Sunday, September 8, 2024

ಒಂಟಿತನ ಎದುರಿಸುವುದು ಅಗತ್ಯ ಅಲ್ಲವೇ ?

ಇಂದು ಬಹಳಷ್ಟು ಜನರನ್ನು ಕಾಡುತ್ತ ಇರುವ ಸಮಸ್ಯೆ ಅಂದರೆ ಒಂಟಿತನ ಅಥವಾ ಏಕಾಂಗಿತನ. ಸಣ್ಣ ಮಕ್ಕಳು ತಾಯಿತಂದೆಯರು ಸಮಯ ಕೊಡದೆ ಏಕಾಂಗಿಯಾಗಿದ್ದರೆ, ಹದಿಹರೆಯದವರು ಮೊಬೈಲ್, ಕಂಪ್ಯೂಟರ್ ಮತ್ತು ಇಂಟರ್ನೆಟ್ ಎಂದು ಅದರಲ್ಲಿ ತಲ್ಲೀನರಾಗಿ ಏಕಾಂಗಿ ಆಗುತ್ತಾರೆ. ಮಧ್ಯವಯಸ್ಕರು ಕುಡಿತ, ಮಾದಕ ದ್ರವ್ಯ ಸೇವನೆ, ಎಂದು ಏಕಾಂಗಿಯಾಗುತ್ತಾರೆ. ವಯಸ್ಸು ಆಗುತ್ತಾ ಬರುವಾಗ ಮಕ್ಕಳು ತಮ್ಮತಮ್ಮ ಕೆಲಸಗಳಲ್ಲಿ ಮಗ್ನರಾದಾಗ ಹಿರಿಯ ನಾಗರಿಕರು ಏಕಾಂಗಿಗಳು ಆಗುತ್ತಾರೆ.

ಕೆಲವರಂತೂ ಸಾಮಾಜಿಕ ಜಾಲತಾಣಗಳಲ್ಲಿ ಐದು ಸಾವಿರ ಜನ ಸ್ನೇಹಿತರು ಇದ್ದರು ನಿಜ ಜೀವನದಲ್ಲಿ ಯಾರೊಂದಿಗೂ ಸ್ನೇಹವಿರುವುದಿಲ್ಲ. ಕೆಲವು ವ್ಯಕ್ತಿತ್ವ ದೋಷಗಳಿರುವವರು ಎಲ್ಲರ ಮೇಲೆ ಸಂಶಯ, ಯಾರೊಂದಿಗೂ ಬೆರೆಯುವುದಿಲ್ಲ ಎಂದು ಏಕಾಂಗಿಯಾದರೆ ಇನ್ನು ಕೆಲವರು ತಮ್ಮ ಬಗ್ಗೆಯೇ ನಕಾರಾತ್ಮಕ ಭಾವನೆಗಳಿಂದ ಯಾರೊಂದಿಗೂ ಬೇರೆಯದೇ ಒಂಟಿಯಾಗುತ್ತಾರೆ. ಅವರಿಗೆ ಸ್ನೇಹ ಸಂಪಾದಿಸುವ ಧೈರ್ಯವೇ ಇರುವುದಿಲ್ಲ.

ಏಕಾಂಗಿತನವನ್ನು ಎದುರಿಸುವುದು ಹೇಗೆ? ಇದರ ಬಗ್ಗೆ ಸ್ವಲ್ಪ ಓದುತ್ತಾ ಕುಳಿತಿದ್ದೆ. ಏಕಾಂಗಿತನ ಮದ್ಯ ವ್ಯಸನಕ್ಕಿಂತ ಹೆಚ್ಚು ನಮ್ಮ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಒಂಟಿತನ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ, ಬೊಜ್ಜು ಬೆಳೆಯಲು ಕಾರಣವಾಗಿದೆ ಹಾಗು ಹಲವರಲ್ಲಿ ಸಾವು ಬೇಗ ಬರಲು ಮುಖ್ಯ ಕಾರಣವಾಗಿದೆ, ಹೃದ್ರೋಗವನ್ನು ಜಾಸ್ತಿ ಮಾಡುತ್ತದೆ ಎಂದು ಸಂಶೋದನೆಗಳು ತಿಳಿಸುತ್ತವೆ. ಒಬ್ಬರೇ ಇರುವುದನ್ನು ತಡೆಯಲು ನಾವು ಏನು ಮಾಡಬಹುದು ? ದೈಹಿಕ ವ್ಯಾಯಾಮ ಮಾಡಲು ಆಗುತ್ತಿದ್ದರೆ ನಾವು ಹೊರಗೆ ವ್ಯಾಯಾಮ ಮಾಡಲು ಹೋಗುವುದು ಒಳ್ಳೆಯದು. ದೈಹಿಕ ವ್ಯಾಯಾಮ ಮಾಡಲು ಹೋದಾಗ ಬಹಳಷ್ಟು ಜನ ಹೊರಗೆ ಸಿಗುತ್ತಾರೆ. ಸಿಕ್ಕವರೊಂದಿಗೆ ಮಾತನಾಡುವಾಗ ಏಕಾಂಗಿತನ ಕಳೆಯುತ್ತದೆ. ವ್ಯಾಯಾಮ ಮಾಡುವಾಗ ನಮ್ಮ ಮಿದುಳಿನಲ್ಲಿ “ಎಂಡಾರ್ಫಿನ್ಸ್ “ಅನ್ನುವಂತಹ ಕೆಲವು ರಾಸಾಯನಿಕಗಳು ಹೊರಬೀಳುತ್ತವೆ ಇದರಿಂದ ಮನಸ್ಸಿಗೆ ಖುಷಿಯಾಗುತ್ತದೆ. ಏಕಾಂಗಿಯಾಗಿರುವಾಗ ಬರೆಯುವುದನ್ನೂ ರೂಢಿಸಿಕೊಳ್ಳಿ. ಒಬ್ಬರೇ ಇದ್ದು ಕುಳಿತು ಬರೆಯುವಾಗ ಅದರಲ್ಲೂ ಹಳೆಯ ನೆನಪುಗಳನ್ನು ನೆನಪಿಸಿಕೊಂಡು ಬರೆಯುವಾಗ ಏಕಾಂಗಿತನ ಕಡಿಮೆಯಾಗುತ್ತದೆ. ಎಲ್ಲರೂ ಇದ್ದು ಏಕಾಂಗಿತನ ನಮ್ಮನ್ನು ಕಾಡುತ್ತಿದ್ದರೆ ಕೆಲವೊಮ್ಮೆ ಕೆಲವು ಮಾನಸಿಕ ಸಮಸ್ಯೆಗಳಿಂದಲೂ ಇರಬಹುದು. ಖಿನ್ನತೆ ಚಿತ್ತವಿಕಲತೆ ಮುಂತಾದ ಸಮಸ್ಯೆಗಳಲ್ಲಿ ನಮಗೆ ಏಕಾಂಗಿತನ ಕಾಡಲು ಪ್ರಾರಂಭವಾಗುತ್ತದೆ. ಇಂಥ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ತಜ್ಞರು ಅಥವಾ ಮನಶಾಸ್ತ್ರಜ್ಞರು ಅಥವಾ ಮನೋ ಸಾಮಾಜಿಕ ಕಾರ್ಯಕರ್ತರು ಇವರ ಸಹಾಯವನ್ನು ಪಡೆದುಕೊಳ್ಳಿ. ಮನೋವೈದ್ಯರು ಏಕಾಂಗಿತನವನ್ನು ಎದುರಿಸಲು ನಾಲ್ಕು ವಿಚಾರಗಳನ್ನು ಹೇಳುತ್ತಾರೆ.

1)ನಿಮ್ಮ ಸಾಮಾಜಿಕ ಕೌಶಲ್ಯಗಳನ್ನು ಉತ್ತಮಗೊಳಿಸುವುದು. ಹಲವೊಮ್ಮೆ ನಾವು ಮಾತನಾಡುವಾಗ ನಮ್ಮಲ್ಲಿ ಕೆಲವು ನ್ಯೂನತೆಗಳಿರುತ್ತವೆ ಅದರಿಂದ ಜನ ನಮ್ಮನ್ನು ದೂರ ಮಾಡುತ್ತಾರೆ ಅದನ್ನು ಬದಲಿಸುವುದು.

2)ನಾವು ಸಾಮಾಜಿಕವಾಗಿ ಬಲವರ್ಧನೆಗೊಳ್ಳುವುದು ಅಂದರೆ ನಮ್ಮ ಮಿತ್ರರು ಹತ್ತಿರದವರು ಅವರನ್ನು ಹೇಗೆ ಸಂಪಾದಿಸುವುದು ನೋಡಿಕೊಂಡು ನಮ್ಮ socialsupport ಹೆಚ್ಚು ಮಾಡಿಕೊಳ್ಳುವುದು.

3)ಸಮಾಜದೊಂದಿಗೆ ಬೆರೆಯುವ ಅವಕಾಶಗಳನ್ನು ನಾವೇ ಹುಡುಕಿಕೊಂಡು ಹೋಗುವುದು ಉದಾಹರಣೆಗೆ ಸಂಬಂಧಿಕರ ಮದುವೆ, ರೋಟರಿ ಮಾಡುತ್ತಿರುವ ಕಾರ್ಯಕ್ರಮ, ಶಾಲಾ ಸ್ವಾತಂತ್ರ್ಯೋತ್ಸವ.

4) ದೋಷಪೂರಿತ ಚಿಂತನೆ ಸರಿ ಮಾಡಿಕೊಳ್ಳುವುದು. ಏಕಾಂಗಿಯಾಗಿ ಇರುವವರು ಹಲವು ಬಾರಿ ದೋಷಪೂರಿತ ಚಿಂತನೆಗಳನ್ನು ಮಾಡುತ್ತಿರುತ್ತಾರೆ. ಈ ದೋಷ ಪೂರಿತ ಚಿಂತನೆಗಳು ಅಂದರೆ “ನಾನು ಅಷ್ಟೇನೂ ಒಳ್ಳೆಯವನಲ್ಲ “ನಾನು ಅಷ್ಟೇನೂ ಜನಪ್ರಿಯನಲ್ಲ “ಯಾರು ನನ್ನನ್ನು ಇಷ್ಟ ಪಡುವುದಿಲ್ಲ “ನನಗೆ ಯಾರು ಮಿತ್ರರೇ ಇಲ್ಲ” ಮುಂತಾದವುಗಳು.

ಹಲವೊಮ್ಮೆ ನಾವು ಮಾಡುವ ಈ ದೋಷಪೂರಿತ ಆಲೋಚನೆಗಳು ಜೀವನದ ಆಗುಹೋಗುಗಳನ್ನು ಬೇರೆಯೇ ರೀತಿಯಲ್ಲಿ ನಾವು ಅರ್ಥ ಮಾಡಿಕೊಳ್ಳುವಂತೆ ಮಾಡುತ್ತದೆ ಮತ್ತು ಇದರಿಂದಾಗಿ ನಾವು ಸಮಾಜದಿಂದ ದೂರ ಸರಿಯುವ ಹಾಗೆ ಮಾಡುತ್ತದೆ. ನಾವು ಈ ತರ್ಕರಹಿತ ದೋಷ ಪೂರಿತ ಆಲೋಚನೆಗಳಿಂದ ಆದಷ್ಟು ದೂರ ಇರಬೇಕು. ಕೆಲವರು ಸಾಮಾನ್ಯ ಸಾಮಾಜಿಕ ವಿಷಯಗಳಿಗೆ ಕೇವಲ ನಕಾರಾತ್ಮಕವಾಗಿಯೇ ಪ್ರತಿಕ್ರಿಯಿಸುತ್ತಾ ಇರುತ್ತಾರೆ ಇಂತಹ ಪ್ರತಿಕ್ರಿಯೆಗಳನ್ನು ಬದಲಿಸಲು ಪ್ರಯತ್ನ ಮಾಡುವುದು. ಈ ನಾಲ್ಕು ತರಹದ ಬದಲಾವಣೆಗಳಲ್ಲಿ ಈ ಕೊನೆಯದು ಅಂದರೆ ದೋಷಪೂರಿತ ಚಿಂತನೆ ಇದನ್ನು ಬದಲಿಸುವುದು ಬಹಳ ಮುಖ್ಯ.
ಸಾಮಾಜಿಕ ಜಾಲ ತಾಣಗಳಲ್ಲಿ ತಲ್ಲೀನರಾಗಿ ಇರುವುದು, ಆನ್ಲೈನ್ ಆಟಗಳನ್ನು ಆಡುವುದು ಇವು ಏಕಾಂಗಿತನಕ್ಕೆ ಮದ್ದು ಅಲ್ಲವೇ ಅಲ್ಲ. ಇದು ಒಂದು ರೀತಿಯ ಸುರಕ್ಷತೆಯ ಭಾವನೆಯನ್ನು ಕೊಟ್ಟರು ನಿಜ ಜೀವನ ಮತ್ತು ಈ ಸಾಮಾಜಿಕ ಜಾಲತಾಣವೆಂಬ ಮಿಥ್ಯ ಲೋಕಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ. ಮನುಷ್ಯನ ಎದುರು ಕುಳಿತುಕೊಂಡು ಮಾತನಾಡುವುದಕ್ಕೂ ಚಾಟ್ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ. ಏಕಾಂಗಿತನವನ್ನು ಹೋಗಲಾಡಿಸಬೇಕು ಎಂದಿದ್ದರೆ ಪ್ರಯತ್ನಪಟ್ಟು ಹೊರಗೆ ಬನ್ನಿ. ಸ್ವಯಂ ಪ್ರೇರಿತರಾಗಿ ಯಾವುದಾದರೂ ವೃದ್ಧಾಶ್ರಮಕ್ಕೆ ಅಥವಾ ಅನಾಥಾಶ್ರಮಕ್ಕೆ ಭೇಟಿ ಕೊಡಿ ಅಲ್ಲಿ ಹೋಗಿ ಆ ಮಕ್ಕಳೊಂದಿಗೆ ವೃದ್ಧ ರೊಂದಿಗೆ ಮಾತನಾಡುವಾಗ ನಮ್ಮ ದುಃಖಗಳು ಮರೆತು ಹೋಗುತ್ತವೆ. ಹಳೆಯ ಸ್ನೇಹಿತರು, ಬಾಲ್ಯ ಸ್ನೇಹಿತರು ಇದ್ದರೆ ಅವರಿಗೆ ಕರೆ ಮಾಡಿ ಮಾತನಾಡಿ. ನಮ್ಮ ಏಕಾಂಗಿತನವನ್ನು ಗಮನಿಸಿ ನಮ್ಮೊಂದಿಗೆ ಮಾತನಾಡಲು ತಯಾರಿರುವ ಇಂತಹ ಅನೇಕರು ಇರುತ್ತಾರೆ ಕೆಲವರು ತಾವೇ ಏಕಾಂಗಿಯಾಗುತ್ತಾರೆ, ಹೇಳಲು ಇಷ್ಟ ಪಡುತ್ತಿರುವದಿಲ್ಲ. ನಾವೆಲ್ಲರೂ ಒಂದಲ್ಲ ಒಂದು ದಿನ ಈ ಏಕಾಂಗಿತನಕ್ಕೆ ಬಲಿಯಾಗಬಹುದು. ಯಾವುದೇ ಸಮಯದಲ್ಲಿ ಯಾರು ಬೇಕಿದ್ದರು ಏಕಾಂಗಿಯಾಗಬಹುದು. ಮನೆಯಲ್ಲಿ ಜನರಿದ್ದರೂ ಏಕಾಂಗಿಯಾಗಬಹುದು. ಬಹಳಷ್ಟು ಜನಪ್ರಿಯ ವ್ಯಕ್ತಿಗಳು ಏಕಾಂಗಿಗಳೇ !! ನಾವು ಎಲ್ಲರು ಈ ಒಂಟಿತನ ಏಕಾಂಗಿತನ ಇದರ ಬಗ್ಗೆ ತಿಳಿದುಕೊಂಡು ಆದಷ್ಟು ವೈಜ್ಞಾನಿಕವಾಗಿ ಇದನ್ನು ಎದುರಿಸಲು ಕಲಿಯಬೇಕು. ಕೆಲವೊಮ್ಮೆ ವೃತ್ತಿ ಪರರ ಸಹಾಯ, ಕೆಲವೊಮ್ಮೆ ಮನೋಚಿಕಿತ್ಸೆ, ಇನ್ನು ಕೆಲವೊಮ್ಮೆ ಪ್ರೀತಿಪಾತ್ರರ ಸನಿಹ ಮತ್ತು ಪ್ರಯತ್ನಪಟ್ಟು ರೋಟರಿ, ಲಯನ್ಸ, ಮಹಿಳಾ ಸಮಾಜ ಮುಂತಾದ ಸಾಮಾಜಿಕ ಗುಂಪುಗಳನ್ನು ಸೇರಿಕೊಂಡು ಸ್ವಯಂಪ್ರೇರಿತರಾಗಿ ಸಮಾಜ ಸೇವೆಯಲ್ಲಿ ತೊಡಗುವುದು, ನಿರಂತರವಾಗಿ ಒಂದೇ ಸಮಯದಲ್ಲಿ ದೈಹಿಕ ವ್ಯಾಯಾಮದಲ್ಲಿ ತೊಡಗುವುದು ಇವೆಲ್ಲ ಚಿಕಿತ್ಸಕವಾಗಿ ಪರಿಣಮಿಸಬಹುದು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!