Friday, March 29, 2024

7 ಗ್ರಾಮ ಪಂಚಾಯತ್‌ಗಳ ತ್ಯಾಜ್ಯ ವಿಲೇವಾರಿ ನಡೆಸುವ ವಂಡ್ಸೆ ಗ್ರಾ. ಪಂ.ನಲ್ಲಿ ಹುದ್ದೆಗಳು ಖಾಲಿ ಖಾಲಿ: ಹುದ್ದೆ ಭರ್ತಿ ಮಾಡದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ಗ್ರಾಮಸ್ಥರು

ವಂಡ್ಸೆ: ರಾಜ್ಯಕ್ಕೆ ಮಾದರಿಯಾದ ಎಸ್.ಎಲ್.ಅರ್.ಎಂ ಘಟಕವನ್ನು ಹೊಂದಿ, ೭ ಗ್ರಾಮ ಪಂಚಾಯತ್‌ಗಳ ತ್ಯಾಜ್ಯ ವಿಲೇವಾರಿ ಜವಬ್ದಾರಿ ನಿರ್ವಹಿಸುತ್ತಿರುವ ವಂಡ್ಸೆ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ದಿ ಅಧಿಕಾರಿ, ಕಾರ್ಯದರ್ಶಿ, ಅಟೆಂಡರ್ ಹುದ್ದೆಗಳು ಖಾಲಿಯಿದ್ದು, ಇನ್ನೂ ಹುದ್ದೆ ಭರ್ತಿ ಮಾಡದೇ ಸಮಸ್ಯೆಯಾಗುತ್ತಿದೆ. ವಂಡ್ಸೆ ಗ್ರಾಮ ಪಂಚಾಯತ್ ಗ್ರೇಡ್ 2 ಆಗಿರುವುದರಿಂದ ಇಲ್ಲಿ ಲೆಕ್ಕ ಸಹಾಯಕರ ಹುದ್ದೆ ಮಂಜೂರಾಗಿಲ್ಲ. ಈಗಾಗಲೆ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಹೇಳಿದರು.

ಅವರು ಗುರುವಾರ ಮಹಾತ್ಮ ಗಾಂಧಿ ಸಭಾಭವನದಲ್ಲಿ ನಡೆದ ವಂಡ್ಸೆ ಗ್ರಾಮ ಪಂಚಾಯತಿಯ ಪ್ರಥಮ ಸುತ್ತಿನ ಗ್ರಾಮಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೋಬಳಿ ಕೇಂದ್ರದ ಗ್ರಾಮ ಪಂಚಾಯತಿಯಲ್ಲಿಯೇ ಎಲ್ಲಾ ಹುದ್ದೆಗಳು ಖಾಲಿ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಹಲವು ತಿಂಗಳು ಗಳಿಂದ ಪ್ರಮುಖ ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಹುದ್ದೆಗಳ ಭರ್ತಿ ಮಾಡದೇ ಇದ್ದರೆ ಪಂಚಾಯತಿಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನೇಮಕಕ್ಕೆ ಪ್ರತಿಭಟನೆ ಎಚ್ಚರಿಕೆ:
ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರಿಲ್ಲ. ಸರ್ಕಾರ ಖಾಯಂ ವೈದ್ಯರ ನೇಮಕ ಮಾಡಿದರೂ ಅವರು ರಜೆಯಲ್ಲಿದ್ದು ಇದ್ದೂ ಇಲ್ಲದ ಸ್ಥಿತಿ ನಿರ್ಮಾಣಗೊಂಡಿದೆ. ಹೋಬಳಿ ಕೇಂದ್ರವಾಗಿರುವ ವಂಡ್ಸೆಯಲ್ಲಿಯೇ ಖಾಯಂ ವೈದ್ಯರು ಇಲ್ಲದಿರುವುದು ಜನಸಾಮಾನ್ಯರಿಗೆ ತೊಂದರೆ ಯಾಗಿದೆ. ವಾರದಲ್ಲಿ ಎರಡು ದಿನ ಬೇರೆ ಬೇರೆ ಪಿ‌ಎಚ್‌ಸಿ ವೈದ್ಯರು ಇಲ್ಲಿ ಸೇವೆಗೆ ಇದ್ದರೂ ಇಲ್ಲಿ ಖಾಯಂ ಪೂರ್ಣಪ್ರಮಾಣದ ವೈದ್ಯರ ಸೇವೆಯ ಅಗತ್ಯವಿದೆ. ಮಾತ್ರವಲ್ಲ ವಿಸ್ತಾರವಾದ ಕಾರ್ಯವ್ಯಾಪ್ತಿ ಹೊಂದಿರುವ ವಂಡ್ಸೆ ಪಿ‌ಎಚ್‌ಸಿಯಲ್ಲಿ ಬಹುತೇಕ ಹುದ್ದೆಗಳು ಇಲ್ಲಿ ಖಾಲಿ ಇದೆ. ಅಂಬುಲೆನ್ಸ್ ಇಲ್ಲ, ಸರ್ಕಾರಿ ಆಸ್ಪತ್ರೆ ಕಾಟಾಚಾರಕ್ಕಷ್ಟೆ ಇದೆ. ಖಾಯಂ ವೈದ್ಯರ ನೇಮಕದ ಬಗ್ಗೆ ಗ್ರಾಮ ಸಭೆಯಲ್ಲಿ ನಿರಂತರ ನಿರ್ಣಯ ಮಾಡುತ್ತಿದ್ದರೂ ಕೂಡಾ ಪ್ರಯೋಜನವಾಗಿಲ್ಲ. ಇನ್ನೂ ಗ್ರಾಮಸ್ಥರೆಲ್ಲ ಸೇರಿ ಉಗ್ರ ಪ್ರತಿಭಟನೆ ಮಾಡಬೇಕಾದೀತು ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಆಯುಷ್ಮಾನ್ ಅನಗತ್ಯ ಗೊಂದಲ:
ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಸಾಕಷ್ಟು ಗೊಂದಲಗಳು ಅಗುತ್ತಿದ್ದು ತುರ್ತು ಚಿಕಿತ್ಸೆ, ಹೃದಯ ಇತ್ಯಾದಿ ಗಂಭೀರ ಸಮಸ್ಯೆಗಳಿಗೆ ಶಿಫಾರಸ್ಸು ಪತ್ರ, ಆದೇಶ ಪತ್ರ ಬರುವ ತನಕ ವಿಳಂಬ ಮಾಡಲಾಗುತ್ತದೆ. ಇದರಿಂದ ಪ್ರಾಣಹಾನಿ ಸಂಭವಿಸಿದ ಉದಾಹರಣೆಗಳಿವೆ. ಈ ಬಗ್ಗೆ ನಿಯಮದಲ್ಲಿ ಸಡಿಲೀಕರಣ ಮಾಡುವಂತೆ ಸರಕಾರ ಸೂಚನೆ ನೀಡಿಬೇಕು. ಗ್ರಾಮ ಸಭೆಯಲ್ಲಿ ನಿರ್ಣಯ ಮಾಡಿ ಸಂಬಂಧಪಟ್ಟ ಇಲಾಖೆಗೆ ಕಳುಹಿಸಬೇಕು ಎಂದು ಗುಂಡು ಪೂಜಾರಿ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಈ ಸಮಸ್ಯೆ ಸರ್ಕಾರ ಮಟ್ಟದಿಂದ ಪರಿಹಾರ ಆಗಬೇಕು. ಹಿಂದೆ ಯಶಸ್ವಿ ಯೋಜನೆ ಇತ್ತು. ಅದು ಜನರಿಗೆ ಅನುಕೂಲಕರವಾಗಿತ್ತು. ಆಯುಷ್ಮಾನ್, ಆರೋಗ್ಯ ಕರ್ನಾಟಕ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಪುನಃ ಯಶಸ್ವಿನಿ ವಿಮಾ ಯೋಜನೆ ಜ್ಯಾರಿಗೆ ಸರಕಾರ ಮುಂದಾಗಿದೆ ಎಂದರು.

ಮೇಲ್ಮಹಡಿಯಲ್ಲಿ ಕೆನರಾ ಬ್ಯಾಂಕ್, ಸಾರ್ವಜನಿಕರಿಗೆ ಸಮಸ್ಯೆ:

ವಂಡ್ಸೆಯಲ್ಲಿ ಕೆನರಾ ಬ್ಯಾಂಕ್ ಇದ್ದು ಮೇಲ್ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ವೃದ್ದರಿಗೆ, ಅನಾರೋಗ್ಯ ಪೀಡಿತರಿಗೆ ಅಗತ್ಯ ಸೇವೆಗೆ ಬ್ಯಾಂಕ್‌ಗೆ ಹೋಗಲು ಕಷ್ಟವಾಗುತ್ತದೆ. ಅಲ್ಲದೇ ವಾಹನ ನಿಲುಗಡೆಗೂ ಸೂಕ್ತ ಸ್ಥಳವೂ ಇಲ್ಲದೇ ಸಮಸ್ಯೆಯಾಗುತ್ತದೆ. ಹಾಗಾಗಿ ಕೆನರಾ ಬ್ಯಾಂಕ್‌ನ್ನು ನೆಲ ಮಹಡಿಯಲ್ಲಿಯೇ ಇರುವಂತೆ ಸ್ಥಳಾಂತರಿಸಬೇಕು ಎಂದು ಸಾರ್ವಜನಿಕರು ಗ್ರಾಮ ಸಭೆಯಲ್ಲಿ ಅರ್ಜಿ ಸಲ್ಲಿಸಿದರು.

ಪ್ರಸ್ತುತ ಕಾಡು ಹಂದಿಗಳ ಹಾವಳಿ ಹೆಚ್ಚಾಗಿದೆ. ಮನೆಯಂಗಳಕ್ಕೆ ಬಂದು ವ್ಯಕ್ತಿಯೊಬ್ಬರಿಗೆ ದಾಳಿ ಮಾಡಿದೆ. ಜಮೀನಿಗೆ ಬಂದ ಕಾಡುಹಂದಿಗಳನ್ನು ಕೊಲ್ಲುವಂತಿಲ್ಲ. ಹಾಗಾದರೆ ಮನುಷ್ಯರಿಗೆ ಬದುಕಲು ಹಕ್ಕಿಲ್ಲವೇ ಎಂದು ಗುಂಡು ಪೂಜಾರಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಕಾಡು ಪ್ರಾಣಿಗಳಿಂದ ವ್ಯಾಪಕವಾಗಿ ಕೃಷಿನಾಶವಾಗುತ್ತಿದೆ. ಕಡವೆ, ಜಿಂಕೆ, ಹೆಬ್ಬಾವುಗಳ ಉಪಟಳ ಹೆಚ್ಚಾಗಿದೆ ಎಂದು ಸಂದೇಶ ಶೆಟ್ಟಿ ಹೇಳಿದರು.

ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ರೇಬಿಸ್ ಮುಂಜಾಗೃತ ಚುಚ್ಚು ಮದ್ದು ನೀಡುವ ಬಗ್ಗೆ ಈ ಹಿಂದೆಯೇ ಚಿಂತನೆ ನಡೆಸಲಾಗಿತ್ತು. ಪುಣೆಯ ಖಾಸಗಿ ಸಂಸ್ಥೆಯೊಂದು ಈ ಪ್ರಕ್ರಿಯೆ ನಡೆಸುತ್ತಿದ್ದು, ಮೂರ್‍ನಾಲ್ಕು ಗ್ರಾಮ ಪಂಚಾಯತ್‌ಗಳು ಜಂಟಿಯಾಗಿ ಮಾಡಿದರೆ ಇದು ಸಾಧ್ಯವಿದೆ. ಈ ಬಗ್ಗೆ ಚಿಂತನೆಯಿದೆ ಎಂದು ಅಧ್ಯಕ್ಷರು ಹೇಳಿದರು.

ಸ್ವಾವಲಂಬನಾ ಕೇಂದ್ರದಲ್ಲಿ ವಂಡ್ಸೆ ಗ್ರಾಮದರಿಗೆ ಆದ್ಯತೆ ನೀಡಬೇಕು, ಶಾಲಾರಂಭದಲ್ಲಿಯೇ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಮಾಡಬೇಕು, ಕೊರಗ ಸಮುದಾಯಕ್ಕೆ ಭೂಮಿ ನೀಡುವ ಬಗ್ಗೆ ಕೆಸಿಡಿಸಿ, ಕಂದಾಯ ಇಲಾಖೆ ಸಮನ್ವಯತೆ ಸಾಧಿಸಬೇಕು, ಅಪಾಯಕಾರಿ ಮರಗಳನ್ನು ತೆರವು ಮಾಡಬೇಕು, ರಸ್ತೆಬದಿಯ ಪೊದೆಗಳನ್ನು ತಗೆಯುವ ಬಗ್ಗೆ ಚರ್ಚೆ ನಡೆಯಿತು.

ಚರ್ಚೆಯಲ್ಲಿ ಶ್ರೀನಿವಾಸ ಪೂಜಾರಿ ಕಲ್ಮಡಿ, ವಿ.ಕೆ ಶಿವರಾಮ ಶೆಟ್ಟಿ, ದೀಪಕ್ ಕುಮಾರ್ ಶೆಟ್ಟಿ, ಗುರುರಾಜ ಗಾಣಿಗ, ನಿರ್ಮಲ ವಂಡ್ಸೆ, ವಿಜಯ ಪೂಜಾರಿ ಅಬ್ಬಿ, ಸುದೀರ್ ಕುಮಾರ್ ಶೆಟ್ಟಿ, ಮಹಮ್ಮದ್ ರಫೀಕ್, ತ್ಯಾಂಪಣ್ಣ ಶೆಟ್ಟಿ, ದಿವಾಕರ, ಸಂಜೀವ ವಂಡ್ಸೆ ಮೊದಲಾದವರು ವಿಷಯ ಪ್ರಸ್ತಾವಿಸಿದರು.

ಗ್ರಾಮ ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಲಯಾಧಿಕಾರಿ ತುಳಸಿ ಭಾಗವಹಿಸಿದ್ದರು. ಗ್ರಾ.ಪಂ ಉಪಾಧ್ಯಕ್ಷೆ ಗೀತಾ ಅವಿನಾಶ್, ಸದಸ್ಯರಾದ ಪ್ರಶಾಂತ್ ಪೂಜಾರಿ, ಶಶಕಲಾ ಎಸ್., ಸುಬ್ಬು, ಗೋವರ್ಧನ ಜೋಗಿ ಉಪಸ್ಥಿತರಿದ್ದರು.

ಮೆಸ್ಕಾಂನ ಪ್ರಕಾಶ್, ವಂಡ್ಸೆ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ರಘುರಾಮ ಶೆಟ್ಟಿ, ತೋಟಗಾರಿಕೆ ಇಲಾಖೆಯ ಉಮೇಶ್, ಶಿಕ್ಷಣ ಇಲಾಖೆಯ ಸಿ.ಆರ್.ಪಿ ನಾಗರಾಜ ಶೆಟ್ಟಿ, ವಂಡ್ಸೆ ವ್ಯವಸಾಯ ಸೇವಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾದಿಕಾರಿ ಸೀತಾರಾಮ ಪೂಜಾರಿ, ಅರಣ್ಯ ಇಲಾಖೆಯ ವೆಂಕಟೇಶ್, ಮಹಿಳಾ ಕಿರಿಯ ಆರೋಗ್ಯ ಸಹಾಯಕಿ ಪಾರ್ವತಿ ಪಟಗಾರ್, ಗ್ರಾಮ ಲೆಕ್ಕಾಧಿಕಾರಿ ವಿಘ್ನೇಶ, ಪಶು ಇಲಾಖೆಯ ವೈದ್ಯಾಧಿಕಾರಿ ಡಾ. ಅರುಣ್, ಮಹಿಳಾ ಮತ್ತು ಮಕ್ಕಳ ಇಲಾಖೆಯ ಸುಮಾ, ಪೊಲೀಸ್ ಇಲಾಖೆಯ ವೆಂಕಟೇಶ್ ಉಪಸ್ಥಿತರಿದ್ದರು.

ನಿಯೋಜಿತ ಪಿಡಿ‌ಒ ಲೋಕೇಶ್ ಅನುಪಾಲನಾ ವರದಿ, ವಾರ್ಡ್ ಸಭೆ ಬೇಡಿಕೆ ಮಂಡಿಸಿದರು. ಸೌಮ್ಯ ಜಮಾ ಖರ್ಚಿನ ವರದಿ ವಾಚಿಸಿದರು.

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!