Sunday, September 8, 2024

ಕೋಟೇಶ್ವರ ಸರ್ಕಾರಿ ಪದವಿ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ

ಕುಂದಾಪುರ: ಕೋಟೇಶ್ವರದ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯಮಶೀಲತೆ ಕುರಿತು ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉದ್ಯಮಿ ಜೆ.ಪಿ. ಶೆಟ್ಟಿ ವಿದ್ಯಾರ್ಥಿಗಳು ಪದವಿ ನಂತರ ಸ್ವಂತ ಉದ್ಯಮ ಪ್ರಾರಂಭಿಸಲು ಕರೆ ನೀಡಿದರು.

ದಿಕ್ಸೂಚಿ ಭಾಷಣ ಮಾಡಿದ ಹಿರಿಯ ಉದ್ಯಮಿ ಮತ್ತು ಪಡುಕೋಣೆ ಸಾಮಾಜಿಕ ಮತ್ತು ಶೈಕ್ಷಣಿಕ ಟ್ರಸ್ಟ್‌ನ ಕಾರ್ಯದರ್ಶಿ ಶ್ರೀ ಸಿಲ್ವೆಸ್ಟರ್ ಅಲ್ಮೇಡ ವಿದ್ಯಾರ್ಥಿಗಳಿಗೆ ಉಳಿತಾಯ, ಹೂಡಿಕೆ ಮತ್ತು ಉದ್ಯಮ ಕ್ಷೇತ್ರದ ವಿವಿಧ ಮಜಲುಗಳನ್ನು ವಿವರಿಸಿದರು. ಸ್ವಂತ ಉದ್ಯಮವನ್ನು ಪ್ರಾರಂಭಿಸುವುದರಿಂದ ಆಗುವ ಲಾಭಗಳು ಮತ್ತು ಸವಾಲುಗಳನ್ನು ತಿಳಿಸಿದರು. ಉತ್ತಮವಾದ ಉದ್ಯಮದಿಂದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಉಂಟಾಗುತ್ತದೆ. ವಿದ್ಯಾರ್ಥಿಗಳು ಪದವಿ ಶಿಕ್ಷಣದ ನಂತರ ಶೀಘ್ರವಾಗಿ ಉದ್ಯಮ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅನುಭವ ಪಡೆಯಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್. ನಾಯಕ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು.

ನಂತರ ನಡೆದ ವಿವಿಧ ಗೋಷ್ಠಿಗಳಲ್ಲಿ ರುಡ್‌ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಕರುಣಾಕರ ಜೈನ್, ತಮಿಳುನಾಡಿನ ಡಾ. ಅಂಬೇಡ್ಕರ್ ಕಾಲೇಜಿನ ಪ್ರಾಧ್ಯಾಪಕ ಡಾ. ಭಾರತಿ ದಾಸನ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ ಶೆಟ್ಟಿ, ಹೈದರಾಬಾದ್‌ನ ಪೆಂಡಕಂಟಿ ನಿರ್ವಹಣಾ ಸಂಸ್ಥೆಯ ಪ್ರಾಧ್ಯಾಪಕ ಡಾ. ರಾಮನ್ ಶರ್ಮ ಭಾಗವಹಿಸಿದರು. ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಜೆ.ಸಿ. ಸಂಸ್ಥೆಯ ತರಬೇತುದಾರ ಮತ್ತು ಸಾಸ್ತಾನ ವಿ.ಎಸ್.ಎಸ್. ಬ್ಯಾಂಕ್ ಅಧ್ಯಕ್ಷ ಶ್ರೀಧರ ಪಿ.ಎಸ್. ಮತ್ತು ಮೂಡ್ಲಕಟ್ಟೆ ತಾಂತ್ರಿಕ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಾದ ಮುಗ್ಧಾ ಶೆಟ್ಟಿ ಮತ್ತು ಶಬೀನಾ ಉದ್ಯಮಶೀಲತೆಯ ಪ್ರಾಯೋಗಿಕ ವಿಚಾರಗಳನ್ನು ಪರಿಚಯಿಸಿದರು. ಸಮಾರೋಪ ಸಮಾರಂಭದಲ್ಲಿ ಭಾಷಣಗಾರರಾಗಿ ವಾಣಿಜ್ಯ ವಿಭಾಗ ಮುಖ್ಯಸ್ಥ ಡಾ. ಶೇಖರ ಬಿ. ಭಾಗವಹಿಸಿದ್ದರು. ಐಕ್ಯೂ‌ಎಸಿ ಸಂಚಾಲಕ ನಾಗರಾಜ ಯು. ಮತ್ತು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಉಷಾದೇವಿ ಜೆ.ಎಸ್. ಉಪಸ್ಥಿತರಿದ್ದರು.

ವಿಚಾರ ಸಂಕಿರಣದಲ್ಲಿ ರಾಜ್ಯ ಮತ್ತು ಇತರ ರಾಜ್ಯಗಳ ವಿದ್ಯಾರ್ಥಿಗಳು ಸಂಶೋಧಕರು ಮತ್ತು ಆಸಕ್ತರು ಭಾಗವಹಿಸಿದ್ದರು. ಕಾಲೇಜಿನ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಂಘದ ಸಂಚಾಲಕ ಮತ್ತು ವಿಚಾರ ಸಂಕಿರಣದ ಸಂಘಟಕ ವಾಣಿಜ್ಯ ವಿಭಾಗ ಸಹಾಯಕ ಪ್ರಾಧ್ಯಾಪಕ ವೆಂಕಟರಾಮ್ ಭಟ್ ಸ್ವಾಗತಿಸಿ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಸುಚಿತ್ರ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!