ್ಯರಿಗೆ ಸಂಕಷ್ಟವನ್ನೊಡ್ಡುತ್ತಿವೆ. ವರ್ಷಗಳ ಕಾಲ ನಡೆದ ರೈತರ ಹೋರಾಟದಿಂದ ರೈತವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆದರೂ ಕೂಡಾ ರೈತರು, ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಅವರು ದೂರಿದರು.

ದೊಡ್ಡ ಸಂಖ್ಯೆಯಲ್ಲಿರುವ ಕಾರ್ಮಿಕವರ್ಗವನ್ನು ಶೋಷಿಸಲಾಗುತ್ತಿದೆಯೇ ಹೊರತು ಅವರ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಅನಿಯಂತ್ರಿತವಾದ ಬೆಲೆ‌ಏರಿಕೆ, ಸಾಪ್ಟ್‌ವೇರ್ ಉದ್ಯಮವಲಯದಲ್ಲಿ 10-30% ಉದ್ಯೋಗ ಕಡಿತ, ಆರ್ಥಿಕ ಸಂಕಷ್ಟದಿಂದ ಲಕ್ಷಾಂತರ ಸಣ್ಣ ಕೈಗಾರಿಕೆಗಳು ಮುಚ್ಚಿತ್ತಿದೆ. ಕೋಟ್ಯಾಂತರ ಮಂದಿ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ದೊಡ್ಡ ದೊಡ್ಡ ಬಂಡವಾಳ ಹೂಡಿಕೆದಾರಿಗೆ ಪರವಾದ ವ್ಯವಸ್ಥೆಗಳನ್ನು ರೂಪಿಸಲಾಗುತ್ತಿದೆ. ಈ ಬಗ್ಗೆ ಜನಸಾಮಾನ್ಯರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

ಕಾರ್ಮಿಕರ ಹಿತಾದೃಷ್ಟಿಯಿಂದ ಜನವರಿ 2023ರಲ್ಲಿ ನಡೆಯುವ ಅಖಿಲ ಭಾರತ ಮಟ್ಟದ ಸಮ್ಮೇಳನ ನಡೆಯಲಿದೆ. ಅದರ ಮುಂಚಿತವಾಗಿ ರಾಜ್ಯ ಸಮ್ಮೇಳನಗಳು ನಡೆಯುತ್ತಿದೆ. ಅಖಿಲ ಭಾರತ ಸಮ್ಮೇಳನದಲ್ಲಿ ನಿರ್ಣಯಗಳ ಜ್ಯಾರಿಗೆ ಒತ್ತಾಯ ಮಾಡಲಾಗುವುದು. ರಾಷ್ಟ್ರೀಯ ಸಮ್ಮೇಳನದಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ದುಡಿಯುವ ವರ್ಗದ ಸ್ಥಿತಿಗತಿ, ಸವಾಲುಗಳು, ನಿರ್ಣಯಗಳ ಅನುಷ್ಟಾನ ಬಗ್ಗೆ ಚರ್ಚೆ ನಡೆಯಲಿದೆ ಎಂದರು.

ಮಾರ್ಚ್ ತಿಂಗಳ ಬಜೆಟ್ ಪೂರ್ವದಲ್ಲಿ ಕಾರ್ಮಿಕರು, ರೈತರು ಮತ್ತು ಕೃಷಿಕೂಲಿ ಕಾರ್ಮಿಕರು ಬೃಹತ್ ಪಾರ್ಲಿಮೆಂಟ್ ಚಲೋ ನಡೆಸಲು ತೀರ್ಮಾನಿಸಲಾಗಿದೆ. ಇದನ್ನು ಯಶಸ್ವಿಗೊಳಿಸಲು ಶ್ರಮಿಸೋಣ ಎಂದರು.

ಸಿ‌ಐಟಿಯು ರಾಜ್ಯ ಅಧ್ಯಕ್ಷೆ ಎಸ್.ವರಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಂಸದರು, ಸಿ‌ಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್, ಸಿ‌ಐಟಿಯುವ ರಾಷ್ಟ್ರೀಯ ಉಪಾಧ್ಯಕ್ಷ ಎ.ಕೆ.ಪದ್ಮನಾಭನ್, ರಾಷ್ಟ್ರೀಯ ಮುಖಂಡರಾದ ಕೆ.ಎನ್.ಉಮೇಶ್, ಹಿರಿಯ ಕಾರ್ಮಿಕ ಮುಖಂಡರಾದ ವಿ.ಜೆ.ಕೆ ನಾಯರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ರೈತ ಸಂಘಟನೆಯ ಪ್ರಾಂತ ಉಪಾಧ್ಯಕ್ಷ ಬಸವರಾಜ, ಸಿ‌ಐಟಿಯು ೧೫ನೇ ಸ್ವಾಗತ ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಕೆ.ಶಂಕರ್, ಕೋಶಾಧಿಕಾರಿ ಎಚ್.ನರಸಿಂಹ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸಮ್ಮೇಳನದ ಅಂಗವಾಗಿ ಆಯೋಜಿಸಿದ ಕಿರುಚಿತ್ರ ಸ್ಪರ್ಧೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಉದ್ಘಾಟನಾ ಭಾಷಣವನ್ನು ಸಿ‌ಐಟಿಯು ರಾಜ್ಯ ಕಾರ್ಯದರ್ಶಿ ಪ್ರತಾಪಸಿಂಹ ಕನ್ನಡಕ್ಕೆ ಅನುವಾದಿಸಿದರು.

ಸ್ವಾಗತ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗರ ಕಾರ್ಯಕ್ರಮ ನಿರ್ವಹಿಸಿದರು.

ಸಮ್ಮೇಳನ ಪೂರ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ನಂತರ ಸಿ‌ಐಟಿಯು ರಾಜ್ಯ 14ನೇ ಸಮ್ಮೇಳನದಿಂದ 15ನೇ ಸಮ್ಮೇಳನ ತನಕ ಚಳವಳಿಗಾಗಿ ಹುತಾತ್ಮರಾದವರಿಗೆ ಗೌರವ ವಂದನೆ ಸಲ್ಲಿಸಲಾಯಿತು. ಸಮ್ಮೇಳನದಲ್ಲಿ ರಾಜ್ಯದ ವಿವಿಧೆಡೆಗಳಿಂದ 400 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!