Sunday, September 8, 2024

ಆತ್ಮಹತ್ಯೆ ಬಗ್ಗೆ ನಾವು ಚರ್ಚಿಸಬೇಕಾದದ್ದು ಏನು?

ಸಂತೋಷ್ ಪಾಟೀಲ್ ಸಾವು ನಡೆದಾಗ ಚರ್ಚೆ ಆಗಬೇಕಿರುವ ಇನ್ನೊಂದು ಮುಖ್ಯ ವಿಷಯ ಆತ್ಮಹತ್ಯೆಗಳ ಬಗ್ಗೆ. ಈ ವ್ಯಕ್ತಿ ಸಾರಿಸಾರಿ ಟಿವಿ ಚಾನೆಲ್ ಗಳ ಮುಂದೆ ತಾನು ಆತ್ಮ ಹತ್ಯೆ ಮಾಡುತ್ತೇನೆ ಎಂದು ಹೇಳಿದ್ದ. ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ.

ಜಗತ್ತಿನ ಸಾವಿನ ಕಾರಣಗಳಲ್ಲಿ ಆತ್ಮಹತ್ಯೆಗೆ 13ನೇ ಸ್ಥಾನವಿದೆ. ಅದಲ್ಲದೆ ಆತ್ಮಹತ್ಯೆಯಿಂದ ಪ್ರತೀ ವರ್ಷ ವಿಶ್ವದಲ್ಲಿ ಸಾಯುತ್ತಿರುವವರ ಸಂಖ್ಯೆ ಹತ್ತು ಲಕ್ಷದಷ್ಟು. ಭಾರತದಲ್ಲಿ ವರ್ಷಕ್ಕೆ ಸರಿ ಸುಮಾರು ಒಂದು ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ವಿಶ್ವ ಸಂಸ್ಥೆ ತನ್ನ ವರದಿ ನೀಡಿದೆ. ಯಾವುದೇ ಜಾತಿ, ವಯಸ್ಸು, ವರ್ಗ, ವರ್ಣಗಳ ಭೇದವಿಲ್ಲದೆ ಜಗತ್ತು ಎದುರಿಸುತ್ತಿರುವ ಅತೀ ಅಪಾಯಕಾರಿ ಪಿಡುಗು ಈ ಆತ್ಮಹತ್ಯೆ. ಮನುಷ್ಯ ತನ್ನ ಜೀವಿತಾವಧಿಯಲ್ಲಿ ಐದು ಬಾರಿಯಾದರೂ ಆತ್ಮಹತ್ಯೆ ಕುರಿತು ಯೋಚಿಸಿರುತ್ತಾನೆ ಅಂತೆ. ಹದಿಹರೆಯದ ಸಮಸ್ಯೆಗಳು, ಪ್ರೇಮ ವೈಫಲ್ಯ, ನಂಬಿಕೆ ದ್ರೋಹ, ಯಾರೂ ನನ್ನನ್ನು ಗುರುತಿಸುತ್ತಿಲ್ಲ (ಐಡೆಂಟಿಟಿಯ ಕೊರತೆ), ಸ್ನೇಹಿತರಿಂದ ಯಾ ಪ್ರೀತಿ ಪಾತ್ರ ರಿಂದ ಅತಿಯಾದ ನಿರೀಕ್ಷೆ, ದಾಂಪತ್ಯ ಸಮಸ್ಯೆ, ಮಧ್ಯ ವಯಸ್ಸಿನಲ್ಲಿ ಕಾಡುವ ಒಂಟಿತನ, ಆತ್ಮಿಯರ ಅಗಲಿಕೆ, ಅನಾರೋಗ್ಯ, ಅಟೆನ್ಷನ್ ಸೀಕಿಂಗ್ ಸ್ವಭಾವ, ಬಾಲ್ಯದ ಕಹಿ ನೆನಪು, ಅತೀಯಾದ ಒತ್ತಡ, ಮಾದಕ ಪದಾರ್ಥ ಸೇವನೆ, ಉದ್ಯೋಗದಲ್ಲಿ ಸೋಲು, ಕೈಸಾಲ, ಬ್ಯಾಂಕ್ ಸಾಲಕ್ಕೆ ಹೆದರಿ ನೇಣಿಗೆ ಶರಣಾಗುವ ರೈತ, ಬಡ್ಡಿ-ಚಕ್ರ ಬಡ್ಡಿ, ಬ್ಯಾಂಕ್ ಸಾಲ, ದಿವಾಳಿತನದಂತಹ ಸಂಗತಿಗಳು ಸಣ್ಣ ಉದ್ಯಮಿಗಳು ಸಹಿಸಲಾರರು, ಇಂದಿನ ದಿನಗಳಲ್ಲಿ covid ನ ಬಗ್ಗೆ ಭಯ, ಎಲ್ಲಿಯಾದರೂ ತಮಗೆ covid ತಗಲಿದರೆ ಆಸ್ಪತ್ರೆಗೆ ಸೇರಿದರೆ ಉಂಟಾಗುವ ಖರ್ಚು, ಉಂಟಾಗುವ ಒಂಟಿತನ, ಜನರ ಬಾಯಲ್ಲಿ ಸಿಗುವ ಕಳಂಕಿತ ಮಾತುಗಳು. spreader super spreader. covidiot ಇಂತಹ ವಿಷಯಗಳಿಗೆ ಹೆದರಿಕೆ ಹೀಗೆ ನಾನಾ ರೀತಿಯ ವಿಷಯಗಳು ಆತ್ಮಹತ್ಯೆಗೆ ಕಾರಣಗಳು.

ಆತ್ಮಹತ್ಯೆ ತಡೆಗೆ ನಮ್ಮ ಪಾತ್ರ:
ಯಾವುದೋ ಒಬ್ಬ ವ್ಯಕ್ತಿ ಖಿನ್ನನಾಗಿದ್ದಾನೆಂದರೆ, ಸಾವಿನ ಕುರಿತು ಮಾತಾಡುತ್ತಿದ್ದಾನೆಂದರೆ ಅವರನ್ನು ಒಂದೆರಡು ಗಂಟೆ, ದಿನಗಳ ಮಟ್ಟಿಗೆ ನಮ್ಮ ಆಪ್ತ ಪರಿಧಿಯೊಳಗೆ ಇಟ್ಟುಕೊಳ್ಳುವುದು.
ಇಂತಹ ಸಮಯದಲ್ಲಿ ನಿಮ್ಮ ಕಿವಿ ಕೊಡಿ. ನಿಮ್ಮ ಬಾಯಿ ಅಲ್ಲ. ಅಂದರೆ ಭಾಷಣ ಬಿಗಿಯ ಬೇಡಿ ಆತನ ಮಾತು ಕೇಳಿ. ನೋವಿಗೆ ಸಮಯ ಕೊಡುವ, ಸಮಸ್ಯೆಗೆ ಕಿವಿಯಾಗುವ ಕನಿಷ್ಠ ಹೃದಯವಂತಿಕೆ ತೋರಿಸೋದು. ಇದು ಬಹಳ ಮುಖ್ಯ.

ಬೊಗಸೆ ಪ್ರೀತಿಯ ಮಾತು, ಹಿಡಿ ನಂಬಿಕೆ, ಎದೆ ತುಂಬುವಷ್ಟು “ನೀನು ಒಬ್ಬನೇ ಅಲ್ಲ ನಿನಗಾಗಿ ನಾನಿದ್ದೇನೆ” ಎಂದು ಹೇಳುತ್ತ “ಸುರಕ್ಷತೆ”ಯ ಭಾವನೆ ನೀಡುವುದಕ್ಕೆ ಬ್ಯಾಂಕ್ ಬ್ಯಾಲೆನ್ಸ್, ಯೂನಿವರ್ಸಿಟಿಯ ಪಾಠ ಬೇಕಿಲ್ಲ.
ಒಂದು ಸ್ಪರ್ಶ, ಒಂದು ಅಪ್ಪುಗೆ ಜೀವವೊಂದರ ಆಯುಃಪೂರ್ತಿಗೆ ಕಾರಣವಾಗುವುದಾದರೆ ಎದೆಯ ಕದ ತೆಗೆದು ನೋವಿಗೆ ಕಿವಿಯಾಗಬಹುದಲ್ಲವೇ.?

ಖಿನ್ನತೆಯಂಥ ಕಾಯಿಲೆಗೆ ಚಿಕಿತ್ಸೆ ಹಲವಾರು ಆತ್ಮ ಹತ್ಯೆಗಳು ಕಾರಣ. ಖಿನ್ನತೆಯಂಥ ಕಾಯಿಲೆಗೆ ಮಾತ್ರೆ ಮತ್ತು ಮಾತು ಚಿಕಿತ್ಸೆ ಮತ್ತು ವಿದ್ಯುತ್ ಕಂಪನ ಚಿಕಿತ್ಸೆ. ಇದರ ಬಗ್ಗೆ ಆತ್ಮ ಹತ್ಯೆ ಬಗ್ಗೆ ಯೋಚನೆ ಮಾಡುವ ನಿಮ್ಮ ಸ್ನೇಹಿತರಿಗೆ ಸರಿಯಾದ ಮಾಹಿತಿ ನೀಡಿ.. ಆರೆ ಬರೆ ವಿಚಾರ ತಿಳಿದು ಸುಮ್ಮನೆ ಬಾಯಿಗೆ ಬಂದಂತೆ ಈ ಚಿಕಿತ್ಸೆಗಳ ವಿರುದ್ಧ ಮಾತನಾಡ ಬೇಡಿ. ಹತ್ತಿರದ ಮನೋವೈದ್ಯ ಅಥವಾ ಮನೋಸಾಮಾಜಿಕ ಕಾರ್ಯಕರ್ತರ ಸಂಪರ್ಕ ಮಾಡಿ ಕೊಡಿ.

ಆತನೂ ಆತ್ಮಹತ್ಯೆ ಬಗ್ಗೇ ಪದೇ ಪದೇ ಮಾತನಾಡುತ್ತಾನೆ ಅಂತಾದರೆ ಆತನಿಗೆ ಒಬ್ಬನೇ ಇರಲು ಬಿಡ ಬೇಡಿ. ತುರ್ತು ಪರಿಸ್ಥಿತಿಗೆ ಸಹಾಯ ಮಾಡುವ ಆತ್ಮಹತ್ಯೆ ತಡೆ ಸಹಾಯವಾಣಿ ಸಂಪರ್ಕಿಸಿ. ಆ ವ್ಯಕ್ತಿಯ ಹತ್ತಿರ ಕೀಟನಾಶಕ, ಮಾತ್ರೆಗಳು, ಹರಿತವಾದ ಆಯುಧ ಮುಂತಾದವು ಸಿಗದಂತೆ ನೋಡಿಕೊಳ್ಳಿ.

ಮಾನಸಿಕ ಆರೋಗ್ಯ ತಜ್ಞರು ಹೇಳುವ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ತಾನಾಗಿಯೇ ಬಹಳಷ್ಟು ಸೂಚನೆಗಳನ್ನು ಕೊಡುತ್ತಾನೆ. ಪದೇಪದೇ ಬದುಕಿಗೆ ಅರ್ಥವಿಲ್ಲ, ಬದುಕೋಕ್ಕೆ ಇಷ್ಟವಿಲ್ಲ ಎನ್ನುವುದು. ತೀರ ಒಳ್ಳೆಯವರಾಗಿ ನಡೆದುಕೊಳ್ಳಲಾರಂಭಿಸುವುದು. ಇಡೀ ಪರಿಚಿತ ವರ್ಗಕ್ಕೆ ಸಾವಿನ ಸೂಚನೆ ಕೊಡುವಂತಹ ಸಂದೇಶ ಕಳುಹಿಸುವುದು. ಶ್ರೀಮಂತರಿದ್ದರೆ ಆಸ್ತಿಪಾಸ್ತಿ ದಾನ ಮಾಡುವುದು. ಸಾಲವಿದ್ದರೆ ಹೇಗಾದರೂ ತೀರಿಸಿಬಿಡುವುದು ಅಥವಾ ಮಕ್ಕಳಿಗೆ ಅದರ ಕುರಿತು ಹೇಳುವುದು, ಒಂಟಿಯಾಗಿರುವುದು. ಆತ್ಮಹತ್ಯೆಗೆ ಸುಲಭ ಮಾರ್ಗಗಳನ್ನು ಹುಡುಕುವುದು, ಗೆಳೆಯರೊಡನೆ ಚರ್ಚಿಸುವುದು, ಮಾದಕ ವ್ಯಸನಿಯಾಗುವುದು, ಈ ಎಲ್ಲಾ ಲಕ್ಷಣಗಳು ಒಂದು ಸೀಮಿತ ಅವಧಿಯಲ್ಲಿ ಅತೀ ಎನಿಸುವಷ್ಟಾಗುವುದು ಆತ್ಮಹತ್ಯೆಯ ಮುನ್ಸೂಚನೆ.

ಆತ್ಮಹತ್ಯೆ ಮಾಡಿಕೊಳ್ಳುವವರು ಕೆಲವೊಮ್ಮೆ ಏಕಾ‌ಏಕಿ ನಿರ್ಧಾರ ತೆಗೆದುಕೊಂಡು ಬದುಕಿಗೆ ವಿಮುಖವಾಗುತ್ತಿರುವುದರ ಬಗ್ಗೆ ಪರೋಕ್ಷವಾಗಿಯಾದರೂ ಹೇಳಿರುತ್ತಾರೆ. ಡೆತ್ ನೋಟ್ ಬರೆದಿಡುವುದು ಕೂಡ ಸಾಮಾನ್ಯ ಸಂಗತಿ.

ಆತ್ಮಹತ್ಯೆ ಪ್ರವೃತ್ತಿ ಅನುವಂಶಿಕವೇ?
ಆತ್ಮಹತ್ಯೆಯ ಮನಸ್ಥಿತಿ ಸಹ ಜೈವಿಕವಾಗಿ, ಫ್ಯಾಮಿಲಿ ಹಿಸ್ಟರಿಯೊಂದಿಗೆ ಮುಂದಿನ ಪೀಳಿಗೆಗೆ ವರ್ಗಾಯಿಸುತ್ತದೆ. ಮನಸ್ಸನ್ನು ಖುಷಿಯಲ್ಲಿಡುವ ಸೆರಟಾನಿನ್, ಮೆಲಟಾನಿನ್, ಡೊಪಮೈನ್ಗಳಂತ ಹಾರ್ಮೋನುಗಳ ಏರುಪೇರಾದಾಗ ವ್ಯಕ್ತಿಯ ಖಿನ್ನತೆಗೆ ಕಾರಣವಾಗಿ, ಸೂಕ್ತ ವೈದ್ಯಕೀಯ ಉಪಚಾರ ಕೊಡಿಸದಿದ್ದಾಗ ಆತ್ಮಹತ್ಯೆ ಸಂಭವಿಸಬಹುದು.

ಆತ್ಮ ಹತ್ಯೆ ತಡೆಗೆ ಸಮಾಜ ಏನು ಮಾಡಬಹುದು?
ಆತ್ಮಹತ್ಯೆ ಮಾಡುತ್ತೇನೆ ಅನ್ನುವವರು ಹಾಗೆ ಮಾಡುವುದಿಲ್ಲ. ಬೊಗಳುವ ನಾಯಿ ಕಚ್ಚುವುದಿಲ್ಲ. ಕಚ್ಚುವ ನಾಯಿ ಬೋಗಳುವುದಿಲ್ಲ ಅನ್ನುವವರು ಅದು ಸುಳ್ಳು ಅಂತ ತಿಳಿದುಕೊಳ್ಳಿ. ಆತ್ಮಹತ್ಯೆ ಬಗ್ಗೆ ಮಾತನಾಡುವವರು ಪ್ರಯತ್ನ ಮಾಡೆ ಮಾಡುತ್ತಾರೆ.
ಆತ್ಮಹತ್ಯೆ ಮಾಡಿಕೊಂಡವ ಬದುಕಿಗೆ ಬೆನ್ನು ತೋರಿದವ, ಹೇಡಿ, ಎದುರಿಸಲಾರದವನು, ಸತ್ತದ್ದೇ ಒಳ್ಳೆಯದಾಯಿತು ಎನ್ನುವವರೂ ಇದ್ದಾರೆ. ಇದು ಮನುಷ್ಯನ ವಿಕೃತ ಮನಸ್ಸಿನ ಕುರಿತು ಅಸಹಜವೆನಿಸುತ್ತದೆ. ಇಂತಹ ವಿಚಾರ ಮಾತನಾಡುವವರು ಇದನ್ನು ನಿಲ್ಲಿಸಲಿ.

ಪ್ರಮುಖವಾಗಿ ಪೋಷಕ, ಶಿಕ್ಷಕ ವರ್ಗ ಮತ್ತು ಶಿಕ್ಷಣ ಸಂಸ್ಥೆಗಳು ಮತ್ತು ನಮ್ಮ ಮಾಧ್ಯಮ ದವರೂ ಸ್ವಲ್ಪ ಜವಾಬ್ದಾರಿಯಿಂದ ವರ್ತಿಸಬೇಕು. ಯಶಸ್ಸೇ ಬದುಕಲ್ಲ” ಎನ್ನುವ ಸರಳ ಸೂತ್ರವನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಆರೋಗ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವುದು.

ಇತರರ ಸಾಧನೆಗಳತ್ತ ಕೈತೋರಿಸಿ ನೀನು ಹಾಗೆ ಆಗು ಅನ್ನುವುದು. ಒಂದೊಂದು ಮಾರ್ಕಿಗು ಪೈಪೋಟಿ. ತಾಯಿ ತಂದೆ ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳು ತೀವ್ರ ಒತ್ತಡ, ಸಾಧನೆ ಸರಿ ಆಗದಿದ್ದರೆ ನೀನು ದಡ್ಡ, ಪೆದ್ದ, ನಮ್ಮ ಮರ್ಯಾದೆ ತೆಗೆದೆ ಅನ್ನುವ ತಾಯಿ ತಂದೆಯರು. ಶಾಲೆಗೆ ನೂರು ಶೇಕಡಾ ರಿಸಲ್ಟ್ ನಿನ್ನಿಂದ ಹೋಯಿತು ಅನ್ನುವ ಶಿಕ್ಷಕರು.ಇವೆಲ್ಲ ಕಡಿಮೆ ಆಗಲಿ ಎಂದು ನನ್ನ ಆಶಯ. ಇಂದು puc ಓದುತ್ತಿರುವ ಮಕ್ಕಳ ಗಮನಿಸಿ..ಅವರಲ್ಲಿ ನಾನು ಕಾಣುತ್ತಿರುವ ಕೊರತೆ
ಸಮುದಾಯದ ಸಂಪರ್ಕ ಇಲ್ಲ
ಸಂವಹನದ ಕೊರತೆ, ಹವ್ಯಾಸ, ಸೃಜನಾತ್ಮಕ ಚಟುವಟಿಕೆ ಕೊರತೆ, ಸಮಸ್ಯೆ ನಿವಾರಣೆಗೆ ಮನಸ್ಸು ತಯಾರಿಡುವುದರ ಬಗ್ಗೆ ಮಾಹಿತಿ ಇಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ರ್‍ಯಾಂಕ್, ಟಾಪರ್, ಬೆಸ್ಗ್‌ಗಳ ರೇಸಿಗೆ ಮುಗ್ಧ, ಪ್ರೇಮಮಯಿ ಮಗು ನಿಲ್ಲಲಾರದು. ಬಿದ್ದ ಮಗುವನ್ನು ಎತ್ತಿ ಒಟ್ಟಿಗೆ ಓಡಿದ ಮಗುವಿನ ವಿಡಿಯೋ ಫಾರ್ವರ್ಡ್ ಮಾಡಬಹುದೇ ಹೊರತು ಪದಕ ಸಿಗುವುದು ಗೆದ್ದ ಮಗುವಿಗೆ ಮಾತ್ರ. ಮೌಲ್ಯಯುತವಾದ ಶಿಕ್ಷಣಕ್ಕೆ ಕೆಲ ಶಿಕ್ಷಕರು ಒತ್ತುಕೊಟ್ಟರೂ ವ್ಯವಸ್ಥೆಯ ಒತ್ತಡ ಬೇರೆಯದೇ ದಿಕ್ಕಿನಲ್ಲಿ ಇರುವುದು ಅವರ ನಿರಾಸೆಗೂ ಕಾರಣವಾಗುತ್ತದೆ. ಇಂದು ಹೆಚ್ಚಿನ ಶಾಲೆಗಳು ಮಾರ್ಕ್ ಫ್ಯಾಕ್ಟರಿಗಳಾಗಿವೆ. ತಾಯಿ ತಂದೆಯರು ಇಷ್ಟ ಪಡುವುದು ಇಂತಹ ಮಾರ್ಕ್ ತಯ್ಯಾರಿ ಮಾಡುವ ಫ್ಯಾಕ್ಟರಿಗಳನ್ನೆ.

ಇನ್ನು ಪತ್ರಕರ್ತರು. ದಯವಿಟ್ಟು ಆತ್ಮ ಹತ್ಯೆ ಪ್ರಯತ್ನಗಳನ್ನು ಆತ್ಮಹತ್ಯೆಗಳನ್ನು ಪ್ರಕಟಿಸುವಾಗ. ತೋರಿಸುವಾಗ ವೈಭವೀಕರಿಸಿ ತೋರಿಸ ಬೇಡಿ. ಇತ್ತೀಚೆಗೆ ಆತ್ಮಹತ್ಯೆ ಮಾಡುತ್ತ ಇದ್ದ ವ್ಯಕ್ತಿಯ ಸಿಸಿಟಿವಿ ಕ್ಲಿಪ್ಪಿಂಗ್ ತೋರಿಸಿದ ಅಪಕ್ವ ಮಾಧ್ಯಮ ಒಂದನ್ನು ಗಮನಿಸಿದ್ದೇನೆ. trp ಗಾಗಿ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವುದನ್ನು ನಿಲ್ಲಿಸಿ.

ಮೀಡಿಯಾಗಳಲ್ಲಿ ಕ್ರೂರ ವಿಚಾರಗಳು ಮತ್ತು ಸಾವಿನ ಸನ್ನಿವೇಶಗಳ ವೈಭವೀಕರಣ, ಪಬ್ಜೀ, ಬ್ಲೂವೇಲ್ ನಂತಹ ಅಪಾಯಕಾರಿ ಆಟಗಳು, ಸೌಂದರ್ಯ-ಅಂಗಾಂಗ ಮತ್ತು ಲೈಂಗಿಕ ಸಾಮರ್ಥ್ಯದ ಅಸಹಜ ಮಾಹಿತಿಗಳು ಕೂಡ ಬದುಕನ್ನು ಕೊನೆಗೊಳಿಸುತ್ತಿವೆ. ಗಂಡ ಸಂಜೆ ಸಿನೆಮಾಗೆ ಕರೆದೊಯ್ಯಲಿಲ್ಲ, ಅಮ್ಮ ಶಾಲಾ ಫ್ರೆಂಡ್ಸ್ ಜೊತೆಗೆ ಟ್ರಿಪ್‌ಗೆ ಹೋಗಲು ಬಿಡಲಿಲ್ಲ. ಎನ್ನುವ ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವವರೂ ಇದ್ದಾರೆ. ಆದರೆ ಅದರ ಬಗ್ಗೆ ಬರೆಯುವಾಗ ಅಂತಹ ಸಮಸ್ಯೆಗಳಿಗೆ ಪರಿಹಾರ ಇದರ ಬಗ್ಗೆ ಒತ್ತು ಕೊಟ್ಟು ಬರೆಯಬೇಕಾದ ಅಗತ್ಯತೆ ನಮ್ಮ ಪತ್ರಕರ್ತರಿಗೆ ಇದೆ. ಸದ್ಯದ ಸಮಾಜವನ್ನು ಆಳುತ್ತಿರುವ ಮೀಡಿಯಾಗಳ ಪಾತ್ರ ಈ ವಿಷಯದಲ್ಲಿ ಮಹತ್ವದ್ದು. ಅದರಲ್ಲೂ ದೃಶ್ಯ ಮಾಧ್ಯಮಗಳು ಆತ್ಮಹತ್ಯೆಯೊಂದನ್ನ ಚುಟುಕಾಗಿ ಹೇಳುವ ಎಲ್ಲಾ ಅವಕಾಶಗಳನ್ನು ಒಗೆದು ಹಂತಹಂತವಾಗಿ ವಿವರಿಸಿ, ಹೇಗೆ ಹೆಚ್ಚು ಯಶಸ್ವಿಯಾಗಿ ಆತ್ಮಹತ್ಯೆ ಮಾಡಿಕೊಳ್ಳಬಹುದೆನ್ನುವ ಮಾಹಿತಿ ಕೊಡುವುದನ್ನು ಇನ್ನಾದರೂ ನಿಲ್ಲಿಸಬೇಕು. ಇತ್ತೀಚೆಗೆ ಲೈವ್ ಆತ್ಮಹತ್ಯೆಗಳು ಹೆಚ್ಚಾಗುತ್ತಿದ್ದು, ಇಡೀ ಸಮಾಜದ ಮನಸ್ಸು ಕೆಡಿಸುವುದಕ್ಕೆ ಕಾರಣವಾಗಿವೆ ಲೈವ್ ಆತ್ಮಹತ್ಯೆಯನ್ನು ಬಿತ್ತರಿಸುವುದನ್ನೂ, ಸೋಷಿಯಲ್ ಮೀಡಿಯಾಗಳಲ್ಲಿ ಹರಡದಂತೆ ನೋಡಿಕೊಳ್ಳುವುದು ಕೂಡ ಯಾವುದೋ ಬಲಹೀನ ಮನಸ್ಸಿನ ಉಳಿವಿಗೆ ಕಾರಣವಾಗಬಲ್ಲದು.

ಹುಟ್ಟು ತನ್ನ ಆಯ್ಕೆ ಆಗದಿದ್ದಾಗ ಸಾವನ್ನು ತನ್ನಿಷ್ಟದಂತೆ ಆಯ್ಕೆ ಮಾಡುವುದು ಅಪರಾಧವೂ, ಪ್ರಕೃತಿಗೆ ವಿರೋದ್ಧವೂ ಹೌದಲ್ಲವೇ? ‘ತಾನೂ’ ಸಮಾಜದ ಒಂದು ಅಂಗವಾಗಿರುವುದರಿಂದ ವ್ಯವಸ್ಥೆಯ ಸಮಸ್ಥಿತಿಗೆ, ಸಹಜತೆಗೆ ಭಂಗ ಉಂಟಾಗುವುದರ ಕುರಿತು ತಿಳುವಳಿಕೆ ಮೂಡಿಸುವ ಅಗತ್ಯ ಹಿಂದೆಂದಿಗಿಂತಲೂ ಇಂದು ಬಹಳ ಅಗತ್ಯವಿದೆ. ಇದರ ಹೊಣೆ ಸಮಾಜದ್ದೇ ಆಗಿದೇ.
ಹತಾಶೆ ಮತ್ತು ನಿರಾಶೆಯ ಮನಸ್ಸಿನ ಒಂದು ಕ್ಷಣದ ಸಂಗತಿಯಾದ ಆತ್ಮಹತ್ಯೆ ಹಲವು ಅಸ್ವಸ್ಥ, ಖಿನ್ನ ಮನಸ್ಸುಗಳಿಗೆ ಪ್ರೇರಣೆ. ಸತ್ತು ಜಗತ್ತಿಗೆ ತನ್ನ ಪ್ರಾಮುಖ್ಯತೆ ತಿಳಿಸುವ ಹುಚ್ಚಾಟದಲ್ಲಿ ಕೊನೆಯಾಗುವ ಜೀವಕ್ಕೆ ತಾನೇನು ಸಾಧಿಸಿದೆನೆಂದೂ ತಿಳಿಯದ ಅವಸ್ಥೆ ಇದು.
ಆತ್ಮಹತ್ಯೆ ತಡೆ ನಮ್ಮ ನಿಮ್ಮೆಲ್ಲರ ಕರ್ತವ್ಯ. ನಾವೆಲ್ಲ ಶ್ರಮಿಸೋಣ.
(ಈ ಲೇಖನ ವಿವಿಧ ಮೂಲಗಳಿಂದ ಆಯ್ದ ವಿಚಾರ ನನ್ನ ಸಂಯೋಜನೆ. ಮತ್ತು ಹೆಚ್ಚುವರಿ ವೃತ್ತಿಪರ ಒಳಹರಿವು.)

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!